– ಅಪರಾಧ ಕೃತ್ಯ ಭೇದಿಸಲು ಅಸ್ತ್ರ
– ಲೂಮಿನಲ್ ಪರೀಕ್ಷೆ ಹೇಗೆ ಮಾಡ್ತಾರೆ ಗೊತ್ತಾ?
ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಭೀಕರ ಹತ್ಯೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಸ್ಟಾರ್ ನಟನೊಬ್ಬ ಪ್ರಮುಖ ಆರೋಪಿಯಾಗಿರುವುದೇ ಇದಕ್ಕೆ ಪ್ರಮುಖ ಕಾರಣ. ಈ ಕೊಲೆ ಕೇಸ್ ಯಾವ ಸಿನಿಮಾಗೇನು ಕಮ್ಮಿಯಿಲ್ಲ ಎಂಬಂತಿದೆ. ಸಂತ್ರಸ್ತನ ಅಪಹರಣದಿಂದ ಹಿಡಿದು, ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿ ಮೋರಿಯೊಂದಕ್ಕೆ ಎಸೆದು ಕೊನೆಗೆ ಸಾಕ್ಷಿ ನಾಶಕ್ಕೆ ನಡೆಸಿದ ಯತ್ನದವರೆಗೂ ಪ್ರಕರಣ ರೋಚಕತೆಯಿಂದ ಕೂಡಿದೆ. ಯಾವುದೇ ಒಂದು ಉದ್ದೇಶಪೂರ್ವಕ ಅಥವಾ ಪೂರ್ವನಿಯೋಜಿತ ಹಿಂಸೆಯು ಕೊಲೆಯಲ್ಲಿ ಅಂತ್ಯವಾದಾಗ, ಆರೋಪಿಗಳಿಗೆ ಸಾಕ್ಷ್ಯ ನಾಶವೇ ಪ್ರಮುಖ ಗುರಿಯಾಗಿರುತ್ತದೆ. ಈ ಪ್ರಕರಣದಲ್ಲೂ ಅಂತಹದ್ದೇ ಯತ್ನ ನಡೆದಿತ್ತು. ಆದರೆ ಪೊಲೀಸರು ಮತ್ತು ತನಿಖಾ ತಂಡದ ಎಚ್ಚರಿಕೆ ನಡೆ, ಸಮಯ ಪ್ರಜ್ಞೆಯಿಂದ ಸಾಕ್ಷ್ಯ ನಾಶ ಸಾಧ್ಯವಾಗಿಲ್ಲ.
Advertisement
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ‘ಲೂಮಿನಲ್’ ಪರೀಕ್ಷೆ (Luminol Test) ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಲೂಮಿನಲ್ ಟೆಸ್ಟ್, ಹಾಗೆಂದರೇನು ಎಂಬ ಕುತೂಹಲ ಅನೇಕರಲ್ಲಿದೆ. ಈ ಪರೀಕ್ಷೆಯಿಂದಾಗಿ ದರ್ಶನ್ (Actor Darshan) ಜೈಲಿಗೆ ಹೋಗುತ್ತಾರಾ ಎಂಬ ಚರ್ಚೆಯೂ ಹುಟ್ಟುಕೊಂಡಿದೆ. ಅಷ್ಟಕ್ಕೂ ಏನಿದು ಪರೀಕ್ಷೆ? ಇದು ಹೇಗೆ ಬಂತು? ಅಪರಾಧ ಪ್ರಕರಣಗಳಲ್ಲಿ ಸಾಕ್ಷ್ಯಕ್ಕೆ ಪುರಾವೆಯಾಗಿ ಹೇಗೆ ಬಳಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಇದನ್ನೂ ಓದಿ: ʻಡಿʼ ಗ್ಯಾಂಗ್ ವಿರುದ್ಧ 9 ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲು – ಏನ್ ಹೇಳುತ್ತೆ ಸೆಕ್ಷನ್ಸ್?
Advertisement
Advertisement
ಏನಿದು ಲೂಮಿನಲ್ ಪರೀಕ್ಷೆ?
ರಕ್ತದ ಕಲೆ ಅಂಟಿದ ವಸ್ತು ಅಥವಾ ಜಾಗವನ್ನು ಸ್ವಚ್ಛಗೊಳಿಸಿದರೂ, ಅದರಲ್ಲಿ ಕಲೆ ಇರುವುದನ್ನು ಬಹಿರಂಗಪಡಿಸುವ ಒಂದು ಪರೀಕ್ಷೆಯೇ ಲೂಮಿನಲ್. ರಕ್ತದಂತಹ ಕೆಲವು ಸಂಯುಕ್ತಗಳೊಂದಿಗೆ ಲೂಮಿನಲ್ ಸಂಪರ್ಕಕ್ಕೆ ಬಂದರೆ ಬೆಳಕನ್ನು ಹೊಮ್ಮಿಸುತ್ತದೆ. ಇದು ಬೆಳಕು ಹೊಮ್ಮಿಸುವ ಅಷ್ಟು ಭಾಗವೂ ರಕ್ತದ ಕಲೆ ಎಂದೇ ಅರ್ಥ. ‘ಲೂಮಿನಲ್’ ಪರಿಣಾಮಕಾರಿ ರಸಾಯನಶಾಸ್ತ್ರ ವ್ಯವಸ್ಥೆಯಾಗಿದೆ.
Advertisement
ಪರೀಕ್ಷೆ ಮಾಡುವುದು ಹೇಗೆ?
ರಕ್ತದ ಕಲೆ ಅಂಟಿದ ವಸ್ತುವನ್ನು ಚೆನ್ನಾಗಿ ತೊಳೆದಿಟ್ಟರೆ ಮುಗಿಯಿತು. ಆಗ ಬರಿಗಣ್ಣಿಗೆ ರಕ್ತದ ಕಲೆ ಕಾಣುವುದಿಲ್ಲ. ಬಚಾವ್ ಆಗಬಹುದು ಎಂದು ಅನೇಕರು ಭಾವಿಸುತ್ತಾರೆ. ಆದರೆ ಅಪರಾಧಕ್ಕೆ ಬಳಸಿದ ವಸ್ತುವನ್ನು ಶುಚಿಗೊಳಿಸಿ ಇಟ್ಟರೂ, ರಕ್ತದ ಕಲೆ ಗುರುತು ಪತ್ತೆಗೆ ಲೂಮಿನಲ್ ಸಹಾಯ ಮಾಡುತ್ತದೆ. ಇದು ಔಷಧಿ ಸಿಂಪಡಣೆ ಮಾದರಿಯಲ್ಲಿ ಇರುತ್ತದೆ. ರಕ್ತದ ಕಲೆ ಇರುವ, ಸ್ವಚ್ಛಗೊಳಿಸಿದ ವಸ್ತು ಅಥವಾ ಜಾಗಕ್ಕೆ ಇದನ್ನು ಸಂಪಡಿಸಿದರೆ ಸಾಕು. ಎಷ್ಟು ವ್ಯಾಪ್ತಿಯಲ್ಲಿ ರಕ್ತ ಕಲೆ ಆಗಿರುತ್ತದೆಯೋ ಅಲ್ಲೆಲ್ಲ ಬೆಳಕು ಪ್ರತಿಫಲಿಸುತ್ತದೆ. ಇದನ್ನೂ ಓದಿ: ʻಡಿʼ ಗ್ಯಾಂಗ್ ಪೊಲೀಸ್ ಕಸ್ಟಡಿ ಇಂದು ಅಂತ್ಯ – ʻದಾಸʼನಿಗೆ ನ್ಯಾಯಾಂಗ ಬಂಧನ ಸಾಧ್ಯತೆ!
ಅಪರಾಧ ಕೃತ್ಯ ಭೇದಿಸಲು ಅಸ್ತ್ರ!
ಯಾವುದೇ ಒಂದು ಅಪರಾಧ ಕೃತ್ಯ ನಡೆಸಿದ ವ್ಯಕ್ತಿ ಸಾಕ್ಷ್ಯ ನಾಶಕ್ಕೆ ಮುಂದಾಗುತ್ತಾನೆ. ಆದರೆ ಲೂಮಿನಲ್ ಪರೀಕ್ಷೆ ಮಾಡಿದರೆ ಕೊಲೆಯಂತಹ ಪ್ರಕರಣವನ್ನು ಸುಲಭವಾಗಿ ಭೇದಿಸಬಹುದು. ಬರಿಗಣ್ಣಿಗೆ ಕಾಣದ ರಕ್ತದ ಕಲೆಗಳನ್ನು ಪತ್ತೆಹಚ್ಚಲು ಅಪರಾಧ ಪ್ರಕರಣಗಳ ತನಿಖೆಯಲ್ಲಿ ಲೂಮಿನಲ್ ಪರೀಕ್ಷೆ ನಡೆಸಲಾಗುತ್ತದೆ. ವಿಧಿವಿಜ್ಞಾನದಲ್ಲಿ ಇದು ಮಹತ್ವದ ಪಾತ್ರವಹಿಸುತ್ತದೆ. ಅಪರಾಧ ಕೃತ್ಯಗಳನ್ನು ಭೇದಿಸಲು ಈ ಪರೀಕ್ಷೆ ಪ್ರಮುಖ ಸಾಧನ.
ಇದನ್ನು ಪತ್ತೆ ಹಚ್ಚಿದ್ದು ಯಾರು?
ಲೂಮಿನಲ್ ಪರೀಕ್ಷೆಯ ಮೂಲಪುರುಷ ಜರ್ಮನ್ ರಸಾಯನಶಾಸ್ತ್ರಜ್ಞ ಹೆಚ್.ಒ.ಆಲ್ಬ್ರೆಕ್ಟ್. ಇವರು 1928 ರಲ್ಲಿ, ರಕ್ತವು ಇತರ ಪದಾರ್ಥಗಳ ಜೊತೆಗೆ ಹೈಡ್ರೋಜನ್ ಪೆರಾಕ್ಸೈಡ್‌ನ ಕ್ಷಾರೀಯ ದ್ರಾವಣದಲ್ಲಿ ಬೆರೆತು ಲೂಮಿನಲ್‌ನ ಹೊಳಪನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದರು. ಈ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸುವ ಕಾರ್ಲ್ ಗ್ಲೂ ಮತ್ತು ಕಾರ್ಲ್ ಫಾನ್ಟೀಲ್, ರಕ್ತದ ಅಂಶವಾದ ಹೆಮಾಟಿನ್ ಉಪಸ್ಥಿತಿಯೇ ಬೆಳಕು ಹೊಮ್ಮಲು ಕಾರಣ ಎಂದು 1936 ರಲ್ಲಿ ದೃಢಪಡಿಸುತ್ತಾರೆ.
ಲೂಮಿನಲ್ ಮೊದಲ ಪರೀಕ್ಷೆಯಾಗಿದ್ದು ಯಾವಾಗ?
1937 ರಲ್ಲಿ ಜರ್ಮನ್ ಫೊರೆನ್ಸಿಕ್ ವಿಜ್ಞಾನಿ ವಾಲ್ಟರ್ ಸ್ಪೆಕ್ಟ್, ಅಪರಾಧದ ದೃಶ್ಯಗಳಲ್ಲಿ ರಕ್ತವನ್ನು ಪತ್ತೆಹಚ್ಚಲು ಲೂಮಿನಲ್ ಪರೀಕ್ಷೆ ಸಹಕಾರಿ ಎಂಬುದನ್ನು ಅಧ್ಯಯನದ ಮೂಲಕ ಸಾಬೀತುಪಡಿಸಿದರು. ಮೊದಲ ಉದ್ದೇಶಿತ ವಿಧಿವಿಜ್ಞಾನಕ್ಕೆ ಲೂಮಿನಲ್ ಬಳಕೆ ಮಾಡಲಾಯಿತು. ಪೊದೆಗಳು, ಕಲ್ಲಿನ ಗೋಡೆಗಳು, ತುಕ್ಕು ಹಿಡಿದ ಕಬ್ಬಿಣದ ಬೇಲಿಗಳು, ಪೀಠೋಪಕರಣಗಳು, ಕಲ್ಲಿನ ಮೆಟ್ಟಿಲುಗಳು ಮತ್ತು ಉದ್ಯಾನದಲ್ಲಿ ರಕ್ತವನ್ನು ಸಿಂಪಡಿಸಿ ಶುಚಿಗೊಳಿಸಿದ ಬಳಿಕ ಪರೀಕ್ಷೆ ನಡೆಸಲಾಯಿತು. ಇದನ್ನೂ ಓದಿ: ಏನೋ ಯಡವಟ್ಟು ಮಾಡ್ಕೊಂಡುಬಿಟ್ಟಿದ್ದಾನೆ, ಏನಾದ್ರೂ ಮಾಡಿ: ಪಕ್ಷಬೇಧ ಮರೆತು ತನಿಖಾಧಿಕಾರಿಗಳ ಮೇಲೆ ಒತ್ತಡ
ಈ ಪರೀಕ್ಷೆಯು ರಕ್ತದ ಜೊತೆಗೆ ಅದರ ಪ್ರಮಾಣವನ್ನು ಸಹ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಲೂಮಿನಲ್ ಅನ್ನು ಸಿಂಪಡಿಸಿದಾಗ ಬರುವ ನೀಲಿಯ ಹೊಳಪು ಸುಮಾರು 30 ಸೆಕೆಂಡುಗಳವರೆಗೆ ಇರುತ್ತದೆ. ರಕ್ತದ ಕಲೆಯ ಕುರುಹು ಪತ್ತೆಗೆ ಕತ್ತಲು ಕೋಣೆ ಅಗತ್ಯ. ಹೊಳಪನ್ನು ದೀರ್ಘ-ಎಕ್ಸ್ಪೋಸರ್ ಛಾಯಾಚಿತ್ರದಿಂದ ದಾಖಲಿಸಬಹುದು. ಲೂಮಿನಲ್ ಪರೀಕ್ಷೆಯ ಮಾದರಿಗಳಿಂದ ಡಿಎನ್‌ಎ ಕೂಡ ಯಶಸ್ವಿಯಾಗಿ ಗುರುತಿಸಬಹುದು.
ಯಾವ್ಯಾವ ಪ್ರಕರಣಗಳಲ್ಲಿ ಲೂಮಿನಲ್ ಟೆಸ್ಟ್ ನಡೆಯುತ್ತೆ?
ಹಿಟ್ ಆ್ಯಂಡ್ ರನ್ ಕೇಸ್, ಕೊಲೆ ಪ್ರಕರಣಗಳಲ್ಲಿ ಹೆಚ್ಚಾಗಿ ಈ ಪರೀಕ್ಷೆ ಮಾಡಲಾಗುತ್ತದೆ. ಅಪಘಾತ ಮಾಡಿದ ವಾಹನಗಳ ಚಕ್ರಗಳಿಗೆ ಅಂಟಿದ ರಕ್ತವನ್ನು ಮೃತ ವ್ಯಕ್ತಿಯ ರಕ್ತಕ್ಕೆ ಹೋಲಿಕೆ ಮಾಡಿ ಎಫ್‌ಎಸ್‌ಎಲ್ ತಜ್ಞರು ವರದಿ ನೀಡುತ್ತಾರೆ. ಈ ಪರೀಕ್ಷೆಯಲ್ಲಿ ರಕ್ತದ ಮಾದರಿಗೆ ಹೋಲಿಕೆಯಾದರೆ ಅದು ಮಹತ್ವದ ಪುರಾವೆ ಆಗಲಿದೆ.
ಹಿಟ್ ಆ್ಯಂಡ್ ರನ್ ಪ್ರಕರಣ ಭೇದಿಸಿದ್ದ ಪೊಲೀಸರು
2024ರ ಜನವರಿ ತಿಂಗಳಲ್ಲಿ ನಾಗರಬಾವಿ ಹೊರವರ್ತುಲ ರಸ್ತೆಯಲ್ಲಿ ನಡೆದಿದ್ದ ಹಿಟ್ ಆ್ಯಂಡ್ ರನ್ ಪ್ರಕರಣವನ್ನು ಲೂಮಿನಲ್ ಪರೀಕ್ಷೆ ಸಹಾಯದಿಂದ ಪೊಲೀಸರು ಭೇದಿಸಿದ್ದರು. ಘಟನೆ ನಡೆದ ನಾಲ್ಕು ತಿಂಗಳ ಬಳಿಕ ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು. ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದು ನೇಪಾಳಿ ಪ್ರಜೆ ಸಾವನ್ನಪ್ಪಿದ್ದ. ಚಾಲಕ ಪಾನಮತ್ತನಾಗಿ ವಾಹನ ಚಲಾಯಿಸಿ ಹಿಟ್ ಆ್ಯಂಡ್ ರನ್ ಮಾಡಿ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಾವಳಿ ನೋಡಿದಾಗ, ಅಪಘಾತ ಮಾಡಿದ ವಾಹನದಲ್ಲಿ ಹಸುವಿನ ಚಿತ್ರ ಇತ್ತು. ಅದನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿ ವಾಹನ ಪತ್ತೆ ಹಚ್ಚಿದರು. ಕೊನೆಗೆ ವಾಹನವನ್ನು ಲೂಮಿನಲ್ ಪರೀಕ್ಷೆಗೆ ಒಳಪಡಿಸಿದಾಗ, ರಕ್ತದ ಕಲೆಯ ಕುರುಹು ಪತ್ತೆಯಾಯಿತು. ಕೊನೆಗೆ ಆರೋಪಿಯನ್ನು ಪೊಲೀಸರು ಸೆರೆ ಹಿಡಿದರು. ಇದನ್ನೂ ಓದಿ: ನ್ಯಾಯವು ಮೇಲುಗೈ ಸಾಧಿಸಲಿ- ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ದರ್ಶನ್ ಪತ್ನಿ ಪ್ರತಿಕ್ರಿಯೆ
ರೇಣುಕಾಸ್ವಾಮಿ ಕೊಲೆ ಕೇಸಲ್ಲೂ ಲೂಮಿನಲ್ ಪರೀಕ್ಷೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲೂ ಲೂಮಿನಲ್ ಪರೀಕ್ಷೆ ಮಾಡಲಾಗಿದೆ. ಬೆಂಗಳೂರಿನ ಶೆಡ್‌ವೊಂದರಲ್ಲಿ ರೇಣುಕಾಸ್ವಾಮಿ (Renukaswamy) ಹತ್ಯೆ ಮಾಡಿದ ಬಳಿಕ ಅಳಿಸಿ ಹಾಕಿದ್ದ ರಕ್ತದ ಕಲೆ ಸೇರಿದಂತೆ ಇತರೆ ಪುರಾವೆಗಳ ಸಂಗ್ರಹಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ಸಹಕಾರದಲ್ಲಿ ಪೊಲೀಸರು ಲೂಮಿನಲ್ ಪರೀಕ್ಷೆ ನಡೆಸಿದ್ದಾರೆ.
ಮೃತದೇಹ ಸಾಗಿಸಲು ಬಳಸಿದ್ದ ಕಾರು ಹಾಗೂ ಶೆಡ್‌ನಲ್ಲಿ ಮೃತನ ಮೇಲೆ ಹಲ್ಲೆ ನಡೆಸಲು ಬಳಸಿದ್ದ ವಸ್ತುಗಳಿಗೆ ಅಂಟಿದ್ದ ರಕ್ತದ ಕಲೆಗಳನ್ನು ಎಫ್‌ಎಸ್‌ಎಲ್ ತಜ್ಞರು ಸಂಗ್ರಹಿಸಿದ್ದರು. ನಂತರ ಪಟ್ಟಣಗೆರೆ ಶೆಡ್‌ನಲ್ಲಿ ಸಾಕ್ಷ್ಯಗಳನ್ನು ಅಳಿಸಿ ಹಾಕಿದ್ದ ಸ್ಥಳದಲ್ಲಿ ಸಂಗ್ರಹಿಸಲಾದ ವಸ್ತುಗಳಿಗೆ ಹೋಲಿಕೆ ಮಾಡಿ ತಜ್ಞರು ವರದಿ ಸಲ್ಲಿಸಿದ್ದಾರೆ. ನಾಶಗೊಳಿಸಿದ್ದ ರಕ್ತದ ಕಲೆಗಳನ್ನು ಲೂಮಿನಲ್ ಪರೀಕ್ಷೆ ಮೂಲಕ ಪತ್ತೆ ಮಾಡಬಹುದಾಗಿದೆ.