ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೆಡಗಿನಾಳ ಗ್ರಾಮದ ಅಂಧ ಕುಟುಂಬದ ಕರುಣಾಜನಕ ಸ್ಥಿತಿಗೆ ಕೊನೆಗೂ ಸರ್ಕಾರ ಮಿಡಿದಿದೆ. 18 ವರ್ಷ ತಲುಪುತ್ತಿದ್ದಂತೆ ಅಂಧತ್ವಕ್ಕೆ ಜಾರುವ ಸುರೇಶ್, ಬಸ್ಸಮ್ಮ ದಂಪತಿ ಕುಟುಂಬ ಸದಸ್ಯರ ಕುರಿತು ಪಬ್ಲಿಕ್ ಟಿವಿ ವರದಿಯನ್ನು ಪ್ರಸಾರ ಮಾಡಿತ್ತು. ಈಗ ವರದಿಯಿಂದ ಎಚ್ಚೆತ್ತಿರುವ ಸರ್ಕಾರ ಕುಟುಂಬಸ್ಥರ ಸಹಾಯಕ್ಕೆ ಮುಂದಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್. ಮಣಿವಣ್ಣನ್ ಸಹಾಯಕ್ಕೆ ಮುಂದಾಗಿದ್ದಾರೆ.
ರಾಯಚೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ ಗ್ರಾಮಕ್ಕೆ ಭೇಟಿ ನೀಡಿ ವಸ್ತು ಸ್ಥಿತಿಯ ವರದಿ ಸಲ್ಲಿಸಿದ್ದಾರೆ. ವರದಿ ಪಡೆದಿರುವ ಕ್ಯಾ.ಮಣಿವಣ್ಣನ್ ಕುಟುಂಬಕ್ಕೆ ಆಶ್ರಯ ಮನೆ ಒದಗಿಸಿಕೊಡುವಂತೆ ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ ಅವರಿಗೆ ನಿರ್ದೇಶನ ನೀಡಲಾಗುವುದು. ಈ ಕುಟುಂಬದ ಯಾವುದೇ ಸದಸ್ಯರು ನೌಕರಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಲ್ಲಿ ಅದನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 18 ವರ್ಷವಷ್ಟೇ ಈ ಕುಟುಂಬಸ್ಥರ ಕಣ್ಣಿನ ದೃಷ್ಟಿ ಆಯುಷ್ಯ
Advertisement
Advertisement
ಈಗಾಗಲೇ ದೃಷ್ಟಿ ಕಳೆದುಕೊಂಡಿರುವ ಕುಟುಂಬದ ಮಗಳು ಜ್ಯೋತಿ ಹಾಗೂ ದೃಷ್ಟಿ ಕಳೆದುಕೊಳ್ಳುತ್ತಿರುವ 14 ವರ್ಷದ ನವೀನ್‍ಗೆ ದೃಷ್ಟಿ ಮರುಕಳಿಸುವ ನಿಟ್ಟಿನಲ್ಲಿ ಚಿಕಿತ್ಸೆ ನೀಡಲು ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಒಪ್ಪಿಕೊಂಡಿದೆ. ಹೀಗಾಗಿ ಅವರನ್ನು ರಾಯಚೂರಿನಿಂದ ಕರೆದೊಯ್ಯಲು ಹಟ್ಟಿ ಚಿನ್ನದ ಗಣಿ ಕಂಪನಿಗೆ ವಾಹನದ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸೂಚಿಸಲಾಗಿದೆ. ಮುಖ್ಯವಾಗಿ ಕುಟುಂಬಕ್ಕೆ ಒದಗಿಸಿಕೂಡಬೇಕಾದ ಸೌಲಭ್ಯಗಳ ಬಗ್ಗೆ ಗಮನಹರಿಸಿ ವರದಿ ನೀಡಲು ನೋಡೆಲ್ ಅಧಿಕಾರಿ ಒಬ್ಬರನ್ನೂ ನಿಯೋಜಿಸಲಾಗುವುದು ಎಂದು ಕ್ಯಾ.ಮಣಿವಣ್ಣನ್ ಮಾಹಿತಿ ನೀಡಿದ್ದಾರೆ.
Advertisement
ಕುಟುಂಬಕ್ಕೆ ಆರ್ಥಿಕ ನೆರವು ನೀಡ ಬಯಸುವವರು ಕುಟುಂಬದ ಸದಸ್ಯ ನವೀನ್ ಕುಮಾರ ಬ್ಯಾಂಕ್ ಖಾತೆಗೆ ಸಹಾಯ ಮಾಡಬಹುದಾಗಿದೆ. ಬ್ಯಾಂಕ್ ಖಾತೆ ವಿವರ ಇಂತಿದೆ: ನವೀನ್ ಕುಮಾರ. ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಖಾತೆ ಸಂಖ್ಯೆ: 10964101048247, ಐಎಫ್‌ಎಸ್‌ಸಿ: PKGB0010964 ಕಳುಹಿಸಿಕೊಡಬಹುದಾಗಿದೆ ಎಂದು ನೋಡೆಲ್ ಅಧಿಕಾರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಹೆಚ್.ಜಿ ತಿಳಿಸಿದ್ದಾರೆ.