LatestNational

EXCLUSIVE: ಆ ನಾಲ್ಕೇ ನಾಲ್ಕು ಇಂಗ್ಲೀಷ್ ವಾಕ್ಯಗಳು ಮಂತ್ರಿ ಕನಸು ಕಂಡವರಿಗೆ ಉರುಳಾಯ್ತು!

– ರಾಹುಲ್ ಗಾಂಧಿ ಜೊತೆಗಿನ ಸಭೆಯ ಇನ್‍ಸೈಡ್ ಸ್ಟೋರಿ
– ಬಿಸಿ ಪಾಟೀಲ್‍ಗೆ ಖೆಡ್ಡಾ ತೋಡಿದ್ದು ಒಂದೇ ವಾಕ್ಯ
– ಒಂದೇ ವಾಕ್ಯದಿಂದ ಜಾರಕಿಹೊಳಿ ತಲೆದಂಡ

ಬೆಂಗಳೂರು: ಸಂಪುಟ ವಿಸ್ತರಣೆಯ ಬೆನ್ನಲ್ಲೇ ಬಂಡಾಯದ ಸಂಕಟ ವಿಸ್ತರಣೆಯಾಗುತ್ತಿದ್ದು, ಅಸಮಾಧಾನ ಸ್ಫೋಟಗೊಳ್ಳುತ್ತಿದೆ. ಮಂತ್ರಿಗಿರಿ ಸಿಗದವರು ತೆರೆಮರೆಯಲ್ಲಿ ಮಸಲತ್ತು ಮಾಡುತ್ತಿರುವ ಈ ಹೊತ್ತಲ್ಲೇ ಇಟರೆಸ್ಟಿಂಗ್ ಇನ್ ಸೈಡ್ ಸ್ಟೋರಿಯೊಂದು ಹೊರಬಿದ್ದಿದೆ. 

ನಾನೂ ಮಂತ್ರಿ ಆಗಬೇಕು. ನಾನೂ ಮಂತ್ರಿ ಆಗ್ಬೇಕು ಅಂತ ಕಾಲರ್ ಏರಿಸಿ ಓಡಾಡ್ತಿದ್ದವರಿಗೆ ಹಳ್ಳ ತೋಡಿದ್ದು ಆ ನಾಲ್ಕೇ ನಾಲ್ಕು ಇಂಗ್ಲೀಷ್ ವಾಕ್ಯ. ನನಗೆ ಕೊಡದಿದ್ರೆ ಅಷ್ಟೇ ಅಂತ ಧ್ವನಿಯೇರಿಸಿ ಮಾತಾಡ್ತಿದ್ದವರ ಸದ್ದಡಗಿಸಿದ್ದೇ ಆ ನಾಲ್ಕೇ ನಾಲ್ಕು ಇಂಗ್ಲೀಷ್ ವಾಕ್ಯ.

ಹೌದು. ಸಂಪುಟ ವಿಸ್ತರಣೆಗೂ ಒಂದು ದಿನ ಮುನ್ನ ಅದರೆ ಶುಕ್ರವಾರ ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ರಾಗಾ ಗ್ರೀನ್ ಸಿಗ್ನಲ್ ಕೊಟ್ಟ ನಂತರವೇ ಪಟ್ಟಿ ಫೈನಲ್ ಆಗಿದ್ದೂ ತಿಳಿದಿರುವ ವಿಷಯವೇ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್ ಭಾಗಿಯಾಗಿದ್ದ ರಹಸ್ಯ ಸಭೆ ನಾಲ್ಕೇ ನಾಲ್ಕು ಇಂಗ್ಲೀಷ್ ವಾಕ್ಯಗಳ ಮೇಲೆಯೇ ಹೆಸರು ಅಂತಿಮವಾಗಿದ್ದು ಲೇಟೆಸ್ಟ್ ನ್ಯೂಸ್.

ಇಂಗ್ಲಿಷ್ ಫಿನಿಶ್ -1
ಮಂತ್ರಿಗಿರಿ ಕೊಡಿಸಲು ಬಿ.ಸಿ.ಪಾಟೀಲ್ ಪರ ಡಿಕೆ ಶಿವಕುಮಾರ್ ಮತ್ತು ಪರಮೇಶ್ವರ್ ಬ್ಯಾಟ್ ಬೀಸಿದ್ದರು. ಇನ್ನೇನು ರಾಹುಲ್ ಓಕೆ ಅಂತ ಮುದ್ರೆ ಒತ್ತಬೇಕು ಅಷ್ಟರಲ್ಲಿ ಬೇಡ ಬೇಡ ಅನ್ನೋ ಧ್ವನಿ ಕಿವಿಗಪ್ಪಳಿಸಿತ್ತು. ಹೌದು. ಈ ವೇಳೆ ಮಧ್ಯ ಪ್ರವೇಶಿಸಿದ್ದ ಸಿದ್ದರಾಮಯ್ಯ ಬಿ.ಸಿ ಪಾಟೀಲ್ ಬದಲಿಗೆ ಎಂ.ಬಿ ಪಾಟೀಲ್ ಪರ ಲಾಬಿ ಮಾಡಿದರು.

ಸದ್ಯ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಒಕ್ಕಲಿಗರು ಜೆಡಿಎಸ್ ಪರವಿದ್ದಾರೆ. ಭವಿಷ್ಯದಲ್ಲಿ ಕಾಂಗ್ರೆಸ್ಸಿಗೆ ಲಿಂಗಾಯತ ಮತಗಳು ಬೇಕೇ ಬೇಕು. ಹೀಗಾಗಿ ಹೈದರಾಬಾದ್ ಕರ್ನಾಟಕದಲ್ಲಿ ಈಶ್ವರ್ ಖಂಡ್ರೆ, ಮುಂಬೈ ಕರ್ನಾಟಕದಲ್ಲಿ ಎಂ.ಬಿ.ಪಾಟೀಲ್ ಅವರನ್ನು ಬೆಳೆಸಲೇಬೇಕು. ಎಂ.ಬಿ.ಪಾಟೀಲ್ ಮಂತ್ರಿ ಮಾಡಲೇಬೇಕು. “M.B.Patil is a emerging Lingayat Leader” ಎಂದು ಕಾರಣ ಸಮೇತ ಸಿದ್ದರಾಮಯ್ಯ ಹೇಳಿದ್ದೇ ತಡ ರಾಹುಲ್ ಹೌದು ಹೌದು ಎಂದು ತಲೆಯಾಡಿಸುತ್ತಾ ಓಕೆ ಅಂದಿದ್ರು. ಅಲ್ಲಿಗೆ M.B.Patil is a emerging Lingayat Leader ಅನ್ನೋ ಇಂಗ್ಲೀಷ್ ವಾಕ್ಯ ಬಿಸಿ ಪಾಟೀಲ್ ಆಸೆಗೆ ಅಂಕುಶ ಹಾಕಿತ್ತು.

ಇಂಗ್ಲಿಷ್ ಫಿನಿಶ್ – 2
ಸಭೆಯಲ್ಲಿ ಗೊಡ್ಡು ಬೆದರಿಕೆ ಹಾಕುತ್ತಿರುವ ಬಂಡಾಯಗಾರರ ಪ್ರಸ್ತಾಪವೂ ಆಯ್ತು. ಇದರಿಂದ ಕೆಂಡವಾದ ರಾಹುಲ್ ಗಾಂಧಿ We must Teach Blackmailers a lesson ಅಂತ ಅಬ್ಬರಿಸಿದ್ರು. Yes yes. They are all black mailers. Dr.Sudhakar is a show man ಅಂತ ರಾಹುಲ್ ಗಾಂಧಿಯ ಸಿಟ್ಟಿಗೆ ಒಗ್ಗರಣೆ ಹಾಕಿದ್ರು. ಎಲ್ಲರೂ ಸೇರಿ ರಮೇಶ್ ಜಾರಕಿಹೊಳಿ ತಲೆದಂಡಕ್ಕೆ ಷರಾ ಬರೆದರು.

ಇಂಗ್ಲೀಷ್ ಫಿನಿಶ್ – 3
ಬಳ್ಳಾರಿ ಭಾಗದಿಂದ ಯಾರು ಸಚಿವರಾಗಬೇಕು ಎನ್ನುವ ವಿಚಾರ ಚರ್ಚೆಗೆ ಬಂದಾಗ ಆನಂದ್ ಸಿಂಗ್ ಹಾಗೂ ನಾಗೇಂದ್ರ ಪರ ಸಿದ್ದರಾಮಯ್ಯ ನಿಂತಿದ್ದರು. ಆದರೆ ಇದಕ್ಕೆ ಕಡ್ಡಿಯಾಡಿಸಿದ ಡಿಕೆಶಿ They are migratory birds ಬೇರೆ ಪಕ್ಷದಿಂದ ವಲಸೆ ಬಂದವರನ್ನು ನಂಬಲು ಸಾಧ್ಯವಿಲ್ಲ ಎಂದು ಬಿಟ್ಟರು. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಡಿಕೆಯ ಚತುರ ಬುದ್ಧಿಗೆ ರಾಗಾ ಬೆನ್ನು ತಟ್ಟಿದರೆ, ಅತ್ತ ತುಕಾರಂಗೆ ಮಂತ್ರಿ ಪದವಿ ಹುಡುಕಿಕೊಂಡು ಬಂದಿತ್ತು.

ಇಂಗ್ಲೀಷ್ ಫಿನಿಶ್ – 4
ಇನ್ನು ಹಿರಿಯರೂ ಪ್ರಭಾವಿಗಳೂ ಆದ ರಾಮಲಿಂಗಾ ರೆಡ್ಡಿ ಹಾಗೂ ರೋಷನ್ ಬೇಗ್ ವಿಚಾರ ಪ್ರಸ್ತಾಪ ಆಯ್ತು. ಆಗ They have played enough role in state…Let them play national role ಅಂತ ಕಡ್ಡಿ ತುಂಡು ಮಾಡಿದಂತೆ ರಾಹುಲ್ ಗಾಂಧಿ ಮಾತನಾಡಿದರು. ಅವರಿಬ್ಬರೂ ಲೋಕಸಭಾ ಚುನಾವಣೆಗೆ ನಿಂತು ಗೆದ್ದು ದೆಹಲಿಗೆ ಬರಲಿ ಅನ್ನೋದು ರಾಗಾ ಲೆಕ್ಕಾಚಾರವಾಗಿತ್ತು.

ಒಟ್ಟಿನಲ್ಲಿ M.B.Patil is a emerging lingayat Leader, We must teach blackmailers a lesson. They are migratory birds, ಹಾಗೂ They have played enough role in state ಎಂಬ ನಾಲ್ಕು ಇಂಗ್ಲೀಷ್ ವಾಕ್ಯಗಳು ಸಂಪುಟ ವಿಸ್ತರಣೆಯ ಲೆಕ್ಕಾಚಾರವನ್ನೇ ಬುಡಮೇಲು ಮಾಡಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *

Back to top button