ಸಾಮಾನ್ಯವಾಗಿ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ದೇಶಗಳಿಗೆ ತೆರಳಲು ಚಿಂತಿಸುತ್ತಾರೆ. ಅಂತಹ ದೇಶಗಳ ಪೈಕಿ ಅಮೆರಿಕ, ಕೆನಡಾ (Canada) ಸೇರಿದಂತೆ ಇನ್ನಿತರ ದೇಶಗಳು ಈ ಪಟ್ಟಿಯಲ್ಲಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಅಮೆರಿಕ ಸರ್ಕಾರ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಂತಹ ವೀಸಾ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಏನಿದರ ಹಿಂದಿನ ಕಾರಣ ಹಾಗೂ ಈ ವೀಸಾ ಸಂಖ್ಯೆಗಳ ಕಡಿಮೆ ಮಾಡುವುದರಿಂದ ಭಾರತೀಯ ವಿದ್ಯಾರ್ಥಿಗಳ ಮೇಲಾಗುವ ಪರಿಣಾಮವೇನು? ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಕಳೆದ ವರ್ಷ 2024ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಭಾರತೀಯರಿಗೆ 64,008 ವಿದ್ಯಾರ್ಥಿ ವೀಸಾಗಳನ್ನು (Student Visa) ನೀಡಲಾಗಿದೆ. ಅದೇ ರೀತಿ 2023ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ 1.03 ಲಕ್ಷ ವೀಸಾಗಳನ್ನು ನೀಡಲಾಗಿತ್ತು. ಕಳೆದೆರಡು ವರ್ಷಗಳಲ್ಲಿ ಭಾರತೀಯರಿಗೆ ನೀಡಿರುವ ವಿದ್ಯಾರ್ಥಿ ವೀಸಾಗಳ ತುಲನೆ ಮಾಡಿದಾಗ, ಅಮೆರಿಕ ಸರ್ಕಾರ ಶೇ.41 ರಷ್ಟು ವೀಸಾಗಳನ್ನು ತಿರಸ್ಕರಿಸಿದೆ. ಇದು ದಶಕದಲ್ಲಿ ಅತಿ ಹೆಚ್ಚು ವೀಸಾಗಳನ್ನು ತಿರಸ್ಕರಿಸಿದೆ ಎಂದು ವಿದೇಶಾಂಗ ಇಲಾಖೆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಯುಕೆ, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ಹಲವಾರು ದೇಶಗಳು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಂತಹ ವೀಸಾ ನಿಯಮಗಳಲ್ಲಿ ಬದಲಾವಣೆಗಳನ್ನು ತರುತ್ತಿವೆ. ಇದೇ ಸಮಯದಲ್ಲಿ ಅಮೆರಿಕ ಸರ್ಕಾರವು (America Government) ಕೂಡ ವಿದ್ಯಾರ್ಥಿ ವೀಸಾ ತಿರಸ್ಕರಿಸುವುದನ್ನು ಹೆಚ್ಚಿಸಿದೆ.
2023ರ ಅಕ್ಟೋಬರ್‌ನಿಂದ 2024ರ ಸೆಪ್ಟೆಂಬರ್‌ವರೆಗೆ ಅಮೆರಿಕ ಸರ್ಕಾರ ಒಟ್ಟು 6.79 ಲಕ್ಷ ವಿದ್ಯಾರ್ಥಿ ವೀಸಾಗಳನ್ನು ಸ್ವೀಕರಿಸಿದೆ. ಈ ಪೈಕಿ ಒಟ್ಟು 2.79 ಲಕ್ಷ ತಿರಸ್ಕರಿಸಿದೆ. ಇದಕ್ಕೂ ಮುನ್ನ 2022 ಮತ್ತು 2023ರಲ್ಲಿ ಒಟ್ಟು 6.99 ಲಕ್ಷ ಅರ್ಜಿಗಳನ್ನು ಸ್ವೀಕರಿಸಿ, 2.53 ಲಕ್ಷ ಅರ್ಜಿಗಳನ್ನು ತಿರಸ್ಕರಿಸಿತ್ತು. ಈ ಪೈಕಿ ಶೇ.36ರಷ್ಟು ಏರಿಕೆಯಾಗಿದೆ.
ಏನಿದು F-1 ವೀಸಾ?
F-1 ಎಂಬುದು ಶಾಲಾ ಕಾಲೇಜು ಅಥವಾ ಇನ್ನಿತರ ಅಧ್ಯಯನಕ್ಕಾಗಿ ನಿರ್ದಿಷ್ಟ ಅವಧಿಯವರೆಗೆ ಅಮೆರಿಕದಲ್ಲಿ ವಾಸಿಸಲು ಈ ವೀಸಾವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. F1 ವೀಸಾ ಎನ್ನುವುದು ವಿದೇಶಿ ವಿದ್ಯಾರ್ಥಿಗಳಿಗೆ ನೀಡಲಾಗುವ ಅಮೆರಿಕಾ ವೀಸಾ ಆಗಿದ್ದು, ಇದನ್ನು ಮುಖ್ಯವಾಗಿ ವಿದ್ಯಾರ್ಥಿಗಳು ಅಮೆರಿಕಾದಲ್ಲಿ ತಮ್ಮ ವಿದ್ಯಾಭ್ಯಾಸಕ್ಕಾಗಿ ಬಳಸುತ್ತಾರೆ. ಈ ವೀಸಾ ಮೂಲಕ, ವಿದ್ಯಾರ್ಥಿಗಳು ಅಮೆರಿಕಾದಲ್ಲಿ ಪದವಿ ಅಥವಾ ಸ್ನಾತಕೋತ್ತರ ಕೋರ್ಸ್‍ಗಳನ್ನು ಪೂರ್ಣಗೊಳಿಸಬಹುದು. ಈ ವೀಸಾ ಅನ್ನು ಪಡೆಯಲು ವಿದ್ಯಾರ್ಥಿಗಳು ತಾವು ಸೇರ ಬಯಸುವ ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ I-20 ಫಾರ್ಮ್ ಪಡೆದು, ಆಧಾರಿತ ದಾಖಲೆಗಳನ್ನು ಸಲ್ಲಿಸಿ, ಬಳಿಕ ವೀಸಾ ಪಡೆಯಲು ಸಂದರ್ಶನ ನೀಡಬೇಕಾಗುತ್ತದೆ.
ವೀಸಾ ನಿರಾಕರಣೆಗೆ ಕಾರಣವೇನು?
ಕಳೆದ 2-3 ವರ್ಷಗಳಲ್ಲಿ ಕೆನಡಾ ಹಾಗೂ ಅಮೆರಿಕ ದೇಶಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಹೀಗಾಗಿ 2024ರಲ್ಲಿ ಕೆನಡಾ ಹಾಗೂ ಅಮೆರಿಕ ದೇಶಗಳು ವಿದೇಶಗಳಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆಗೆ ಹೊಸ ನಿಯಮವನ್ನು ರೂಪಿಸಿಕೊಂಡಿದ್ದು, ಇಂತಿಷ್ಟು ವಿದ್ಯಾರ್ಥಿಗಳಿಗೆ ಮಾತ್ರ ವೀಸಾ ನೀಡುವಂತೆ ನಿರ್ಧರಿಸಿದ್ದು, ವಸತಿ, ಆರೋಗ್ಯ, ರಕ್ಷಣೆ ಹಾಗೂ ಸಾರ್ವಜನಿಕ ಸೇವೆಗಳ ಮೇಲಿನ ಒತ್ತಡ ನಿಯಂತ್ರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ವೀಸಾಗಳನ್ನು ತಿರಸ್ಕರಿಸಿದೆ.
ಪ್ರತಿಯೊಂದು ದೇಶದಲ್ಲಿಯೂ ಹೊಸ ನಿವಾಸಿಗಳ ಒಳಹರಿವು ಹೆಚ್ಚಾದಂತೆ ದೇಶದ ಮೂಲಸೌಕರ್ಯ ಮತ್ತು ಸಂಪನ್ಮೂಲಗಳಲ್ಲಿ ಹೆಚ್ಚಿನ ಬೇಡಿಕೆ ಉಂಟಾಗುತ್ತದೆ. ಹೀಗಾಗಿ ಅಲ್ಲಿನ ಪ್ರಜೆಗಳು ಇದರ ಸಮಸ್ಯೆಯನ್ನು ಅನುಭವಿಸುವ ಪರಿಸ್ಥಿತಿ ಉಂಟಾಗುತ್ತದೆ.
ವಸತಿ ಬೇಡಿಕೆ:
ಬೇರೆ ದೇಶಗಳಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾದಾಗ ಹೆಚ್ಚಿನ ಜನರಿಗೆ ವಸತಿಯ ಅವಶ್ಯಕತೆ ಇರುತ್ತದೆ. ಹೀಗಿರುವಾಗ ವಸತಿ ಕೊರತೆ, ಬಾಡಿಗೆಯಲ್ಲಿನ ಹೆಚ್ಚಳ ಹಾಗೂ ಸೂಕ್ತ ವಾಸ ಸ್ಥಳಗಳನ್ನು ಹುಡುಕುವಲ್ಲಿ ತೊಂದರೆ ಉಂಟಾಗುತ್ತದೆ.
ಆರೋಗ್ಯ ಸೇವೆ:
ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾದಾಗ ಆಸ್ಪತ್ರೆ, ಚಿಕಿತ್ಸೆ ಹಾಗೂ ಔಷಧಾಲಯಗಳು ಸೇರಿದಂತೆ ಇನ್ನಿತರ ಆರೋಗ್ಯ ಸೌಲಭ್ಯಗಳ ಮೇಲೆ ಒತ್ತಡ ಉಂಟುಮಾಡುತ್ತದೆ. ಆರೋಗ್ಯ ಸೇವೆ ಎನ್ನುವುದು ಅಗತ್ಯವಾದ ಮೂಲಸೌಕರ್ಯವಾಗಿದ್ದು, ಎಲ್ಲರಿಗೂ ಅವಶ್ಯಕವಾದ ವೈದ್ಯಕೀಯ ನೆರವು ಸಿಗಲೇಬೇಕಾಗಿರುತ್ತದೆ.
ಆರ್ಥಿಕ ಪರಿಣಾಮ:
ಬೇರೆ ಬೇರೆ ದೇಶಗಳ ವಿದ್ಯಾರ್ಥಿಗಳು ಬೋಧನಾ ಶುಲ್ಕ ಮತ್ತು ಖರ್ಚಿನಿಂದಾಗಿ ದೇಶಕ್ಕೆ ಆರ್ಥಿಕ ಕೊಡುಗೆಯನ್ನು ನೀಡುತ್ತಾರೆ. ಆದರೆ ವಸತಿ ಮತ್ತು ಇನ್ನಿತರ ಸೇವೆಗಳ ಬೇಡಿಕೆ ಹೆಚ್ಚಾದಂತೆ ಜೀವನದ ಖರ್ಚು ಹೆಚ್ಚಾಗುತ್ತದೆ. ಹೀಗಾಗಿ ದೇಶಿಯ ಮತ್ತು ಅಂತರಾಷ್ಟ್ರೀಯ ನಿವಾಸಿಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಹೀಗಾಗಿ ಕೆನಡಾ, ಅಮೆರಿಕ ಸೇರಿದಂತೆ ಇನ್ನಿತರ ದೇಶಗಳು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ವಿದ್ಯಾರ್ಥಿ ವೀಸಾಗಳನ್ನು ತಿರಸ್ಕರಿಸುವಲ್ಲಿ ಮುಂದಾಗಿದೆ.