ಕಾರವಾರ: ಕಳೆದ ಜುಲೈ 26ರಲ್ಲಿ ಸುರಿದ ಮಳೆ ಭಾರೀ ಅನಾಹುತವನ್ನುಂಟು ಮಾಡಿತ್ತು. ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತುಕೊಂಡ ಕೇಂದ್ರ ಭೂಕುಸಿತ ಅಧ್ಯಯನ ತಂಡ ಕೈಗಾ ಅಣುಸ್ಥಾವರ ಭಾಗದಲ್ಲಿ ಸಮೀಕ್ಷೆಗೆ ಮುಂದಾಗಿದ್ದಾರೆ.
Advertisement
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಜುಲೈ 26ರಲ್ಲಿ ಸುರಿದ ಮಳೆ ಭಾರೀ ಅನಾಹುತವನ್ನು ತಂದೊಡ್ಡಿತು. ಯಲ್ಲಾಪುರ, ಕಾರವಾರ, ಅಂಕೋಲ ಭಾಗದಲ್ಲಿ ಜಲಪ್ರಳಯವೇ ಸಂಭವಿಸಿ ಹಲವು ಭಾಗದಲ್ಲಿ ಭೂ ಕುಸಿತ ಉಂಟಾಯಿತು. ಯಲ್ಲಾಪುರ ಭಾಗದ ಕಳಚೆ, ಅರೆಬೈಲ್ ಘಟ್ಟ ಪ್ರದೇಶ, ಕಾರವಾರ ಭಾಗದ ಅಣಶಿ ಘಟ್ಟದಲ್ಲಿ ಭೂ ಕುಸಿತವಾಗಿ ಹೆದ್ದಾರಿ ಬಂದ್ ಆಗಿತ್ತು. ಕಳಚೆಯಲ್ಲಿ 25 ಕ್ಕೂ ಹೆಚ್ಚು ಮನೆಗಳು 70 ಎಕರೆ ಅಡಕೆ ತೋಟ, ತೆಂಗಿನ ತೋಟ ಎಲ್ಲವೂ ಭೂ ಕುಸಿತದಿಂದ ನಾಶವಾಗಿದ್ದವು. ಆದರೆ ಇದೀಗ ಯಲ್ಲಾಪುರ, ಕಾರವಾರ ಘಟ್ಟ ಪ್ರದೇಶದ ಅರಣ್ಯದಲ್ಲಿ ಮತ್ತೆ ಭೂಮಿ ಕುಸಿಯಲು ಪ್ರಾರಂಭಿಸಿರುವ ಕುರಿತು ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿತ್ತು. ಇದನ್ನೂ ಓದಿ: ದೊಣ್ಣೆಯಿಂದ ಹೊಡೆದು ಅಪ್ಪನನ್ನೇ ಕೊಂದ ಮಗ!
Advertisement
Advertisement
ಕಳೆದ ತಿಂಗಳು ಸುರಿದ ಮಳೆ ಕೊಡಸಳ್ಳಿ ಅಣೆಕಟ್ಟಿನ ಭಾಗದಿಂದ ಕದ್ರಾ ಅಣೆಕಟ್ಟು ಭಾಗದ ಪ್ರದೇಶದವರೆಗೆ ಹಲವು ಭಾಗದಲ್ಲಿ ಗುಡ್ಡ ಕುಸಿದಿದ್ದವು. 2019ರಲ್ಲಿ ಕೊಡಸಳ್ಳಿ ಆಣೆಕಟ್ಟಿನ ಮೇಲ್ಭಾಗದಲ್ಲಿ ಗುಡ್ಡ ಕುಸಿತವಾಗಿತ್ತು. ಆದರೆ ಈ ಬಾರಿ ಕೆಳಭಾಗದಲ್ಲಿ ಗುಡ್ಡ ಕುಸಿತ ಕಂಡಿತ್ತು. ಇದಲ್ಲದೇ ಕೈಗಾ ಅಣು ಸ್ಥಾವರದ ಸುತ್ತಮುತ್ತಲ ಪ್ರದೇಶದ ಗುಡ್ಡವು ಸಹ ಕುಸಿತ ಕಂಡಿದೆ. ಇದಲ್ಲದೇ ನಿರಂತರ ಈ ಭಾಗದಲ್ಲಿ ಮತ್ತೆ ಮಳೆ ಬೀಳುತಿದ್ದು, ಅಲ್ಲಲ್ಲಿ ಗುಡ್ಡಗಳಲ್ಲಿ ಕುಸಿತ ಕಂಡಿದೆ. ಇದರಿಂದಾಗಿ ಕೊಡಸಳ್ಳಿ ಜಲಾಶಯ ಹಾಗೂ ಕೈಗಾ ಅಣುಸ್ಥಾವರಕ್ಕೆ ಆತಂಕ ಎದುರಾಗಿದೆ ಎಂಬ ಕುರಿತು ಪಬ್ಲಿಕ್ ಟಿವಿ ಸಾಕ್ಷಿ ಸಮೇತ ಸುದ್ದಿ ಪ್ರಕಟಮಾಡಿತ್ತು. ಇದರ ಬೆನ್ನಲ್ಲೆ ಕೇಂದ್ರದಿಂದ ನಾಲ್ಕು ಜನರ ತಂಡ ಕೈಗಾ ಮತ್ತು ಕದ್ರಾ ಭಾಗದ ಸುತ್ತಮುತ್ತ ಭೂ ಕುಸಿತವಾಗಿರುವ ಪ್ರದೇಶಕ್ಕೆ ಅಧ್ಯಯನಕ್ಕೆ ತೆರಳುತ್ತಿದೆ.
Advertisement
ಕಾರವಾರದ ಘಟ್ಟ ಪ್ರದೇಶ, ಯಲ್ಲಾಪುರ ಘಟ್ಟ ಪ್ರದೇಶದ ಹಲವು ಕಡೆಯಲ್ಲಿ ಹಿಂದೆ ಬಿರುಕು ಬಿಟ್ಟಿದ್ದ ಗುಡ್ಡಗಳು ಇದೀಗ ಕುಸಿಯುತ್ತಿದೆ. ಯಲ್ಲಾಪುರದ ಹೆದ್ದಾರಿ ಭಾಗದಲ್ಲಿ ಪ್ರಯಾಣಿಸಿದರೆ ಹಲವು ಭಾಗದಲ್ಲಿ ಗುಡ್ಡ ಕುಸಿದಿರುವುದನ್ನು ಗಮನಿಸಬಹುದಾಗಿದೆ. ಕೈಗಾ ಯಲ್ಲಾಪುರಕ್ಕೆ ತೆರಳುವ ಗುಡ್ಡದ ರಸ್ತೆಯಲ್ಲಿ ನಿಂತು ನೋಡಿದರೆ ಸುತ್ತಮುತ್ತಲಿನ ಗುಡ್ಡದಲ್ಲಿ ಭೂಮಿ ಕುಸಿಯುತ್ತಿರುವುದನ್ನು ಗಮನಿಸಬಹುದಾಗಿದೆ.
ಈ ಭಾಗಗಳಲ್ಲಿ ಜನ ವಸತಿ ಇಲ್ಲದ ಕಾರಣ ದೊಡ್ಡ ಹಾನಿಯಾಗುತ್ತಿದ್ದರೂ ಜನರಿಗೆ ತೊಂದರೆ ಆಗಿಲ್ಲ. ಆದರೆ ಇಲ್ಲಿರುವ ಜಲಾಶಯ ಹಾಗೂ ಕೈಗಾ ಅಣು ಸ್ಥಾವರಕ್ಕೆ ಇದೀಗ ಆತಂಕ ಎದುರಾಗಿದೆ. ಗುಡ್ಡಭಾಗದಲ್ಲಿ ನೀರಿನ ಪಸೆ ಹೆಚ್ಚಾಗಿದೆ. ಮಣ್ಣುಗಳು ಸಡಿಲವಾಗಿದ್ದು, ಅಲ್ಲಲ್ಲಿ ಭೂಮಿ ಬಾಯಿ ಬಿಟ್ಟಿದೆ. ಕೆಲವು ಕಡೆ ಮಳೆಯಿಂದ ಗುಡ್ಡದ ಮರಗಳ ಸಮೇತ ಮಣ್ಣು ಕುಸಿದು ಮರಗಳು ಬುಡಸಮೇತ ನೆಲಕ್ಕುರುಳಿವೆ.
ಕಳಚೆ ಭಾಗದಲ್ಲಿ ಸಹ ಮತ್ತೆ ಗುಡ್ಡ ಕುಸಿತ ಕಾಣುವ ಆತಂಕ ಎದುರಾಗಿದೆ. ಕಳಚೆಯ ಸಮೀಪವೇ ಕೊಡಸಳ್ಳಿ ಜಲಾಶಯ ಸಹ ಇದ್ದು, ಈ ಜಲಾಶಯದ ಸುತ್ತಲಿನ ಗುಡ್ಡದ ಹಲವು ಭಾಗದಲ್ಲಿ ಮಣ್ಣು ಸಡಿಲವಾಗಿ ಕುಸಿಯುತ್ತಿದೆ. ಈ ಭಾಗದಲ್ಲಿ ಬಹುತೇಕ ಅರಣ್ಯವಾಗಿರುವುದರಿಂದ ಇದರ ತೀವ್ರತೆಯನ್ನು ಅರಿಯದಂತಾಗಿದೆ. ಇನ್ನು ಕಳಚೆ ಗ್ರಾಮದ ಬಹುತೇಕ ಭಾಗದಲ್ಲಿ ಭೂಮಿ ಬಿರುಕುಬಿಟ್ಟಿದ್ದರಿಂದ ಹಾಗೂ ಮಣ್ಣು ಸಡಿಲವಾಗಿರುವುದರಿಂದ ಮತ್ತೆ ಹೆಚ್ಚಿನ ಮಳೆಯಾದರೆ ದೊಡ್ಡ ಅನಾಹುತ ಕಟ್ಟಿಟ್ಟ ಬುತ್ತಿಯಂತಿದ್ದು ಇದೀಗ ಕೇಂದ್ರ ಅಧ್ಯಯನ ತಂಡ ಕೈಗಾ ಅಣುಸ್ಥಾವರದ ಭಾಗದಲ್ಲಿ ಇದರ ಸಮೀಕ್ಷೆಗೆ ಮುಂದಾಗಿದ್ದಾರೆ.