ಪಬ್ಲಿಕ್ ಟಿವಿ ಇಂಪ್ಯಾಕ್ಟ್: ರಾಯಚೂರು ಶಿಕ್ಷಕಿಯ ಕಡ್ಡಾಯ ವರ್ಗಾವಣೆ ರದ್ದು

Public TV
2 Min Read
rcr teacher transfer collage copy 1

– ಕೊಟ್ಟ ಮಾತು ಉಳಿಸಿಕೊಂಡ ಶಿಕ್ಷಣ ಸಚಿವರು
– ತಪ್ಪನ್ನ ತಿದ್ದಿಕೊಂಡ ಶಿಕ್ಷಣ ಇಲಾಖೆ

ರಾಯಚೂರು: ಬುದ್ಧಿಮಾಂದ್ಯ ಮಗಳ ಆರೈಕೆಗಾಗಿ ವರ್ಗಾವಣೆ ರದ್ದು ಕೋರಿ ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದ ರಾಯಚೂರಿನ ಶಿಕ್ಷಕಿ ಶಾಂತಲಕ್ಷ್ಮಿ ಅವರ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಮೂಲಕ ಅವರ ಕಷ್ಟಕ್ಕೆ ಕೊನೆಗೂ ಪರಿಹಾರ ಸಿಕ್ಕಿದೆ.

Public Tv IMPACT ನಗರದ ಜಹಿರಾಬಾದ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಶಾಂತಲಕ್ಷ್ಮಿ ಅವರಿಗೆ ಶಿಕ್ಷಣ ಸಚಿವರ ಭರವಸೆಯಂತೆ ಕಡ್ಡಾಯ ವರ್ಗಾವಣೆ ರದ್ದಾಗಿದ್ದು, ಹಾಲಿ ಸ್ಥಳದಲ್ಲೇ ಮುಂದುವರಿಯುವ ಅವಕಾಶ ಸಿಕ್ಕಿದೆ. ಬುದ್ಧಿಮಾಂದ್ಯ ಮಗಳನ್ನು ಕರೆದುಕೊಂಡು ಅಧಿಕಾರಿಗಳ ಬಳಿ ತನ್ನ ಕಷ್ಟ ಹೇಳಿಕೊಂಡು ಸಾಕಾಗಿದ್ದ ಶಾಂತಲಕ್ಷ್ಮಿ ಕುರಿತು ಪಬ್ಲಿಕ್ ಟಿವಿ ವರದಿಯನ್ನ ಪ್ರಸಾರ ಮಾಡಿತ್ತು. ವರದಿಗೆ ಎಚ್ಚೆತ್ತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ವತಃ ಶಿಕ್ಷಕಿಯ ಜೊತೆ ದೂರವಾಣಿಯಲ್ಲಿ ಮಾತನಾಡಿ ಅವರ ಕಷ್ಟವನ್ನ ಆಲಿಸಿ, ವರ್ಗಾವಣೆ ರದ್ದುಗೊಳಿಸುವ ಬಗ್ಗೆ ಭರವಸೆಯನ್ನ ನೀಡಿದ್ದರು. ಇದನ್ನೂ ಓದಿ: ಬುದ್ಧಿಮಾಂದ್ಯ ಮಗಳ ಆರೈಕೆಗಾಗಿ ಶಿಕ್ಷಕಿ ಪರದಾಟ – ವರ್ಗಾವಣೆ ರದ್ದು ಮಾಡದೆ ಸತಾಯಿಸ್ತಿರುವ ಶಿಕ್ಷಣ ಇಲಾಖೆ

collage rcr teacher 1

ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರ್ಗಿ ಅಪರ ಆಯುಕ್ತ ನಳಿನ್ ಅತುಲ್ ಕೂಡಲೇ ವರ್ಗಾವಣೆ ರದ್ದುಗೊಳಿಸಿ ಹಿಂದಿನ ಸ್ಥಳದಲ್ಲೇ ಶಿಕ್ಷಕಿ ಶಾಂತಲಕ್ಷ್ಮಿ ಅವರನ್ನು ಮುಂದುವರಿಸುವಂತೆ ಆದೇಶಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ರಾಯಚೂರು ಉಪನಿರ್ದೇಶಕರಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಈ ಮೂಲಕ ನಿಯಮಬಾಹಿರವಾಗಿ ವರ್ಗಾವಣೆಯ ಶಿಕ್ಷೆಗೆ ಗುರಿಯಾಗಿದ್ದ ಶಿಕ್ಷಕಿ ಶಾಂತಲಕ್ಷ್ಮಿ ಅವರಿಗೆ ನ್ಯಾಯ ದೊರಕಿದೆ. ಇದನ್ನೂ ಓದಿ: ಶಿಕ್ಷಕಿಗೆ ಕರೆ ಮಾಡಿ ಕಷ್ಟ ಆಲಿಸಿದ ಸುರೇಶ್

ಬುದ್ಧಿಮಾಂದ್ಯ ಮಗಳ ಆರೈಕೆ ಹಾಗೂ ವಿಧವೆಯಾಗಿರುವ ಕಾರಣ ನಿಯಮಾನುಸಾರ ಕಡ್ಡಾಯ ವರ್ಗಾವಣೆಯಲ್ಲಿ ಶಿಕ್ಷಕಿ ಹೆಸರು ನಮೂದಿಸಬಾದರಿತ್ತು. ಶಿಕ್ಷಕಿಗೆ ಆದ ಅನಾನೂಕೂಲ ಪರಿಗಣೆನೆಗೆ ತೆಗೆದುಕೊಂಡು ಮೂಲ ಶಾಲೆಯಲ್ಲಿ ಮುಂದುವರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರು ಆದೇಶಿಸಿದ್ದಾರೆ. ತೆರವಾದ ಸ್ಥಳಕ್ಕೆ ಹಾಜರಾದ ಶಿಕ್ಷಕಿ ಶ್ರೀದೇವಿ ಅವರನ್ನ ನಿಮ್ಮ ಹಂತದಲ್ಲೇ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಿ ಅಂತ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ನಳೀನ್ ಅತುಲ್ ಸೂಚಿಸಿದ್ದಾರೆ.

rcr teacher transfer

ಏನಿದು ವರ್ಗಾವಣೆ ಪ್ರಕರಣ.?
ಶಿಕ್ಷಕಿ ಶಾಂತಾಲಕ್ಷ್ಮಿ ಅವರನ್ನ ರಾಯಚೂರಿನಿಂದ ಸುಮಾರು 25 ಕಿ.ಮೀ ದೂರದ ಮಟಮಾರಿ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಪತಿಯನ್ನು ಕಳೆದುಕೊಂಡ ಶಿಕ್ಷಕಿ ವೃತ್ತಿ ಮಾಡುತ್ತಲೇ ಮಾನಸಿಕ ಅಸ್ವಸ್ಥ ಮಗಳನ್ನು ಸಾಕುತ್ತಿದ್ದಾರೆ. ಈಗ ಏಕಾಏಕಿ ವರ್ಗಾವಣೆಯನ್ನ ವಿರೋಧಿಸಿ, ವರ್ಗಾವಣೆ ರದ್ದುಗೊಳಿಸುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.

ಅಲ್ಲದೆ ಕಡ್ಡಾಯ ವರ್ಗಾವಣೆ ಮಾಡಬೇಕಾದರೂ ಒಂದೇ ಜಾಗದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು. ಆದ್ರೆ ಶಾಂತಲಕ್ಷ್ಮಿ 8 ವರ್ಷಗಳಿಂದ ಸೇವೆ ಮಾಡುತ್ತಿದ್ದು, ಎರಡು ವರ್ಷ ಬಾಕಿಯಿರುವಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ವರ್ಗಾವಣೆ ಮಾಡಿರುವುದು ಸರಿಯಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು.

ನಗರ ಪ್ರದೇಶದಿಂದ ನಿಯಮ ಉಲ್ಲಂಘಿಸಿ ಗ್ರಾಮೀಣ ಭಾಗಕ್ಕೆ ವರ್ಗಾವಣೆ ಮಾಡಿದ್ದರ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಇದನ್ನ ಗಮನಿಸಿದ ಶಿಕ್ಷಣ ಸಚಿವ ಕೂಡಲೇ ಸ್ಪಂದಿಸಿ ವರ್ಗಾವಣೆ ರದ್ದುಗೊಳಿಸುವ ಭರವಸೆ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *