– ವಿದ್ಯಾರ್ಥಿನಿಯರೊಂದಿಗೆ ಬಿಇಓ ಮಾತುಕತೆ
ಮೈಸೂರು: ಹೆಚ್.ಡಿ ಕೋಟೆ (HD Kote) ಪಟ್ಟಣದಲ್ಲಿರುವ ಕಸ್ತೂರ ಬಾ ವಸತಿ ಶಾಲೆಯಲ್ಲಿ (Kasturba Gandhi hostel) 15 ದಿನಗಳಿಂದ ಸರಿಯಾದ ಊಟ ಸಿಗದೆ ಪರದಾಡಿದ್ದ ವಿದ್ಯಾರ್ಥಿನಿಯರ (Students) ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ.
ಶಾಲೆಗೆ ಬಿಇಓ ಕೆ.ಕಾಂತರಾಜು ಭೇಟಿ ನೀಡಿ ಮಕ್ಕಳೊಂದಿಗೆ ಮಾತನಾಡಿ ಸಮಸ್ಯೆ ಆಲಿಸಿದ್ದಾರೆ. ತಕ್ಷಣದಿಂದಲೇ ದಿನಸಿ ಪದಾರ್ಥ ಸರಬರಾಜು ಮಾಡುವಂತೆ ಕ್ರಮಕೈಗೊಂಡಿದ್ದಾರೆ. ಮಧಾಹ್ನದಿಂದಲೇ ಪೂರ್ಣಪ್ರಮಾಣದ ಊಟದ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗಿದ್ದು, ಶಾಲೆಗೆ ಅಗತ್ಯ ಅಡುಗೆ ಪದಾರ್ಥಗಳು ಬಂದು ತಲುಪಿವೆ.
ವಸತಿ ನಿಲಯದಲ್ಲಿ ಸರಿಯಾಗಿ ಊಟ ನಿಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು `ಪಬ್ಲಿಕ್ ಟಿವಿ’ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಕಳೆದ 15 ದಿನಗಳಿಂದ ವಸತಿ ನಿಲಯದಲ್ಲಿ ಸರಿಯಾದ ಊಟ ನೀಡುತ್ತಿಲ್ಲ. ವಸತಿ ನಿಲಯದಲ್ಲಿ ಆಹಾರ ಪದಾರ್ಥಗಳಿಲ್ಲದೆ ನಮಗೆ ಹೊಟ್ಟೆ ತುಂಬ ಊಟ ಸಿಗುತ್ತಿಲ್ಲ. ಕಾಫಿ, ಟೀ ಕೂಡ ಸರಿಯಾಗಿ ಸಿಗುತ್ತಿಲ್ಲ. 65 ವಿದ್ಯಾರ್ಥಿನಿಯರಿಗೆ 1 ಲೀಟರ್ ಹಾಲು ನೀಡಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿನಿಯರ ಊಟಕ್ಕೆ ಕೇವಲ 5.5 ಕೆಜಿ ಸೊಸೈಟಿ ಅಕ್ಕಿ ಕೊಡಲಾಗುತ್ತದೆ ಎಂದು ವಿದ್ಯಾರ್ಥಿನಿಯರು ತಮ್ಮ ಸಮಸ್ಯೆ ಹೇಳಿಕೊಂಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮೇಲ್ವಿಚಾರಕಿ, ಆಹಾರ ಪದಾರ್ಥ ಪೂರೈಸುವ ಗುತ್ತಿಗೆದಾರರು ಕೊಡುವ ಆಹಾರ ಪದಾರ್ಥದಿಂದಷ್ಟೇ ನಾನು ವಿದ್ಯಾರ್ಥಿನಿಯರಿಗೆ ಆಹಾರ ತಯಾರಿಸಿ ಕೊಡಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. ಈ ಸುದ್ದಿ `ಪಬ್ಲಿಕ್ ಟಿವಿ’ಯಲ್ಲಿ ಪ್ರಸಾರ ಆಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಿದ್ದಾರೆ.