ಅಂತರಿಕ್ಷದಲ್ಲಿ ಮಾನವನ ಜೀವನ ಹೇಗೆ ಇರುತ್ತದೆ ಎನ್ನುವ ಕುರಿತು ಯೋಚಿಸಿದಾಗ ಹಲವು ಪ್ರಶ್ನೆಗಳು ಮುಂದೆ ಬರುತ್ತವೆ. ಮಾನವನಿಗೆ ಉಸಿರಾಟ, ಆಹಾರ ಹಾಗೂ ನೀರು ಹೇಗೆ ಮೂಲಭೂತ ಅವಶ್ಯಕತೆಗಳೋ ಹಾಗೆಯೇ ಮಲ, ಮೂತ್ರ ವಿಸರ್ಜನೆಯು ಮಾನವನ ಜೀವನ ಶೈಲಿ ಆರೋಗ್ಯಕರವಾಗಿರಿಸಲು ಸಹಾಯಮಾಡುತ್ತದೆ.
ಹೌದು, ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಜೀವನ ಶೈಲಿ ಹಾಗೂ ದೈನಂದಿನ ಕ್ರಿಯೆಗಳು ಇರುತ್ತವೆ. ಆ ಕ್ರಿಯೆಗಳಲ್ಲಿ ಯಾವುದಾದರೂ ಒಂದು ಏರುಪೇರು ಆದರೂ ಕೂಡ ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಿರುವಾಗ ಬಾಹ್ಯಾಕಾಶಕ್ಕೆ ಹೋಗುವ ಗಗನಯಾತ್ರಿಗಳು ಅಂತರಿಕ್ಷದಲ್ಲಿ ಮಲ, ಮೂತ್ರ ವಿಸರ್ಜನೆಯ ನಿರ್ವಹಣೆ ಹೇಗೆ ಮಾಡುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ. ಬಾಹ್ಯಾಕಾಶದಲ್ಲಿ ಮಾನವನ ತ್ಯಾಜ್ಯ ನಿರ್ವಹಣೆ ಒಂದು ದೊಡ್ಡ ಸವಾಲು. ಗುರುತ್ವಾಕರ್ಷಣೆ ಇಲ್ಲದ ಈ ಪರಿಸರದಲ್ಲಿ ಮಾನವನ ತ್ಯಾಜ್ಯ ಹೇಗೆ ನಿರ್ವಹಿಸಲಾಗುತ್ತದೆ. ಅದಲ್ಲದೆ ಭೂಮಿಯಿಂದ ಬಾಹ್ಯಾಕಾಶಕ್ಕೆ ವಸ್ತುಗಳ ಮರುಪೂರೈಕೆ ತುಂಬಾ ಕಷ್ಟಕರವಾದದ್ದು. ಆದರೆ ಯಾವುದೇ ಪೂರೈಕೆ ಇದ್ದರೂ ಕೂಡ ಅದರ ವೆಚ್ಚ ಕೂಡ ಜಾಸ್ತಿ.
ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದಿರುವ ಕಾರಣ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಭೂಮಿಯ ಮೇಲಿರುವ ಪ್ರತಿಯೊಬ್ಬ ಮಾನವ ಹಾಗೂ ಪ್ರಾಣಿಗಳು ನಡೆದುಕೊಂಡು ಜೀವನ ನಡೆಸುತ್ತವೆ. ಇನ್ನೂ ಕೆಲವು ನಡೆದುಕೊಂಡು ಹಾಗೂ ಹಾರಾಟ ನಡೆಸಿ ಜೀವನ ನಡೆಸುತ್ತವೆ. ಹೀಗಿರುವಾಗ ಬಾಹ್ಯಾಕಾಶಕ್ಕೆ ತೆರಳುವ ಗಗನಯಾತ್ರಿಗಳು ತೇಲಾಡಿಕೊಂಡು ಜೀವನ ನಡೆಸುವ ಅಭ್ಯಾಸ ಮಾಡಿಕೊಳ್ಳುತ್ತಾರೆ. ನಡೆಯುತ್ತಿರುವ ಮನುಷ್ಯ ದಿಡೀರನೆ ತೇಲಾಡಿಕೊಂಡು ಬದುಕುವ ಅಭ್ಯಾಸ ಮಾಡಿದಾಗ ದೇಹದ ಮೇಲೆ ಅಥವಾ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅಂತರಿಕ್ಷಕ್ಕೆ ತೆರಳಿದ ಪ್ರಾರಂಭದ ದಿನಗಳಲ್ಲಿ ಮನುಷ್ಯನಿಗೆ ವಾಂತಿ, ಮಲ, ಮೂತ್ರ ವಿಸರ್ಜನೆಯಲ್ಲಿ ಪರಿಣಾಮ ಬೀರಬಹುದು. ಹೀಗಾಗಿ ಕೆಲವು ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ.
ವಿಮಾನದಲ್ಲಿ ಪ್ರಯಾಣಿಸುವಾಗ ಅಥವಾ ಇನ್ನಿತರೆ ದೇಶಗಳಲ್ಲಿ ವಾಂತಿ ಮಾಡುವಾಗ ಕೆಲವು ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಾರೆ. ಅದೇ ರೀತಿ ಬಾಹ್ಯಾಕಾಶದಲ್ಲಿಯೂ ಕೂಡ ವಾಂತಿಗಾಗಿ `ಸ್ಪೇಸ್ ಸಿಕ್ನೆಸ್ ಬ್ಯಾಗ್’ ಗಳನ್ನು ಬಳಸುತ್ತಾರೆ. ಇವುಗಳಿಗೆ ಸೋರಿಕೆಯಾಗದಂತೆ ಬಿಗಿಯಾದ ಮುಚ್ಚುವಿಕೆಯನ್ನು ನೀಡಲಾಗಿರುತ್ತದೆ. ಬಳಿಕ ಇವುಗಳನ್ನು ತ್ಯಾಜ್ಯ ಸಂಗ್ರಹಿಸುವ ಜಾಗದಲ್ಲಿ ಇಡಲಾಗುತ್ತದೆ.
ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲಿ ವಿಶೇಷ ಶೌಚಾಲಯಗಳ ಬಳಕೆ ಮಾಡಲಾಗುತ್ತಿದೆ. ಮಲ, ಮೂತ್ರ ವಿಸರ್ಜನೆಗಾಗಿ ಪ್ರತ್ಯೇಕ ಕೊಠಡಿಯ ರೀತಿಯಲ್ಲಿ ನಿರ್ಮಿಸಲಾಗಿರುತ್ತದೆ. ಇದರಲ್ಲಿ ಚಿಕ್ಕದಾದ ಕಮೋಡ್ ರೀತಿಯಲ್ಲಿರುತ್ತದೆ. ಅದರಲ್ಲಿ ಒಂದು ಚಿಕ್ಕದಾದ ಕೊಳವೆಯನ್ನು ನಿರ್ಮಿಸಿರುತ್ತಾರೆ. ಇನ್ನು ಅದರ ಮೇಲೆ ಕುಳಿತಾಗ ಕಾಲುಗಳಿಡಲು ಎರಡು ಹೋಲ್ಡರ್ ಗಳ ರೀತಿಯಲ್ಲಿ ನಿರ್ಮಿಸಲಾಗಿರುತ್ತದೆ. ತ್ಯಾಜ್ಯವನ್ನು ತೇಲದಂತೆ ಮಾಡಲು ಹಾಗೂ ವಾಸನೆಯನ್ನು ನಿಯಂತ್ರಿಸಲು ಶೌಚಾಲಯದ ಕೊಳವೆಯ ಮೇಲೆ ಬಿಗಿಯಾದ ಮುಚ್ಚಳವನ್ನು ನಿರ್ಮಿಸಲಾಗಿರುತ್ತದೆ. ಇದರ ಪಕ್ಕದಲ್ಲಿ ಎರಡು ಗಾಳಿ ನಿಯಂತ್ರಿತ ಪೈಪ್‌ಗಳನ್ನು ನಿರ್ಮಿಸಲಾಗಿರುತ್ತದೆ. ಇವುಗಳನ್ನು ಬಳಸಿ ಮಲ ಹಾಗೂ ಮೂತ್ರದ ವಾಸನೆ ಬರದಂತೆ ಉಪಯೋಗಿಸಲಾಗುತ್ತದೆ.
ಪ್ರತಿ ಬಾರಿ ಮಲ,ಮೂತ್ರ ವಿಸರ್ಜನೆಗೆ ಹೋದಾಗ ಈ ಗಾಳಿಯ ಪೈಪನ್ನು ತೆರೆದು ಬಿಡುತ್ತಾರೆ. ಆಗ ಅದು ಗಾಳಿ ಸೂಸಲು ಪ್ರಾರಂಭಿಸುತ್ತದೆ. ಬಳಿಕ ಮಲ ವಿಸರ್ಜನೆಗೆ ಹೋಗುವ ಮುನ್ನ ಸಂಗ್ರಹಿಸಿಟ್ಟಿರುವ ಪ್ಲಾಸ್ಟಿಕ್ ಕವರ್ ನ್ನು ಚಿಕ್ಕ ಕೊಳವೆಯೊಳಗೆ ತೆರದು ಹಾಕುತ್ತಾರೆ. ಬಳಿಕ ತಮ್ಮ ಕೆಲಸ ಮುಗಿದ ನಂತರ ಆ ಪ್ಲಾಸ್ಟಿಕ್ ಅನ್ನು ಚೆನ್ನಾಗಿ ಬಿಗಿಗೊಳಿಸಿ, ಅದೇ ಕೊಳವೆಯೊಳಗೆ ಹಾಕಿ ಪ್ರೆಸ್ ಮಾಡಲಾಗುತ್ತದೆ. ಬಳಿಕ ಅದು ಮಲ ಸಂಗ್ರಹ ಜಾಗಕ್ಕೆ ಹೋಗುತ್ತದೆ. ಇನ್ನು ಮೂತ್ರ ವಿಸರ್ಜನೆಗೆ ಗಾಳಿಯ ಪೈಪ್ ಇರುತ್ತದೆ. ಆ ಪೈಪ್ ಅನ್ನು ತೆರೆದು ಆ ಪೈಪ್ ಮೂಲಕ ಮೂತ್ರ ವಿಸರ್ಜನೆ ಮಾಡಲಾಗುತ್ತದೆ.
ಮಲ ಹಾಗೂ ಇನ್ಯಾವುದೇ ತ್ಯಾಜ್ಯಗಳನ್ನು ಪ್ರತಿ 30 ರಿಂದ 90 ದಿನಗಳಲ್ಲಿ ಭೂಮಿಗೆ ಕಳುಹಿಸಲಾಗುತ್ತದೆ. ಇನ್ನು ಮೂತ್ರವನ್ನು ಶುದ್ಧೀಕರಿಸಿ ಮರುಬಳಕೆ ಮಾಡಲಾಗುತ್ತದೆ. ಜೊತೆಗೆ ಬೆವರನ್ನು ಕೂಡ ಶುದ್ಧೀಕರಣ ಮಾಡಲಾಗುತ್ತದೆ. ಮೂತ್ರದ ಹಾಗೂ ಮಲದ ವಿಸರ್ಜನೆಯ ನಂತರ ಪ್ರತ್ಯೇಕ ಭಾಗದಲ್ಲಿ ಸಂಗ್ರಹಗೊಳ್ಳುತ್ತದೆ. ಈ ಮೂಲಕ ಮಲವನ್ನು ಭೂಮಿಗೆ ಕಳುಹಿಸಿದರೆ, ಮೂತ್ರವು ಇನ್ನೊಂದು ಭಾಗದಲ್ಲಿ ಶುದ್ಧೀಕರಣಗೊಂಡು ಮರು ಬಳಕೆಗೆ ಸಹಾಯಕವಾಗುತ್ತದೆ.
ನಾಸಾ ಮಾಹಿತಿಯ ಪ್ರಕಾರ, ಮೂತ್ರ ಶುದ್ಧೀಕರಣದ ಬಳಿಕ ಭೂಮಿಯ ಮೇಲೆ ಸಿಗುವ ನೀರಿಗಿಂತ ಹೆಚ್ಚು ಶುದ್ಧವಾಗಿರುತ್ತದೆ ಎಂದು ತಿಳಿಸಿದೆ. ಇದೇ ರೀತಿ ಮಲ, ವಾಂತಿ ಹಾಗೂ ಇನ್ಯಾವುದೇ ತ್ಯಾಜ್ಯವನ್ನು ಬಿಗಿಯಾಗಿ ಸಂಗ್ರಹಿಸಿದಲಾಗುವ ಪ್ಲಾಸ್ಟಿಕ್ ಗಳಲ್ಲಿ ಸಂಗ್ರಹಿಸಿ, ಬಳಿಕ ಅದನ್ನು ಭೂಮಿಗೆ ತಂದು ಸುಟ್ಟು ಹಾಕಲಾಗುತ್ತದೆ. ಈ ರೀತಿ ಅಂತರಾಷ್ಟ್ರೀಯ ಬಾಹ್ಯಾಕಾಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತದೆ. ಸದ್ಯ ಮಲವನ್ನು ಸುಟ್ಟು ಹಾಕಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮರುಬಳಕೆ ಮಾಡಬೇಕು ಎನ್ನುವ ಉದ್ದೇಶದಿಂದ ಅಭಿವೃದ್ಧಿ ಕಾರ್ಯ ನಡೆಸುತ್ತಿದೆ.
ಇನ್ನು ಮುಂದಿನ ದಿನಗಳಲ್ಲಿ ಚಂದ್ರ ಅಥವಾ ಮಂಗಳ ಗ್ರಹಕ್ಕೆ ದೀರ್ಘಕಾಲದ ಕಾರ್ಯಾಚರಣೆಗಾಗಿ ನಾಸಾ ತೆರಳಿದರೆ, ಆ ಸಮಯದಲ್ಲಿ ತ್ಯಾಜ್ಯ ವಿಲೇವಾರಿಗೆ ಇನ್ನಿತರ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಮೂಲಕ ತ್ಯಾಜ್ಯಗಳನ್ನ ಸಂಪೂರ್ಣವಾಗಿ ಮರುಬಳಕೆ ಮಾಡುವಂತಹ ಗುರಿಯನ್ನು ನಾಸಾ ಹೊಂದಿದ್ದು, ಹೊಸ ಮಾರ್ಗಗಳನ್ನು ಕಂಡುಹಿಡಿಯುವಲ್ಲಿ ತೊಡಗಿಕೊಂಡಿದೆ.
ನಾಸಾ ಲೂನಾರ್ ಲೂ ಚಾಲೆಂಜ್ ಎಂಬ ಜಾಗತಿಕ ಸ್ಪರ್ಧೆಯ ಮೂಲಕ ಇಂಜಿನಿಯರ್ ಗಳು, ವಿಜ್ಞಾನಿಗಳು ಹಾಗೂ ನವ ಉದ್ಯಮಿಗಳನ್ನು ಬಾಹ್ಯಾಕಾಶದಲ್ಲಿ ಬಳಸಲಾಗುವ ಶೌಚಾಲಯಗಳು ವಿವಿಧ ವಿನ್ಯಾಸಗಳನ್ನು ತಯಾರಿಸಲು ತೊಡಗಿಸಿದೆ. ಈ ಮೂಲಕ ಮಲ, ಮೂತ್ರ ಹಾಗೂ ವಾಂತಿಯನ್ನು ನೀರು, ಶಕ್ತಿ ಹಾಗೂ ಗೊಬ್ಬರದಂತಹ ಉಪಯುಕ್ತ ವಸ್ತುವನ್ನಾಗಿ ಪರಿವರ್ತಿಸಬೇಕು ಎಂಬ ಸವಾಲನ್ನು ನೀಡಿದೆ. ಈ ರೀತಿ ತಯಾರಾದರೆ ಮೂರು ಮಿಲಿಯನ್ ಡಾಲರ್ ( ಸುಮಾರು 25 ರಿಂದ 26 ಕೋಟಿ ರೂ.ಷ್ಟು) ಬಹುಮಾನ ನೀಡಲಿದೆ.