ಚಿತ್ರದುರ್ಗ: ಆಕೆ ಪ್ರತಿಭಾವಂತ ವಿದ್ಯಾರ್ಥಿನಿ. ಪಿಯುಸಿಯಲ್ಲಿ 97% ಅಂಕ ಗಳಿಸಿದ ರಾಜ್ಯದ 7ನೇ ಟಾಪರ್. ಆದರೆ ಕುಟುಂಬದಲ್ಲಿನ ಬಡತನಿಂದಾಗಿ ಆಕೆಯ ಮುಂದಿನ ವಿದ್ಯಾಭ್ಯಾಸದ ಕನಸು ಕಮರಿಹೋಗಿತ್ತು. ಈ ವಿಷಯ ತಿಳಿದ ಪಬ್ಲಿಕ್ ಟಿವಿ ಬಡ ವಿದ್ಯಾರ್ಥಿನಿಯ ಕನಸನ್ನು ನನಸಾಗಿಸಲು ಬೆಳಕಾಗಿದೆ. ಇದು ಪಬ್ಲಿಕ್ ಟಿವಿಯ ಬೆಳಕು ಇಂಪ್ಯಾಕ್ಟ್.
ಹೀಗೆ ತಂದೆಯೊಂದಿಗೆ ಕಾಲೇಜಿಗೆ ದಾಖಲಾಗಲು ತೆರಳುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ದೀಪಿಕಾ ಅಂತ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ನಿರಂಜನ ಹಾಗೂ ನಿರ್ಮಲ ದಂಪತಿ ಪುತ್ರಿ. ಈಕೆ ದ್ವಿತೀಯ ಪಿಯುಸಿಯಲ್ಲಿ 97.28%ರಷ್ಟು ಅಂಕ ಗಳಿಸಿದ್ದಾರೆ. ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕರ್ನಾಟಕ ರಾಜ್ಯಕ್ಕೆ ಏಳನೇ ಟಾಪರ್. ಹೀಗಾಗಿ ವಿದ್ಯಾರ್ಥಿನಿಗೆ ಸಿಎ ಮಾಡಬೇಕೆಂಬ ಕನಸಿದ್ದು, ಆದರೆ ಮನೆಯ ಬಡತನದಿಂದ ಜೀವನ ಸಾಗಿಸೋದೇ ಕಷ್ಟಕರ ಆಗಿತ್ತು. ಇದನ್ನೂ ಓದಿ: ರಾಜ್ಯದ ಕರಾವಳಿಯಲ್ಲಿ ಮಳೆ, ಪ್ರವಾಹ, ಭೂಕುಸಿತ- ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ
ಇಬ್ಬರು ಮಕ್ಕಳನ್ನು ಓದಿಸಲಾಗದ ಸ್ಥಿತಿಯಲ್ಲಿದ್ದ ದೀಪಿಕಾ ತಂದೆ ನಿರಂಜನ್ ಮಗಳ ಉನ್ನತ ವ್ಯಾಸಂಗಕ್ಕೆ ನೆರವು ಕಲ್ಪಿಸುವಂತೆ ಪಬ್ಲಿಕ್ ಟಿವಿಗೆ ಮನವಿ ಮಾಡಿದ್ರು. ಪಬ್ಲಿಕ್ ಟಿವಿ ಮೂಲಕ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಅವರ ಪುತ್ರ ರಘುಚಂದನ್ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ಕೈಜೋಡಿಸಿದ್ದಾರೆ. ತಮ್ಮ ಟ್ರಸ್ಟ್‍ನಿಂದ 3 ಬಾರಿ 50 ಸಾವಿರ ನೀಡುವ ಮೂಲಕ ವಿದ್ಯಾರ್ಥಿನಿಯ ಭವಿಷ್ಯಕ್ಕೆ ದಾರಿದೀಪವಾಗಿದ್ದಾರೆ. ಇದರಿಂದಾಗಿ ಸಂತಸಗೊಂಡ ವಿದ್ಯಾರ್ಥಿನಿ ನೆರವು ನೀಡಿದ ರಘುಚಂದನ್, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಸರ್‍ಗೆ ಧನ್ಯವಾದ ಹೇಳಿದ್ದಾರೆ.
ಕಡು ಬಡತನದಲ್ಲಿದ್ದ ಕುಟುಂಬಕ್ಕೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ದಾರಿದೀಪವಾಗಿದೆ. ಪ್ರತಿಭಾವಂತ ವಿದ್ಯಾರ್ಥಿನಿಯ ಭವಿಷ್ಯವನ್ನು ನಿಮ್ಮ ಪಬ್ಲಿಕ್ ಟಿವಿ ಉಜ್ವಲಗೊಳಿಸಿದೆ.