ಮಡಿಕೇರಿ: ಲಾಕ್‍ಡೌನ್ ಸಮಸ್ಯೆಯಿಂದ ಕೂಲಿಯೂ ಇಲ್ಲದೆ ಕನಿಷ್ಠ ಮಾತ್ರೆಗೂ ಹಣವಿಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ಔಷಧಿ ಪೂರೈಸುವ ಮೂಲಕ ಕೊಡಗಿನ ಆರತಿ ಎಂಬವರು ಮಾನವೀಯತೆ ಮೆರೆದಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅವರೆಗುಂದ ಗ್ರಾಮದ ಹರೀಶ್ ಮತ್ತು ಲೀಲಮ್ಮ ದಂಪತಿಯ ಪುತ್ರ ಪ್ರವೀಣ್ ಬುದ್ಧಿಮಾಂದ್ಯನಾಗಿದ್ದು, ಈತನಿಗೆ ಬೇಕಾಗಿರುವ ಮಾತ್ರೆ ಕೊಳ್ಳಲು ಹಣವೂ ಇಲ್ಲದೆ ಕುಟುಂಬ ಪರದಾಡುತಿತ್ತು. ಒಂದೆಡೆ ಬಾಲಕನಿಗೆ ಮಾತ್ರೆ ಕೊಳ್ಳಲು ಹಣದ ಕೊರತೆ ಇದ್ದರೆ, ಮತ್ತೊಂದೆಡೆ ಬಾಲಕನ ತಂದೆ ಹರೀಶ್ ಕೂಡ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರೂ ಸಹ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ಹರೀಶ್ ಅವರ ಕುಟುಂಬ ಸಮಸ್ಯೆಯಲ್ಲಿತ್ತು.
Advertisement
ಈ ಕುರಿತು ಪಬ್ಲಿಕ್ ಟಿವಿಯಲ್ಲಿ ಗುರುವಾರ ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿದ ಮಡಿಕೇರಿ ತಾಲೂಕಿನ ಪಾಲೂರಿನ ನಿವಾಸಿ ಆರತಿ ಬಾಲಕನಿಗೆ 3 ತಿಂಗಳಿಗೆ ಬೇಕಾಗುವಷ್ಟು ಮಾತ್ರೆಗಳನ್ನು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.