ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಪಿಯು ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದಕ್ಕೆ ಕಾಲೇಜಿನ ಮಾನ್ಯತೆ ರದ್ದು

Public TV
3 Min Read
puc leak rcr

ರಾಯಚೂರು/ಬೆಂಗಳೂರು: ಮಾನ್ವಿಯ ಗಾಂಧಿ ಮೆಮೋರಿಯಲ್ ಪಿಯು ಕಾಲೇಜಿನಲ್ಲಿ ಪರೀಕ್ಷೆ ಆರಂಭಗೊಳ್ಳುತ್ತಿದ್ದ ಹಾಗೆ ವಾಣಿಜ್ಯ ವಿಭಾಗದ ಅಕೌಂಟೆನ್ಸಿ ಪತ್ರಿಕೆಯ ಫೋಟೋ ವಾಟ್ಸಪ್‍ನಲ್ಲಿ ಹರಿದಾಡಿದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಕಳಿಂಗ ಪಿಯು ಕಾಲೇಜಿನ ಮಾನ್ಯತೆಯನ್ನು ರದ್ದು ಮಾಡಿ ರಾಜ್ಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಅಕ್ರಮ ಎಸಗಿದ್ದಕ್ಕೆ ಕಲ್ಮಠ ಪಿಯು ಕಾಲೇಜಿನ ಸಂಖ್ಯಾಶಾಸ್ತ್ರ ಉಪನ್ಯಾಸಕ ಸಿದ್ಧನಗೌಡ, ಕಳಿಂಗ ಪಿಯು ಕಾಲೇಜಿನ ಪ್ರಾಂಶುಪಾಲ ಮಹೇಶ್ ಮತ್ತು ಅದೇ ಕಾಲೇಜಿನ ಸಿಬ್ಬಂದಿ ಶರಣಬಸವ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಪೊಲೀಸರು ಮೂವರನ್ನೂ ವಶಕ್ಕೆ ಪಡೆದಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಬಗಾದಿ ಗೌತಮ್, ಎಸ್‍ಪಿ ಚೇತನ್ ಸಿಂಗ್ ರಾಥೋರ್ ವಿಚಾರಣೆಗೆ ಒಳಪಡಿಸಿದ ವೇಳೆ ಈ ಆರೋಪಿಗಳ ಸುಳಿವು ಸಿಕ್ಕಿದ್ದು, ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

Public Tv IMPACT copy 1

ಅಕ್ರಮ ಎಸಗಿದ್ದು ಯಾಕೆ? ಹೇಗೆ?
ಗಾಂಧಿ ಮೆಮೊರಿಯಲ್ ಕಾಲೇಜು ಮತ್ತು ಕಲ್ಮಠ, ಕಳಿಂಗ ಕಾಲೇಜಿನ ಮಧ್ಯೆ ವೈಷಮ್ಯವಿದ್ದು, ಗಾಂಧಿ ಕಾಲೇಜಿನ ಹೆಸರನ್ನು ಕೆಡಿಸಲು ಒಂದನೇ ಆರೋಪಿಯಾಗಿರುವ ಸಿದ್ಧನಗೌಡ, ಎರಡನೇ ಆರೋಪಿ ಮಹೇಶ್‍ಗೆ ವಾಟ್ಸಪ್‍ನಲ್ಲಿ ಪ್ರಶ್ನೆ ಪತ್ರಿಕೆಯನ್ನು ಕಳುಹಿಸಿದ್ದಾನೆ. ಮಹೇಶ್ ಈ ಫೋಟೋ ವನ್ನು ಶರಣಬಸವನಿಗೆ ಕಳುಹಿಸಿದ್ದಾನೆ. ಶರಣಬಸವ ಗಾಂಧಿ ಕಾಲೇಜಿನಲ್ಲಿ ಅಕ್ರಮ ನಡೆದಿದ್ದು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಟೈಪಿಸಿ ವಾಟ್ಸಪ್‍ನಲ್ಲಿ ಎಲ್ಲರಿಗೂ ಪರೀಕ್ಷೆ ಮುಗಿಯುವ ಮೊದಲೇ ಮೆಸೇಜ್ ಮಾಡಿದ್ದ.

ಮೊಬೈಲ್ ಬ್ಯಾನ್: ಈ ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಿಕ್ಷಣ ಸಚಿವ ತನ್ವೀರ್ ಸೇಠ್, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಈಗಾಗಲೇ ಸಿದ್ದನಗೌಡ ಎಂಬ ಉಪನ್ಯಾಸಕ ಒಬ್ಬನನ್ನು ಬಂಧಿಸಿಲಾಗಿದೆ. ಈತ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ಕಾಲೇಜಿಗೆ ಬಂದಿದ್ದಾನೆ. ನಂತರ ಆತ ಪ್ರಶ್ನೆ ಪತ್ರಿಕೆ ಫೋಟೋ ತೆಗೆದುಕೊಂಡಿದ್ದಾನೆ. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರನ್ನು ವಜಾಗೊಳಿಸಲಾಗಿದೆ. ಇನ್ನು ಮುಂದೆ ಯಾವ ಉಪನ್ಯಾಸಕರು ಸಹ ಮೊಬೈಲ್‍ಗಳನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ಅಕ್ರಮ ನಡೆಸಿದ್ದಕ್ಕೆ ಕಳಿಂಗ ಕಾಲೇಜಿನ ಮಾನ್ಯತೆಯನ್ನು ರದ್ದುಗೊಳಿಸಲಾಗಿದೆ. ಪಿಯು ವಿದ್ಯಾರ್ಥಿಗಳು ಆಂತಕವಿಲ್ಲದೇ ಪರೀಕ್ಷೆಯನ್ನು ಬರೆಯಬಹುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಮಧ್ಯಾಹ್ನ ಬ್ರೇಕ್ ಮಾಡಿದ ಬಳಿಕ ಪದವಿ ಪೂರ್ವ ಶಿಕ್ಷಣಾ ಇಲಾಖೆಯ ನಿರ್ದೇಶಕಿ ಶಿಖಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಸಿಬ್ಬಂದಿಯ ಅಕ್ರಮದಿಂದ ಪ್ರಶ್ನೆ ಪತ್ರಿಕೆ ವಾಟ್ಸಪ್‍ನಲ್ಲಿ ಹರಿದಾಡಿರಬಹುದು. ಜಿಲ್ಲಾಧಿಕಾರಿಯವರು ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದ್ದರು. ಶಿಕ್ಷಣ ಸಚಿವ ತನ್ವೀರ್ ಸೇಠ್ ಪಬ್ಲಿಕ್ ಟಿವಿಗೆ ಸರಣಿ ಟ್ವೀಟ್ ಮಾಡಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಅಕ್ರಮ ಎಸಗಿದವರನ್ನು ಕೂಡಲೇ ಪತ್ತೆ ಮಾಡುತ್ತೇವೆ ಎಂದು ತಿಳಿಸಿದ್ದರು. ಈಗ ಇವರಿಬ್ಬರು ನುಡಿದಂತೆ ನಡೆದಿದ್ದು, ಅಕ್ರಮ ಎಸಗಿದವರನ್ನು ಬಂಧಿಸಿ, ಕಾಲೇಜಿನ ಮಾನ್ಯತೆಯನ್ನು ರದ್ದು ಮಾಡಿದ್ದಾರೆ.

ವಿದ್ಯಾರ್ಥಿಗಳಿಂದ ಪ್ರತಿಭಟನೆ: ವಾಟ್ಸಪ್‍ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದನ್ನು ಖಂಡಿಸಿ ಎಸ್‍ಎಫ್‍ಐ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಶಿಕ್ಷಣೆ ಇಲಾಖೆ ಕೂಡಲೇ ತಪ್ಪಿತ್ತಸ್ಥರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ: ಮತ್ತೆ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ? 

ಅಕ್ರಮ ನಡೆಯುತ್ತಾ?
ಒಂದು ವೇಳೆ ಪ್ರಶ್ನೆ ಪತ್ರಿಕೆ ವಾಟ್ಸಪ್‍ನಲ್ಲಿ ಸಿಕ್ಕಿದರೆ ಉತ್ತರವನ್ನು ತಯಾರು ಮಾಡಿ ಚೀಟಿ ಮೂಲಕ ವಿದ್ಯಾರ್ಥಿಗಳಿಗೆ ನೀಡುವ ಸಾಧ್ಯತೆಯನ್ನು ನಾವು ತಳ್ಳಿ ಹಾಕುವಂತಿಲ್ಲ. ವಿದ್ಯಾರ್ಥಿಗಳ ಪೋಷಕರ ಜೊತೆ ಸೇರಿ ಶಿಕ್ಷಕರೇ ಕಾಪಿಗೆ ಸಹಕಾರ ನೀಡುತ್ತಿರುವ ಸಿಸಿಟಿವಿಯಲ್ಲಿ ಸೆರೆಯಾಗಿರುವ ಸುದ್ದಿಯನ್ನು ಪಬ್ಲಿಕ್ ಟಿವಿ ಭಾನುವಾರ ಪ್ರಸಾರ ಮಾಡಿತ್ತು. ಇದರಲ್ಲಿ ವಾಟರ್ ಬಾಯಿ ವಿದ್ಯಾರ್ಥಿಗಳಿಗೆ ಚೀಟಿ ನೀಡಿ ಹೋಗುತ್ತಿರುವುದು ಸೆರೆಯಾಗಿತ್ತು. ಹೀಗಾಗಿ ಈ ಒಂದು ಪ್ರಶ್ನೆ ಪತ್ರಿಕೆಯ ಫೋಟೋ ರಾಜ್ಯದ ಹಲವು ಭಾಗಗಳಿಗೆ ತಲುಪಿರುವ ಸಾಧ್ಯತೆಯು ಇದೆ. ಈ ಒಂದು ಪ್ರಶ್ನೆ ಪತ್ರಿಕೆ ಈಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ಹಿಂದಿನ ಪರೀಕ್ಷೆಯ ವೇಳೆಯೂ ಈ ರೀತಿ ನಡೆದಿತ್ತಾ ಎನ್ನುವುದು ತಿಳಿದು ಬಂದಿಲ್ಲ.

ಬೀದರ್ ಕಾಲೇಜಿನಲ್ಲಿ ಶಿಕ್ಷಕರಿಂದಲೇ ನಕಲಿಗೆ ಸಹಕಾರ:
ಮಾರ್ಚ್ 9ರಂದು ನಡೆದ ಜೀವಶಾಸ್ತ್ರ ಪರೀಕ್ಷೆಯಲ್ಲಿ ಬೀದರ್‍ನ ನೂರ ಕಾಲೇಜಿನಲ್ಲಿ ಪ್ರಾಂಶುಪಾಲರು, ಪರೀಕ್ಷೆ ನಿರ್ವಹಿಸುವ ಅಧಿಕಾರಿಗಳು, ಕಾಲೇಜಿನ ಸಿಬ್ಬಂದಿಗಳು ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕೋಣೆ ನಂಬರ್ 1, ಸಿಸಿ ಕ್ಯಾಮರಾ 10 ರಲ್ಲಿ ನಕಲಿಗೆ ಸಿಬ್ಬಂದಿಗಳು ಪ್ರೋತ್ಸಾಹ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ವ್ಯಕ್ತಿಯೊಬ್ಬ ರಾಜಾರೋಷವಾಗಿ ವಿದ್ಯಾರ್ಥಿನಿಗೆ ಮೊಬೈಲ್ ನೀಡಿ ನಕಲು ಮಾಡಲು ಸಹಕಾರ ಮಾಡುತ್ತಿದ್ದು ಜೊತೆಗೆ ವಾಟರ್‍ಬಾಯಿ ಕೂಡ ವಿದ್ಯಾರ್ಥಿಗಳಿಗೆ ಚೀಟಿಗಳನ್ನು ನೀಡಿ ಹೋಗುತ್ತಿರುವ ದೃಶ್ಶ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಭಾನುವಾರ ಪಬ್ಲಿಕ್ ಟಿವಿ ಈ ಸುದ್ದಿಯನ್ನು ಪ್ರಸಾರ ಮಾಡಿತ್ತು.

rcr puc leak
ಅಕ್ರಮ ಎಸಗಿದ ಆರೋಪಿಗಳು ಪ್ರಾಂಶುಪಾಲ ಮಹೇಶ್, ಸಿಬ್ಬಂದಿ ಶರಣವಬಸವ, ಉಪನ್ಯಾಸಕ ಸಿದ್ದನಗೌಡ

ಪಬ್ಲಿಕ್ ಟಿವಿ ಜೊತೆ ಪದವಿ ಪೂರ್ವ ಶಿಕ್ಷಣಾ ಇಲಾಖೆಯ ನಿರ್ದೇಶಕಿ ಶಿಖಾ ಮಾತನಾಡಿದ್ದು, ಅವರ ಹೇಳಿಕೆಯ ವಿಡಿಯೋ ಇಲ್ಲಿ ನೀಡಲಾಗಿದೆ.

 

pu notice

PU PROTEST 1

PU PROTEST 2

Share This Article
Leave a Comment

Leave a Reply

Your email address will not be published. Required fields are marked *