ವಜ್ರ (Diamond) ಅತ್ಯಂತ ದುಬಾರಿ ಹಾಗೂ ಬೆಲೆ ಬಾಳುವ ಹರಳು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇವು ಭೂಮಿಯಡಿಯಲ್ಲಿ ಅದೆಷ್ಟೋ ವರ್ಷಗಳ ಹಿಂದೆ ಶಾಖ ಹಾಗೂ ರಾಸಾಯನಿಕ ಕ್ರಿಯೆಗಳಿಂದ ನೈಸರ್ಗಿಕವಾಗಿ ತಯಾರಾಗುತ್ತವೆ. ಆದರೆ ಇತ್ತೀಚೆಗೆ ಭಾರತದಲ್ಲಿ ಕೃತಕ ವಜ್ರಗಳು ಸದ್ದು ಮಾಡುತ್ತಿವೆ.
ಲ್ಯಾಬ್‌ಗಳಲ್ಲಿ ಕಡಿಮೆ ಸಮಯದಲ್ಲಿ ಕೃತಕ ವಜ್ರಗಳನ್ನು ಹೇಗೆ ತಯಾರಿಸಲಾಗುತ್ತೆ? ಕೃತಕ ವಜ್ರಗಳು ನಿಜವಾಗಿಯೂ ಅಸಲಿ ವಜ್ರಗಳಿಗೆ ಸರಿಸಾಟಿಯಾಗಬಲ್ಲದೇ? ಅದರ ಬೆಲೆ ನೈಸರ್ಗಿಕ ವಜ್ರಗಳಷ್ಟೇ ಇರುತ್ತದೆಯೇ? ಕೃತಕ ಹಾಗೂ ನೈಸರ್ಗಿಕ ವಜ್ರಗಳ ವ್ಯತ್ಯಾಸ ಹೇಗಿರಲಿದೆ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನಿಮಗಿಲ್ಲಿ ಸಿಗಲಿದೆ.
Advertisement
Advertisement
ಏನಿದು ಕೃತಕ ವಜ್ರ?
ಕೃತಕ ವಜ್ರಗಳನ್ನು ಲ್ಯಾಬ್‌ಗಳಲ್ಲಿ ತಯಾರಿಸಲಾಗುತ್ತದೆ (Lab Grown Diamonds). ಇವು ಭೌತಿಕವಾಗಿ ಹಾಗೂ ನೋಡಲು ಸಹ ನೈಸರ್ಗಿಕ ವಜ್ರಗಳಂತೆಯೇ ಇರುತ್ತವೆ. 1950ರ ದಶಕದಲ್ಲೇ ಕೃತಕ ವಜ್ರವನ್ನು ಕಂಡುಹಿಡಿಯಲಾಗಿದೆ. ಆದರೆ ಇದು ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಸುಮಾರು 10 ವರ್ಷಗಳ ಹಿಂದೆ ಈ ಕೃತಕ ವಜ್ರಗಳ ಮಾರಾಟ ಪ್ರಾರಂಭವಾಗಿದೆ. ಇದೀಗ ಭಾರತದಲ್ಲೂ ಕೃತಕ ವಜ್ರ ತಯಾರಿಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತು ಈಚೆಗೆ ಮಂಡಿಸಲಾದ ಬಜೆಟ್‌ನಲ್ಲಿ ಕೂಡ ಪ್ರಸ್ತಾಪಿಸಲಾಗಿದೆ.
Advertisement
ನೈಸರ್ಗಿಕ ವಜ್ರಗಳು ಹೇಗಾಗುತ್ತವೆ?
ನಾವು ಕೃತಕ ವಜ್ರಗಳ ಬಗ್ಗೆ ಮಾತನಾಡುವುದಕ್ಕೂ ಮೊದಲು ನೈಸರ್ಗಿಕ ವಜ್ರಗಳು ಹೇಗೆ ತಯಾರಾಗುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ವಜ್ರಗಳು ಇಂಗಾಲ ಹರಳುಗಟ್ಟಿರುವ ಸ್ಥಿತಿ. ಭೂಮಿಯ ಅಂತರಾಳದಲ್ಲಿ ಎಂದರೆ, ಸುಮಾರು 200 ಕಿ.ಮೀ ಆಳದಲ್ಲಿ ಶೇಖರವಾದ ಇಂಗಾಲವು ಅತಿ ಶಾಖ ಹಾಗೂ ಒತ್ತಡಕ್ಕೆ ಸಿಲುಕಿ ಕಲ್ಲಾಗಿ ಪರಿವರ್ತನೆಯಾಗುತ್ತದೆ. ಇದುವೇ ವಜ್ರಗಳು. ಇದನ್ನು ಭೂಮಿಯಿಂದ ಹೊರತೆಗೆದು, ಆಕರ್ಷಕ ಆಕಾರದಲ್ಲಿ ವಿನ್ಯಾಸಗೊಳಿಸಿದರೆ ಅವು ದುಬಾರಿ ಹರಳುಗಳಾಗುತ್ತವೆ.
Advertisement
ಕೃತಕ ವಜ್ರಗಳನ್ನ ತಯಾರಿಸೋದು ಹೇಗೆ?
ನೈಸರ್ಗಿಕ ವಜ್ರಗಳು ತಯಾರಾಗುವ ವಿಧಾನದಲ್ಲಿಯೇ ಕೃತಕ ವಜ್ರಗಳನ್ನೂ ಮಾಡಲಾಗುತ್ತದೆ. ಆದರೆ ಇವುಗಳನ್ನು ಭೂಮಿಯಡಿಯಲ್ಲಿ ತಯಾರಿಸುವ ಬದಲು ಲ್ಯಾಬ್‌ಗಳಲ್ಲಿ ಮಾಡಲಾಗುತ್ತದೆ. ಇಂಗಾಲಕ್ಕೆ ನಿರ್ದಿಷ್ಟ ಶಾಖ ಹಾಗೂ ಒತ್ತಡವನ್ನು ನೀಡಿ, ವಜ್ರವನ್ನಾಗಿ ಮಾಡಲಾಗುತ್ತದೆ. ಲ್ಯಾಬ್ ನಿರ್ಮಿತ ವಜ್ರ ನಿರ್ಮಾಣಕ್ಕೆ 15ರಿಂದ 30 ದಿನಗಳ ಸಮಯ ಹಿಡಿಯಲಿದೆ.
ವಜ್ರ ವಿನ್ಯಾಸಕ್ಕೆ ಭಾರತ ಫೇಮಸ್:
ವಿಶ್ವದಲ್ಲಿಯೇ ಮೊದಲಿಗೆ ದಕ್ಷಿಣ ಭಾರತದಲ್ಲಿ ವಜ್ರದ ನಿಕ್ಷೇಪಗಳು 9 ನೆಯ ಶತಮಾನದಲ್ಲಿ ಪತ್ತೆಯಾದವು. ಅಲ್ಲಿಂದ 18ನೆಯ ಶತಮಾನದ ಮಧ್ಯಭಾಗದವರೆಗೆ ಭಾರತವು ವಜ್ರದ ಏಕೈಕ ಉತ್ಪಾದಕ ರಾಷ್ಟ್ರವಾಗಿತ್ತು. ನಂತರ ಇಲ್ಲಿನ ನಿಕ್ಷೇಪಗಳು ಬರಿದಾಗತೊಡಗಿ ಬ್ರೆಜಿಲ್‌ನಲ್ಲಿ ವಜ್ರದ ನಿಕ್ಷೇಪಗಳು ಪತ್ತೆಯಾಗಿ, ಅಲ್ಲಿ ಉತ್ಪಾದನೆ ಆರಂಭವಾಯಿತು. 1870ರ ದಶಕದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿ ವಜ್ರದ ಅದಿರು ಪತ್ತೆಯಾದ ಮೇಲೆ ವಜ್ರೋದ್ಯಮ ಬೃಹತ್ ಪ್ರಮಾಣದಲ್ಲಿ ಬೆಳೆಯಿತು. ಈಗ ಅಲ್ಲಿ ಮಾತ್ರವಲ್ಲದೆ ಕೆನಡಾ, ಜಿಂಬಾಬ್ವೆ, ಅಂಗೋಲ ಮತ್ತು ರಷ್ಯಾಗಳಲ್ಲಿ ಸಹ ವಜ್ರದ ಗಣಿಗಳಿವೆ. ಇಲ್ಲಿನ ಸಿಗುವ ವಜ್ರಗಳನ್ನು ಭಾರತಕ್ಕೆ ಕಳುಹಿಸಿ ಅಲಂಕರಿಕವಾಗಿ ವಿನ್ಯಾಸಗೊಳಿಸಲಾಗುತ್ತದೆ. ವಜ್ರದ ಹರಳುಗಳನ್ನು ವಿನ್ಯಾಸಗೊಳಿಸಲು ಭಾರತದ ಗುಜರಾತ್ ರಾಜ್ಯ ಫೇಮಸ್ ಆಗಿದೆ. ವಜ್ರಗಳನ್ನು ವಿನ್ಯಾಸಗೊಳಿಸಿ ಆಭರಣಗಳಾಗಿ ರೂಪಿಸಿ ಒದಗಿಸುವ ಕಾರ್ಯವನ್ನು ಭಾರತದಲ್ಲಿ ಸುಮಾರು 25 ಕಂಪನಿಗಳು ಮಾಡುತ್ತಿವೆ.
ನೈಸರ್ಗಿಕ-ಕೃತಕ ವಜ್ರಗಳ ನಡುವಿನ ವ್ಯತ್ಯಾಸ?
ಎಷ್ಟೇ ಆಗಲಿ.. ನೈಸರ್ಗಿಕ ವಜ್ರವೇ ಬೇರೆ, ಕೃತಕ ವಜ್ರವೇ ಬೇರೆ ಎಂದು ವಾದಿಸುವವರು ಇದ್ದಾರೆ. ಆದರೆ ಇವೆರಡರ ನಡುವೆ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಎರಡೂ ರೀತಿಯ ವಜ್ರಗಳನ್ನೂ ಒಂದೇ ಮೂಲಧಾತುಗಳಿಂದ ರೂಪಿಸಲಾಗುತ್ತದೆ. ಅಸಲಿ ವಜ್ರ ಹಾಗೂ ಲ್ಯಾಬ್‌ಗಳಲ್ಲಿ ತಯಾರಿಸುವ ವಜ್ರಗಳ ನಡುವಿನ ವ್ಯತ್ಯಾಸವನ್ನು ಪತ್ತೆಹಚ್ಚಲು ಸಾಧ್ಯವಾಗುವುದೇ ಇಲ್ಲ. ವಜ್ರವನ್ನು ಪ್ರಾಮಾಣೀಕರಿಸುವ ಯಾವ ಸಂಸ್ಥೆಗಳೂ ಇಲ್ಲ. ಇದನ್ನೂ ಓದಿ: PublicTV Explainer: ಟರ್ಕಿಯಲ್ಲೇ ಹೆಚ್ಚು ಭೂಕಂಪ ಯಾಕೆ? – ಇಲ್ಲಿದೆ ವೈಜ್ಞಾನಿಕ ಕಾರಣ..
ಕೃತಕ ವಜ್ರದಿಂದ ಸಿಗುವ ಪ್ರಯೋಜನವಾದರೂ ಏನು?
ವಜ್ರಗಳಂತಹ ದುಬಾರಿ ಹರಳಿಗಾಗಿ ಗಣಿಗಾರಿಕೆ ನಡೆಸಿ, ಭೂಮಿ ಹಾಗೂ ಕಾರ್ಮಿಕರನ್ನು ಶೋಷಿಸಲಾಗುತ್ತಿದೆ. ಭೂಮಿಯನ್ನು ಅಗೆದು, ಬೃಹತ್ ಗಣಿಗಾರಿಕೆ ಮಾಡುವುದರಿಂದ ಮಾಲಿನ್ಯ ಹೆಚ್ಚಾಗುತ್ತದೆ. ಮಾತ್ರವಲ್ಲದೇ ಈ ವೇಳೆ ಅದೆಷ್ಟೋ ಕಾರ್ಮಿಕರ ಬಲಿಯಾಗುತ್ತದೆ. ಆದರೆ ಲ್ಯಾಬ್‌ಗಳಲ್ಲಿ ತಯಾರಿಸಲಾಗುವ ವಜ್ರಗಳಿಂದ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇದು ನಿಸರ್ಗಕ್ಕೆ ಬಹು ದೊಡ್ಡ ಕೊಡುಗೆಯಾಗಲಿದೆ.
ಕೃತಕ ವಜ್ರಗಳ ಬೆಲೆ ಎಷ್ಟು?
ನೈಸರ್ಗಿಕ ವಜ್ರಗಳಿಗಿಂತ ಲ್ಯಾಬ್‌ಗಳಲ್ಲಿ ತಯಾರಿಸಲಾಗುವ ವಜ್ರಗಳ ಬೆಲೆ ಶೇ.50 ರಷ್ಟು ಕಡಿಮೆ ಇದೆ. ಇದೀಗ ಪರಿಸರ ಸಂವೇದನೆಯ ಉತ್ಪನ್ನಗಳನ್ನು ಖರೀದಿಸಲು ವಿಶ್ವದಾದ್ಯಂತ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದ್ದರಿಂದ ಕೃತಕ ವಜ್ರಗಳಿಗೆ ಬೇಡಿಕೆಯೂ ನಿಧಾನವಾಗಿ ಹೆಚ್ಚಲಿದೆ.
ಕೃತಕ ವಜ್ರಕ್ಕೆ ಕೇಂದ್ರ ಬಜೆಟ್‌ನಲ್ಲಿ ಉತ್ತೇಜನ:
ನೈಸರ್ಗಿಕ ವಜ್ರದ ಥರವೇ ಕಾಣುವ ಹಾಗೂ ಅದೇ ಗುಣಮಟ್ಟ ಹೊಂದಿರುವ ಲ್ಯಾಬ್ ನಿರ್ಮಿತ ವಜ್ರದ ಸಂಶೋಧನೆ ಹಾಗೂ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಯೋಗಾಲಯಗಳಲ್ಲಿ ಕೃತಕವಾಗಿ ವಜ್ರ ತಯಾರಿಕೆ ಬಗ್ಗೆ ಯಾವುದಾದರೂ ಒಂದು ಐಐಟಿಯಲ್ಲಿ ಐದು ವರ್ಷ ಸಂಶೋಧನೆ ನಡೆಸಲು ಅನುದಾನ ಒದಗಿಸಲಾಗುವುದು ಎಂದು ಬಜೆಟ್ ಮಂಡನೆ ವೇಳೆ ಘೋಷಿಸಲಾಗಿದೆ. ಆಮದಿನ ಮೇಲೆ ಅವಲಂಬಿತರಾಗದೇ ದೇಶದಲ್ಲೇ ಕಡಿಮೆ ವೆಚ್ಚದಲ್ಲಿ ಲ್ಯಾಬ್ ನಿರ್ಮಿತ ವಜ್ರಗಳನ್ನು ರೂಪಿಸುವ ಗುರಿ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಲಿವೆ. ದೇಶದ ವಜ್ರದ ರಾಜಧಾನಿ ಎನಿಸಿಕೊಂಡಿರುವ ಗುಜರಾತ್‌ನ ಸೂರತ್‌ನಲ್ಲಿ ಲ್ಯಾಬ್ ನಿರ್ಮಿಸುವ ಉದ್ದೇಶವಿದೆ. ಲ್ಯಾಬ್ ನಿರ್ಮಿತ ವಜ್ರ ನಿರ್ಮಾಣಕ್ಕೆ 15ರಿಂದ 30 ದಿನಗಳ ಸಮಯ ಹಿಡಿಯಲಿದೆ. ಇದನ್ನೂ ಓದಿ: PublicTV Explainer: ಕ್ಷಣ ಕಾಲ ನಿಂತು ವಿರುದ್ಧ ದಿಕ್ಕಿನಲ್ಲಿ ತಿರುಗುತ್ತಾ ಭೂಮಿ? – ಭೂಗರ್ಭದ ರಹಸ್ಯ ಬಿಚ್ಚಿಟ್ಟ ವಿಜ್ಞಾನಿಗಳು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k