ಸುನಾಮಿ ಎಂದರೇನು? ಭೂಕಂಪಕ್ಕೂ ಇದಕ್ಕೂ ಏನು ಸಂಬಂಧ?

Public TV
5 Min Read
AI Image
AI Image

ನೈಸರ್ಗಿಕವಾಗಿ ಉಂಟಾಗುವ ಚಟುವಟಿಕೆಗಳ ಪೈಕಿ ಸುನಾಮಿ ಹಾಗೂ ಭೂಕಂಪನವೂ ಹೆಚ್ಚಿನ ಪರಿಣಾಮ ಬೀರುವ ಅಂಶಗಳು ಎಂದೇ ಹೇಳಬಹುದು. ಭೂಮಿಯಲ್ಲಾಗುವ ಕೆಲವು ವೈಜ್ಞಾನಿಕ ಪ್ರಕ್ರಿಯೆಗಳಿಂದ ಉಂಟಾಗುವ ನೈಸರ್ಗಿಕ ವಿದ್ಯಮಾನಗಳೇ ಸುನಾಮಿ ಹಾಗೂ ಭೂಕಂಪನ. ಇವೆರಡು ತನ್ನದೇ ಆದ ಕೆಲವು ಕಾರಣಗಳಿಂದ ಸೃಷ್ಟಿಯಾಗುತ್ತವೆ. ಕೆಲವೊಮ್ಮೆ ಮಾನವನ ಚಟುವಟಿಕೆಗಳು ಸಣ್ಣಮಟ್ಟದ ಭೂಕಂಪಕ್ಕೆ ಕಾರಣವಾಗುವ ಸಾಧ್ಯತೆಗಳು ಇರುತ್ತವೆ. ಹೀಗಿರುವಾಗ ಸುನಾಮಿಗೂ ಭೂಕಂಪಕ್ಕೂ ಏನು ವ್ಯತ್ಯಾಸ? ಇವೆರಡಕ್ಕೂ ಏನಾದರೂ ಸಂಬಂಧವಿದೆಯಾ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಸದ್ಯಕ್ಕೆ ರಷ್ಯಾ, ಚೀನಾ ದೇಶಗಳಲ್ಲಿ ನಿಸರ್ಗ ತನ್ನ ಅಬ್ಬರವನ್ನೇ ಶುರುಮಾಡಿದೆ. ಹೌದು ಇದೀಗ ರಷ್ಯಾದ ಕಮ್ಚಟ್ಕಾದಲ್ಲಿ ಸಂಭವಿಸಿದ 8.8 ತೀವ್ರತೆಯ ಭಾರಿ ಭೂಕಂಪದ ಬಳಿಕ ಚೀನಾದ ಪೂರ್ವ ಕರಾವಳಿಯಲ್ಲಿ ಚಂಡಮಾರುತದ ಆತಂಕ ಶುರುವಾಗಿದೆ. ಜೊತೆಗೆ ಪೆಸಿಫಿಕ್ ಸಾಗರದಾದ್ಯಂತ ಸುನಾಮಿಯ ಭೀತಿ ಹಬ್ಬಿಕೊಂಡಿದೆ. ಹೀಗಾಗಿ ಚೀನಾ ಹಾಗೂ ರಷ್ಯಾ ಎರಡು ದೇಶಗಳು ನೈಸರ್ಗಿಕ ವಿಪತ್ತನ್ನು ಎದುರಿಸುವ ಸ್ಥಿತಿಯಲ್ಲಿ ಒದ್ದಾಡುತ್ತಿವೆ.

Tsunami 2

ಕಮ್ಚಟ್ಕಾ ದ್ವೀಪದ ಪೆನಿನ್ಸುಲಾದಲ್ಲಿರುವ ಪೆಟ್ರೋಪಾವ್ಲೋವ್ಸಕ್‌ ನಿಂದ ಸುಮಾರು 136 ಕಿಲೋಮೀಟರ್ ದೂರದ 19 ಕಿ.ಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ. ಇದು 1952ರ ಬಳಿಕ ಸಂಭವಿಸಿದ ಅತೀ ಪ್ರಬಲ ಭೂಕಂಪವಾಗಿದೆ. ಅಮೆರಿಕದ ಅಲಾಸ್ಕಾದ ಭಾಗಗಳು ಹಾಗೂ ಜಪಾನ್‌ಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಬಂದರು ಪಟ್ಟಣವಾಗಿರುವ ಸೆವೆರೊ-ಕುರಿಲ್ಸ್ಕ್‌ ಕೆಲ ಭಾಗಗಳು ಈಗ ಸಮದ್ರ ನೀರಿನಲ್ಲಿ ಮುಳುಗಡೆಯಾಗಿದ್ದು, ಸುಮಾರು 2,000 ಜನರನ್ನು ಸ್ಥಳಾಂತರ ಮಾಡಲಾಗಿದೆ. ಸುನಾಮಿ ಪೀಡಿತ ಪ್ರದೇಶಗಳಲ್ಲಿ ಜನರು ಸಮುದ್ರಕ್ಕೆ ತೆರಳದಂತೆ ಧ್ವನಿವರ್ಧಕದ ಮೂಲಕ ಪ್ರಕಟಣೆಯನ್ನು ಹೊರಡಿಸಲಾಗಿದೆ.

japan tsunami 1

ಸುನಾಮಿ ಎಂದರೇನು?
ಸಾಗರದ ತಳಭಾಗದಲ್ಲಿ ಸಂಭವಿಸುವ ಭೂಕಂಪನದಿಂದ ಉಂಟಾಗುವ ಸಮುದ್ರದ ಬೃಹತ್ ಅಲೆಗಳನ್ನು ಸುನಾಮಿ ಎಂದು ಕರೆಯಲಾಗುತ್ತದೆ. ಸಣ್ಣ ಮಟ್ಟದಲ್ಲಿ ಭೂಕಂಪನ ಆದಾಗ ಹೆಚ್ಚಿನ ಪರಿಣಾಮ ಬೀರುವುದಿಲ್ಲ, ಆದರೆ ತೀವ್ರತೆಯ ಭೂಕಂಪನ ಉಂಟಾದಾಗ ಅಲೆಗಳ ಅಬ್ಬರ ಜೋರಾಗಿ ಸುತ್ತಮುತ್ತಲಿನ ದೇಶಗಳಿಗೆ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತವೆ. ಕೆಲವು ಸಂದರ್ಭದಲ್ಲಿ ಇಡೀ ಊರಿಗೆ ಊರೇ ಜಲಾವೃತವಾಗುವ ಸಂಭವವು ಇರುತ್ತದೆ. ಕೆಲವೊಮ್ಮೆ ಸಮುದ್ರದ ಅಡಿಯಲ್ಲಿ ಜ್ವಾಲಾಮುಖಿ ಸ್ಪೋಟವಾದಾಗ ನೀರಿನಲ್ಲಿ ಬಾರಿ ಚಲನೆ ಉಂಟಾದಾಗ ಸುನಾಮಿಯಾಗುವ ಸಂಭವ ಇರುತ್ತದೆ. ಜೊತೆಗೆ ಸಮುದ್ರದೊಳಗೆ ಭೂಕುಸಿತ ಉಂಟಾದಾಗ ಅಥವಾ ಹಿಮಪಾತ ಆದಾಗ ಸುನಾಮಿಗೆ ಕಾರಣವಾಗಬಹುದು.

ಸುನಾಮಿಗೆ ಕಾರಣಗಳೇನು?
* ಸಮುದ್ರದಲ್ಲಿ ತೀವ್ರತೆಯ ಭೂಕಂಪನವಾಗಿ ಬೃಹತ್ ಅಲೆಗಳು ಉಂಟಾದಾಗ, ಜ್ವಾಲಾಮುಖಿ ಸ್ಪೋಟ, ಗಾಳಿಯ ವೇಗ ಹೆಚ್ಚಾಗಿ ಅಪ್ಪಳಿಸುವ ಅಲೆಗಳಿಂದ, ಬಾಹ್ಯಾಕಾಶದಿಂದ ಭೂಮಿಗೆ ಬೀಳುವ ಉಲ್ಕಾಶಿಲೆಯಿಂದಲೂ ಸುನಾಮಿ ಉಂಟಾಗುವ ಸಾಧ್ಯತೆಗಳು ಇರುತ್ತವೆ.

ಅಬ್ಬರದ ಅಲೆಗಳು ದಡಕ್ಕೆ ಸಮೀಪಿಸುತ್ತಿದ್ದಂತೆ ಮತ್ತಷ್ಟು ಎತ್ತರಕ್ಕೆ ಹೋಗುತ್ತವೆ. ಕೆಲವೊಮ್ಮೆ 30 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಎತ್ತರಕ್ಕೆ ತಲುಪುತ್ತವೆ. ಇದರಿಂದ ಸುನಾಮಿಯು ಸುತ್ತಮುತ್ತಲಿನ ಪ್ರದೇಶಗಳಿಗೆ ವ್ಯಾಪಿಸುತ್ತದೆ. ಇದರಿಂದ ಜನವಸತಿ ಪ್ರದೇಶಗಳಲ್ಲಿ ಹಾನಿಯನ್ನು ಉಂಟುಮಾಡುತ್ತದೆ.

Tsunami 1

ಭೂಕಂಪನ ಎಂದರೇನು?
ಭೂಕಂಪ ಎಂದರೆ ಭೂಮಿಯ ಹೊರಪದರವು ಏಕಾಏಕಿ ತೀವ್ರ ಚಲನೆಯನ್ನು ಉಂಟುಮಾಡುತ್ತದೆ. ಇದರಿಂದ ನೆಲವು ತೀವ್ರವಾಗಿ ಅಲುಗಾಡಲು ಪ್ರಾರಂಭವಾಗುತ್ತದೆ. ಕೆಲವೊಮ್ಮೆ ಇದು ಭೂಕುಸಿತ, ಪ್ರವಾಹ ಮತ್ತು ಸುನಾಮಿಗೆ ಕಾರಣವಾಗಬಹುದು. ವೈಜ್ಞಾನಿಕವಾಗಿ ಹೇಳುವುದಾದರೆ ಭೂಮಿಯಲ್ಲಿ ಲಿಥೋಸ್ಫಿಯರ್ ಪರಸ್ಪರ ವಿರುದ್ಧವಾಗಿ ಚಲಿಸಿದಾಗ ಘರ್ಷಣೆ ಉಂಟಾಗುತ್ತದೆ.

ಮೇಲ್ಮೈಯಿಂದ ಘನವಾಗಿ ಕಾಣುವ ಭೂಮಿಯು ವಾಸ್ತವವಾಗಿ ಮೇಲ್ಮೈಗಿಂತ ಸ್ವಲ್ಪ ಕೆಳಗೆ ಅತ್ಯಂತ ಸಕ್ರಿಯವಾಗಿದೆ. ಇದು ನಾಲ್ಕು ಮೂಲಭೂತ ಪದರಗಳಿಂದ ಮಾಡಲ್ಪಟ್ಟಿದೆ. ಹೊರಪದರ, ನಿಲುವಂಗಿ, ಹೊರಭಾಗ ಮತ್ತು ಒಳಭಾಗ.ಲಿಥೋಸ್ಫಿಯರ್ ಘನವಾದ ಹೊರಪದರ ಮತ್ತು ನಿಲುವಂಗಿಯ ಗಟ್ಟಿಯಾದ ಪದರವನ್ನು ಒಳಗೊಂಡಿದೆ. ಲಿಥೋಸ್ಫಿಯರ್ ವಾಸ್ತವವಾಗಿ ಟೆಕ್ಟೋನಿಕ್ ಪ್ಲೇಟ್‌ಗಳು ಎಂದು ಕರೆಯಲ್ಪಡುವ ದೈತ್ಯ ಒಗಟು ತುಣುಕುಗಳಿಂದ ಮಾಡಲ್ಪಟ್ಟಿದೆ. ನಾಸಾ ಪ್ರಕಾರ, ನಿಧಾನವಾಗಿ ಹರಿಯುವ ನಿಲುವಂಗಿ ಪದರದ ಮೇಲೆ ಚಲಿಸುವಾಗ ಲಿಥೋಸ್ಫಿಯರ್ ನಿರಂತರವಾಗಿ ಬದಲಾಗುತ್ತಿರುತ್ತವೆ.

ಈ ನಿರಂತರ ಚಲನೆಯು ಭೂಮಿಯ ಹೊರಪದರದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಒತ್ತಡಗಳು ಜಾಸ್ತಿಯಾದಾಗ ಬಿರುಕುಗಳು ಉಂಟಾಗುತ್ತದೆ. ಚಲನೆಯಲ್ಲಿ ಅಡಚಣೆ ಉಂಟಾಗುತ್ತದೆ. ಇನ್ನೂ ಭೂಕಂಪ ಪ್ರಾರಂಭವಾಗುವ ಸ್ಥಳವನ್ನು ಭೂಕಂಪ ಕೇಂದ್ರ ಎಂದು ಕರೆಯಲಾಗುತ್ತದೆ. ಭೂಕಂಪದ ಅತ್ಯಂತ ತೀವ್ರವಾದ ಕಂಪನವು ಕೇಂದ್ರಬಿಂದುವಿನಲ್ಲಿ ಅನುಭವವಾಗುತ್ತದೆ.

Tsunami 3

ಇಲ್ಲಿಯವರೆಗೆ ಎಷ್ಟು ಭೂಕಂಪಗಳು ಸಂಭವಿಸಿವೆ?
ಭಾರತದ ರಾಷ್ಟ್ರೀಯ ಭೂಕಂಪ ಮಾಹಿತಿ ಕೇಂದ್ರದ ಪ್ರಕಾರ, ಪ್ರತಿ ವರ್ಷ ಜಗತ್ತಿನಾದ್ಯಂತ ಸುಮಾರು 20,000 ಭೂಕಂಪಗಳು, ದಿನಕ್ಕೆ ಸುಮಾರು 55 ಭೂಕಂಪಗಳು ಸಂಭವಿಸುತ್ತವೆ. ಅತಿ ಹೆಚ್ಚು ಭೂಕಂಪಗಳು ಸಂಭವಿಸಿದ ವರ್ಷ 2010, ಇದರಲ್ಲಿ 23 ಪ್ರಮುಖ ಭೂಕಂಪಗಳು (7.0 ಕ್ಕಿಂತ ಹೆಚ್ಚು ಅಥವಾ7) ಆಗಿತ್ತು.

ಭೂಕಂಪಕ್ಕೂ ಸುನಾಮಿಗೂ ಸಂಬಂಧವಿದೆಯಾ?
ಹೆಚ್ಚಾಗಿ ಸಮುದ್ರದಲ್ಲಿ ಉಂಟಾಗುವ ಭೂಕಂಪದಿಂದ ಸುನಾಮಿಗೆ ಕಾರಣವಾಗುತ್ತದೆ. ಭೂಮಿಯಲ್ಲಿ ಸಬ್ ಡಕ್ಷನ್ ಎಂಬ ವಲಯವಿರುತ್ತದೆ.

ಏನಿದು ಸಬ್ ಡಕ್ಷನ್ ವಲಯ?
ಭೂಮಿಯ ಮೇಲ್ಮೈಯನ್ನು ನಿರ್ಮಿಸುವ ಗಟ್ಟಿಯಾದ ಪದರಗಳನ್ನು ಟೆಕ್ಟೋನಿಕ್ ಲೇಟುಗಳು ಎಂದು ಕರೆಯುತ್ತಾರೆ. ಈ ಪ್ಲೇಟುಗಳು ಸದಾ ಚಲಿಸುತ್ತಿರುತ್ತವೆ. ಈ ಪ್ಲೇಟುಗಳು ಪರಸ್ಪರ ಡಿಕ್ಕಿಯಾದಾಗ ಒಂದು ಪ್ಲೇಟು ಇನ್ನೊಂದು ಪ್ಲೇಟಿನ ಕೆಳಗೆ ಹೋಗುತ್ತದೆ. ಇದರಿಂದ ರಚನೆ ಯಾಗುವ ವಲಯವನ್ನು ಸಬ್ ಡಕ್ಷನ್ ಎನ್ನುತ್ತಾರೆ. ಇಂತಹ ಸ್ಥಳಗಳಲ್ಲಿ ಹೆಚ್ಚಾಗಿ ಭೂಕಂಪ ಹಾಗೂ ಸುನಾಮಿ ಸಂಭವಿಸುತ್ತದೆ. ಇದ್ದಕ್ಕಿದ್ದಂತೆ ಪ್ಲೇಟ್ ಜಾರಿದಾಗ ಬೃಹತ್ ಪ್ರಮಾಣದ ಅಲೆಯು ಸೃಷ್ಟಿಯಾಗುತ್ತದೆ ಇದರಿಂದ ಸುನಾಮಿ ಉಂಟಾಗುತ್ತದೆ. ಕೆಲವೊಮ್ಮೆ ಒಂದು ಪ್ರದೇಶದಲ್ಲಿ 7ಕ್ಕಿಂತ ಹೆಚ್ಚಿನ ತೀವ್ರತೆಯಲ್ಲಿ ಭೂಕಂಪನ ಉಂಟಾದಾಗ ಸುನಾಮಿ ಎಚ್ಚರಿಕೆಯನ್ನೂ ನೀಡುತ್ತಾರೆ. ಆದರೆ ಎಲ್ಲಾ ಭೂಕಂಪಗಳು ಸುನಾಮಿಗೆ ಕಾರಣವಾಗುವುದಿಲ್ಲ. ಹೆಚ್ಚಿನ ಸಮಯದಲ್ಲಿ ಆಳವಿರುವ ಭೂಕಂಪಗಳು ಸುನಾಮಿಗೆ ಕಾರಣವಾಗುತ್ತವೆ. ಭೂಕಂಪ ಹಾಗೂ ಸುನಾಮಿ ಎರಡು ಅವಿನಾಭಾವ ಸಂಬಂಧವನ್ನು ಹೊಂದಿದೆ.

russia tsunami

ಈ ಹಿಂದೆ ಸಂಭವಿಸಿದ ಮಾರಕ ಸುನಾಮಿಗಳು:

  • 2004ರಲ್ಲಿ ಇಂಡೋನೇಷ್ಯಾದ ಸುಮತ್ರಾದ ಪಶ್ಚಿಮ ಕರಾವಳಿಯಲ್ಲಿ 9.1 ತೀವ್ರತೆಯ ಭೂಕಂಪ ಉಂಟಾದಾಗ ಅತ್ಯಂತ ವಿನಾಶಕಾರಿಯದ ಸುನಾಮಿ ಸಂಭವಿಸಿತ್ತು. ಈವರೆಗೂ ಇತಿಹಾಸದಲ್ಲಿ ದಾಖಲೆಯನ್ನು ಸೃಷ್ಟಿಸಿದ ಅತ್ಯಂತ ಮಾರಕ ಸುನಾಮಿ ಎಂದು ಹೇಳಬಹುದು. ಹಿಂದೂ ಮಹಾಸಾಗರದಲ್ಲಿ ಇದುವರೆಗೂ ಉಂಟಾಗಿರುವ ತೀವ್ರ ಸುನಾಮಿ ಇದಾಗಿದೆ. ಇದರಿಂದ ಥೈಲ್ಯಾಂಡ್, ಇಂಡೋನೇಷ್ಯಾ, ಶ್ರೀಲಂಕಾ, ಭಾರತ ಸೇರಿದಂತೆ ಇನ್ನಿತರ ದೇಶಗಳಲ್ಲಿ ಅಲೆಗಳನ್ನು ಹುಟ್ಟು ಹಾಕಿತ್ತು. ಈ ಸಮಯದಲ್ಲಿ 2.50 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು.
  • 2011ರಲ್ಲಿ ಜಪಾನ್ ದೇಶದ ತೂಹೋಕು ಎಂಬಲ್ಲಿ 9.0 ತೀವ್ರತೆಯ ಭೂಕಂಪ ಉಂಟಾದಾಗ ದೊಡ್ಡ ಮಟ್ಟದ ಸುನಾಮಿ ಉಂಟಾಗಿತ್ತು. ಈ ವೇಳೆ ಸುನಾಮಿ ಅಲೆಗಳು 40 ಮೀಟರ್ ಎತ್ತರಕ್ಕೆ ತಲುಪಿ ಸುತ್ತಮುತ್ತಲಿನ 15 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಜೊತೆಗೆ ಫುಕುಷಿಮಾ ಎಂಬಲ್ಲಿ ಅಣು ವಿದ್ಯುತ್ ಸ್ಥಾವರ ಹಾನಿಯಾಗಿತ್ತು
  • 2018 ರಲ್ಲಿ ಇಂಡೋನೇಷ್ಯಾದ ಅನಾಕ್ ಕ್ರಕಟೋವಾ ಸುನಾಮಿ ಉಂಟಾಗಿ 450ಕ್ಕೂ ಅಧಿಕ ಜನ ಸಾವನಪ್ಪಿದರು. ಜೊತೆಗೆ ಸುಡಾಕ್ರ ಮತ್ತು ಜಾವಾದ್ವೀಪಗಳಲ್ಲಿ ಹಾನಿಯಾಗಿತ್ತು.
  • 1945ರಲ್ಲಿ ಪಾಕಿಸ್ತಾನದಲ್ಲಿ ಉಂಟಾದ 8.1 ತೀವ್ರತೆಯ ಕಂಪನದಿಂದಾಗಿ ಮ್ಯಾಕ್ರಾನ್ ಸುನಾಮಿ ಉಂಟಾಗಿತ್ತು. ಈ ವೇಳೆ ಪಾಕಿಸ್ತಾನ, ಗುಜರಾತ್, ಕರ್ನಾಟಕ, ಕೊಂಕಣ ಭಾಗದಲ್ಲಿ ಸುನಾಮಿಯಿಂದಾಗಿ ಪ್ರಭಾವ ಬೀರಿತ್ತು. ಅರಬ್ಬಿ ಸಮುದ್ರದ ತಳದಲ್ಲಿ ಸಂಭವಿಸಿದ ಭೂಕಂಪದ ಭಾರತಕ್ಕೆ ತೀವ್ರವಾದ ಅಲೆಗಳು ಅಪ್ಪಳಿಸಿದ್ದವು.

Share This Article