ಪ್ರತಿಷ್ಠಿತ ಐಸಿಸಿ ವಿಶ್ವಕಪ್ (ICC World Cup 2023) ಟೂರ್ನಿಗೆ ಇನ್ನು ಎರಡೂವರೆ ತಿಂಗಳಷ್ಟೇ ಸಮಯ ಬಾಕಿಯಿದ್ದರೂ ಪಾಕಿಸ್ತಾನ ಟೂರ್ನಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ದಿನಕ್ಕೊಂದು ಕ್ಯಾತೆ ತೆಗೆಯುತ್ತಿದೆ. ಏಕೆಂದರೆ ಇನ್ನೆರಡು ತಿಂಗಳ ಒಳಗೆ ಚುನಾವಣೆ ನಡೆಯಲಿದ್ದು, ವಿಶ್ವಕಪ್ ವೇಳೆ ಹೊಸ ಸರ್ಕಾರ ರಚನೆಯಾಗಲಿದೆ. ಹೀಗಾಗಿ ಹಾಲಿ ಸರ್ಕಾರಕ್ಕಿಂತ ಹೊಸ ಸರ್ಕಾರದ ನಿಲುವೇ ವಿಶ್ವಕಪ್‌ನಲ್ಲಿ ಪಾಕ್ ತಂಡ ಆಡುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನಲಾಗಿದೆ. ಈ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲೂ (PCB) ಹೊಸ ಆಡಳಿತ ಮಂಡಳಿ ಬರಲಿದೆ. ಸದ್ಯ ಪಿಸಿಬಿ ಚುನಾವಣೆ ಜುಲೈ 17ರ ವರೆಗೆ ಮುಂದೂಡಿಕೆಯಾಗಿದೆ.
Advertisement
ಬಾಬರ್ ಅಜಮ್ ಸಾರಥ್ಯದ ಪಾಕಿಸ್ತಾನ ತಂಡವನ್ನು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಭಾರತಕ್ಕೆ ಕಳುಹಿಸುವ ಬಗ್ಗೆ ಪಿಸಿಬಿ ಈಗಲೂ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದರೂ, ಪಾಕ್ ತಂಡ ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ಐಸಿಸಿ (ICC) ವಿಶ್ವಾಸ ವ್ಯಕ್ತಪಡಿಸಿದೆ. ಇನ್ನು ಪಾಕ್ ತಂಡ ರಾಜಕೀಯ ಕಾರಣಗಳಿಂದಾಗಿ ವಿಶ್ವಕಪ್‌ನಲ್ಲಿ ಮುಂಬೈನಲ್ಲಿ ಯಾವುದೇ ಪಂದ್ಯ ಆಡದಂತೆ ವೇಳಾಪಟ್ಟಿ ರೂಪಿಸಲಾಗಿದೆ, ಅದಕ್ಕೆ ಕಾರಣವೂ ಇದೆ. ಇದನ್ನೂ ಓದಿ: ವಿಶ್ವಕಪ್ ಟೂರ್ನಿ ಆಡಲು ಪಾಕ್ ತಂಡ ಭಾರತಕ್ಕೆ ಬರಲ್ಲ – ಮತ್ತೆ ಕ್ಯಾತೆ ತೆಗೆದ ಪಾಕ್ ಸಚಿವ
Advertisement
Advertisement
2023ರ ಏಕದಿನ ಏಷ್ಯಾಕಪ್ ಟೂರ್ನಿಯನ್ನಾಡಲು ಭಾರತ ತಂಡವನ್ನು ಪಾಕ್‌ಗೆ ಕಳುಹಿಸಲು ಬಿಸಿಸಿಐ ನಿರಾಕರಿಸಿದ ನಂತರ ACC (ಏಷ್ಯನ್ ಕ್ರಿಕೆಟ್ ಸಮಿತಿ) ಹೈಬ್ರಿಡ್ ಮಾದರಿಯಲ್ಲಿ ಆಡಿಸಲು ನಿರ್ಧರಿಸಿತು. ಏಷ್ಯಾಕಪ್ ಟೂರ್ನಿಯ ಹಕ್ಕು ಪಾಕಿಸ್ತಾನದ ಬಳಿಯಿದ್ದರೂ ಪಾಕ್‌ನಲ್ಲಿ ಕೇವಲ 4 ಪಂದ್ಯಗಳನ್ನಾಡಲು ಮಾತ್ರವೇ ಅನುಮತಿ ನೀಡಿತು. ಉಳಿದ 9 ಪಂದ್ಯಗಳನ್ನ ಶ್ರೀಲಂಕಾದಲ್ಲಿ ಆಡಿಸಲು ನಿರ್ಧರಿಸಿತು. ಇದೇ ಕಾರಣಕ್ಕಾಗಿ ಪಾಕಿಸ್ತಾನ ಕೂಡ ವಿಶ್ವಕಪ್ ಆಡುವ ವಿಚಾರದಲ್ಲಿ ಅಂತಿಮ ನಿರ್ಧಾರ ಪ್ರಕಟಿಸದೇ ದಿನಕ್ಕೊಂದು ತಗಾದೆ ತೆಗೆದುಕೊಂಡು ಕುಳಿತಿದೆ. ಇದೀಗ ಭಾರತಕ್ಕೆ ವಿಶ್ವಕಪ್ ಟೂರ್ನಿಗೆ ಕಳುಹಿಸುವ ಬಗ್ಗೆ ಚಿಂತನೆ ನಡೆಸಲು ಪ್ರತ್ಯೇಕ ಸಮಿತಿಯನ್ನೂ ರಚನೆ ಮಾಡಿ, ಚರ್ಚಿಸುತ್ತಿದೆ.
Advertisement
1987 ಮತ್ತು 1996ರಲ್ಲಿ ಪಾಕಿಸ್ತಾನದ ಜೊತೆಗೆ 2011ರಲ್ಲಿ ಬಾಂಗ್ಲಾದೇಶದ ಜೊತೆಗೆ ಸಹ ಆತಿಥ್ಯದೊಂದಿಗೆ ವಿಶ್ವಕಪ್ ಟೂರ್ನಿ ಆಯೋಜಿಸಿದ್ದ ಭಾರತ ಈ ಬಾರಿ ಪೂರ್ಣ ಆತಿಥ್ಯ ವಹಿಸಿಕೊಂಡಿದೆ. ಈಗಾಗಲೇ ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ದೇಶದ ವಿವಿಧ ರಾಜ್ಯಗಳ 12 ಕ್ರೀಡಾಂಗಣದಲ್ಲಿ ಟೂರ್ನಿ ನಿಗದಿ ಮಾಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತ-ಪಾಕಿಸ್ತಾನ ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಕಾದಾಟ ನಡೆಸಲಿವೆ.
ಇಂಡೋ-ಪಾಕ್ ಕದನ ಯಾಕಿಷ್ಟು ರೋಚಕ?
ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರಾಗುತ್ತಿವೆ ಅಂದ್ರೆ ಸಾಕು ಅದೊಂದು ರೋಚಕ ಕ್ಷಣವಾಗಿಯೇ ಮಾರ್ಪಟ್ಟಿರುತ್ತದೆ. ದೇಶದ ಮೂಲೆ ಮೂಲೆಯಲ್ಲಿರುವ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಗಳನ್ನು ಕಣ್ತುಂಬಿಕೊಳ್ಳದೇ ಇರಲಾರರು. ಏಕೆ ಇಂಡೋ ಪಾಕ್ ಕದನ ಇಷ್ಟೊಂದು ಕೂತುಹಲ? ಭಾರತ ತಂಡವನ್ನ ಏಕೆ ಪಾಕಿಸ್ತಾನಕ್ಕೆ ಕಳುಹಿಸುತ್ತಿಲ್ಲ? ವಿಶ್ವಕಪ್ ಟೂರ್ನಿಗೆ ಪಾಕ್ ಏಕೆ ಹಿಂದೇಟು ಹಾಕುತ್ತಿದೆ? ಎಂಬುದನ್ನಿಲ್ಲಿ ತಿಳಿಯೋಣ. ಇದನ್ನೂ ಓದಿ: ICC World Cup 2023: ಟೀಂ ಇಂಡಿಯಾ ಪರಿಷ್ಕೃತ ವೇಳಾಪಟ್ಟಿ ರಿಲೀಸ್ – ಇಲ್ಲಿದೆ ಡಿಟೇಲ್ಸ್
ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿ ಬೇರ್ಪಟ್ಟ ನಂತರ ಭಾರತದ ವಿರುದ್ಧ ದ್ವೇಷ ಸಾಧಿಸುತ್ತಲೇ ಬಂದಿತು. 1947-48ರಲ್ಲಿ ರಾಜ ಹರಿಸಿಂಗ್ ಭಾರತದೊಂದಿಗೆ ಕಾಶ್ಮೀರ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇಂಡೋ ಪಾಕ್ ಯುದ್ಧ (Indo Pak War) ನಡೆಯಿತು. ಆ ನಂತರ 1965ರಲ್ಲಿ ಕಾಶ್ಮೀರಕ್ಕಾಗಿ ನಡೆದ ಯುದ್ಧ, 1971ರಲ್ಲಿ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ) ವಿಮೋಚನೆಗಾಗಿ ನಡೆದ ಯುದ್ಧ, 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧ ಇವೆಲ್ಲವೂ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನ ಮತ್ತಷ್ಟು ಹದಗೆಡಿಸುತ್ತಾ ಹೋಯಿತು. ಆದ್ರೆ ಕ್ರೀಡೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕಾರ್ಗಿಲ್ ಯುದ್ಧದ ನಂತರವೂ ಭಾರತ ಮತ್ತು ಪಾಕ್ ತಂಡಗಳು ದ್ವಿಪಕ್ಷಿಯ ಸರಣಿ, ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಮುಖಾಮುಖಿಯಾಗಿವೆ. ಭಾರತ ತಂಡವು ಸಹ ಪಾಕಿಸ್ತಾನದಲ್ಲೇ ದ್ವಿಪಕ್ಷಿಯ ಸರಣಿಗಳನ್ನಾಡಿದೆ. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿ (Mumbai Attack) ಎರಡು ರಾಷ್ಟ್ರಗಳ ಮೇಲೆ ಭಾರೀ ಪರಿಣಾಮ ಬೀರಿತು.
ನೆನಪಿದೆಯಾ ಮುಂಬೈ ದಾಳಿ:
2008ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. 60 ಗಂಟೆಗಳಿಗೂ ಹೆಚ್ಚು ಕಾಲ ಮುತ್ತಿಗೆ ಹಾಕಿ, ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನ ನಡೆಸಿ 166 ಜನರನ್ನು ಹತ್ಯೆಗೈದಿದ್ದರು. 300ಕ್ಕೂ ಹೆಚ್ಚು ಜನರನ್ನ ಗಾಯಗೊಳಿಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು.
ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ. ಇದನ್ನೂ ಓದಿ: ಯಾರ ಜೊತೆ, ಎಲ್ಲಿ ಬೇಕಾದ್ರೂ ಆಡೋಕೆ ನಾವ್ ರೆಡಿ – ಪಾಕ್ ತಂಡ ಭಾರತಕ್ಕೆ ಬರೋದು ಖಚಿತ; ಬಾಬರ್ ಆಜಂ
2016ರಲ್ಲಿ ಕೊನೆಯದ್ದಾಗಿ ಭಾರತಕ್ಕೆ ಬಂದಿದ್ದ ಪಾಕ್ ಈಡನ್ ಗಾರ್ಡನ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಕಣಕ್ಕಿಳಿದಿತ್ತು. ಅಂದು ಮಳೆ ಅಡ್ಡಿಯಾದ್ದರಿಂದ ಪಾಕ್ ತಂಡ ನೀಡಿದ್ದ 119 ರನ್‌ಗಳ ಗುರಿಯನ್ನು 18 ಓವರ್‌ಗಳಲ್ಲಿ ತಲುಪಲು ಭಾರತಕ್ಕೆ ಟಾರ್ಗೆಟ್ ನೀಡಲಾಗಿತ್ತು. ಆದ್ರೆ ಬಲಿಷ್ಠ ಭಾರತ ತಂಡ 15.5 ಓವರ್‌ಗಳಲ್ಲೇ ಈ ಗುರಿ ಪೂರೈಸಿತ್ತು. ಈ ಬಾರಿ ಪಾಕ್ ತಂಡಕ್ಕೆ ಮುಂಬೈನಲ್ಲಿ ಯಾವುದೇ ಪಂದ್ಯವನ್ನು ನಿಗದಿಪಡಿಸಿಲ್ಲ.
1992ರಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 1992ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ 7 ಬಾರಿ ಮುಖಾಮುಖಿಯಾಗಿವೆ. 1992, 1999, 2003, 2011, 2015 ಹಾಗೂ 2019ರಲ್ಲಿ ಇತ್ತಂಡಗಳು ಮುಖಾಮುಖಿಯಾಗಿವೆ. ಅಲ್ಲದೇ ಟಿ20 ವಿಶ್ವಕಪ್‌ನಲ್ಲಿ 7 ಬಾರಿ, ಚಾಂಪಿಯನ್ಸ್ ಟ್ರೋಫಿಯಲ್ಲಿ 5 ಬಾರಿ ಒಟ್ಟು 19 ಬಾರಿ ಇತ್ತಂಡಗಳು ಮುಖಾಮುಖಿಯಾಗಿವೆ. ಭಾರತ ಇದುವರೆಗೆ ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಸೋತಿದೆಯೇ ಹೊರತು ವಿಶ್ವಕಪ್ ಟೂರ್ನಿಯಲ್ಲಿ ಸೋತಿಲ್ಲ. ಈ ಬಾರಿಯೂ ಪಾಕ್ ವಿರುದ್ಧ ಗೆಲ್ಲುವ ವಿಶ್ವಾಸದಲ್ಲೇ ಮುಂದುವರಿದಿದೆ.
Web Stories