ಶಿವಮೊಗ್ಗ: ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ಎಲ್‍ಕೆಜಿ ಆರಂಭಿಸಿದೆ. ಆದರೆ ಸರ್ಕಾರ ಮಾತ್ರ ಎಲ್‍ಕೆಜಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡದೆ ತಾರತಮ್ಯ ಮಾಡುತ್ತಿದೆ. ಇದು ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಉಂಟೂರು ಕಟ್ಟೆ ಕೈಮರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸ್ಥಿತಿ.
ಒಂದು ಕಾಲದಲ್ಲಿ 250 ರಿಂದ 300 ಮಕ್ಕಳು ಓದುತ್ತಿದ್ದ ಈ ಶಾಲೆಯಲ್ಲಿ ಈಗ ಕೇವಲ 67 ಮಕ್ಕಳಿದ್ದಾರೆ. ಖಾಸಗಿ ಶಾಲೆಯ ಹಾವಳಿಯಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗತೊಡಗಿದೆ. ಆದರೆ ಶಾಲಾಭಿವೃದ್ಧಿ ಸಮಿತಿ ಒಂದು ಒಳ್ಳೆಯ ಮಾದರಿ ಶಾಲೆಯನ್ನಾಗಿಸಲು ಎಲ್‍ಕೆಜಿ ಆರಂಭಿಸಿದೆ. ಕಳೆದ ವರ್ಷ ಎಲ್‍ಕೆಜಿಗೆ ಸೇರಿದ್ದ 17 ಮಕ್ಕಳು ಈ ವರ್ಷ ಇದೇ ಶಾಲೆಯ ಒಂದನೇ ತರಗತಿ ಸೇರಿರುವುದು ಖುಷಿಯ ವಿಚಾರವಾಗಿದೆ.
Advertisement
Advertisement
ಶಿಕ್ಷಣ ಇಲಾಖೆ ಎಲ್‍ಕೆಜಿ ಸೇರಿರುವ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ನೀಡಲು ಸಾಧ್ಯವಿಲ್ಲ ಎನ್ನುತ್ತಿದೆ. 1ನೇ ತರಗತಿಯಿಂದ 10ನೇ ತರಗತಿಯ ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಈ ಶಾಲೆಯಲ್ಲಿ ಒಂದನೇ ತರಗತಿಯಿಂದ 7ನೇ ತರಗತಿ ಮಕ್ಕಳು ಬಿಸಿಯೂಟ ಮಾಡುವಾಗ, ಎಲ್‍ಕೆಜಿ ಮಕ್ಕಳಿಗೆ ಊಟ ನೀಡದೇ ತಾರತಮ್ಯ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕೇಳಿದ್ರೆ ಬಿಸಿಯೂಟ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.
Advertisement
ಶಾಲಾಭಿವೃದ್ಧಿ ಸಮಿತಿಯವರು ದಾನಿಗಳಿಂದ ದವಸ-ಧಾನ್ಯ ತಂದು ಕೊಟ್ಟು ಎಲ್‍ಕೆಜಿ ಕಂದಮ್ಮಗಳಿಗೆ ಅಡುಗೆ ಮಾಡಿ ಕೊಡಿ ಎಂದು ಮನವಿ ಮಾಡಲಾಗಿತ್ತು. ಆದ್ರೆ ನಿಯಮಾವಳಿಗಳಲ್ಲಿ ಅವಕಾಶ ಇಲ್ಲವೆಂದು ಶಿಕ್ಷಣ ಇಲಾಖೆಯವರು ಕಠೋರ ನಿಲುವು ತಾಳಿದ್ದಾರೆ. ಮಕ್ಕಳಿಗೆ ಅಡುಗೆ ಮಾಡಿಕೊಡಲು ಅವಕಾಶ ನೀಡದೆ ತೊಂದರೆ ಕೊಡುತ್ತಿದ್ದಾರೆ.
Advertisement
ತೀರ್ಥಹಳ್ಳಿ ತಾಲೂಕಿನಲ್ಲಿ ಕಳೆದ ಮೂರು ವರ್ಷದಲ್ಲಿ 45 ಸರ್ಕಾರಿ ಪ್ರಾಥಮಿಕ ಶಾಲೆಗಳು ಬಾಗಿಲು ಹಾಕಲಾಗಿದೆ. ಇರುವ ಶಾಲೆಗಳು ಮಕ್ಕಳ ಕೊರತೆಯಿಂದ ಬಾಗಿಲು ಮುಚ್ಚುವ ಹಂತದಲ್ಲಿವೆ. ಇಂತಹ ಹೊತ್ತಿನಲ್ಲಿ ಶಾಲಾಭಿವೃದ್ಧಿ ಸಮಿತಿ ಮಕ್ಕಳ ದಾಖಲಾತಿಗೆ ನಡೆಸಿದ ಈ ಪ್ರಯತ್ನವನ್ನು ಶಿಕ್ಷಣ ಇಲಾಖೆ ಪ್ರೋತ್ಸಾಹಿಸಬೇಕಿತ್ತು. ಆದರೆ, ನಿಯಮಾವಳಿಗಳ ಹೆಸರಿನಲ್ಲಿ ಹತ್ತು-ಹದಿನೈದು ಮಕ್ಕಳಿಗೆ ಊಟ ನೀಡಲು ಸಾಧ್ಯವಿಲ್ಲ ಎನ್ನುತ್ತಿದೆ. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಸಮಸ್ಯೆ ಪರಿಹರಿಸಿಕೊಳ್ಳಲು ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.
https://www.youtube.com/watch?v=Z-N1iCGguh0