ಉಡುಪಿ: ಎಲ್ಲರಿಗೂ ಒಂದೊಂದು ಕನಸಿರುತ್ತದೆ. ಕೆಲವರದ್ದು ದೊಡ್ಡ ದೊಡ್ಡ ಕನಸು. ಇನ್ನು ಕೆಲವರದ್ದು ಚಿಕ್ಕಪುಟ್ಟ ಕನಸು. ಆ ಕನಸನ್ನು ನನಸು ಮಾಡೋಕೆ ಜೀವನದುದ್ದಕ್ಕೂ ನಾವು ಹೋರಾಟ ಮಾಡುತ್ತಾ ಇರುತ್ತೇವೆ. ಉಡುಪಿ ಜಿಲ್ಲೆ ಶಂಕರನಾರಾಯಣದ ಈ ಅಜ್ಜಿಯೂ ಅಷ್ಟೆ ಆಕೆಗೊಂದು ಕನಸಿದೆ. ಕನಸು ನನಸು ಮಾಡೋದಕ್ಕೆ ಹೋರಾಟ ಮಾಡಿ ಆಕೆಯ ವಯಸ್ಸು 85 ಆಗಿದೆ. ಆದರೆ ಆ ಕನಸು ಈವರೆಗೂ ನನಸಾಗಿಲ್ಲ.
ಇದು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಶಂಕರನಾರಾಯಣದ ವಯೋವೃದ್ಧೆಯ ಕಥೆ. 85 ವರ್ಷದ ಅಜ್ಜಿಯ ಹೆಸರು ಸಾತು ಬಾಯಿ. ಕರಾವಳಿಯ ಜಡಿಮಳೆಯಲ್ಲಿ ತೊಪ್ಪೆಯಾಗಿರುವ ಗುಡಿಸಲಿನಲ್ಲಿಯೇ ವಾಸವಾಗಿದ್ದಾರೆ. ಇದೇ ಗುಡಿಸಿಲಿನಲ್ಲಿ ಅಜ್ಜಿ ಸಾತುಬಾಯಿ, ಮಗಳು ಸೀತಾ ಮತ್ತು ಮೊಮ್ಮಗಳು ವಾಸವಾಗಿದ್ದಾರೆ.
ಅಜ್ಜಿ, ಮಗಳು ಸೀತಾಳಿಗೆ ಮದುವೆ ಮಾಡಿದ್ದಾರೆ. ಆದ್ರೆ ಅಳಿಯ ಪುಟ್ಟದಾದ ಮಗುವನ್ನು ಕೈಯಲ್ಲಿಟ್ಟು ಮನೆ ಬಿಟ್ಟು ಹೋಗಿದ್ದಾನೆ. ಮಗಳು ಸೀತಾ ಸಂಸಾರದ ಜವಾಬ್ದಾರಿಯನ್ನು ಹೊತ್ತು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇರೋದಕ್ಕೆ ಸರಿಯಾದ ಸೂರಿಲ್ಲ. ಮಳೆ ಬಂತೆಂದರೆ ನೆಮ್ಮದಿಯಾಗಿ ನಿದ್ದೆ ಮಾಡೋಕೆ ಆಗಲ್ಲ. ಮನೆಗೆ ನೀರು ತುಂಬಿಕೊಳ್ಳುತ್ತೆ. ಕೂಡಿಟ್ಟ ಹಣದಲ್ಲಿ ಮಗಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ.
ವಯಸ್ಸಾದ ಅಜ್ಜಿ ಮತ್ತು ಮಗಳನ್ನು ನೋಡಿಕೊಳ್ಳಲು ತಾಯಿ ಸೀತಾ ಪರದಾಡುತ್ತಿದ್ದು ಮನೆಯನ್ನು ಕಟ್ಟಿಕೊಳ್ಳಲು ಸ್ಥಳೀಯ ಕುಳ್ಳುಂಜೆ ಗ್ರಾಮ ಪಂಚಾಯತ್ ಸಂಪರ್ಕಿಸಿ ಆಶ್ರಯ ಯೋಜನೆಗೆ ಅರ್ಜಿ ಹಾಕಿದ್ದಾರೆ ಆದರೆ ಅಧಿಕಾರಿಗಳ ಸಹಕಾರ ಇನ್ನೂ ಸಿಕ್ಕಿಲ್ಲ. ಈ ಕುಟುಂಬದ ಕಷ್ಟ ನೋಡಿದ ಸ್ಥಳೀಯರು ಒಂದಿಷ್ಟು ಹಣ ಹೊಂದಿಸಿ ಮನೆ ಕಟ್ಟಿಕೊಡಲು ಮುಂದಾಗಿದ್ದಾರೆ ಆದ್ರೆ ಸಂಪೂರ್ಣ ವೆಚ್ಚ ಭರಿಸಲಾಗದೆ ಈಗ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಸಮುದಾಯದ ಸಹಭಾಗಿತ್ವ ಗಮನಿಸಿರುವ ಬೆಳಕು ತಂಡ ಈ ಸಮಸ್ಯೆಗೆ ಪರಿಹಾರ ಹುಡುಕಲು ಮುಂದಾಗಿದೆ.
https://www.youtube.com/watch?v=EN1IruFItq0