PublicTV Explainer: ಇರಾನ್‌ನಲ್ಲಿ ಹಿಜಬ್‌ ವಿರುದ್ಧದ ಹೋರಾಟದ ಹೊತ್ತಲ್ಲೇ ನೂರಾರು ಶಾಲಾ ವಿದ್ಯಾರ್ಥಿನಿಯರಿಗೆ ವಿಷವಿಕ್ಕಿದ ದುರುಳರು – ಏನಾಗ್ತಿದೆ ಅಲ್ಲಿ?

Public TV
5 Min Read
iran students

ರಾನ್‌ನಲ್ಲಿ (Iran) ಪುರುಷ ಪ್ರಧಾನ ನಿಯಮಗಳ ವಿರುದ್ಧ ಮಹಿಳೆಯರ (Women) ಅಸಮಾಧಾನದ ಕಟ್ಟೆ ಒಡೆದಿದೆ. ಹಿಜಬ್‌ (Hijab) ಧರಿಸಿಲ್ಲ ಎಂಬ ಕಾರಣಕ್ಕೆ ನೈತಿಕ ಪೊಲೀಸ್‌ಗಿರಿಗೆ ಸುಂದರ ಯುವತಿ ಬಲಿಯಾಗಿದ್ದು, ಈ ದೇಶದ ಪ್ರತಿ ಮಹಿಳೆಯ ಒಡಲಲ್ಲಿ ಕಿಚ್ಚು ಹೊತ್ತಿಸಿತು. ಆಗ ಸಾವಿರಾರು ಮಹಿಳೆಯರು ಬೀದಿಗಿಳಿದು ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ದನಿಯೆತ್ತಿದರು. ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿತು. ಮಹಿಳೆಯರ ಆಕ್ರೋಶಕ್ಕೆ ಅಲ್ಲಿನ ಆಡಳಿತ ವ್ಯವಸ್ಥೆಯೇ ಒಂದು ಕ್ಷಣ ನಡುಗಿ ಹೋಯಿತು. ಇದರ ನಡುವೆಯೇ ಮಹಿಳೆಯರ ಹೋರಾಟ ಹತ್ತಿಕ್ಕಲು ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಯಿತು. ಇತ್ತ ಹೋರಾಟ ತೀವ್ರಗೊಂಡಿದ್ದರೆ ಅತ್ತ ಅದನ್ನು ಹತ್ತಿಕ್ಕುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆದವು. ಹೆಣ್ಣುಮಕ್ಕಳು ಶಿಕ್ಷಿತರಾದರೆ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾರೆಂಬ ಆತಂಕ ಇರಾನ್‌ನ ಆಡಳಿತ ವ್ಯವಸ್ಥೆಗೆ ಆತಂಕ ಮೂಡಿಸಿತು. ಹೀಗಾಗಿ ಅವರನ್ನು ಶಿಕ್ಷಣ ವಂಚಿತರನ್ನಾಗಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಅಂತಹ ಘನಘೋರ ಕುಕೃತ್ಯದ ಸನ್ನಿವೇಶಕ್ಕೆ ಇರಾನ್‌ ಸಾಕ್ಷಿಯಾಗಿದೆ.

ಹಿಜಬ್ ವಿರೋಧಿಸಿ ಇರಾನ್‌ನಾದ್ಯಂತ ಭಾರೀ ಪ್ರತಿಭಟನೆ ನಡೆದ ಬಳಿಕ ಇದೀಗ ದೇಶದಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿದೆ. ಹೆಣ್ಣುಮಕ್ಕಳು ವಿದ್ಯಾಭ್ಯಾಸ (Education) ಮಾಡಬಾರದು ಎಂಬ ಕಾರಣಕ್ಕೆ ಕೆಲ ಕಿಡಿಗೇಡಿಗಳು ನೂರಾರು ವಿದ್ಯಾರ್ಥಿನಿಯರಿಗೆ ವಿಷಪ್ರಾಶನ (Poisoning) ಮಾಡಿರುವುದು ಈಚೆಗೆ ವರದಿಯಾಗಿ ಸದ್ದು ಮಾಡಿತ್ತು. ಇರಾನ್‌ನಲ್ಲಿ ಹೆಣ್ಣುಮಕ್ಕಳ ಮೇಲೆ ಈ ರೀತಿ ದೌರ್ಜನ್ಯ ಏಕೆ ನಡೆಯುತ್ತಿದೆ? ಇದೆಲ್ಲ ಏಕೆ ನಡೆಯುತ್ತಿದೆ? ಇದಕ್ಕೆ ಮೂಲ ಕಾರಣವೇನು ಎಂಬೆಲ್ಲ ಪ್ರಶ್ನೆಗಳು ಕಾಡದೇ ಇರದು.

Iran female students

ಹೆಣ್ಣುಮಕ್ಕಳಿಗೆ ವಿಷವಿಕ್ಕಿದ್ರಾ ದುರುಳರು?
ಕೆಲ ದಿನಗಳ ಹಿಂದೆ ಇಸ್ಲಾಮಿಕ್ ರಾಷ್ಟ್ರದ ಶಾಲೆಯೊಂದರಲ್ಲಿ ನೂರಾರು ವಿದ್ಯಾರ್ಥಿನಿಯರಿಗೆ ವಿಷವುಣಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆಗೆ ಇರಾನ್‌ನ ಉಪ ಆರೋಗ್ಯ ಸಚಿವ ಯುನೆಸ್ ಪನಾಹಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕೆಲ ಕಿಡಿಗೇಡಿಗಳು ಹೆಣ್ಣುಮಕ್ಕಳ ಶಿಕ್ಷಣವನ್ನು ಸ್ಥಗಿತಗೊಳಿಸುವ ಉದ್ದೇಶದಿಂತ ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದರು.

ಹೆಣ್ಣುಮಕ್ಕಳಿಗೆ ವಿಷ ನೀಡಿರುವಂತಹ ಪ್ರಕರಣ ಇರಾನ್‌ನಲ್ಲಿ ಇದೇ ಮೊದಲ ಬಾರಿಗೆ ನಡೆದಿಲ್ಲ. ಕಳೆದ ವರ್ಷ ನವೆಂಬರ್‌ನಿಂದ ಇಂತಹ ಆಪಾದಿತ ಘಟನೆಗಳು ವರದಿಯಾಗುತ್ತಲೇ ಇದೆ. 2022ರ ನವೆಂಬರ್‌ನಿಂದ ಇರಾನ್‌ನಾದ್ಯಂತ ಸುಮಾರು 700 ವಿದ್ಯಾರ್ಥಿಗಳು ವಿಷಪ್ರಾಶನ ಮಾಡಲಾಗಿದೆ ಎನ್ನಲಾಗಿದೆ.

ನವೆಂಬರ್ 30 ರಂದು ಮೊದಲ ಘಟನೆ ಕೋಮ್ ನಗರದ ನೂರ್ ತಾಂತ್ರಿಕ ಶಾಲೆಯಲ್ಲಿ ವರದಿಯಾಗಿತ್ತು. ಅಂದು 18 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಫೆಬ್ರವರಿ ತಿಂಗಳಲ್ಲಿ ಬೊರುಜೆರ್ಡ್ ನಗರದ 4 ಶಾಲೆಗಳಲ್ಲಿ 194 ವಿದ್ಯಾರ್ಥಿನಿಯರಿಗೆ ವಿಷವುಣಿಸಲಾಗಿತ್ತು. ರಾಜಧಾನಿ ಟೆಹ್ರಾನ್ ಬಳಿಯ ಪಾರ್ಡಿಸ್‌ನಲ್ಲಿರುವ ಖಯ್ಯಾನ್ ಬಾಲಕಿಯರ ಶಾಲೆಯಲ್ಲಿ 37 ವಿದ್ಯಾರ್ಥಿಗಳು ವಿಷಪ್ರಾಶನಕ್ಕೊಳಗಾಗಿದ್ದರು ಎಂದು ವರದಿಯಾಗಿದೆ.

rat poison

ವಿಷಪ್ರಾಶನಕ್ಕೆ ನೂರಾರು ವಿದ್ಯಾರ್ಥಿನಿಯರು ಒಳಗಾಗಿದ್ದರೂ ಇಲ್ಲಿಯವರೆಗೆ ಯಾವುದೇ ಸಾವುಗಳು ವರದಿಯಾಗಿಲ್ಲ. ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ವಿಷ ಅಲ್ಪ ಪ್ರಮಾಣದಲ್ಲಿ ಹಾನಿ ಮಾಡುವಂತದ್ದಾಗಿದೆ. ಆದರೆ ವಿಷ ಸೇವಿಸಿದ ಬಳಿಕ ವಿದ್ಯಾರ್ಥಿಗಳಲ್ಲಿ ಉಸಿರಾಟದ ತೊಂದರೆ, ವಾಕರಿಕೆ, ತೆಲೆ ತಿರುಗುವಿಕೆ, ಆಯಾಸದಿಂದ ಬಳಲಿದ್ದಾರೆಂದು ವರದಿಯಾಗಿದೆ. ಎಲ್ಲಾ ವಿದ್ಯಾರ್ಥಿಗಳನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಪೋಷಕರು, ಹೋರಾಟಗಾರರ ಆಕ್ರೋಶ
ವಿದ್ಯಾರ್ಥಿನಿಯರಿಗೆ ವಿಷವುಣಿಸಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೋಷಕರು, ಹೋರಾಟಗಾರರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ದೇಶಾದ್ಯಂತ ಸಂತ್ರಸ್ತರ ಪೋಷಕರು ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕರ ವಿರುದ್ಧ ಪ್ರತಿಭಟನೆ ನಡೆಸಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ಎಲ್ಲಾ ಅವಾಂತರಗಳಿಗೂ ಅಧಿಕಾರಿಗಳು ಉತ್ತರ ನೀಡಬೇಕೆಂದು ಪೋಷಕರು ಪಟ್ಟು ಹಿಡಿದಿದ್ದಾರೆ.

ವಿಷಪ್ರಾಶನಕ್ಕೆ ಕಾರಣವೇನು?
ಇರಾನ್‌ನಲ್ಲಿ ವಿದ್ಯಾರ್ಥಿನಿಯರಿಗೆ ವಿಷವುಣಿಸಲು ಕಾರಣವೇನು ಎಂಬುದಕ್ಕೆ ನಿರ್ದಿಷ್ಟವಾದ ಉತ್ತರವಿಲ್ಲ. ಕೆಲವರು ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ದೂರವಿರಿಸಲು ಈ ರೀತಿಯ ಕಿಡಿಗೇಡಿತನದ ಕೆಲಸ ಮಾಡುತ್ತಿದ್ದಾರೆ ಎಂಬುದು ಕೆಲವರ ಮಾತು. ಹೆಣ್ಣುಮಕ್ಕಳ ಪೋಷಕರನ್ನು ಭಯಭೀತಗೊಳಿಸಲು ಹಾಗೂ ತಮ್ಮ ಮಕ್ಕಳನ್ನು ಶಾಲೆಗೆ ಹೋಗದಂತೆ ತಡೆಯಲು ಹೀಗೆ ಮಾಡಲಾಗುತ್ತಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಇನ್ನೂ ಕೆಲವರ ಅಭಿಪ್ರಾಯವೇನೆಂದರೆ, ಕಳೆದ ವರ್ಷ ಹಿಜಬ್ ಧರಿಸಿಲ್ಲ ಎಂದು ನೈತಿಕ ಪೊಲೀಸ್‌ಗಿರಿಗೆ ಯುವತಿಯೊಬ್ಬಳು ಬಲಿಯಾಗಿದ್ದಳು. ಹಿಜಬ್ ಅನ್ನು ವಿರೋಧಿಸಿದ್ದ ಯುವತಿ ಮಹ್ಸಾ ಆಮಿನಿ ಸಾವಿನ ಬಳಿಕ ಇರಾನ್‌ನಾದ್ಯಂತ ಭಾರೀ ಪ್ರತಿಭಟನೆ ನಡೆದಿತ್ತು. ಯುವತಿ ಪರವಾಗಿ ಹಾಗೂ ಹಿಜಬ್ ವಿರೋಧಿಸಿ ನಡೆಸಲಾದ ಹಿಂಸಾಚಾರದಲ್ಲಿ ನೂರಾರು ಜನರ ಸಾವೂ ಸಂಭವಿಸಿತ್ತು. ಇದನ್ನೂ ಓದಿ: PublicTV Explainer: ಕರಗುತ್ತಿವೆ ಹಿಮಸರೋವರಗಳು – ಭಾರತ, ಪಾಕಿಸ್ತಾನದ ಜನರಿಗೆ ಕಾದಿದೆ ಪ್ರವಾಹದ ಅಪಾಯ!

iran students 1

ಸರ್ಕಾರ ಹೇಳೋದೇನು?
ವಿಷಪ್ರಾಶನದ ಪ್ರಕರಣಗಳು ಬೆಳಕಿಗೆ ಬಂದ ಸಂದರ್ಭದಲ್ಲಿ, ಈ ಘಟನೆಗಳು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿಲ್ಲ ಎಂದು ಸರ್ಕಾರ ತಿಳಿಸಿತ್ತು. ಶಾಲೆಗಳಲ್ಲಿ ಚಳಿಗಾಲದ ವೇಳೆ ವಾತಾವರಣವನ್ನು ಬೆಚ್ಚಗಿಡಲು ನೈಸರ್ಗಿಕ ಅನಿಲ ಬಿಸಿ ಮಾಡಲಾಗುತ್ತದೆ. ಇದರ ಕಾರ್ಬನ್ ಮಾನಾಕ್ಸೈಡ್ ವಿದ್ಯಾರ್ಥಿನಿಯರ ಮೇಲೆ ಪರಿಣಾಮ ಬೀರಿದೆ ಎಂದು ಆಪಾದನೆಯಿಂದ ಜಾರಿಕೊಳ್ಳುವ ಹೇಳಿಕೆಯನ್ನು ಸರ್ಕಾರ ನೀಡಿತ್ತು. ದೇಶದ ಶಿಕ್ಷಣ ಸಚಿವರೂ ಆರೋಪಗಳನ್ನು ವದಂತಿ ಎಂದು ತಳ್ಳಿ ಹಾಕಿದ್ದರು.

ಉಪ ಆರೋಗ್ಯ ಸಚಿವರು ಹೇಳ್ತಿರೋದೇನು?
ವಿಷ ಸೇವನೆಯ ಘಟನೆಗಳು ದೇಶದ ಹಲವೆಡೆ ವರದಿಯಾಗುತ್ತಿದ್ದಂತೆ ಇದು ಆಕಸ್ಮಿಕವಲ್ಲ ಎಂಬ ಅನುಮಾನ ಹೆಚ್ಚಾಗಿತ್ತು. ಬಳಿಕ ಇರಾನ್‌ನ ಪ್ರಾಸಿಕ್ಯೂಟರ್ ಜನರಲ್ ತನಿಖೆಗೆ ಆದೇಶಿಸಿದ್ದು, ಉದ್ದೇಶಪೂರ್ವಕವಾಗಿಯೇ ಇಂತಹ ಅಪರಾಧಗಳನ್ನು ಮಾಡುತ್ತಿರುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಘಟನೆ ಬಗ್ಗೆ ಗುಪ್ತಚರ ಸಚಿವಾಲಯವೂ ತನಿಖೆ ನಡೆಸಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ನಡೆದ ಘಟನೆಯನ್ನು ಉದ್ದೇಶಪೂರ್ವಕ ಕೃತ್ಯ ಎಂದು ಇರಾನ್‌ನ ಉಪ ಆರೋಗ್ಯ ಸಚಿವ ಯುನೆಸ್ ಪನಾಹಿ ಹೇಳಿದ್ದು, ಇದನ್ನು ಅಧಿಕೃತವಾಗಿ ದೃಢಪಡಿಸಲಾಗಿದೆ. ಕೋಮ್ ಶಾಲೆಯಲ್ಲಿ ವಿದ್ಯಾರ್ಥಿನಿಯರು ಅಸ್ವಸ್ಥರಾದ ಬಳಿಕ ಬಾಲಕಿಯರ ಶಾಲೆಯನ್ನು ಮುಚ್ಚಬೇಕೆಂದು ಕೆಲವರು ಆಗ್ರಹಿಸಿರುವುದು ತಿಳಿದುಬಂದಿದೆ. ಆದರೆ ಇಲ್ಲಿಯವರೆಗೆ ಘಟನೆಗೆ ಸಂಬಂಧಿಸಿದಂತೆ ಯಾವ ಆರೋಪಿಗಳನ್ನೂ ಬಂಧಿಸಲಾಗಿಲ್ಲ.

WOMEN PROTEST in iran

ಏನಿದು ಹಿಜಬ್‌ ವಿರೋಧಿ ಹೋರಾಟ?
ಮಹ್ಸಾ ಅಮಿನಿ ಯುವತಿ ಹಿಜಬ್‌ ಧರಿಸಿಲ್ಲ ಎಂಬ ಕಳೆದ ವರ್ಷ ಕಾರಣಕ್ಕೆ ಆಕೆಯನ್ನು ಬಂಧಿಸಲಾಗಿತ್ತು. ನೈತಿಕ ಪೊಲೀಸ್‌ಗಿರಿಗೆ ಆಕೆ ಬಲಿಯಾಗಿದ್ದಳು. ಸಾವಿನ ಸುದ್ದಿ ಬಹಿರಂಗವಾಗುತ್ತಿದ್ದಂತೆ ಇರಾನ್‌ನಲ್ಲಿ ಸಾವಿರಾರು ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದರು. ಯುವತಿ ಸಾವಿನ ಬಳಿಕ ಇರಾನ್‌ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಸುಮಾರು 14,000 ಮಂದಿಯನ್ನು ಆಗ ಬಂಧಿಸಲಾಗಿತ್ತು. ಅವರಲ್ಲಿ ಸಾವಿರಾರು ಪುರುಷರು, ಮಹಿಳೆಯರು, ಮಕ್ಕಳೂ ಸೇರಿದ್ದರು. ಮಾತ್ರವಲ್ಲದೇ ಹಿಜಬ್ ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸಿ ಹಲವರು ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸಿಕೊಂಡು, ನಡುರಸ್ತೆಯಲ್ಲೇ ಹಿಜಬ್‌ ಸುಟ್ಟು ಆಕ್ರೋಶ ಹೊರಹಾಕಿದ್ದರು. ಈ ಎಲ್ಲಾ ಘಟನೆ ವಿರುದ್ಧ ಸೇಡು ತೀರಿಸಿಕೊಳ್ಳಲು ಹಾಗೂ ಹೆಣ್ಣುಮಕ್ಕಳನ್ನು ನಿಯಂತ್ರಣದಲ್ಲಿರಿಸುವ ಸಲುವಾಗಿ ವಿಷವುಣಿಸುವಂತಹ ಕೃತ್ಯ ನಡೆಸಲಾಗುತ್ತಿದೆ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: PublicTV Explainer: ಟರ್ಕಿಯಲ್ಲೇ ಹೆಚ್ಚು ಭೂಕಂಪ ಯಾಕೆ? – ಇಲ್ಲಿದೆ ವೈಜ್ಞಾನಿಕ ಕಾರಣ..

(2014ರಲ್ಲಿ ಇರಾನ್‌ನ ಇಸ್ಫಹಾನ್ ನಗರದಲ್ಲಿ ಮಹಿಳೆಯರ ಮೇಲೆ ಸರಣಿ ಆಸಿಡ್ ದಾಳಿ ನಡೆದಿತ್ತು. ಸಂತ್ರಸ್ತರಲ್ಲಿ ಹೆಚ್ಚಿನವರು ಇಸ್ಲಾಮಿಕ್ ಮಾನದಂಡಗಳಿಗೆ ಅನುಗುಣವಾಗಿ ಬಟ್ಟೆ, ಹಿಜಬ್ ಅನ್ನು ಧರಿಸಿರಲಿಲ್ಲ ಎಂಬುದು ಕಂಡುಬಂದಿದೆ.)

Share This Article
Leave a Comment

Leave a Reply

Your email address will not be published. Required fields are marked *