ವಿಮಾನ ನಿಲ್ದಾಣದಿಂದ ಟೇಕಾಫ್ ಆಗುವಾಗ ವಿಮಾನದ ಎಂಜಿನ್ಗೆ ಪಕ್ಷಿ ಡಿಕ್ಕಿಯಾದ ಕಾರಣ ಈ ದುರಂತ ಸಂಭವಿಸಬರಬಹುದು ಎನ್ನಲಾಗುತ್ತಿದೆ. ಈ ಕುರಿತು ತಜ್ಞರ ಮಾಹಿತಿ ಪ್ರಕಾರ, ಟೇಕಾಫ್ ಆಗುವಾಗ ಎಂಜಿನ್ಗೆ ಪಕ್ಷಿ ಬಡಿದಾಗ ವಿಮಾನ ಮುಂದಕ್ಕೆ ಹೋಗಬೇಕಾದ ವೇಗ ಅಟೋಮ್ಯಾಟಿಕ್ ಆಗಿ ತಗ್ಗುತ್ತದೆ ಹೀಗಾಗಿ ಸಂಭವಿಸಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಧಾರಣವಾಗಿ ವಿಮಾನದ ಒಂದು ಎಂಜಿನ್ಗೆ ಪಕ್ಷಿ ಬಡಿದರೆ ಇನ್ನೊಂದು ಎಂಜಿನ್ ಮೂಲಕ ಚಾಲನೆ ಮಾಡಿ ಸಮೀಪದ ನಿಲ್ದಾಣದಲ್ಲಿ ಪೈಲಟ್ ತುರ್ತು ಲ್ಯಾಂಡ್ ಮಾಡುತ್ತಾರೆ. ಆದರೆ ಇಲ್ಲಿ ಎರಡು ಎಂಜಿನಿಗೆ ಪಕ್ಷಿ ಬಡಿದ ಕಾರಣ ವಿಮಾನ ವೇಗವನ್ನು ಕಳೆದುಕೊಂಡು ಪತನ ಹೊಂದಿರಬಹುದು ಎಂಬ ಅನುಮಾನವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಈ ರೀತಿ ಎರಡು ಎಂಜಿನಿಗೆ ಪಕ್ಷಿ ಬಡಿಯುವುದು ಅಪರೂಪದಲ್ಲಿ ಅಪರೂಪ. ಆದರೆ ಕಳೆದ ಐದು ವರ್ಷಗಳಲ್ಲಿ ಗುಜರಾತ್ನಲ್ಲಿ 462 ಹಕ್ಕಿ ಡಿಕ್ಕಿ ಹೊಡೆದಿರುವ ಘಟನೆಗಳು ನಡೆದಿವೆ. ಈ ಪೈಕಿ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿಯೇ (Ahmedabad Airport) ಅತಿ ಹೆಚ್ಚು ಘಟನೆಗಳು ನಡೆದಿವೆ.
ಇತ್ತೀಚೆಗೆ ಮೇ 19ರಂದು ಪಾಟ್ನಾದಿಂದ (Patna) ರಾಂಚಿಗೆ ಹೊರಟಿದ್ದ ಏರ್ಬಸ್ A320ಗೆ ರಣಹದ್ದು ಡಿಕ್ಕಿ ಹೊಡೆದ ಪರಿಣಾಮ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಪ್ರಕಾರ, ವಿಮಾನಗಳು ಟೇಕ್ ಆಫ್ ಅಥವಾ ಲ್ಯಾಂಡಿಂಗ್ ಆಗುವಾಗ ಹಕ್ಕಿ ಡಿಕ್ಕಿಯಾಗುವ ಸಾಧ್ಯತೆಗಳಿರುತ್ತವೆ. ಈ ವೇಳೆ 92%ರಷ್ಟು ಹಾನಿಯಾಗುವ ಸಾಧ್ಯತೆಗಳಿರುವುದಿಲ್ಲ. ಆದರೆ 8%ರಷ್ಟು ತುಂಬಾ ಪರಿಣಾಮಕಾರಿಯಾಗಿ ಹಾನಿಯಾಗುವ ಸಾಧ್ಯತೆಯಿರುತ್ತದೆ. ಡಿಕ್ಕಿ ಹೊಡೆದಾಗ ಎಂಜಿನ್ನಲ್ಲಿರುವ ಬ್ಲೇಡ್ಗಳಿಗೆ ಹಾನಿಯಾಗುವ ಸಾಧ್ಯತೆಯಿರುತ್ತದೆ. ಈ ಬ್ಲೇಡ್ಗಳು ಹೆಚ್ಚು ಸೂಕ್ಷ್ಮವಾಗಿರುವುದರಿಂದ ಬೇಗನೇ ಮುರಿದು ಹೋಗುವ ಸಾಧ್ಯತೆಯೂ ಇರುತ್ತದೆ.
ಏನಿದು ಹಕ್ಕಿ ಡಿಕ್ಕಿ?
ಹಕ್ಕಿ ಮತ್ತು ವಿಮಾನದ ನಡುವಿನ ಡಿಕ್ಕಿಯೇ ಹಕ್ಕಿ ಡಿಕ್ಕಿ. ಇದು ಸಾಮಾನ್ಯವಾಗಿ ಟೇಕ್ ಆಫ್, ಲ್ಯಾಂಡಿಂಗ್ ಅಥವಾ ಕಡಿಮೆ ಎತ್ತರದ ಹಾರಾಟದ ಸಮಯದಲ್ಲಿ ಹಕ್ಕಿಗಳು ವಿಮಾನಕ್ಕೆ ಅಥವಾ ವಿಮಾನ ಹಕ್ಕಿಗೆ ಡಿಕ್ಕಿ ಹೊಡೆಯುತ್ತದೆ.
ಹಕ್ಕಿ ವಿಮಾನಕ್ಕೆ ಡಿಕ್ಕಿ ಹೊಡೆದರೆ ಏನಾಗುತ್ತದೆ?
ವಾಯುಯಾನದ ವೇಳೆ ಸಂಭವಿಸುವ ಸಾಮಾನ್ಯವಾದ ಅಪಾಯಗಳಲ್ಲಿ ಒಂದಾಗಿದೆ. ಜೆಟ್ ವಿಮಾನಕ್ಕೆ ಡಿಕ್ಕೆ ಹೊಡೆದರೆ ಫ್ಯಾನ್ನ ಬ್ಲೇಡ್ಗಳನ್ನು ಹಾನಿಗೊಳಿಸುತ್ತದೆ. ಕೆಲವೊಮ್ಮೆ ಅಪಘಾತಕ್ಕೆ ಕಾರಣವಾಗಬಹುದು. ಹಕ್ಕಿ ಡಿಕ್ಕಿ ಹೊಡೆದರೆ ಎಂಜಿನ್, ರೆಕ್ಕೆಗಳು, ವಿಂಡ್ಶೀಲ್ಡ್ಗಳಿಗೆ ಹಾನಿಯಾಗಬಹುದು. ಒಂದು ವೇಳೆ ವಿಂಡ್ಶೀಲ್ಡ್ಗೆ ಅತಿ ವೇಗವಾಗಿ ಹಕ್ಕಿ ಡಿಕ್ಕಿ ಹೊಡೆದರೆ ವಿಂಡ್ಶೀಲ್ಡ್ ಬಿರುಕು ಬಿಡಬಹುದು. ಇದರಿಂದ ಗೋಚರತೆಯನ್ನು ಕಡಿಮೆಗೊಳಿಸಬಹುದು. ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಆಗುವಾಗ ವಿಮಾನಗಳು 0–3,000 ಅಡಿ ಎತ್ತರದಲ್ಲಿರುತ್ತವೆ. ಈ ಸಮಯದಲ್ಲಿ ಹಕ್ಕಿಡಿಕ್ಕಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಮರ ನೆಡುವುದನ್ನು ಕಡಿಮೆಗೊಳಿಸುತ್ತಾರೆ. ಇದರಿಂದ ಹಕ್ಕಿಗಳು ಗೂಡು ಕಟ್ಟುವುದು ಕಡಿಮೆಯಾಗುತ್ತದೆ ಮತ್ತು ರನ್ವೇ ದೊಡ್ಡದಾಗಿರುವ ವಿಮಾನ ನಿಲ್ದಾಣಗಳಲ್ಲಿ ಈ ಸಮಸ್ಯೆಗಳನ್ನು ತಪ್ಪಿಸಬಹುದು.
ಹಕ್ಕಿಡಿಕ್ಕಿ ಹೊಡೆದಾಗ ಪೈಲೆಟ್ ಏನು ಮಾಡುತ್ತಾರೆ?
ಹಕ್ಕಿ ಡಿಕ್ಕಿ ಹೊಡೆದಾಗ, ಪೈಲಟ್ಗಳು ಮೇಡೇ (Mayday) ಅಥವಾ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತಾರೆ. ತುರ್ತು ಲ್ಯಾಂಡಿಂಗ್ಗಾಗಿ ವಿಮಾನ ನಿಲ್ದಾಣಕ್ಕೆ ಹಿಂತಿರುಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಂದು ಎಂಜಿನ್ಗೆ ಸಮಸ್ಯೆಯಾಗಿದ್ದರೆ ಅದರ ಬಳಕೆಯನ್ನು ನಿಲ್ಲಿಸಬಹುದು. ಇತ್ತೀಚೆಗೆ ಮೇ 19ರಂದು ಪಾಟ್ನಾದಿಂದ ರಾಂಚಿಗೆ ಹೊರಟಿದ್ದ ಏರ್ಬಸ್ A320ಗೆ ರಣಹದ್ದು ಡಿಕ್ಕಿ ಹೊಡೆದಾಗ ಪೈಲಟ್ ಮೇಡೇ ಕರೆ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ. ವಿಮಾನಗಳನ್ನು ಅಪಾಯಕಾರಿ ಸಂದರ್ಭದಲ್ಲಿ ಮೇಡೇ ಘೋಷಿಸುತ್ತಾರೆ. ಇನ್ನೂ ಜೂನ್ 12ರಂದು ಸಂಭವಿಸಿದ್ದ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತದ ವೇಳೆ ಪೈಲಟ್ ಮೇಡೇ ಘೋಷಿಸಿದ್ದರು. ಆದರೆ ಹಕ್ಕಿಡಿಕ್ಕಿಯಾಗಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಈ ಕುರಿತು ಭೌತಶಾಸ್ತ್ರ ಏನು ಹೇಳುತ್ತದೆ?
ಸಾಮಾನ್ಯವಾಗಿ ಒಂದು ವಸ್ತು ಚಲಿಸುವಾಗ ಆವೇಗವನ್ನು ಹೊಂದಿರುತ್ತದೆ. (ಒಂದು ವಸ್ತುವಿನ ಚಲನೆಯ ಪ್ರಮಾಣವೇ ಆವೇಗವಾಗಿರುತ್ತದೆ). ಉದಾಹರಣೆಗೆ ವಿಮಾನ ಹಾಗೂ ಹಕ್ಕಿಗೆ ಹೋಲಿಸಿದಾಗ ವಿಮಾನ ಭಾರವಾಗಿರುತ್ತದೆ. ಆದರೆ ಅವೆರಡು ಸಮಾನ ವೇಗದಲ್ಲಿ ಚಲಿಸುವ ಶಕ್ತಿ ಹೊಂದಿರುತ್ತವೆ. ಹೀಗಾಗಿ ವಿಮಾನ ಹೆಚ್ಚಿನ ಆವೇಗವನ್ನು ಹೊಂದಿರುತ್ತದೆ. ವಿಮಾನ ಸಾಮಾನ್ಯವಾಗಿ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ಆಗುವಾಗ ಕಡಿಮೆ ವೇಗದಲ್ಲಿ ಚಲಿಸುತ್ತಿರುತ್ತದೆ. ಈ ವೇಳೆ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಾಗ ಅದರ ಆವೇಗವು ವಿಮಾನಕ್ಕೆ ವರ್ಗಾಯಿಸಲ್ಪಡುತ್ತದೆ. ಇದರಿಂದಾಗಿ ವಿಮಾನಕ್ಕೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ.
ಈ ಮೊದಲು ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿದ್ದ ಕೆಲವು ಘಟನೆಗಳು;
US ಏರ್ವೇಸ್ ಫ್ಲೈಟ್ 1549 – “ಮಿರಾಕಲ್ ಆನ್ ದಿ ಹಡ್ಸನ್” (2009)
ನ್ಯೂಯಾರ್ಕ್ನ (Newyork) ಲಾಗಾರ್ಡಿಯಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಏರ್ಬಸ್ A320ಗೆ ಕೆನಡಾ ಹೆಬ್ಬಾತುಗಳ ಹಿಂಡು ಡಿಕ್ಕಿ ಹೊಡೆದಿತ್ತು. ಪರಿಣಾಮ ಎರಡೂ ಎಂಜಿನ್ಗಳಿಗೆ ಹಾನಿಯಾಗಿತ್ತು, ಆದರೆ ಪೈಲಟ್ ವಿಮಾನವನ್ನು ಹಡ್ಸನ್ ನದಿಯಲ್ಲಿ ಸುರಕ್ಷಿತವಾಗಿ ಇಳಿಸಿದರು. ವಿಮಾನದಲ್ಲಿದ್ದ 155 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೂ ಕೂಡ ಪ್ರಾಣಾಪಾಯದಿಂದ ಪಾರಾದರು. ಆಸ್ಟ್ರೇಲಿಯನ್ ಸಾರಿಗೆ ಸುರಕ್ಷತಾ ಮಂಡಳಿಯ ಮಾಹಿತಿ ಪ್ರಕಾರ, 2008 ಮತ್ತು 2017ರ ನಡುವೆ 16,626 ಹಕ್ಕಿ ಡಿಕ್ಕಿ ಹೊಡೆದಿರುವುದು ದಾಖಲಾಗಿದೆ. ಅಮೆರಿಕಾದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ವರದಿಯ ಪ್ರಕಾರ, 2022ರಲ್ಲಿ ಮಾತ್ರ 17,200 ಹಕ್ಕಿ ಡಿಕ್ಕಿಯಾಗಿರುವುದು ವರದಿಯಾಗಿವೆ.
ಈಸ್ಟರ್ನ್ ಏರ್ ಲೈನ್ಸ್ ಫ್ಲೈಟ್ 375 (1972)
ಲಾಕ್ಹೀಡ್ L-188 ಎಲೆಕ್ಟ್ರಾ ಬೋಸ್ಟನ್ ಲೋಗನ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುವಾಗ ಈಸ್ಟರ್ನ್ ಏರ್ ಲೈನ್ಸ್ ವಿಮಾನಕ್ಕೆ ಸ್ಟಾರ್ಲಿಂಗ್ ಹಕ್ಕಿಗಳ ಹಿಂಡು ಡಿಕ್ಕಿ ಹೊಡೆಯಿತು. ಈ ವೇಳೆ ಹಲವು ಪಕ್ಷಿಗಳು ಎಂಜಿನ್ ಒಳಗೆ ನುಸುಳಿದವು. ಪರಿಣಾಮ ವಿಮಾನದಲ್ಲಿದ್ದ 72 ಜನರ ಪೈಕಿ 62 ಜನರು ಸಾವನ್ನಪ್ಪಿದರು.
ರಾಂಚಿಯಲ್ಲಿ ಇಂಡಿಗೋ ವಿಮಾನ (ಮೇ 2025)
ಇತ್ತೀಚೆಗೆ ಮೇ 19ರಂದು ಪಾಟ್ನಾದಿಂದ ರಾಂಚಿಗೆ ಹೊರಟಿದ್ದ ಏರ್ಬಸ್ A320ಗೆ ರಣಹದ್ದು ಡಿಕ್ಕಿ ಹೊಡೆದ ಪರಿಣಾಮ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ವಿಮಾನದ ಮುಂಭಾಗಕ್ಕೆ ಹಾನಿಯುಂಟಾಯಿತು. ಆದರೆ ವಿಮಾನದಲ್ಲಿದ್ದ 175 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದರು