ಬೆಂಗಳೂರು: ಪಬ್ಲಿಕ್ ಟಿವಿಗೆ ಇಂದು 10ನೇ ವಸಂತ. 2012ರ ಫೆಬ್ರವರಿ 12ರಂದು ಲೋಕಾರ್ಪಣೆಗೊಂಡ ನಿಮ್ಮ ಪ್ರೀತಿಯ ಕೂಸು ಪಬ್ಲಿಕ್ ಟಿವಿಗೆ ಇಂದು ಭರ್ತಿ 10 ವರ್ಷಗಳು. ನಿಮ್ಮೆಲ್ಲರ ಪ್ರೀತಿಯಿಂದ ಈ ಹತ್ತು ವರ್ಷದಲ್ಲಿ ಪಬ್ಲಿಕ್ ಟಿವಿ ಸಾಧಿಸಿದ್ದು ಬಹಳಷ್ಟು. ಸಾಧಿಸಬೇಕಿರೋದು ಇನ್ನಷ್ಟು. ಸಾರ್ಥಕ ದಶಕದ ಹಿಂದೆ ನಮ್ಮೊಡನೆ ನೀವಿದ್ದೀರಿ. ನಮ್ಮನ್ನು ಇಷ್ಟರ ಮಟ್ಟಿಗೆ ಬೆಳೆಸಿದ್ದೀರಿ. ನಿಮಗೆ ನಾವು ಚಿರಋಣಿ.
Advertisement
ಯಶವಂತಪುರದಲ್ಲಿರುವ ಪಬ್ಲಿಕ್ ಟಿವಿ ಕಚೇರಿಯಲ್ಲಿ ಇಂದು ದಶಮಾನೋತ್ಸವ ಸಂಭ್ರಮವನ್ನು ಆಚರಿಸಲಾಯಿತು. ಬೆಳಗ್ಗೆ 10 ಗಂಟೆ 10 ನಿಮಿಷಕ್ಕೆ ಮುಖ್ಯ ಕಾರ್ಯಕ್ರಮ ನಡೆಯಿತು. ಈ ಸಂಭ್ರಮದ ಹಿನ್ನೆಲೆಯಲ್ಲಿ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿರುವ ಮೈಸೂರಿನ ಶಾಂತಿಧಾಮ ಆಶ್ರಮಕ್ಕೆ ಪಬ್ಲಿಕ್ ಟಿವಿ ವತಿಯಿಂದ 25 ಲಕ್ಷ ರೂ. ಪ್ರಶಸ್ತಿಯ ಚೆಕ್ ನೀಡಲಾಯಿತು. ನಟ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿ ಚೆಕ್ ಸ್ವೀಕರಿಸಿದರು.
Advertisement
Advertisement
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್, ಪಬ್ಲಿಕ್ ಟಿವಿ ಆರಂಭವಾಗಿ 10 ವರ್ಷ ಸಂಭ್ರಮಕ್ಕೆ ಮೊಟ್ಟ ಮೊದಲು ಕಾರಣರಾದ ಲಹರಿ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ. ಲಹರಿ ಅವರ ನಂಬಿಕೆ ಇಟ್ಟು ಪಬ್ಲಿಕ್ ಟಿವಿ ಎಂದು ಹೆಸರಿಟ್ಟವರಿಗೆ ಧನ್ಯವಾದಗಳು. ರಾಜಕೀಯದ ಜೊತೆ ಹಲವು ದಿಗ್ಗಜರನ್ನು ನೋಡಿದ್ದೇನೆ. ಒಂದು ಬದ್ಧತೆಯೊಂದಿಗೆ ಸಂಸ್ಥೆ ನಡೆಸುವುದು ಬಹಳ ಕಷ್ಟ ಆದರೂ ಅದನ್ನು ಸುಲಭವಾಗಿಸಿಕೊಂಡು ಮಾಡಿದ್ದೀರಿ. ಈವರೆಗೆ ಯಾರು ಕೂಡ ಪಬ್ಲಿಕ್ ಟಿವಿ ಇವರ ಪರ, ವಿರುದ್ಧ ಎಂಬ ಮಾತು ಬಂದಿಲ್ಲ. ರಂಗನಾಥ್ ಅವರು ಸಮಾಜವನ್ನು ಸರಿಮಾಡುವಲ್ಲಿ, ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಸರಿಮಾಡಲು ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
Advertisement
ಈ ಪಬ್ಲಿಕ್ ಟಿವಿಯಲ್ಲಿರುವ ಪ್ರತಿಯೊಬ್ಬ ಉದ್ಯೋಗಿಯು ಯಾವುದೇ ಅಮಿಷಕ್ಕೆ ಬಲಿಯಾಗದೆ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ರಂಗಣ್ಣ ಐದಾರು ವರ್ಷಗಳ ಹಿಂದೆ ಹಿರೇಮಠರನ್ನು ತಂದು ನನಗೆ ಫಿಕ್ಸ್ ಮಾಡಿದ್ದರು. ಅವರೊಂದಿಗೆ ಚರ್ಚೆಯಲ್ಲಿ ಪಾಲ್ಗೊಂಡಿದ್ದೆ ಆ ಸಂದರ್ಭ ನಾನು ನೀಡಿದ ಉತ್ತರವನ್ನು 13 ಬಾರಿ ರಿಪ್ಲೇ ಮಾಡಿ ತೋರಿಸಿದ್ದರು. ಇದರ ಉದ್ದೇಶ ಜನರಿಗೆ ಸರಿಯಾದ ಸ್ಪಷ್ಟವಾದ ಮಾಹಿತಿ ಕೊಡಬೇಕೆಂಬ ಸ್ಪಷ್ಟವಾಗಿತ್ತು ಇದು ಪಬ್ಲಿಕ್ ಟಿವಿಯ ವಿಶೇಷತೆ ಎಂದು ಹೊಗಳಿದರು.
ಹಲವು ಚಾಲೆಂಜ್‍ಗಳನ್ನು, ಅವಕಾಶಗಳನ್ನು ಮಾಡಿಕೊಂಡು ಪಬ್ಲಿಕ್ ಟಿವಿ ಮುಂದೆ ಬಂದಿದೆ. ಸಮಾಜದಲ್ಲಿ ಉತ್ತಮ ಹೆಸರು ಮಾಡಿದೆ. ವಾಹಿನಿ ಮುನ್ನಡೆಸಲು ಲೆಕ್ಕಾಚಾರ, ಜವಾಬ್ದಾರಿ, ನಿಷ್ಠೆ, ಪ್ರಾಮಾಣಿಕತೆ ಇದ್ದವರಿಗೆ ಮಾತ್ರ ಸಾಧ್ಯ. ರಂಗಣ್ಣ ಒಬ್ಬ ವ್ಯಕ್ತಿಯಲ್ಲ ಅವರೊಬ್ಬ ಸಂಸ್ಥೆ. ಹಲವು ಜನರಿಗೆ ಉದ್ಯೋಗ ನೀಡಿದ್ದಾರೆ. ಪಬ್ಲಿಕ್ ಟಿವಿ, ಪಬ್ಲಿಕ್ ಜೊತೆ ಸಂಬಂಧ ಇರುವಂತೆ ನೋಡಿಕೊಂಡಿದೆ. ಸಮಾಜವನ್ನು ಬದಲಾವಣೆ ಮಾಡಲು, ಹಲವು ಆದರ್ಶ ವ್ಯಕ್ತಿತ್ವವನ್ನು ಸಮಾಜಕ್ಕೆ ಪರಿಚಯಿಸಲು ಪಬ್ಲಿಕ್ ಟಿವಿ ಸಂಪೂರ್ಣವಾಗಿ ಶ್ರಮಿಸಿದೆ ಎಂದು ಅಭಿಪ್ರಾಯಪಟ್ಟರು.
ಯಶಸ್ಸು ಎಲ್ಲರಿಗೂ ದಕ್ಕುವುದಿಲ್ಲ. ಯಶಸ್ಸು ಸಿಗಬೇಕೆಂದರೆ, ಧರ್ಮರಾಯನ ಧರ್ಮತ್ವ, ದಾನ ಶೂರ ಕರ್ಣನ ದಾನತ್ವ ಇರಬೇಕು. ಅರ್ಜುನನ ಗುರಿ ಇರಬೇಕು, ಭೀಮನ ಬಲ ಇರಬೇಕು. ವಿಧುರನ ನೀತಿ ಇರಬೇಕು, ಕೃಷ್ಣನ ತಂತ್ರ ಇರಬೇಕು ಇದೆಲ್ಲ ರಂಗಣ್ಣನ ಬಳಿ ಇದೆ ಹಾಗಾಗಿ ಯಶಸ್ವಿಯಾಗಿದ್ದಾರೆ ಎಂದರು.
ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, 10 ವರ್ಷ ಪೂರೈಸಿದ ಸಾಧನೆ ಮತ್ತು ನೆನಪುಗಳ ಜೊತೆಗೆ ಪಬ್ಲಿಕ್ ಟಿವಿಗೆ ಅಭಿನಂದನೆಗಳು. ಪಬ್ಲಿಕ್ ಟಿವಿ ತನ್ನ ನಿಷ್ಠೆ, ಪ್ರಾಮಾಣಿಕತೆ ಕಾರ್ಯದಿಂದಾಗಿ 10 ವರ್ಷ ಪೂರೈಸಿರುವುದರ ಜೊತೆಗೆ ಮೊದಲ ಸ್ಥಾನಕ್ಕೇರಿದ್ದು, ಜನರ ಮನಸ್ಸನ್ನು ಗೆದ್ದಿದೆ ಎಂದರು.
ಪಬ್ಲಿಕ್ ಟಿವಿ ‘ಬೆಳಕು’ ಕಾರ್ಯಕ್ರಮದ ಮೂಲಕ ಹತ್ತಾರು ಜನರ ಬದುಕನ್ನು ಬೆಳಗಿಸಿದೆ. ಕೋವಿಡ್ ಸಂದರ್ಭದಲ್ಲಿ ದಿಕ್ಕೆಟ್ಟ ಜನತೆಗೆ ವಿಶ್ವಾಸ ಮೂಡಿಸಿದೆ. ಜೊತೆಗೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಆದ್ಯತೆ ನೀಡುವ ಕೆಲಸ ಮಾಡಿದೆ. ಶಕ್ತಿಧಾಮದಂತಹ ಸೇವಾ ಸಂಸ್ಥೆಗಳಿಗೆ ಪ್ರೋತ್ಸಾಹ ಧನವನ್ನೂ ನೀಡಿದೆ ಎಂದು ಹೊಗಳಿದರು.
ವ್ಯಾಪಾರೀಕರಣದ ಸಂಸ್ಥೆಗಳಿಗೆ ಸೇವಾ ಮನೋಭಾವ ಬರುವುದಿಲ್ಲ. ಸಮಾಜವನ್ನು ಪರಿವರ್ತೆಯೆಡೆಗೆ ಕೊಂಡೊಯ್ಯಲು ಬಯಸುವ ಸಂಸ್ಥೆಗೆ ಆ ಗುಣ ಬರುತ್ತದೆ. ಅದನ್ನು ಹೆಚ್.ಆರ್.ರಂಗನಾಥ್ ಅವರು ಮಾಡಿ ತೋರಿಸಿದ್ದಾರೆ ಎಂದು ಪ್ರಶಂಸಿಸಿದರು.
ನಟ ಶಿವರಾಜ್‍ಕುಮಾರ್ ಮಾತನಾಡಿ, ಪಬ್ಲಿಕ್ ಟಿವಿ 10 ವರ್ಷದ ಸಂಭ್ರಮದಲ್ಲಿದೆ. ಅದು 25, 50, 75, 100ರ ಸಂಭ್ರಮದವರೆಗೂ ತಲುಪಲಿ ಎಂದು ಆಶಿಸುತ್ತೇನೆ. ಪಬ್ಲಿಕ್ ಟಿವಿಯಂತಹ ಒಳ್ಳೆಯ ಮಾಧ್ಯಮದೊಂದಿಗೆ ಬದುಕಬೇಕು, ಸಂಭ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂಬ ಆಸೆ ನಮಗೂ ಇದೆ ಎಂದು ಆಶಯ ವ್ಯಕ್ತಪಡಿಸಿದರು.
ಅಪ್ಪಾಜಿಯ (ರಾಜ್‍ಕುಮಾರ್) ಕಾಳಜಿಯಿಂದಾಗಿ ಶಕ್ತಿಧಾಮ ಹುಟ್ಟಿತು. ನಂತರ ಹಲವಾರು ಕೈಗಳು ಸೇರಿ ಶಕ್ತಿಧಾಮಕ್ಕೆ ಜೀವ ತುಂಬಿವೆ. ನಮ್ಮ ತಂದೆ-ತಾಯಿಯಿಂದ ಮಾತ್ರ ಶಕ್ತಿಧಾಮ ಆಯಿತು ಎಂದು ಹೇಳಿಕೊಳ್ಳಲು ನಾನು ಇಚ್ಛಿಸುವುದಿಲ್ಲ. ಇಲ್ಲಿ ಸಾಕಷ್ಟು ಮಂದಿ ನೆರವು ನೀಡಿದ್ದಾರೆ ಎಂದು ಸ್ಮರಿಸಿದರು.
ಶಕ್ತಿಧಾಮದ ಮಕ್ಕಳು ನಮ್ಮನ್ನು ನೋಡಿದ ಕೂಡಲೇ ಓಡಿಬಂದು ಅಪ್ಪಿಕೊಂಡು, ನಮ್ಮಲ್ಲಿ ತಂದೆ, ಅಣ್ಣ, ಸ್ನೇಹಿತನನ್ನು ಕಾಣುತ್ತಾರೆ. ಅಪ್ಪು ಕೂಡ ಶಕ್ತಿಧಾಮಕ್ಕೆ ಹೆಚ್ಚಾಗಿ ಭೇಟಿ ಕೊಡುತ್ತಿದ್ದ. ಅಪ್ಪುನನ್ನು ನೆನೆದಾಗ ದುಃಖವಾಗುತ್ತದೆ. ಆ ನೋವಿನಲ್ಲೇ ನಾವು ಬದುಕಬೇಕಾಗಿದೆ. ಆತ ಹಾಕಿಕೊಟ್ಟ ಸಮಾಜ ಸೇವೆ ಹಾದಿಯಲ್ಲಿ ನಾವು ಮುಂದುವರಿಯುತ್ತೇವೆ. ಅಂತಹ ಶಕ್ತಿಧಾಮದ ಬೆಂಬಲವಾಗಿ ನಿಂತ ಪಬ್ಲಿಕ್ ಟಿವಿಗೂ ನಾವು ಚಿರಋಣಿ ಎಂದರು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ರಂಗಣ್ಣನವರನ್ನು ನೋಡಿ ಜ್ಞಾನವನ್ನು ಯಾವ ರೀತಿ ಉಪಯೋಗಿಸಬೇಕು. ವಿಚಾರಗಳನ್ನು ಯಾವ ರೀತಿ ನಿರೂಪಿಸಬೇಕೆಂಬುದನ್ನು ಕಲಿಬೇಕಾಗುತ್ತದೆ. ಆ ವ್ಯಕ್ತಿಯನ್ನು ನೋಡಿದಾಗ ಅವರ ಸರಳತೆ ನನಗೆ ತುಂಬಾ ಇಷ್ಟವಾಗುತ್ತದೆ. ಸರಳತೆ ಒಬ್ಬ ಮನುಷ್ಯನಿಗೆ ಜ್ಞಾನದ ಜೊತೆ ಸರಳತೆ ಬಂದರೆ ಬೆಟ್ಟವನ್ನೂ ಬೇಕಾದರೂ ಅಲುಗಾಡಿಸ ಬಹುದೆಂಬಂತೆ. ಇಂದು ನಮ್ಮೊಂದಿಗಿರುವ ಸರಳತೆಯ ಸಕಾರಮೂರ್ತಿಯಾಗಿ ರಂಗಣ್ಣನನ್ನು ನೋಡಬಹುದು. ಅವರ ಈ ವ್ಯಕ್ತಿತ್ವದಿಂದ ಸಂಸ್ಥೆ ಈ ಮಟ್ಟಿಗೆ ಬೆಳೆದಿದೆ ಎಂದು ಅಭಿಪ್ರಾಯಪಟ್ಟರು.