ಇತ್ತೀಚಿಗಷ್ಟೇ ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿರುವ (Uttarakashi) ಧರಾಲಿ (Dharali) ಗ್ರಾಮದಲ್ಲಿ ಬೆಚ್ಚಿ ಬೀಳಿಸುವಂತಹ ಭಯಾನಕ ಘಟನೆ ಎಂದು ಸಂಭವಿಸಿತು. ಕ್ಷಣಾರ್ಧದಲ್ಲಿ ಊರಿಗೆ ಊರೇ ಕೊಚ್ಚಿಕೊಂಡು ಹೋಗಿ ಸರ್ವನಾಶವಾಯಿತು. ಬೆಟ್ಟದಿಂದ ರೌದ್ರಾವತಾರದಲ್ಲಿ ಹರಿದು ಬಂದ ನೀರು ಗ್ರಾಮವನ್ನೇ ನೆಲಸಮಗೊಳಿಸಿತು. ಈ ದುರಂತಕ್ಕೂ ಮುನ್ನ ಈ ಧರಾಲಿ ಗ್ರಾಮ ಒಂದು ಸುಂದರ ತಾಣ. ಧಾರ್ಮಿಕ ಮತ್ತು ಪೌರಾಣಿಕ ಮಹತ್ವದ ಒಂದು ನೆಲೆ. ಯಾತ್ರೆಗಳಿಗೆ ಹೋಗುವವರಿಗೆ ಒಂದು ನೆಮ್ಮದಿಯ ತಂಗುದಾಣವಾಗಿತ್ತು. ಎಲ್ಲವೂ ಬದಲಾಗಿದೆ. ಹಿಂದೆ ಇಲ್ಲೊಂದು ಪ್ರದೇಶವಿತ್ತು ಎಂಬುದನ್ನೇ ಅಳಿಸಿ ಹಾಕಿದೆ.
ಸಾಮಾನ್ಯವಾಗಿ ಉತ್ತರ ಭಾರತದ (North India) ಉತ್ತರ ಗಡಿಯಲ್ಲಿರುವ ರಾಜ್ಯಗಳಾದ ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಇವೆಲ್ಲವೂ ಹಿಮಾಲಯ ಬೆಟ್ಟಗಳಿಂದ ಸುತ್ತುವರೆದಿದೆ. ಇನ್ನು ಮಳೆಗಾಲದಲ್ಲಿ ಮಳೆಯ ಪ್ರಮಾಣವೂ ಹೆಚ್ಚಾಗಿಯೇ ಇರುತ್ತದೆ. ಈ ಪ್ರದೇಶಗಳಲ್ಲಿ ಈ ಹಿಂದೆಯೂ ಹಲವು ಮೇಘಸ್ಫೋಟಗಳು (Cloudburst) ಸಂಭವಿಸಿದ್ದವು. ಇದರಿಂದ ಹಲವರು ಪ್ರಾಣ ಕಳೆದುಕೊಂಡರೆ, ಇನ್ನೂ ಕೆಲವರು ತಮ್ಮದನ್ನೆಲ್ಲ ಕಳೆದುಕೊಂಡು ಏನು ಇಲ್ಲದಂತೆ ಬದುಕುತ್ತಿದ್ದಾರೆ. ಇಂತಹ ಸ್ಥಿತಿಗೆ ಮತ್ತೊಮ್ಮೆ ಉತ್ತರ ಕಾಶಿಯ ಧರಾಲಿ ಗ್ರಾಮ ಉದಾಹರಣೆಯಾಗಿದೆ.
ಹೌದು, ಧರಾಲಿ ಗ್ರಾಮ ಈ ಮೇಘಸ್ಫೋಟಕ್ಕೂ ಮುನ್ನ ಹೇಗಿತ್ತು ಗೊತ್ತಾ? ಅದೊಂದು ನೈಸರ್ಗಿಕ ತಾಣವೇ ಹೌದು, ಈ ಗ್ರಾಮ ಭಗೀರಥಿ ನದಿಯಿಂದ ಸುತ್ತುವರೆಯಲ್ಟಟ್ಟಿದ್ದು, ಸೇಬು, ರಾಜಮ, ಪೈನ್, ಡಿಯೋಡರ್ ಕಾಡುಗಳು ಈ ಪ್ರದೇಶದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆಧ್ಯಾತ್ಮಿಕತೆ, ಸೌಂದರ್ಯ ಎಲ್ಲದರಿಂದಲೂ ಪರಿಪೂರ್ಣಗೊಂಡಿರುವ ಈ ಗ್ರಾಮವನ್ನು ದೇವರನಾಡು ಎಂದೇ ಕರೆಯುತ್ತಾರೆ. ಗಂಗೋತ್ರಿ ಹೆದ್ದಾರಿಯಲ್ಲಿ ಕಂಡುಬರುವ ಒಂದು ಅದ್ಭುತ ನಗರವೇ ಧರಾಲಿ. ಪ್ರಾಚೀನ ಕಾಲದಲ್ಲಿ ಋಷಿಮುನಿಗಳಿಗೆ ಇದೊಂದು ಧ್ಯಾನ ಮಾಡುವ ಸ್ಥಳವಾಗಿತ್ತು. ಇಲ್ಲಿನ ಸ್ಥಳೀಯ ಜಾನಪದ ಕಲೆಯು ಜನರನ್ನ ಪ್ರತಿಬಿಂಬಿಸುತ್ತದೆ.
ಈ ಗ್ರಾಮವು ಪ್ರವಾಸಿಗರನ್ನು ಕೈಬೀಸಿ ತನ್ನೆಡೆಗೆ ಕರೆಯುತ್ತದೆ. ಚಾರಣಕ್ಕೆ ಸೂಕ್ತವಾದ ಪ್ರದೇಶ. ಪಕ್ಷಿ ವೀಕ್ಷಣೆಗೆ ಮತ್ತು ಪ್ರಕೃತಿ ಪ್ರೇಮಿಗಳಿಗೆ ಇದೊಂದು ಸ್ವರ್ಗವೇ ಹೌದು. ಇಲ್ಲಿ ಹಿಮಾಲಯನ್ ಪಕ್ಷಿ ಪ್ರಭೇದಗಳ ಸೌಂದರ್ಯಕ್ಕೆ ಜನರು ಕರಗಿ ಹೋಗುವುದಂತೂ ಖಂಡಿತ. ಇನ್ನು ಚಾರ್ ಧಾಮ್ ಯಾತ್ರೆಗೆ (Chardham Yatra) ಹೋಗುವ ಯಾತ್ರಾರ್ಥಿಗಳಿಗೆ ಇದೊಂದು ನಿಲ್ದಾಣ. ಧರಾಲಿಯಿಂದ ಗಂಗಾ ನದಿಯ (Ganga River) ಉಗಮ ಸ್ಥಾನ ಗಂಗೋತ್ರಿಯು (Gangotri) ಕೇವಲ 20 ಕಿ.ಮೀ ದೂರದಲ್ಲಿದೆ. ಅದಲ್ಲದೆ ಗಂಗಾ ನದಿ ಎಂಬ ನೈಸರ್ಗಿಕ ಬಿಸಿನೀರಿನ ಬಗ್ಗೆಗಳು ಇಲ್ಲಿ ಕಂಡು ಬರುವುದರಿಂದ ಆಯುರ್ವೇದ ಚಿಕಿತ್ಸೆಗಾಗಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಹೀಗಾಗಿ ಇದೊಂದು ಜನಪ್ರಿಯ ತಾಣವಾಗಿದೆ.
ಇದೆಲ್ಲದರ ಹೊರತಾಗಿ ಧರಾಲಿಯಲ್ಲಿ ಪೌರಾಣಿಕ ಇತಿಹಾಸವನ್ನು ಹೊಂದಿರುವ ಒಂದು ದೇವಾಲಯವಿದೆ ಅದೇ ಕಲ್ಪ ಕೇದಾರ ದೇಗುಲ (Kalpa Kedar Temple). ಪಾಂಡವರು (Pandavas) ನಿರ್ಮಿಸಿದ್ದಾರೆ ಎಂದು ನಂಬಲಾಗಿರುವ ದೇವಾಲಯವೇ ಇದು. ಪ್ರಾಚೀನ ಕಾಲದಿಂದಲೂ ಉಳಿದುಕೊಂಡು ಬಂದಂತಹ ಆ ಯುಗದ ಕೊನೆಯ ಅವಶೇಷವೇ ಇದು. ಸಮುದ್ರಮಟ್ಟದಿಂದ 2,100 ಅಡಿ ಎತ್ತರದಲ್ಲಿರುವ ಈ ದೇವಾಲಯವನ್ನು ಆಧ್ಯಾತ್ಮಿಕ ರತ್ನವೆಂದು ಕರೆಯಲಾಗುತ್ತದೆ. ಪೌರಾಣಿಕ ಮಾಹಿತಿ ಪ್ರಕಾರ, ಪಾಂಡವರು ತಮ್ಮ ವನವಾಸದ ಸಂದರ್ಭದಲ್ಲಿ ಹಿಮಾಲಯಕ್ಕೆ ಭೇಟಿ ನೀಡಿದಾಗ ಈ ದೇವಾಲಯವನ್ನು ನಿರ್ಮಿಸಿದರು ಎನ್ನಲಾಗಿದೆ. 1935 ಮತ್ತು 1938ರ ನಡುವೆ ಹಿಮನದಿಯಿಂದಾಗಿ ಈ ದೇಗುಲ ಹೂತುಹೋಗಿತ್ತು. ಆದರೂ ಕೂಡ ಈ ಗುಮ್ಮಟ ಹಾಗೆ ಉಳಿದುಕೊಂಡು ಬಂದಿದೆ. ದೇವಾಲಯದ ಮೇಲ್ಭಾಗ ಕಾಲಭೈರವನ ಮುಖದಿಂದ ಅಲಂಕರಿಸಲ್ಪಟ್ಟಿದೆ. ಈ ದೇಗುಲದ ಇನ್ನೊಂದು ವಿಶೇಷತೆ ಏನೆಂದರೆ ಇದು ಐದು ಮುಖದ ಶಿವಲಿಂಗವನ್ನು ಹೊಂದಿದೆ. ಜೊತೆಗೆ ನಂದಿಯ ಬೆನ್ನಿನ ಆಕಾರದಲ್ಲಿ ಈ ಶಿವಲಿಂಗವಿದೆ. ಪ್ರತಿ ಮಳೆಗಾಲದಲ್ಲಿ ಖೀರ್ ಗಂಗಾ ನದಿಯು (Kheera Ganga) ಉಕ್ಕಿ ಹರಿಯುತ್ತದೆ. ಈ ಮೂಲಕ ನದಿಯ ನೀರು ಗರ್ಭಗುಡಿಯೊಳಗಿರುವ ಲಿಂಗವನ್ನು ಸ್ಪರ್ಷಿಸಿ ಅಭಿಷೇಕ ಮಾಡುತ್ತದೆ ಎಂಬ ನಂಬಿಕೆ ಇದೆ. ಈ ದೇವಾಲಯ ಭಾಗಶಃ ನೆಲದಲ್ಲಿ ಹುದುಗಿಕೊಂಡಿರುವ ರೀತಿಯಲ್ಲಿದೆ. ನಂಬಿಕೆಗಳ ಪ್ರಕಾರ ಶಿವನು ಪಾಪ ಮುಕ್ತಿಗಾಗಿ ದಶಕಗಳ ಕಾಲ ತನ್ನನ್ನು ತಾನು ಮರೆಮಾಡಿಕೊಂಡಿದ್ದನು ಎನ್ನಲಾಗುತ್ತದೆ. ಆದರೆ ಇತ್ತೀಚಿಗೆ ಸಂಭವಿಸಿದ ಪ್ರವಾಹದಿಂದಾಗಿ ಎಲ್ಲವು ಬದಲಾಗಿದೆ. ಶಿವಲಿಂಗದ ಮೇಲೆ ಹರಿಯುತ್ತಿದ್ದ ನದಿಯು ಈಗ ಇಡೀ ದೇವಾಲಯವನ್ನೇ ಆಕ್ರಮಿಸಿಕೊಂಡಿದೆ.
ಈ ದೇವಾಲಯದ ವಾಸ್ತುಶಿಲ್ಪ ಕೇದಾರನಾಥ ಧಾಮದಂತೆಯೇ (Kedarnath Dham) ಇದೆ. 1945ರಲ್ಲಿ ಗ್ರಾಮಸ್ಥರಿಗೆ ಈ ದೇವಸ್ಥಾನದ ಇರುವಿಕೆಯ ಕುರಿತು ಮಾಹಿತಿ ಬೆಳಕಿಗೆ ಬಂದಿತ್ತು. ದಿನಗಳೆದಂತೆ ಸ್ಥಳೀಯರು ಪೂಜೆ ಮಾಡಲು ಪ್ರಾರಂಭಿಸಿದರು. ಸುಮಾರು ಹಲವು ದಶಕಗಳಿಂದ ಹುದುಗಿಕೊಂಡಿರುವ 240 ದೇವಾಲಯಗಳ ಪೈಕಿ ಕಲ್ಪ ಕೇದಾರ ದೇವಾಲಯ ಒಂದೇ ಉಳಿದುಕೊಂಡಿದೆ. ಪೌರಾಣಿಕ ಸಂಪರ್ಕವನ್ನು ಹೊಂದಿದ್ದ ಈ ದೇವಾಲಯ ಮತ್ತೆ ಭೂಮಿಯ ಒಳಗೆ ಸೇರಿಕೊಂಡ ಹಾಗೆ ಆಗಿದೆ.
ಇದೀಗ ಧರಾಲಿ ಗ್ರಾಮದಲ್ಲಿ ಸಂಭವಿಸಿದ ಜಲಪ್ರಳಯಕ್ಕೆ ಇಡೀ ಗ್ರಾಮವೇ ಕೊಚ್ಚಿ ಹೋಗಿ ಐವರು ಸಾವನ್ನಪ್ಪಿದ್ದಾರೆ. ಇನ್ನು ಹಲವಾರು ಜನರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ತಜ್ಞರ ಮಾಹಿತಿ ಪ್ರಕಾರ ಇದು ಮೇಘಸ್ಪೋಟವಲ್ಲ, ಹಿಮ ಕೊಳ ಸ್ಫೋಟ ಎಂದು ಹೇಳುತ್ತಿದ್ದಾರೆ. ವಿನಾಶದ ಪ್ರಮಾಣದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭೀಕರತೆಯನ್ನ ತೋರಿಸುತ್ತಿದೆ.
ಹಿಂದೆ ಯಾವಾಗ ಮೇಘಸ್ಫೋಟವಾಗಿತ್ತು?
ಇದಕ್ಕೂ 2025ರಲ್ಲಿ ಮುನ್ನ ಹಿಮಾಚಲ ಪ್ರದೇಶದಲ್ಲಿ (Himachal Pradesh) ಮಳೆಯ ಪ್ರಮಾಣದಲ್ಲಿ ಏರಿಕೆಯಾಗಿ ಮಂಡಿ, ಕುಲ್ಲು, ಚಾಂಬಾ ರಸ್ತೆಗಳಲ್ಲಿ ಮೇಘ ಸ್ಫೋಟ ಉಂಟಾಗಿ ಭಾರೀ ದುರಂತ ಸಂಭವಿಸಿತ್ತು. ಈ ಸಮಯದಲ್ಲಿ ಮಳೆ ಸಂಭಂಧಿತ ಅವಘಡದಿಂದಾಗಿ 106 ಜನ ಸಾವನ್ನಪ್ಪಿದ್ದರು.
2012ರಲ್ಲಿ ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಪ್ರಭಾವದಿಂದಾಗಿ 31 ಜನ ಸಾವನ್ನಪ್ಪಿದ್ದರೆ, 40 ಜನ ನಾಪತ್ತೆಯಾಗಿದ್ದರು.
2010ರಲ್ಲಿ ಹಿಮಾಚಲ ಪ್ರದೇಶದ ಕರ್ಹಲ್ ಕಣಿವೆಯಲ್ಲಿ ಮೇಘ ಸ್ಫೋಟ ಸಂಭವಿಸಿ ಲಕ್ಷಾಂತರ ಮೌಲ್ಯದ ಆಸ್ತಿ ನಾಶವಾಗಿತ್ತು.