ರಾಯಚೂರು: ಎಲ್ಲವೂ ಸರಿಯಾಗಿದೆ ಅಂದುಕೊಳ್ಳುವಾಗಲೇ ವಿಧಿ ಜೀವನದ ಚಕ್ರವನ್ನೇ ಅದಲು ಬದಲು ಮಾಡಿಬಿಡುತ್ತದೆ. ಮನೆ ಯಜಮಾನನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಕುಟುಂಬದ ಬೆನ್ನೆಲುಬು ಮುರಿದು ಬಿದ್ದಾಗ ಜೀವನದ ಶೈಲಿಯೇ ಬದಲಾಗುತ್ತದೆ. ರಾಯಚೂರಿನ ಕುಟುಂಬವೊಂದರ ಯಜಮಾನ ಹೃದಯಘಾತದಿಂದ ಸಾವನ್ನಪ್ಪಿದ್ದು ಮಕ್ಕಳ ಶಾಲೆಯ ಶುಲ್ಕ ತುಂಬಲಾಗದೇ ಶಿಕ್ಷಣ ಅರ್ಧಕ್ಕೆ ನಿಲ್ಲುವ ಸ್ಥಿತಿಗೆ ಬಂದಿದೆ.
ರಾಯಚೂರು ತಾಲೂಕಿನ ಪಲವಲದೊಡ್ಡಿ ಮೂಲದ ಶಿವರಾಜ್ ಎಲ್‍ಐಸಿ ಏಜೆಂಟ್ ಆಗಿದ್ದರು. ರಾಯಚೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದರೂ ಜೀವನಕ್ಕೆ ಏನೂ ಕಮ್ಮಿಯಿಲ್ಲದಂತೆ ಬದುಕುತ್ತಿದ್ದರು. ಪತ್ನಿ ಸ್ವಪ್ನಾ, ಮಕ್ಕಳಾದ ಸುದೀಪ್, ಶ್ರೀಲಕ್ಷ್ಮಿಯನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಎಂಟು ತಿಂಗಳ ಹಿಂದೆ ಹೃದಯಾಘಾತದಿಂದಾಗಿ ಶಿವರಾಜ್ ಮೃತಪಟ್ಟಿದ್ದರು.
Advertisement
ಸಂಪೂರ್ಣವಾಗಿ ಶಿವರಾಜ್ ದುಡಿಮೆಯನ್ನೇ ಅವಲಂಬಿಸಿದ್ದ ಕುಟುಂಬ ಈಗ ಯಜಮಾನನಿಲ್ಲದೆ ದಿಕ್ಕು ಕಾಣದಾಗಿದೆ. ಜೊತೆಗೆ ನಾನಾ ಕಾರಣಗಳಿಗೆ ಶಿವರಾಜ್ ಮಾಡಿದ್ದ ಲಕ್ಷಾಂತರ ರೂಪಾಯಿ ಸಾಲವನ್ನ ತೀರಿಸಲು ಸಾಧ್ಯವೇ ಇಲ್ಲದ ಸ್ಥಿತಿಯಲ್ಲಿ ಕುಟುಂಬವಿದೆ. ಹೆಚ್ಚು ದಿನ ತವರು ಮನೆಯಲ್ಲೂ ಇರಲೂ ಆಗದೆ, ಸಂಬಂಧಿಕರ ಮನೆಯಲ್ಲಿರಲು ಆಗದೇ ಸ್ವಪ್ನಾ ಮಕ್ಕಳನ್ನ ಕಟ್ಟಿಕೊಂಡು ಪರದಾಡುತ್ತಿದ್ದಾರೆ.
Advertisement
ಎಸ್‍ಎಸ್‍ಎಲ್‍ಸಿ ವರೆಗೆ ಮಾತ್ರ ಓದಿರುವ ಸ್ವಪ್ನಾ ಜೀವನೋಪಾಯಕ್ಕೆ ಟೈಲರಿಂಗ್ ಕಲಿಯುತ್ತಿದ್ದಾರೆ. ಮನೆ ಬಾಡಿಗೆ ಕಟ್ಟಲು ಆಗದೇ ಸದ್ಯ ರಾಯಚೂರಿನ ಡ್ಯಾಡಿ ಕಾಲೋನಿಯಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿದ್ದಾರೆ. ಆದ್ರೆ ನಗರದ ಕರ್ನಾಟಕ ವೆಲ್‍ಫೇರ್ ಟ್ರಸ್ಟ್ ಶಾಲೆಯಲ್ಲಿ ಸಿಬಿಎಸ್‍ಸಿ ಪಠ್ಯಕ್ರಮದಲ್ಲಿ ಓದುತ್ತಿರುವ ಮಕ್ಕಳ ಓದು ಹಣವಿಲ್ಲದೆ ಅರ್ಧಕ್ಕೆ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಆರನೇ ತರಗತಿ ಪಾಸ್ ಆಗಿರುವ ಶ್ರೀಲಕ್ಷ್ಮೀ, 8 ನೇ ತರಗತಿ ಪಾಸಾಗಿರುವ ಸುದೀಪ್ ಇಬ್ಬರೂ ಆಟ-ಪಾಠಗಳೆರಡರಲ್ಲೂ ಮುಂದಿದ್ದಾರೆ. ಆದ್ರೆ ಪ್ರತಿಯೊಬ್ಬರಿಗೂ ವರ್ಷಕ್ಕೆ 20 ಸಾವಿರ ರೂಪಾಯಿ ಶಾಲಾ ಶುಲ್ಕವಿದೆ. ಹೀಗಾಗಿ ಇಬ್ಬರಿಗೂ ವರ್ಷಕ್ಕೆ 40 ಸಾವಿರ ರೂಪಾಯಿ ಸಹಾಯ ಬೇಕಿದೆ.
Advertisement
ಓದಿನಲ್ಲಿ ಜಾಣರಾಗಿರುವ ಸುದೀಪ್ ಹಾಗೂ ಶ್ರೀಲಕ್ಷ್ಮೀ ಕಷ್ಟಕ್ಕೆ ಸ್ಪಂದಿಸಲು ರಾಯಚೂರಿನ ಬಸವ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವೈದ್ಯ ಡಾ.ಬಸನಗೌಡ ಪಿ. ಪಾಟೀಲ್ ಮುಂದೆ ಬಂದಿದ್ದಾರೆ. ಒಟ್ನಲ್ಲಿ ವೈದ್ಯೆಯಾಗಬೇಕು ಅನ್ನೋ ಶ್ರೀಲಕ್ಷ್ಮೀ ಆಸೆ, ತಾಯಿ ತಂಗಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ಸುದೀಪ್ ಆಶಯಕ್ಕೆ ಸಹಾಯದ ಅಗತ್ಯತೆಯಿದೆ.
Advertisement