ಬೆಂಗಳೂರು: ಆರ್ ಟಿಐ ಸಮಾಲೋಚಕ ಚಂದ್ರಶೇಖರ್ ರಾವ್ ಅವರನ್ನು ಬಿಡಿಎ ಆವರಣದಲ್ಲಿ ಸೇರಿಸದಂತೆ ಬಿಡಿಎ ಕಮಿಷನರ್ ರಾಕೇಶ್ ಸಿಂಗ್ ತಾಕೀತು ಮಾಡಿದ್ದಾರೆ.
ಶನಿವಾರ ಪಬ್ಲಿಕ್ ಟಿವಿಯಲ್ಲಿ ಎಸಿಬಿ ಎಸ್‍ಪಿ ಪವಾರ್ ಹೆಸರಿನಲ್ಲಿ ಚಂದ್ರಶೇಖರ್ ರಾವ್ ಬಿಡಿಎ ಅಧಿಕಾರಿಗಳ ಹತ್ತಿರ ಹಣ ವಸೂಲಿ ಮಾಡುತ್ತಿದ್ದ ವಿಚಾರವನ್ನು ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆ ನಡೆಸಿ ವರದಿ ಪ್ರಸಾರ ಮಾಡಿತ್ತು. ಈ ಸುದ್ದಿಯನ್ನು ನೋಡಿದ್ದ ರಾಕೇಶ್ ಸಿಂಗ್ ಅವರು ಚಂದ್ರಶೇಖರ್ ರಾವ್ ಅವರನ್ನು ಬಿಡಿಎ ಒಳಗೆ ಬಿಟ್ಟುಕೊಳ್ಳದಂತೆ ಆದೇಶ ನೀಡಿದ್ದಾರೆ.
ಪಬ್ಲಿಕ್ ಟಿವಿ ಪ್ರಸಾರದಲ್ಲಿತ್ತು?:
ಬಿಡಿಎ ಭ್ರಷ್ಟಾಚಾರ ಡೆವಲೆಪ್‍ಮೆಂಟ್ ಅಥಾರಿಟಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ ಇಲ್ಲಿ ಬಿಡಿಎ ಹೆಸರಲ್ಲದೆ ಎಸಿಬಿ ಹೆಸರಿನಲ್ಲಿ ಅಧಿಕಾರಿಗಳು, ಅಧಿಕಾರಿಗಳ ಹತ್ತಿರವೇ ಹಣ ವಸೂಲಿ ಮಾಡುತ್ತಿದ್ದರು. ಬಿಡಿಎನಲ್ಲಿ ಆರ್ ಟಿಐ ಸಮಾಲೋಚಕರ ಹುದ್ದೆಗೆ ಒಂದು ವರ್ಷದ ಅವಧಿಗೆ ನೇಮಕವಾಗಿದ್ದ ಚಂದ್ರಶೇಖರ್ ರಾವ್ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಒಂದು ವರ್ಷ ಕಳೆದು ಅವಧಿ ಪೂರ್ಣಗೊಂಡಿದ್ದರೂ ಚಂದ್ರಶೇಖರ್ ರಾವ್ ತನ್ನ ಜಾಗವನ್ನು ಮಾತ್ರ ಬಿಡುತ್ತಿಲ್ಲ. ಅಷ್ಟೇ ಅಲ್ಲದೇ ಭ್ರಷ್ಟಾಚಾರ ನಿಗ್ರಹ ದಳದಲ್ಲಿ(ಎಸಿಬಿ) ಎಸ್‍ಪಿಯಾಗಿ ನನ್ನ ಶಿಷ್ಯ ಪವಾರ್ ಇದ್ದಾನೆ. ನಿಮ್ಮೆಲ್ಲರ ಕೇಸ್ ಆತನ ಬಳಿ ಇದೆ. ಅದನ್ನು ಕ್ಲಿಯರ್ ಮಾಡಬೇಕು ಅಂದ್ರೆ ಹಣ ಕೊಡಿ ಎಂದು ಬಿಡಿಎ ಅಧಿಕಾರಿಗಳ ಹತ್ರ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.
ಚಂದ್ರಶೇಖರ್ ರಾವ್ ಹೇಗೆ ಬಿಡಿಎಯಲ್ಲಿ ಪವರ್ ಹೊಂದಿದ್ದಾರೆ ಎನ್ನುವುದಕ್ಕೆ ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ಮಾಡಿತ್ತು. ಆ ಆಡಿಯೋದಲ್ಲಿ ಎಲ್ಲವೂ ಸೆರೆಯಾಗಿತ್ತು. ಈ ವಿಚಾರದ ಬಗ್ಗೆ ಎಸಿಬಿ ಎಸ್‍ಪಿ ಪವಾರ್ ಅವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿದಾಗ, ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ದೊಡ್ಡ ಹುದ್ದೆಯಲ್ಲಿರುವವರ ಹೆಸರನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಾರೆ. ನಾನು ಯಾರ ಹತ್ತಿರವೂ ಹಣವನ್ನು ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈಗಾಗಲೇ ಹಲವರ ಬಳಿ ಲಕ್ಷ ಲಕ್ಷ ಹಣವನ್ನು ವಸೂಲಿ ಮಾಡಿರುವ ಆರೋಪ ಹೊತ್ತಿರುವ ಚಂದ್ರಶೇಖರ್ ರಾವ್ ಈಗ ಇನ್ನೊಂದು ಅವಧಿಗೆ ನನ್ನನ್ನೆ ನೇಮಕ ಮಾಡಿ ಎಂದು ಮತ್ತೊಮ್ಮೆ ಆಯುಕ್ತರಿಗೆ ಪತ್ರ ಬರೆದಿದ್ದರು.