ನಿಮ್ಮ ಪಬ್ಲಿಕ್ ಟಿವಿಗೆ 7ನೇ ವರ್ಷದ ಹುಟ್ಟುಹಬ್ಬ- ನಮ್ಮನ್ನಗಲಿದ ತ್ರಿವಿಧ ದಾಸೋಹಿಗೆ ವಾರ್ಷಿಕೋತ್ಸವ ಅರ್ಪಣೆ

Public TV
3 Min Read
Public Tv 2

-ನಾಡಿನ ಜನತೆಗೆ ನಮ್ಮ ಧನ್ಯವಾದ

ಬೆಂಗಳೂರು: ಪಬ್ಲಿಕ್ ಟಿವಿ.. ಇದು ಯಾರ ಆಸ್ತಿಯೂ ಅಲ್ಲ.. ಇದು ನಿಮ್ಮೆಲ್ಲರ ಆಸ್ತಿ.. ಈ ಟ್ಯಾಗ್‍ಲೈನ್‍ಗೆ ನಿಜಕ್ಕೂ ಸಾರ್ಥಕತೆ ಸಿಕ್ಕಿದೆ. ಏಕಂದ್ರೆ ನಿಮ್ಮ ಪ್ರೀತಿಯ ಪಬ್ಲಿಕ್ ಟಿವಿಗೆ ಇದೀಗ ಏಳನೇ ವಾರ್ಷಿಕೋತ್ಸವ. ಈ ಸಪ್ತ ಸಂವತ್ಸರಗಳಲ್ಲಿ ನೀವು ತೋರಿದ ಪ್ರೀತಿ., ನಮ್ಮ ಮೇಲಿಟ್ಟ ವಿಶ್ವಾಸ ಅದಮ್ಯ.. ಪರಿಣಾಮ ನಿಮ್ಮ ಪಬ್ಲಿಕ್ ಟಿವಿ ಸಮೂಹ ವಿಸ್ತರಿಸಿದೆ.

ಪಬ್ಲಿಕ್ ಟಿವಿ ಜೊತೆಗೆ ಪಬ್ಲಿಕ್ ಮ್ಯೂಸಿಕ್, ಪಬ್ಲಿಕ್ ಮೂವೀಸ್ ಬಂದಿದೆ. ಪಬ್ಲಿಕ್ ಮೂವೀಸ್‍ಗೂ ಕೂಡ ಇದೀಗ ವರುಷದ ಹರೆಯ. ಈ ಎಲ್ಲವನ್ನು ಪ್ರೀತಿಯಿಂದ ನೀವು ಅಪ್ಪಿಕೊಂಡಿದ್ದೀರಿ, ಒಪ್ಪಿಕೊಂಡಿದ್ದೀರಿ. ಪ್ರೀತಿಯ ಧಾರೆ ಎರೆಯುತ್ತೀದ್ದೀರಿ. ನಮ್ಮನ್ನು ಹರಸಿ ಬೆಳೆಸಿದ ಪಬ್ಲಿಕ್‍ಗೆ ಅಂದ್ರೆ ನಿಮಗಿದೋ ಸಾಷ್ಟಾಂಗ ನಮಸ್ಕಾರ.

Public Tv 1

ಸುದ್ದಿ ಪ್ರಪಂಚ ವಿಶಾಲವಾಗಿ ಬೆಳೆಯುತ್ತಿದೆ. ನಿಪ್ಷಕ್ಷಪಾತ ಸುದ್ದಿ ಬಿತ್ತರ, ವಸ್ತು ನಿಷ್ಠ ವಿಶ್ಲೇಷಣೆ ಮತ್ತು ಸ್ಪಷ್ಟ ಮಾಹಿತಿ ಕೊಡುವುದಂತೂ ಸವಾಲಿನ ಕೆಲಸ. ಮನರಂಜನಾ ಚಾನೆಲ್ ಗಳಿಗೂ ಮಿಗಿಲಾದ ಸಂಖ್ಯೆಯಲ್ಲಿ ಕನ್ನಡದ ಸುದ್ದಿವಾಹಿನಿಗಳಿವೆ. ಆದ್ರೆ ಯಾವುದೇ ಪೂರ್ವಾಗ್ರಹವಿಲ್ಲದೆ, ಆಮಿಷ, ಒತ್ತಡಗಳಿಗೆ ಜಗ್ಗದೆ, ನೊಂದವರಿಗೆ ನೇರವಾಗಿ, ಅನ್ಯಾಯವನ್ನು ಖಂಡಿಸಿ ಸುದ್ದಿ ಬಿತ್ತರಿಸೋ ಚಾನೆಲ್ ನ ಅನಿವಾರ್ಯತೆ ಕನ್ನಡಿಗರಿಗಿದ್ದರೆ, ಅವರ ಆ ಅನಿವಾರ್ಯತೆಯನ್ನು ಪರಿಪೂರ್ಣವಾಗಿ ಈಡೇರಿಸೋ ಹೊಣೆ ಹೊರಲು ಸಜ್ಜಾಗಿದ್ದು ನಿಮ್ಮ ಪಬ್ಲಿಕ್ ಟಿವಿ,

ನಿಖರ ಮತ್ತು ಪ್ರಖರ ಸುದ್ದಿಯನ್ನು ನೋಡಲು, ಪುಟ್ಟ ಟಿವಿ ಪರದೆ ಮುಂದೆ ಕೂರುವ ಈಗಿನ ವೀಕ್ಷಕರು ದಡ್ಡರಲ್ಲ. ಚಾನೆಲ್ ಹಾಕಿ ಕುಳಿತ ಜನ ಸುದ್ದಿಯ ಗುಣಮಟ್ಟವನ್ನು ಅಳೆಯುವಲ್ಲಿ ಚಾಣಾಕ್ಷರು. ಅಂತಹ ಕೋಟ್ಯಂತರ ಪ್ರಜ್ಞಾವಂತರ ಅಚ್ಚಮೆಚ್ಚಿನ ಚಾನೆಲ್ಲಾಗಿ ಹೊರಹೊಮ್ಮಿದ ಹಾದಿ, ಪಬ್ಲಿಕ್ ಟಿವಿ, ಪಾಲಿಗೆ ಸುಲಭದ್ದಾಗಿರಲಿಲ್ಲ. ಆ ಕಠಿಣ ಲಕ್ಷ್ಯವನ್ನು ತಲುಪಿಯೇ ಸಿದ್ಧ ಅಂತ ನಿರ್ಧರಿಸಿದ್ದು ಪಬ್ಲಿಕ್ ಟಿವಿಯ ಕ್ಯಾಪ್ಟನ್ ಹೆಚ್.ಆರ್.ರಂಗನಾಥ್.

Public Tv 3

ಓರ್ವ ನುರಿತ, ಪಾರಂಗತ ನಾಯಕನಿಲ್ಲದ ಲಕ್ಷ್ಯ ತಲುಪೋ ಪಯಣ, ಚುಕ್ಕಾಣಿಯಿಲ್ಲದ ಹಡಗಿನ ಪ್ರಯಾಣಕ್ಕೆ ಸಮ. ಪಬ್ಲಿಕ್ ಟಿವಿಯ ಸುದ್ದಿಜಗತ್ತಿನ ತಾಣ 7 ಸಂವತ್ಸರಗಳ ಪೂರೈಸಿ ಅಬಾಧಿತವಾಗಿ ಸಾಗಿದೆ ಅಂದ್ರೆ ಅದಕ್ಕೆ ಕಾರಣ ರಂಗನಾಥ್ ಅವರಂಥ ಸಮರ್ಥ ಮತ್ತು ಅರ್ಹ ನಾಯಕನ ಸಾರಥ್ಯದಲ್ಲಿ ಹೊರಟಿದ್ದೇ ಹೊರತು ಬೇರೇನೂ ಅಲ್ಲ. ಸುದ್ದಿವಲಯದಲ್ಲಿ ಗೆದ್ದು ಬೀಗಿ ಲೋಕಪ್ರಸಿದ್ಧವಾಗಲು ಸಹಕರಿಸಿದ ಕನ್ನಡಿಗರಿಗೆ ಪಬ್ಲಿಕ್ ಟಿವಿ ಕೊಟ್ಟ ಮತ್ತೊಂದು ಉಡುಗೊರೆ ಪಬ್ಲಿಕ್ ಮ್ಯೂಸಿಕ್. ಇನ್ನು ಪಬ್ಲಿಕ್ ಟಿವಿಯ ಮತ್ತೊಂದು ಅನನ್ಯ ಕೊಡುಗೆ ಪಬ್ಲಿಕ್ ಮೂವೀಸ್. ಅಲ್ಪಕಾಲದಲ್ಲೇ ಕನ್ನಡಿಗರ ಮನಗೆದ್ದ ಮೂವೀಸ್ ಎಂಬ ಕೂಸಿಗೆ ಇಂದೇ ಮೊದಲ ವರ್ಷ.

ಕಳೆದ ತಿಂಗಳು ಶಿವೈಕ್ಯರಾದ ನಡೆದಾಡುವ ದೇವರು, ಸಿದ್ದಗಂಗೆಯ ಸಿದ್ದಪುರಷ ಶ್ರೀಗಳ ಗೌರವಾರ್ಥ ಪಬ್ಲಿಕ್ ಟಿವಿ ಈ ಸಲದ ಸಪ್ತ ಸಂವತ್ಸರದ ಸಂಭ್ರಮಾಚರಣೆ ಮಾಡುತ್ತಿಲ್ಲ. ಶ್ರೀಗಳ ಸ್ಮರಣಾರ್ಥ ಸರಳವಾಗಿ ವರ್ಷಾಚರಣೆ ಮಾಡಲು ಪಬ್ಲಿಕ್ ಟಿವಿ ನಿರ್ಧರಿಸಿದೆ. ಶ್ರೀಗಳ ಅಗಲಿಕೆಯಿಂದ ಇಡೀ ನಾಡೇ ಶೋಕದಲ್ಲಿರುವ ಈ ಸಂದರ್ಭದಲ್ಲಿ ಯಾವುದೇ ಸಂಭ್ರಮಾಚರಣೆ ಪಬ್ಲಿಕ್ ಟಿವಿ ಮಾಡದಿರಲು ತೀರ್ಮಾನಿಸಿದೆ.

Public Tv TMK

ಸಂಭ್ರಮಾಚರಣೆಗೆ ಬದಲು ಶ್ರೀಗಳ ಗೌರವಾರ್ಥ ಮಠದ ದಾಸೋಹ ನಿಧಿಗೆ ವಾಹಿನಿ ವತಿಯಿಂದ ಅಳಿಲು ಸೇವೆ ಮಾಡಲು ನಿರ್ಣಯಿಸಲಾಯ್ತು. ಅದರಂತೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಸಿದ್ದಲಿಂಗ ಶ್ರೀಗಳಿಗೆ 5 ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿದ್ರು. ಈ ವೇಳೆ ಚಾನೆಲ್ ಸಿಇಓ ಅರುಣ್, ಸಿಓಓ ಹರೀಶ್ ಹಾಗೂ ಪ್ರಧಾನ ಸಂಪಾದಕ ಅಜ್ಮತ್ ಹಾಜರಿದ್ದು ಶ್ರೀಗಳ ಆಶೀರ್ವಾದ ಪಡೆದರು.

ಪಬ್ಲಿಕ್ ಟಿವಿಯ ಪ್ರತಿ ಮೈಲಿಗಲ್ಲಿನಲ್ಲೂ ಹೆಗಲಿಗೆ ಹೆಗಲು ಕೊಟ್ಟು, ಪ್ರತಿ ಹಂತದಲ್ಲೂ ನಮ್ಮನ್ನು ಹರಸಿ ಬೆಳೆಸಿದ ಪಬ್ಲಿಕ್ ಗೆ ಅಂದ್ರೆ ವೀಕ್ಷಕ ಮಹಾಪ್ರಭುಗಳಿಗೆ ನಮೋ  ನಮಃ..ನಿಮ್ಮ ಸಹಕಾರ ಹೀಗೇ ಇರಲಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *