ಬೆಂಗಳೂರು: ಅವರದ್ದು ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳೋ ಕಡು ಬಡತನದ ಕುಟುಂಬ. ಪ್ರತಿದಿನ ಕೂಲಿ ಮಾಡಿದ್ರೇನೆ ಮನೆಯ ಓಲೆ ಹಚ್ಚೋದು. ಬಡತನಕ್ಕೆ ಮನೆ ತುಂಬಾ ಮಕ್ಕಳು ಅನ್ನೋ ಹಾಗೆ ಮೂರು ಜನ ಮಕ್ಕಳು ಕೂಡ. ಅದಕ್ಕಾಗಿ ಕೂಲಿ ಕೆಲಸ ಅರಸುತ್ತಾ ಕುಟುಂಬ ದೂರದ ಊರಿನಿಂದ ಬಂದು ಬೆಂಗಳೂರು ಸೇರಿತ್ತು. ಹಾಗೋ ಹೀಗೋ ಜೀವನದ ಬಂಡಿ ಸಾಗುತ್ತಿತ್ತು. ಎರಡು ವರ್ಷದ ಹಿಂದೆ ಕುಟುಂಬದ ಮೇಲೆ ಯಾವ ಕೆಟ್ಟ ದೃಷ್ಟಿ ಬಿತ್ತೊ ಏನೋ, ಮಗಳು ಆಟವಾಡುವಾಗ ಆಕಸ್ಮಿಕವಾಗಿ ಒಂದು ಕಣ್ಣು ಕಳೆದುಕೊಂಡಳು.
ಗಂಡ, ಹೆಂಡತಿ, ತಾಯಿ ಅಂತಾ ಇರೋ ಹುಸೇನ್ ಬಾಷ ಕುಟುಂಬದ ದುರಂತ ಕಥೆ ಇದು. ರಾಯಚೂರಿನ ಮಾನ್ವಿಯಿಂದ ಬದುಕ ನೊಗ ದೂಡಲು ಬೆಂಗಳೂರಿಗೆ ಬಂದು ಆರು ವರ್ಷವಾಗಿದೆ. ಸದ್ಯ ಬಾಷಾ ಕುಟುಂಬ ತಾವರೆಕೆರೆ ಬಳಿ ಇರುವ ಬಿಕೆ ನಗರದಲ್ಲಿದೆ. 6 ವರ್ಷದ ರಾಬಿಯಾ, 4 ವರ್ಷದ ಮಗ ಹಾಗೂ 1 ವರ್ಷದ ಅನ್ಸರ್ ಇವರ ಮಕ್ಕಳು. ಮೊದಲ ಮಗಳು ರಾಬಿಯಾ 2ವರ್ಷದ ಹಿಂದೆ ಆಟವಾಡುವಾಗ ಎಡಗಣ್ಣಿಗೆ ಸುಣ್ಣ ಬಿದ್ದು ಕಣ್ಣಿನ ನೋವಿಗೆ ಒಳಾಗಾದಳು. ಬೆಂಗಳೂರಿನ ಸಾಕಷ್ಟು ನೇತ್ರಾಲಯಕ್ಕೆ ತೋರಿಸಿದ್ದ ಹುಸೇನ್ ಕೊನೆಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದ್ರು. ಈ ವೇಳೆ ಎಡಗಣ್ಣಿನ ದೃಷ್ಟಿ ಸಂಪೂರ್ಣವಾಗಿ ನಾಶವಾಗಿದೆ ಅಂತಾ ಹೇಳಿ ವೈದ್ಯರು ಕಣ್ಣನ್ನ ತೆಗೆದಿದ್ದಾರೆ.
Advertisement
ಹುಸೇನ್ ಬಾಷ ತನ್ನ ಊರಿನಲ್ಲಿದ್ದ ಮನೆ-ಮಠ ಮಾರಿ, ಸುತ್ತಮುತ್ತಲಿನ ಸ್ನೇಹಿತರಿಂದ ಎರಡ್ಮೂರು ಲಕ್ಷ ಸಾಲ ಮಾಡಿ ಸುಮಾರು 6 ಲಕ್ಷ ರೂಪಾಯಿ ಒಟ್ಟು ಸೇರಿಸಿ ಮಗಳ ಕಣ್ಣಿನ ಚಿಕಿತ್ಸೆಗೆ ವ್ಯಯ ಮಾಡಿದ್ದಾರೆ. ಈಗ ಬಲಗಣ್ಣಿನ ದೃಷ್ಟಿ ಸರಿಯಾಗಿ ಕಾಣಬೇಕಾದ್ರೆ ಎಡಗಣ್ಣಿನ ಜಾಗಕ್ಕೆ ಡಮ್ಮಿ ಕಣ್ಣನ್ನ ಆಳವಡಿಸಬೇಕು ಅಂತ ವೈದ್ಯರು ಹೇಳಿದ್ದಾರೆ. ಇದರ ನಡುವೆ ಮಗನಿಗೆ ನಾಲ್ಕು ವರ್ಷವಾದ್ರು ನಡೆಯಲು ಆಗುತ್ತಿಲ್ಲ. ಹುಸೇನ್ ಒಬ್ಬ ದುಡಿದು ಇಡೀ ಮನೆಯನ್ನ ನೋಡಿಕೊಳ್ಳಬೇಕು. ಜೊತೆಗೆ ಇಬ್ಬರು ಮಕ್ಕಳ ಚಿಕಿತ್ಸೆಯ ಖರ್ಚು ಬೇರೆ. ರಾಬಿಯಾಳ ಒಂದು ಕಣ್ಣನ್ನ ಉಳಿಸಿಕೊಳ್ಳುವ ಸಲುವಾಗಿ ಹುಸೇನ್ ಬಾಷ ಕುಸಿದು ಹೋಗಿದ್ದಾರೆ.
Advertisement
ಇದೀಗ ಹುಸೇನ್ ತನ್ನ ಮಗಳಾದ ರಾಬಿಯಾಳ ಕಣ್ಣಿನ ಚಿಕಿತ್ಸೆಗೆ ನೆರವು ನೀಡಿ ಅಂತ ನಿಮ್ಮ ಪಬ್ಬಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಪತ್ರ ಬರೆದಿದ್ದರು. ಇದೀಗ ರಾಬಿಯಾಳ ಬದುಕಿಗೆ ಬೆಳಕಾಗಲು ಪಬ್ಲಿಕ್ ಟಿವಿ ಮುಂದಾಗಿದೆ. ನೀವು ಸಹ ಹುಸೇನ್ ಬಾಷನ ಕುಟುಂಬಕ್ಕೆ ಸಹಾಯ ಮಾಡಿ ಆ ಮುದ್ದು ಮಕ್ಕಳ ನಗುವಿಗೆ ಕಾರಣರಾಗಿ.
Advertisement