ಕಳೆದ ಹಲವು ವರ್ಷಗಳಿಂದ ಭಾರತದಲ್ಲಿ ಡೆಂಗ್ಯೂ ಜ್ವರ ಹರಡುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚಾಗುತ್ತಿದೆ.
ಸಾಮಾನ್ಯವಾಗಿ ಡೆಂಗ್ಯೂ (Dengue) ಬಂದಾಗ ಜ್ವರ, ತೀವ್ರ ತಲೆನೋವು, ಕಣ್ಣು ನೋವು, ಸ್ನಾಯು, ಕೀಲು ನೋವು ಇದರ ಜೊತೆಗೆ ವಾಕರಿಕೆ, ವಾಂತಿ, ಆಯಾಸದಂತಹ ಲಕ್ಷಣಗಳು ಕಂಡುಬರುತ್ತದೆ. ಹೀಗಾಗಿ ವೈದ್ಯರು ಈ ಲಕ್ಷಣಗಳನ್ನು ಕಡಿಮೆ ಮಾಡುವಂತಹ ಔಷಧಿ ಕೊಟ್ಟು ಈ ಮೂಲಕ ಡೆಂಗ್ಯೂ ಅನ್ನು ಕಡಿಮೆಗೊಳಿಸುತ್ತಾರೆ. ಭಾರತದಲ್ಲಿ ಇಲ್ಲಿಯವರೆಗೂ ಡೆಂಗ್ಯೂ ಜ್ವರಕ್ಕಾಗಿ ಯಾವುದೇ ರೀತಿಯಾದ ಲಸಿಕೆ ಕಂಡುಹಿಡಿದಿಲ್ಲ.
ಏನಿದು ಕ್ಯೂಡೆಂಗಾ (TAK-003)?
ಡೆಂಗ್ಯೂ ಜ್ವರ ಈಡಿಸ್ ಈಜಿಪ್ಟಿ ಸೊಳ್ಳೆಯಿಂದ ಹರಡುವ ಸೋಂಕು. ಈ ವೈರಸ್ DENV-1 ಯಿಂದ DENV-4 ಎಂಬ ನಾಲ್ಕು ವಿಭಿನ್ನ ತಳಿಗಳನ್ನು ಹೊಂದಿದೆ. TAK-003 ಎಂದೂ ಕರೆಯಲ್ಪಡುವ ಕ್ಯೂಡೆಂಗಾ (Qdenga) ಲಸಿಕೆಯು ಎಲ್ಲಾ ನಾಲ್ಕು ಡೆಂಗ್ಯೂ ವೈರಸ್‌ಗಳೊಂದಿಗೆ ಹೋರಾಡುತ್ತದೆ. ಇದನ್ನು ಮೂರು ತಿಂಗಳ ಅಂತರದಲ್ಲಿ ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಇದೀಗ ಭಾರತದಲ್ಲಿ ಜಪಾನಿನ ಟಕೆಡಾ ಔಷಧ ಕಂಪನಿ, ಹೈದರಾಬಾದ್ ನ ಬಯೊಲಾಜಿಕಲ್ ಇ ಪಾಲುದಾರಿಕೆಯೊಂದಿಗೆ ಅಭಿವೃದ್ದಿಪಡಿಸಿರುವ ಕ್ಯೂಡೆಂಗಾ (TAK-003) ಲಸಿಕೆ 2026ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ವಿಶ್ವ ಸಂಸ್ಥೆಯ ಮಾಹಿತಿಯ ಪ್ರಕಾರ ಈ ಲಸಿಕೆಯು ಶೇ.50ರಷ್ಟಕ್ಕಿಂತ ಹೆಚ್ಚು ಡೆಂಗ್ಯೂ ಪ್ರಕರಣಗಳನ್ನು ಕಡಿಮೆ ಮಾಡಿದ್ದು, 2024ರ ಮೇ ತಿಂಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಅನುಮೋದನೆ ಪಡೆದುಕೊಂಡಿದೆ. 2023ರಲ್ಲಿ ಪ್ರಾರಂಭವಾದ ಈ ಲಸಿಕೆ ಈಗಾಗಲೇ ಇಂಡೋನೇಷಿಯಾ, ಥೈಲ್ಯಾಂಡ್, ಅರ್ಜೆಂಟಿನಾ, ಬ್ರೆಜಿಲ್ ಮತ್ತು ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳಲ್ಲಿ ಅನುಮೋದನೆ ಪಡೆದುಕೊಂಡಿದ್ದು, ಈಗಾಗಲೇ 10 ಮಿಲಿಯನ್ ಡೋಸ್ ಮಾರಾಟ ಮಾಡಲಾಗಿದೆ. ಇದೀಗ ಭಾರತದಲ್ಲಿ ಈ ಲಸಿಕೆಯನ್ನು ಪ್ರಾರಂಭಿಸಲು ಟಕೆಡಾ ಕಂಪನಿಯು ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ (CDSCO) ಯಿಂದ ಕ್ಲಿನಿಕಲ್ ಟ್ರಯಲ್‌ಗಳಿಗೆ ಕೂಡ ಅನುಮತಿ ಪಡೆದಿದೆ.
ಭಾರತದಲ್ಲಿ ಟಕೆಡಾ (Takeda Company) ಮತ್ತು ಬಯೋಲಾಜಿಕಲ್ ಇ (Biological E) ಕಂಪನಿ ಈ ಲಸಿಕೆಯನ್ನು ತಯಾರಿಸುವುದರ ಜೊತೆಗೆ ವರ್ಷಕ್ಕೆ 50 ಮಿಲಿಯನ್ ಡೋಸ್‌ಗಳನ್ನು ತಯಾರಿಸುವ ಗುರಿಯನ್ನು ಇಟ್ಟುಕೊಂಡಿದೆ. ಈ ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ, ಮೂರು ತಿಂಗಳ ಅಂತರದಲ್ಲಿ ನೀಡಲಾಗುತ್ತದೆ ಹಾಗೂ 4.5 ವರ್ಷಗಳವರೆಗೆ ಪರಿಣಾಮಕಾರಿಯಾಗಿ ರೋಗದಿಂದ ರಕ್ಷಣೆ ನೀಡುತ್ತದೆ.
ಯಾರು ಈ ಲಸಿಕೆ ಹಾಕಿಸಿಕೊಳ್ಳಬಹುದು?
- 6 ರಿಂದ 60 ವರ್ಷ ವಯಸ್ಸಿನವರಿಗೆ ಈ ಲಸಿಕೆಯನ್ನು ನೀಡಬಹುದು. ಆದರೆ ಈತನಕ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲು ಶಿಫಾರಸು ಮಾಡಿಲ್ಲ.
ಯಾರು ಈ ಲಸಿಕೆ ಹಾಕಿಸಿಕೊಳ್ಳಬಾರದು?
- ಒಂದು ತಿಂಗಳು ಗರ್ಭಿಣಿಯಾಗಿರುವ ಅಥವಾ ಲಸಿಕೆ ಪಡೆದ ನಂತರ ಗರ್ಭಧಾರಣೆಗೆ ಯೋಚಿಸುತ್ತಿರುವ ಮಹಿಳೆಯರು
- ಹಾಲುಣಿಸುವ ಮಹಿಳೆಯರು
- ಲಸಿಕೆ ಹಾಕುವ ನಾಲ್ಕು ವಾರಗಳ ಮೊದಲು, ಕಿಮೊಥೆರಪಿ ಅಥವಾ ಇನ್ನಿತರ ಗಂಭೀರ ಚಿಕಿತ್ಸೆ ಪಡೆಯುವವರು
- ಹುಟ್ಟಿನಿಂದಲೂ ಅಥವಾ ಇನ್ನಿತರ ರೋಗ ಹೊಂದಿರುವವರು
- HIV ಸೋಂಕು ಹೊಂದಿರುವವರು
TAK-003 ಹೇಗೆ ನೀಡಲಾಗುತ್ತೆ?
TAK-003 ಅನ್ನು ಮೂರು ತಿಂಗಳ ಅಂತರದಲ್ಲಿ ಎರಡು-ಡೋಸ್ ಗಳಲ್ಲಿ ನೀಡಲಾಗುತ್ತದೆ. ಅಧ್ಯಯನಗಳ ಪ್ರಕಾರ 4.5 ವರ್ಷಗಳವರೆಗೆ ಪರಿಣಾಮಕಾರಿಯಾಗಿ ರೋಗದಿಂದ ರಕ್ಷಣೆ ನೀಡುತ್ತದೆ. ಲಸಿಕೆಯನ್ನು ಸಾಮಾನ್ಯವಾಗಿ ತೋಳಿನ ಡೆಲ್ಟಾಯ್ಡ್ ಪ್ರದೇಶಕ್ಕೆ ಚುಚ್ಚಲಾಗುತ್ತದೆ.
ಲಸಿಕೆ ಬೆಲೆ:
ಟಕೆಡಾ ಭಾರತದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಮಾರುಕಟ್ಟೆಗಳಿಗೆ ವಿಭಿನ್ನ ಬೆಲೆಯಲ್ಲಿ ಜಾರಿಗೆ ತರಲು ಯೋಜಿಸಿದೆ. ಇತರ ದೇಶಗಳಲ್ಲಿ, ಲಸಿಕೆಯ ಒಂದು ಡೋಸ್‌ನ ಗರಿಷ್ಠ ಬೆಲೆ $40 (3383.06 ರೂ.)ರಿಂದ $115 (9726.29ರೂ.) ರವರೆಗೆ ಇರುತ್ತದೆ.
ಭಾರತದಲ್ಲಿ ಬಿಡುಗಡೆಗೆ ಕಾರಣ?
ದೇಶಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಕಾರಣ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ವೆಕ್ಟರ್ ಬೋರ್ನ್ ಡಿಸೀಸ್ ಕಂಟ್ರೋಲ್ ಸೆಂಟರ್ ಪ್ರಕಾರ, 2024ರಲ್ಲಿ ಭಾರತದಲ್ಲಿ 2,30,000 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಮತ್ತು 236 ಸಾವು ವರದಿಯಾಗಿದೆ. ಈ ಲಸಿಕೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.