ಚಿಕ್ಕೋಡಿ(ಬೆಳಗಾವಿ): ರಾತ್ರಿಯಿಡಿ ಸರತಿಯಲ್ಲಿ ಕಾದು ನಿಂತು ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಜನರು ಪರದಾಡುತ್ತಿರುವ ಕುರಿತ ಪಬ್ಲಿಕ್ ಟಿವಿಯ ವರದಿಗೆ ಹುಕ್ಕೇರಿ ತಾಲೂಕು ಆಡಳಿತ ಸ್ಪಂದಿಸಿದೆ.
ಜನರ ಸಂಕಷ್ಟದ ಕುರಿತ ಸುದ್ದಿ ಪ್ರಕಟವಾದ ಬೆನ್ನಲ್ಲೇ ಹುಕ್ಕೇರಿ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದ್ದು, ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಹೆಚ್ಚುವರಿಯಾಗಿ ಮತ್ತೆರಡು ಆಧಾರ್ ಕೇಂದ್ರಗಳನ್ನ ಸ್ಥಾಪಿಸಲು ತಹಶೀಲ್ದಾರ್ ಅಶೋಕ ಗೂರಾಣಿ ಸೂಚಿಸಿದ್ದಾರೆ.
ಜನರಿಗೆ ಯಾವುದೇ ತೊಂದರೆಯಾಗದಂತೆ ಸಂಕೇಶ್ವರ ಪಟ್ಟಣದ ನಾಡ ಕಚೇರಿ, ಎಸ್‍ಬಿಐ ಬ್ಯಾಂಕ್ ಹಾಗೂ ಅಂಚೆ ಕಚೇರಿಯಲ್ಲಿ ಆಧಾರ ಕೇಂದ್ರಗಳು ಕಾರ್ಯ ನಿರ್ವಹಿಸಲಿದೆ. ಜನರು ಆತಂಕಕ್ಕೆ ಒಳಗಾಗದೆ ತಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳುವಂತೆ ಅಶೋಕ ಗೂರಾಣಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಬೆಳಗಾಗಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಅಂಚೆ ಕಚೇರಿಯಲ್ಲಿನ ಆಧಾರ ಕೇಂದ್ರದಲ್ಲಿ ಆಧಾರ ತಿದ್ದುಪಡಿಗಾಗಿ ಜನ ಪಡಬಾರದ ಕಷ್ಟ ಪಡುತ್ತಿದ್ದರು. ದಿನಕ್ಕೆ ಕೇವಲ 30 ಅರ್ಜಿಗಳನ್ನ ಸ್ವೀಕರಿಸಿ 30 ಜನರ ಮಾತ್ರ ನೂತನ ಆಧಾರ್ ಕಾರ್ಡಿಗೆ ಹಾಗೂ ತಿದ್ದುಪಡಿಯನ್ನು ಮಾಡಲಾಗುತ್ತಿತ್ತು. ಹೀಗಾಗಿ ಹೆಚ್ಚಿನ ಸಂಖ್ಯೆಯ ಪರ ಊರುಗಳ ಸಾರ್ವಜನಿಕರು ರಾತ್ರಿಯೆ ಬಂದು ಚರಂಡಿ ಪಕ್ಕದಲ್ಲೇ ಮಲಗಿ ವಸತಿ ಮಾಡಿ ತಮ್ಮ ಆಧಾರ ಕಾರ್ಡ್ ಕಾರ್ಯ ಮಾಡಿಸಿಕೊಳ್ಳುತ್ತಿದ್ದರು.
ಕಚೇರಿ ಬೆಳಿಗ್ಗೆ 10 ಗಂಟೆಗೆ ಆರಂಭವಾಗುವವರೆಗೂ ಸರದಿ ಸಾಲಿನಲ್ಲಿ ನಿಂತು ತಮ್ಮ ಆಧಾರ ತಿದ್ದುಪಡಿ ಮಾಡಿಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನರ ಸಮಸ್ಯೆಯನ್ನು ವರದಿ ಮಾಡಿದ್ದ ಪಬ್ಲಿಕ್ ಟಿವಿ ಅಧಿಕಾರಿಗಳ ಗಮನಕ್ಕೆ ತಂದಿತ್ತು.