ಕೊಪ್ಪಳ: ಬಡವರ ಮನೆ ಸೆರಬೇಕಿದ್ದ ಸರ್ಕಾರದ ಸೀಮೆ ಎಣ್ಣೆ ಜೆ.ಡಿ.ಎಸ್ ಕಾರ್ಯಕರ್ತನೊಬ್ಬನ ಮನೆ ಸೇರುತ್ತಿರುವ ಕುರಿತು ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ಕಾರ್ಯಕರ್ತನ ಬಂಡವಾಳ ಬಯಲು ಮಾಡಿದ್ದು, ಇದೀಗ ಆಹಾರ ಇಲಾಖೆಯ ಅಧಿಕಾರಿಗಳು ಅಂಗಡಿ ಸಂಗಣ್ಣ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಅಧಿಕಾರಿ ಎಸ್.ಐ. ಬಾಗಲಿಯವರು 9 ತುಂಬಿದ ಬ್ಯಾರಲ್, 30 ಖಾಲಿ ಬ್ಯಾರಲ್ ಮತ್ತು 50 ಖಾಲಿ ಸೀಮೆ ಎಣ್ಣೆ ಡಬ್ಬಗಳನ್ನು ವಶಕ್ಕೆ ಪಡೆದಿದ್ದಾರೆ. ಆಕ್ರಮ ಮಾಡುವವರನ್ನು ಬಿಟ್ಟು ಮನೆ ಬಾಡಿಗೆ ಕೊಟ್ಟವರ ಮೇಲೆ ಅಧಿಕಾರಿಗಳು ಪ್ರಕರಣ ದಾಖಲಿಲಿಸಿದ್ದಾರೆ. ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಘಟನೆ ವಿವರ:
ಕೊಪ್ಪಳದ ಗಂಗಾವತಿ ನಿವಾಸಿ ಆಗಿರುವ ಶೇಖ್ ನಭಿಸಾಭ ಗಂಗಾವತಿ ನಗರ ಸಭೆಯ ಮಾಜಿ ಸದಸ್ಯ. ಈಗ ರಾಜ್ಯದಲ್ಲಿ ಅಧಿಕಾರದಲ್ಲಿರೋ ಜೆಡಿಎಸ್ ಪಕ್ಷದ ನಗರಘಟಕದ ಅಧ್ಯಕ್ಷನೂ ಆಗಿದ್ದಾನೆ. ಈತನಿಗೆ ಸಹೋದರರಾದ ಉಮರ್ ಮತ್ತು ಅಮೀದ್ ಸಾಥ್ ನೀಡುತ್ತಿದ್ದರು. ಪ್ರತಿ ತಿಂಗಳು ತಾಲೂಕಿನ ಹಳ್ಳಿಗಳ ಸೊಸೈಟಿಗೆ ಹೋಗಬೇಕಾದ ಸೀಮೆಎಣ್ಣೆ, ನೇರವಾಗಿ ಗಂಗಾವತಿಯಲ್ಲಿ ಇರುವ ಈತನ ಮನೆ ಸೇರುತ್ತಿದೆ. ಈತ ಅದೆಷ್ಟು ಪ್ರಭಾವಿ ಅಂದರೆ, ಗಂಗಾವತಿಯ ಮುರಾರಿ ನಗರದಲ್ಲಿರುವ ಗುರುರಾಜ್ ಮತ್ತು ಶ್ರೀನಿವಾಸ್ ಎಂಬ ಬಂಕ್‍ಗಳ ಮಾಲೀಕರ ಜೊತೆ ಸೆಟ್ಲ್ ಮೆಂಟ್ ಮಾಡ್ಕೊಂಡು ಅಲ್ಲಿಂದ ನೇರವಾಗಿ ತಮ್ಮ ಮನೆಗೆ ಬ್ಯಾರಲ್‍ಗಳಲ್ಲಿ ಹಾಕಿಸಿಕೊಳ್ತಾನೆ ಎಂದು ಸ್ಥಳೀಯರಾದ ಮೊಹಮ್ಮದ್ ಜಾಕೀರ್ ಆರೋಪಿಸಿದ್ದರು.
ಹೀಗೆ ಅಕ್ರಮವಾಗಿ ಸಂಗ್ರಹಿಸಿದ ಸೀಮೆಎಣ್ಣೆ ಕ್ಯಾನ್‍ಗಳನ್ನು ಆಟೋಗಳ ಮೂಲಕ ಬೇರೆಡೆಗೆ ರಾತ್ರೊರಾತ್ರಿ ಸಾಗಿಸ್ತಾನೆ. ಇದನ್ನು ಪ್ರಶ್ನೆ ಮಾಡಲು ಹೋದ್ರೆ ಬೆದರಿಕೆ ಹಾಕಿ ಅಲ್ಲಿಂದ ಜಾಗ ಖಾಲಿ ಮಾಡಿಸುತ್ತಾನೆ. ಸಿಟಿ ಮಧ್ಯಭಾಗದಲ್ಲೆ ಇಷ್ಟೆಲ್ಲ ಅಕ್ರಮ ನಡೆಯುತ್ತಿರೋ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೆ ಯಾವೊಬ್ಬ ಅಧಿಕಾರಿಗಳು ಕ್ಯಾರೆ ಅಂದಿಲ್ಲ ಎಂದು ಜಾಕೀರ್ ಗರಂ ಆಗಿದ್ದರು. ಈ ಕುರಿತು ಇಂದು ಬೆಳಗ್ಗೆ ಪಬ್ಲಿಕ್ ಟಿವಿ ಸುದ್ದಿ ಪ್ರಸಾರ ಮಾಡಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv