ಕೊಪ್ಪಳ: ತುಂಗಭದ್ರಾ ಡ್ಯಾಂನಿಂದ ಅಕ್ರಮವಾಗಿ ಕಾರ್ಖಾನೆಗಳು ಪೈಪ್‍ಗಳ ಮೂಲಕ ನೀರು ಕದಿಯುತ್ತಿದ್ದ ಬಗ್ಗೆ ಸೋಮವಾರ ಪಬ್ಲಿಕ್ ಟಿವಿ ಸವಿಸ್ತಾರವಾಗಿ ಸುದ್ದಿ ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತ ರೈತರು ಮತ್ತು ಜನಪ್ರತಿನಿಧಿಗಳು ದಾಳಿ ಮಾಡಿ ಕೂಡಲೇ ತೆರವು ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಕೊಪ್ಪಳದ ಮುನಿರಬಾದಿನ ಹಿನ್ನೀರಿನಲ್ಲಿ ದೊಡ್ಡ ದೊಡ್ಡ ಪೈಪ್ ಗಳನ್ನು ಹಾಕಿ ಕಾರ್ಖಾನೆಗಳಿಗೆ ನೀರು ಕದಿಯುತ್ತಿದ್ದರು. ಕಿರ್ಲೋಸ್ಕರ್, ಹೊಸಪೇಟೆ ಸ್ಟೀಲ್ ಕಂಪನಿಗಳು ಸೇರಿದಂತೆ ಹಲವು ಕಾರ್ಖಾನೆಗಳು ಮೋಟಾರ್ ಪಂಪ್‍ಗಳನ್ನು ಹಾಕಿ ಹಗಲು-ರಾತ್ರಿ ಎನ್ನದೇ ನೀರಿಗೆ ಕನ್ನ ಹಾಕಿದ್ದರು.
ಸದ್ಯ ಡ್ಯಾಂನಲ್ಲಿ ಕೇವಲ 36 ಟಿಎಂಸಿ ನೀರು ಇದೆ. ಮೊದಲ ಬೆಳೆಯ ನೀರಿಕ್ಷೆಯಲ್ಲಿರುವ ಮೂರು ಜಿಲ್ಲೆಗಳ ರೈತರಿಗೆ ನೀರಿನ ಸಮಸ್ಯೆ ಎದುರಾಗಲಿದೆ. ಹೀಗಾಗಿ ರೈತರೊಂದಿಗೆ ಜಲಾಶಯಕ್ಕೆ ಭೇಟಿ ನೀಡಿದ ಮಾಜಿ ಸಚಿವ ಶಿವರಾಜ್ ತಂಗಡಿ ಮತ್ತು ಕೊಪ್ಪಳ ಜಿ.ಪಂ. ಅಧ್ಯಕ್ಷ ವಿಶ್ವನಾಥ್ ರೆಡ್ಡಿ ರೈತರೊಂದಿಗೆ ಜಲಾಶಯಕ್ಕೆ ಮುತ್ತಿಗೆ ಹಾಕಿದರು.
ಜಲಾಶಯದ ಹಿನ್ನೀರಿನ ಪ್ರಮುಖ ಗೇಟ್ ಗೆ ಬೀಗ ಹಾಕಿದ್ದ ಖಾಸಗಿ ಕಂಪನಿಯ ಸಿಬ್ಬಂದಿ ರೈತರನ್ನು ಒಳಗಡೆ ಬಿಡಲು ನಿರಾಕರಿಸಿದರು. ಈ ವೇಳೆ ಆಕ್ರೋಶಗೊಂಡ ಮಾಜಿ ಸಚಿವ ಹಾಗೂ ಜಿ.ಪಂ ಅಧ್ಯಕ್ಷರು ಗೇಟ್ ಹಾರಿ ಒಳಗೆ ನುಗ್ಗಿದರು. ರೈತರ ಆರೋಪದಂತೆ ಜಲಾಶಯದ ಹಿನ್ನೀರನ್ನು ಕಾರ್ಖಾನೆಗಳು 55ಎಚ್.ಪಿ ಮೋಟಾರ್ ಪಂಪ್ ಬಳಸಿ ಅಕ್ರಮವಾಗಿ ನೀರು ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ.
ಕೂಡಲೇ ಜಲಾಶಯಕ್ಕೆ ನುಗ್ಗಿದ ಮಾಜಿ ಸಚಿವರು ಮೋಟಾರ್‍ಗಳನ್ನು ಪರಿಶೀಲಿಸಿ ಅಲ್ಲಿಂದಲೇ ಆಡಳಿತ ಅಧಿಕಾರಿಗಳಿಗೆ ಫೋನ್ ಮೂಲಕ ತರಾಟೆಗೆ ತಗೆದುಕೊಂಡರು. ನಂತರ ಮುಖ್ಯ ಅಭಿಯಂತರರ ಕಚೇರಿಗೆ ತೆರಳಿ ಕಾರ್ಖಾನೆಗಳಿಗೆ ನೀರು ಹರಿಸದಿರಲು ಎಚ್ಚರಿಕೆ ನೀಡಿದರು. ಕೂಡಲೇ ಅಕ್ರಮವಾಗಿ ಪೈಪ್‍ಗಳನ್ನು ಹಾಕಿಕೊಂಡಿರುವವರ ವಿರುದ್ಧ ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯ ಮಾಡಿದರು.