ಭೂಮಿಯ ಅಂತರಾಳದಲ್ಲಿರುವ ಯಾವುದೇ ವಸ್ತು ಚಲನೆಗೊಂಡಾಗ ಭೂಮಿಯ ಬಾಹ್ಯಪದರದಲ್ಲಿ ವಿಭಿನ್ನ ಪ್ರಕ್ರಿಯೆ ಉಂಟಾಗುತ್ತದೆ. ಅವುಗಳಲ್ಲಿ ಭೂಕಂಪ, ಸುನಾಮಿ, ಜಾಲ್ವಾಮುಖಿ, ಪ್ರವಾಹ ಇವೆಲ್ಲವೂ ಪ್ರಮುಖ ಪಾತ್ರ ವಹಿಸುತ್ತವೆ. ಸದ್ಯ ಇಥಿಯೋಪಿಯಾದಲ್ಲಿರುವ ಜ್ವಾಲಾಮುಖಿ 12 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ. ಇದರಿಂದ ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಸಮಸ್ಯೆ ಉಂಟಾಗಿದೆ.
ಇಥಿಯೋಪಿಯಾದ (Ethiopia) ಈಶಾನ್ಯ ಪ್ರದೇಶದಲ್ಲಿರುವ ಹೈಲಿ ಗುಬ್ಬಿ (Hayli Gubbi) ಜ್ವಾಲಾಮುಖಿ ಸ್ಫೋಟದಿಂದ ಉಂಟಾದ ಹೊಗೆ 14 ಕಿ.ಮೀಟರ್ ಎತ್ತರವರೆಗೆ ಚಿಮ್ಮಿದ್ದು, ವಿಮಾನಯಾನ ಸೇರಿದಂತೆ ಇತರ ಸಮಸ್ಯೆಗಳು ಎದುರಾಗಿದೆ. ಜ್ವಾಲಾಮುಖಿ ಸ್ಫೋಟದ ಪರಿಣಾಮ ಆರಂಭದಲ್ಲಿ ಗಂಧಕಗಳಿರುವ ಬೂದಿ ಯೆಮೆನ್ ಮತ್ತು ಓಮನ್ ಕಡೆಗೆ ಸಾಗಿತು. ನಂತರ ಕೆಂಪು ಸಮುದ್ರದಾದ್ಯಂತ ದಟ್ಟವಾದ ಮೋಡ ಆವರಿಸಿದ್ದು, ಸಮುದ್ರದ ಮೇಲೆ ಹೋಗಿದೆ.

ಜ್ವಾಲಾಮುಖಿ ಎಂದರೇನು?
ಭೂಮಿಯ ಒಳಗಿರುವ ಹೆಚ್ಚುವರಿ ತಾಪಮಾನ ಮತ್ತು ಒತ್ತಡದಿಂದ ಕರಗಿದ ಬಂಡೆಯು ವಾಯು ಮತ್ತು ಬೂದಿಯ ರೂಪದಲ್ಲಿ ಸ್ಫೋಟದ ಮೂಲಕ ಭೂಮಿಯ ಮೇಲ್ಮೈಗೆ ಉಕ್ಕಿ ಬರುವುದನ್ನ ಜ್ವಾಲಾಮುಖಿ ಎಂದು ಕರೆಯುತ್ತಾರೆ. ಒತ್ತಡದಿಂದಾಗಿ ಕರಗಿದ ಬಂಡೆಗಳು, ಖನಿಜಗಳು ಸ್ಫೋಟಗೊಂಡಾಗ ಬೂದಿಯ ರೂಪದಲ್ಲಿ ಹೊರಬರುತ್ತದೆ.
ಜ್ವಾಲಾಮುಖಿ ವಿಧಗಳು:
- ಜ್ವಾಲಾಮುಖಿಯ ವಿಭಿನ್ನ ವಿಧಾನಗಳನ್ನು ಹೊಂದಿದ್ದು, ಕೆಲವೊಮ್ಮೆ ಜ್ವಾಲಾಮುಖಿ ಸಂಭವಿಸಿದಾಗ ಲಾವಾರಸವು ದ್ರವಸ್ವರೂಪದಲ್ಲಿ ಹರಿಯುತ್ತದೆ. ಆದರೆ ಈ ರೀತಿಯ ಸ್ಪೋಟಗಳು ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ. ಉದಾಹರಣೆಗೆ ಹವಾಯಿ ದ್ವೀಪಗಳಲ್ಲಿ ಸಂಭವಿಸುವ ಜ್ವಾಲಾಮುಖಿಗಳು ಈ ರೀತಿಯಾಗಿರುತ್ತದೆ.
- ಇನ್ನು ಕೆಲವು ಜ್ವಾಲಾಮುಖಿಗಳು ಎತ್ತರ ರೂಪದಲ್ಲಿ ಉಕ್ಕಿ ಬರುತ್ತವೆ. ಇದು ಲಾವಾರಸ, ಬೂದಿಯೊಂದಿಗೆ ಸ್ಫೋಟಗೊಳ್ಳುತ್ತದೆ. ಈ ಜ್ವಾಲಾಮುಖಿ ತುಂಬಾ ಅಪಾಯಕಾರಿಯಾಗಿದ್ದು, ಜಪಾನ್ ಪೂಜಿಯಮಾ ಹಾಗೂ ಅಮೆರಿಕಾದ ಮೌಂಟ್ ಸೆಂಟ್ಹೆಲೆನ್ಸ್ ನಲ್ಲಿ ಸಂಭವಿಸುತ್ತದೆ.
- ಕೆಲವು ಜ್ವಾಲಾಮುಖಿಗಳು ಚಿಕ್ಕದಾಗಿ ತೀವ್ರ ಸ್ವರೂಪಗಳಲ್ಲಿ ಹೊರಹೊಮ್ಮುತ್ತವೆ. ಬೂದಿ, ಕಲ್ಲುಗಳು, ಗಂಧಕ ಮಿಶ್ರಣ ಇವೆಲ್ಲವೂ ಸೇರಿಕೊಂಡು ಉಂಟಾಗುತ್ತದೆ. ಹೆಚ್ಚಾಗಿ ಮೆಕ್ಸಿಕೋದ ಪ್ಯಾರಿಕುಟಿನ್ ಎಂಬಲ್ಲಿ ಹೆಚ್ಚಾಗುತ್ತದೆ.
- ದಪ್ಪ, ಗಟ್ಟಿಯಾದ ಲಾವಾರಸದ ರೂಪದಲ್ಲಿ ನಿಧಾನಗತಿಯಲ್ಲಿ ಈ ಜ್ವಾಲಾಮುಖಿ ಸಂಭವಿಸುತ್ತದೆ. ಹೆಚ್ಚಾಗಿ ದ್ವೀಪದ ಕಡಲ ಜ್ವಾಲಾಮುಖಿಗಳಲ್ಲಿ ಈ ರೀತಿ ಸಂಭವಿಸುತ್ತದೆ. ಇವುಗಳು ಕಿಲೋಮೀಟರ್ ಗಟ್ಟಲೆ ಲಾವಾರಸ ಹರಿದುಕೊಂಡು ಹೋಗುತ್ತದೆ.
- ಸಮುದ್ರದ ಒಳಭಾಗದಲ್ಲಿ ಜ್ವಾಲಾಮುಖಿ ಸ್ಪೋಟಗೊಳ್ಳುತ್ತದೆ. ಈ ಸ್ಪೋಟದಿಂದಾಗಿ ಆ ಪ್ರದೇಶವು ದ್ವೀಪವಾಗಿ ಪರಿವರ್ತನೆಯಾಗುತ್ತದೆ. ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸಿದ ಕೆಲವು ಜ್ವಾಲಾಮುಖಿಗಳು ಈ ರೀತಿಯಾಗಿದ್ದವು.
- ಇದೆಲ್ಲದಕ್ಕೂ ಮಿಗಿಲಾಗಿ ಸೂಪರ್ ಜ್ವಾಲಾಮುಖಿ ಎಂಬುವುದು ಸಾಮಾನ್ಯ ಜ್ವಾಲಾಮುಖಿ ಗಳಿಗಿಂತ ಹೆಚ್ಚು ಪಟ್ಟು ಪರಿಣಾಮ ಬೀರುತ್ತದೆ. ಈ ಜ್ವಾಲಾಮುಖಿಗಳಿಂದ ಜಗತ್ತಿನ ಹವಾಮಾನದ ಮೇಲೆ ಪರಿಣಾಮ ಬೀರುತ್ತದೆ . ಉದಾಹರಣೆಗೆ ಅಮೆರಿಕದ ಯೇಲ್ಲೋ ಸ್ಟೋನ್ ಎಂಬಲ್ಲಿ ಸಂಭವಿಸಿದ ಜ್ವಾಲಾಮುಖಿ.

ಸದ್ಯ 12 ಸಾವಿರ ವರ್ಷಗಳಲ್ಲಿ ಮೊದಲ ಬಾರಿಗೆ ಸಂಭವಿಸಿರುವ ಹೈಲಿ ಗುಬ್ಬಿ ಜ್ವಾಲಾಮುಖಿಯು ಉತ್ತರ ಇಥಿಯೋಪಿಯಾದಲ್ಲಿದೆ. ಇದು ಪೂರ್ವ ಆಫ್ರಿಕಾ ದೇಶದಲ್ಲಿದೆ. ಇಥಿಯೋಪಿಯಾದ ಅಫಾರ್ ಪ್ರದೇಶದಲ್ಲಿ ದೀರ್ಘಕಾಲದಿಂದ ನಿಷ್ಕ್ರಿಯವಾಗಿದ್ದ ಹೈಲಿಗುಬ್ಬಿ ಜ್ವಾಲಾಮುಖಿ ನವೆಂಬರ್ 23ರಂದು (ಭಾನುವಾರ) ಸ್ಫೋಟಗೊಂಡು ಸುಮಾರು 14 ಕಿಲೋ ಮೀಟರ್ ಎತ್ತರಕ್ಕೆ ಇದರ ಬೂದಿ ಆವರಿಸಿದೆ. ಜ್ವಾಲಾಮುಖಿಯ ಬೂದಿಯು ಕೆಂಪು ಸಮುದ್ರವನ್ನು ದಾಟಿ ಪಾಕಿಸ್ತಾನ ಮತ್ತು ಉತ್ತರ ಭಾರತದ ಕೆಲವು ಭಾಗಗಳ ಕಡೆಗೆ ಸಾಗಿದೆ. ಜೊತೆಗೆ ಬೂದಿಯ ಮೋಡವು ಚೀನಾದ ಕಡೆ ಕೂಡ ಚಲಿಸಿದೆ. ಇದರಿಂದಾಗಿ ಈ ಮೋಡವು ಮಾನವನ ಆರೋಗ್ಯ ಮತ್ತು ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ಆತಂಕ ಏಕೆ?
ಸದ್ಯ ಇಥಿಯೋಪಿಯಾದಲ್ಲಿ ಸಂಭವಿಸಿರುವ ಜ್ವಾಲಾಮುಖಿ ಸ್ಫೋಟದಿಂದ ಉಂಟಾದ ಬೂದಿಯು ಸಲ್ಫರ್ ಡೈ ಆಕ್ಸೈಡ್, ಗಾಜು ಮತ್ತು ಸೂಕ್ಷ್ಮ ಶಿಲಾಕಣ ಗಳಿಂದ ಕೂಡಿದೆ. ಅಲ್ಲದೆ ಇದು ಉತ್ತರ ಭಾರತದ ಮೇಲೆ 15,000 ದಿಂದ 45,000 ಅಡಿಯ ಎತ್ತರದಲ್ಲಿ ಗಂಟೆಗೆ 100 ರಿಂದ 120 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ. ಈಗಾಗಲೇ ಬೂದಿಯ ಮೋಡವು ಪಶ್ಚಿಮ ಗುಜರಾತ್ ಮೂಲಕ ಭಾರತವನ್ನು ಪ್ರವೇಶಿಸಿ ರಾಜಸ್ಥಾನ, ವಾಯುವ್ಯ ಮಹಾರಾಷ್ಟ್ರ, ದೆಹಲಿ, ಹರಿಯಾಣ ಮತ್ತು ಪಂಜಾಬ್ಗಳ ಮೂಲಕ ಹಾದು ಹೋಗಿದೆ.
- ಜ್ವಾಲಾಮುಖಿ ಸ್ಪೋಟಗೊಂಡಾಗ ಅಪಾಯಕಾರಿ ಅನಿಲಗಳು ಮತ್ತು ಕಣಗಳನ್ನು ಗಾಳಿಯಲ್ಲಿ ಬಿಡುಗಡೆ ಮಾಡುತ್ತವೆ.
- ಮಾನವನ ಆರೋಗ್ಯಕ್ಕೆ ವಿಷಕರಿಯಾಗಿ ಅನಿಲಗಳನ್ನು ಹೊಂದಿರುತ್ತದೆ. ಕಾರ್ಬನ್ ಡೈ ಆಕ್ಸೈಡ್, ಫ್ಲೋರಿನ್, ಸಲ್ಫರ್ ಡೈ ಆಕ್ಸೈಡ್, ಹೈಡ್ರೋಜನ್ ಕ್ಲೋರೈಡ್, ಹೈಡ್ರೋಜನ್ ಸಲ್ಫೈಡ್, ರೇಡಾನ್, ಹೈಡ್ರೋಜನ್ ಫ್ಲೋರೈಡ್ ಮತ್ತು ಸಲ್ಪ್ಯೂರಿಕ್ ಆಮ್ಲ ಈ ಅನಿಲಗಳಿಂದ ಕೂಡಿದ ಗಾಳಿಯನ್ನು ಉಸಿರಾಡುವುದು ಹಾನಿಕಾರಕವಾಗಿರುತ್ತದೆ. ಈ ಅನಿಲಗಳು ಯಾವುದೇ ರೀತಿಯ ವಾಸನೆ ಅಥವಾ ಕಣ್ಣಿಗೆ ಕಾಣದ ರೀತಿಯಲ್ಲಿ ಗಾಳಿಯೊಳಗೆ ಸೇರಿಕೊಂಡಿರುತ್ತದೆ.
- ಈ ಅನಿಲದಿಂದ ಕೂಡಿರುವ ಗಾಳಿಯನ್ನ ಸೇವಿಸಿದಾಗ ಕಣ್ಣುಗಳಲ್ಲಿ ತೊಂದರೆ, ವಾಂತಿ, ತಲೆ ತಿರುಗುವಿಕೆ, ತಲೆನೋವು, ಉಸಿರಾಟದ ಸಮಸ್ಯೆ ಹಾಗೂ ಸಾವಿಗೂ ಕಾರಣವಾಗಬಹುದು.
- ಅಲ್ಲದೆ ಇದು ಶ್ವಾಸಕೋಶಕ್ಕೂ ಹಾನಿಯನ್ನು ಉಂಟುಮಾಡುತ್ತದೆ. ಹೆಚ್ಚಿನ ಪ್ರಮಾಣದ ಬೂದಿ ಸೇರಿದ ಗಾಳಿಯನ್ನ ಸೇವಿಸಿದಾಗ ಉಸಿರುಗಟ್ಟುವಿಕೆ ಉಂಟಾಗುತ್ತದೆ
- ಕೆಲವೊಮ್ಮೆ ಈ ಅನಿಲಗಳು ನಮ್ಮ ದೇಹವನ್ನ ಸೇರಿಕೊಂಡಾಗ ಕ್ಷಣಾರ್ಧದಲ್ಲಿ ಪ್ರಜ್ಞಾಹೀನರಾಗುವ ಸಾಧ್ಯತೆಯೂ ಇರುತ್ತದೆ. ಜೊತೆಗೆ ಅಸ್ತಮಾ ರೋಗಿಗಳು, ಮಕ್ಕಳು ಹಾಗೂ ದೀರ್ಘಕಾಲದ ಉಸಿರಾಟದ ಸಮಸ್ಯೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿರುವವರು ಬೇಗ ಇದರಿಂದ ಸಮಸ್ಯೆ ಒಳಗಾಗುತ್ತಾರೆ.
ಈಗಾಗಲೇ ದೆಹಲಿಯ ಗಾಳಿ ವಿಷಕಾರಿಯಾಗುತ್ತಿದ್ದು, ಮೋದಿ ಮಿಶ್ರಿತ ಗಾಳಿಯಿಂದ ಇನ್ನಷ್ಟು ಹದಗೆಡುವ ಸಾಧ್ಯತೆಯೂ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಲ್ಲದೆ ಈ ಬೂದಿ ಮಿಶ್ರಿತ ಗಾಳಿ ವಾಯು ಮಾಲಿನ್ಯಕ್ಕೆ ನೇರ ಕಾರಣವಾಗುತ್ತದೆ.
Ethiopia’s Hayli Gubbi #Volcano Awakens After 10,000 Years on 23 November 2025!
Expect further deterioration of AQI in India pic.twitter.com/whAQGURv8I
— Time-lapse (@SynapseDot) November 25, 2025
ವೈದ್ಯರ ಸಲಹೆ ಏನು?
ಜ್ವಾಲಾಮುಖಿಯ ಬೂದಿ ಮಿಶ್ರಿತ ಗಾಳಿಯಿಂದ ಸುರಕ್ಷಿತವಾಗಿರಲು ವೈದ್ಯರು ಕೆಲವು ಸಲಹೆಗಳನ್ನು ನೀಡಿದ್ದಾರೆ.
- N95 ಮಾಸ್ಕ ಧರಿಸಿದರೆ ಒಳ್ಳೆಯದು ಹಾಗೂ ಅನಿವಾರ್ಯ. ಒಂದು ವೇಳೆ ಸಾಮಾನ್ಯ ಮಾಸ್ಕ್ ಧರಿಸಿದರೆ ಬೂದಿಯನ್ನು ತಡೆಹಿಡಿಯುವುದಿಲ್ಲ.
- ಹೆಚ್ಚು ಸಮಯ ಹೊರ ಪ್ರದೇಶದಲ್ಲಿ ಅಂದರೆ ಬಯಲು ಪ್ರದೇಶದಲ್ಲಿ ಇರಬೇಡಿ. ವಾಯು ಮಾಲಿನ್ಯ ಹಾಗೂ ಬೂದಿ ಪ್ರಮಾಣ ಹೆಚ್ಚಾದಂತೆ ಆರೋಗ್ಯಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ.
- ಇನ್ನು ಗಾಳಿ ಶೃದ್ಧೀಕರಿಸುವ ಯಂತ್ರ ಬಳಸುವುದು ಉತ್ತಮ. ಜೊತೆಗೆ ಹೆಚ್ಚು ನೀರನ್ನ ಸೇವಿಸುವುದು ಒಳ್ಳೆಯದು.
- ಅಸ್ತಮಾ ಮತ್ತು ಹೃದಯ ಸಂಬಂಧಿ ರೋಗಿಗಳು ವಿಶೇಷವಾಗಿ ಎಚ್ಚರ ವಹಿಸಬೇಕು. ಹೆಚ್ಚು ಧೂಳು ಇರುವ ಪ್ರದೇಶದಲ್ಲಿ ಇರುವುದು ಹಾನಿಕಾರಕವಾಗುತ್ತದೆ.
ವಿಮಾನಯಾನ ವಿಳಂಬ ಏಕೆ?
ಬೂದಿ ಮಿಶ್ರಿತ ಗಾಳಿಯಲ್ಲಿ ವಿಮಾನ ಯಾನಕ್ಕೆ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಕಲ್ಲು ಮತ್ತು ಗಾಜಿನ ಕಣಗಳು ಮಿಶ್ರಿತ ಇರುವ ಈ ಬೂದಿಯಿಂದಾಗಿ ವಿಮಾನದ ಭಾಗಗಳಿಗೆ ಹಾನಿ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಮಾಲಿನ್ಯದ ಆಧಾರದ ಮೇಲೆ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಬಹುದು. ಎಂಜಿನ್ ಕಾರ್ಯಕ್ಷಮತೆಯ ವೈಪರೀತ್ಯಗಳು ಅಥವಾ ಕ್ಯಾಬಿನ್ ಹೊಗೆ ಅಥವಾ ವಾಸನೆ ಸೇರಿದಂತೆ ಯಾವುದೇ ಶಂಕಿತ ಬೂದಿ ಎದುರಾದಾಗ ತಕ್ಷಣ ವರದಿ ಮಾಡುವಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಜ್ವಾಲಾಮುಖಿ ಬೂದಿ ವಿಮಾನ ನಿಲ್ದಾಣದ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದರೆ, ಸಂಬಂಧಪಟ್ಟ ನಿರ್ವಾಹಕರು ತಕ್ಷಣವೇ ರನ್‌ವೇಗಳು, ಟ್ಯಾಕ್ಸಿವೇಗಳು ಮತ್ತು ಏಪ್ರನ್‌ಗಳನ್ನು ಪರಿಶೀಲಿಸಬೇಕು ಎಂದು DGCA ಹೇಳಿದೆ. ಈಗಾಗಲೇ ಅಕಾಸಾ ಏರ್, ಇಂಡಿಗೊ ಮತ್ತು ಕೆಎಲ್‌ಎಂ ಸೇರಿದಂತೆ ಹಲವು ಕಂಪನಿಗಳು ಕೆಲ ವಿಮಾನಗಳ ಹಾರಾಟವನ್ನು ರದ್ದು ಮಾಡಿವೆ.
Ethiopian volcano
ಇದು ಎಷ್ಟು ದಿನ ಮುಂದುವರಿಯಬಹುದು?
ಗಾಳಿಯ ದಿಕ್ಕು ಮತ್ತು ವೇಗದ ಮೇಲೆ ಇದು ಅವಲಂಬಿತವಾಗಿದೆ. ಗಾಳಿಯ ದಿಕ್ಕು ಹಾಗೂ ವೇಗ ಬದಲಾದಂತೆ ಬೂದಿ ಮಿಶ್ರತ ಗಾಳಿಯ ಚಲನೆಯ ದಿಕ್ಕು ಬದಲಾಗುತ್ತದೆ. ಸಾಮಾನ್ಯವಾಗಿ ಮೂರರಿಂದ ಏಳು ದಿನಗಳಲ್ಲಿ ಇದರ ಪರಿಣಾಮ ಕಡಿಮೆಯಾಗುತ್ತದೆ. ಆದರೆ ದೆಹಲಿಯಂತಹ ಪ್ರದೇಶಗಳಲ್ಲಿ ಹೆಚ್ಚು ಮಾಲಿನ್ಯವಿರುವುದರಿಂದ ಇದರ ಪರಿಣಾಮ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ ಅಥವಾ ಹೀಗೆಯೇ ಸ್ವಲ್ಪ ಕಾಲ ಮುಂದುವರಿಯಬಹುದು.

