ಬೆಂಗಳೂರು: ಕಳೆದ ವಾರವಷ್ಟೇ ಕಾರ್ ಚಾಲಕನೊಬ್ಬ ಟೋಲ್ ಶುಲ್ಕ ಪಾವತಿ ಮಾಡದೇ ಪರಾರಿಯಾಗಲು ಹೋಗಿ, ಸಿಬ್ಬಂದಿಯೊಬ್ಬರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಳಿಸಿದ ಕುರಿತು ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗಿತ್ತು. ಸುದ್ದಿ ಬಿತ್ತರವಾದ ಬಳಿಕ ಎಚ್ಚೆತ್ತುಕೊಂಡ ಟೋಲ್ ಆಡಳಿತ ಮಂಡಳಿ, ಟೋಲ್ ಗೇಟ್ ಸಮೀಪದಲ್ಲಿಯೇ ಸ್ಪೀಡ್ ಬ್ರೇಕರ್ ಹಾಕಿದ್ದಾರೆ.
ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನವಯುಗ ಟೋಲ್‍ನಲ್ಲಿ ಘಟನೆ ನಡೆದಿದ್ದು, ತುಮಕೂರು ಕಡೆಯಿಂದ ಬಂದ ಸ್ವಿಫ್ಟ್ ಕಾರಿನ ಚಾಲಕ ಕೇವಲ 20 ರೂ. ಟೋಲ್ ಶುಲ್ಕ ಪಾವತಿ ಮಾಡದೇ ಪರಾರಿಯಾಗಲು ಯತ್ನಿಸಿದ್ದ. ಕಾರನ್ನು ತಡೆಯಲು ಹೋಗಿದ್ದ ಸಿಬ್ಬಂದಿ ವೀರೇಂದ್ರಗೆ ಚಾಲಕ ಡಿಕ್ಕಿಹೊಡೆದು ಕಾರನ್ನು ಅಲ್ಲಿಯೇ ಬಿಟ್ಟು ತಪ್ಪಿಸಿಕೊಂಡು ಹೋಗಿದ್ದ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೀರೇಂದ್ರ ಸಹಾಯಕ್ಕೆ ಟೋಲ್ ಆಡಳಿತ ಮಂಡಳಿ ಮುಂದಾಗಿರಲಿಲ್ಲ. ಸಂಸ್ಥೆಯ ಅಮಾನವೀಯ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವೀರೇಂದ್ರ ತಮ್ಮ ಗ್ರಾಮಕ್ಕೆ ಮರಳಿದ್ದರು.
Advertisement
ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಟೋಲ್ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಎಚ್ಚೆತ್ತು ಕೊಂಡಿದ್ದಾರೆ. ಇತ್ತ ಅಧಿಕಾರಿಗಳು ಟೋಲ್ ಸಮೀಪದಲ್ಲಿ ಸ್ಪೀಡ್ ಬ್ರೇಕರ್ ಹಾಕಿದರೆ, ಮತ್ತೊಂದು ಕಡೆ ಸಿಬ್ಬಂದಿ ವೀರೇಂದ್ರಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುವ ನಿರ್ಧಾರ ಕೈಗೊಂಡಿದ್ದಾರೆ.