ಬೆಂಗಳೂರು: ವಾಹಿನಿಯ ಆ್ಯಂಕರ್ ಆಗಿ ಸ್ಟುಡಿಯೋದ ಒಳಗಡೆ ಆಕ್ರೋಶವನ್ನು ವ್ಯಕ್ತಪಡಿಸುವುದು ಎಷ್ಟು ಸರಿ ಎಂದು ಮಹಿಳಾ ಹೋರಾಟಗಾರ್ತಿ ವಿಮಲಾ ಅವರು ರಂಗನಾಥ್ ಅವರಲ್ಲಿ ಪ್ರಶ್ನಿಸಿದ್ದಾರೆ.
ಪಬ್ಲಿಕ್ ಟಿವಿಯ 5ನೇ ವರ್ಷದ ಸಂಭ್ರಮದಲ್ಲಿ ವಿಶೇಷ ಬಿಗ್‍ಬುಲೆಟಿನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಬೀದಿಯಲ್ಲಿ ಪ್ರತಿಭಟನೆ ಮಾಡುವಾಗ ಅಕ್ರೋಶ ವ್ಯಕ್ತಪಡಿಸುತ್ತೇವೆ. ಕಲಾವಿದರು ನಾಟಕದಲ್ಲಿ ಏರು ಧ್ವನಿಯಲ್ಲಿ ಮಾತನಾಡುತ್ತಾರೆ. ಆದರೆ ನೀವು ಸ್ಟುಡಿಯೋದಲ್ಲಿ ಏರು ಧ್ವನಿಯಲ್ಲಿ ಆಕ್ರೋಷವನ್ನು ಹೊರ ಹಾಕದೇ ತಾಳ್ಮೆಯಿಂದ ಮಾತನಾಡಬಹುದಲ್ಲ ಎಂದು ಪ್ರಶ್ನಿಸಿದರು.
Advertisement
ಅತಿಥಿಗಳ ಜೊತೆ ಮಾತನಾಡುವಾಗ ಸಮಾಧಾನದಿಂದ ಇರಬೇಕು. ತಾಳ್ಮೆ ಕಳೆದುಕೊಳ್ಳಬಾರದು. ಎಚ್‍ವೈ ಮೇಟಿಯಂತಹ ಪ್ರಕರಣ ಬಂದಾಗ ವಿಡಿಯೋವನ್ನು ಪ್ರಸಾರ ಮಾಡಿದ್ದು ಸರಿ ಕಾಣಲಿಲ್ಲ. ಪದೇ ಪದೇ ವಿಡಿಯೋಗಳನ್ನು ಪ್ರಸಾರ ಮಾಡಿದರೆ ಅದು ಬೇರೊಂದು ಪ್ರಕರಣಕ್ಕೆ ಪ್ರಚೋದನೆ ನೀಡುತ್ತದೆ ಎಂದು ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ ಸುಳ್ಳು ಕೇಸ್ ವಿಚಾರವನ್ನು ವಿಮಲಾ ಅವರು ಉದಾಹರಣೆಯಾಗಿ ನೀಡಿದರು.
Advertisement
ಮಾಧ್ಯಮಗಳು ಮೇಟಿಯಂತಹ ಪ್ರಕರಣ ಬಂದಾಗ ಸ್ವಯಂನಿಯಂತ್ರಣ ಅಳವಡಿಸಿಕೊಳ್ಳಬೇಕು ಎಂದು ಈ ವೇಳೆ ಸಲಹೆ ನೀಡಿದರು.
Advertisement
ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ರಂಗನಾಥ್, ಪ್ರಜಾಪ್ರಭುತ್ವದಲ್ಲಿ ನಾವು ಪ್ರಶ್ನಾತೀತರಲ್ಲ. ನಾವು ಹೇಗೆ ಪ್ರಶ್ನೆ ಮಾಡುತ್ತೇವೋ ಅದೇ ರೀತಿಯಾಗಿ ನಮ್ಮನ್ನು ಜನ ಪ್ರಶ್ನೆ ಮಾಡಬೇಕು. ಇಲ್ಲಿ ಪಬ್ಲಿಕ್ ಟಿವಿಯನ್ನು ಹೊಗಳಿ ಮಾತನಾಡಬಾರದು, ನಮ್ಮ ತಪ್ಪುಗಳನ್ನು ತೋರಿಸಿ ಟೀಕಿಸಬೇಕು ಎಂದು ಅತಿಥಿಗಳಲ್ಲಿ ಕೇಳಿಕೊಂಡಿದ್ದರು.
Advertisement
ಸಂವಾದದ ಕೊನೆಯಲ್ಲಿ ಎಲ್ಲ ಅತಿಥಿಗಳ ಪ್ರಶ್ನೆಗೆ ಉತ್ತರಿಸಿದ ರಂಗನಾಥ್, ನಿಮ್ಮೆಲ್ಲರ ಸಲಹೆಯನ್ನು ಪರಿಗಣಿಸಿದ್ದೇನೆ. ನಾಳೆಯಿಂದಲೇ ನಿಮ್ಮ ಸಲಹೆಗಳು ಜಾರಿ ಆಗುತ್ತದೆ ಎಂದು ಹೇಳಲಾರೆ. ಆದರೆ ಮುಂದಿನ ದಿನಗಳಲ್ಲಿ ನೀವು ಪಬ್ಲಿಕ್ ಟಿವಿಯಲ್ಲಿ ಬದಲಾವಣೆಯನ್ನು ಕಾಣಲಿದ್ದೀರಿ ಎಂದು ತಿಳಿಸಿದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯ, ಹಿರಿಯ ಪತ್ರಕರ್ತ ಸತ್ಯನಾರಾಯಣ, ನಟ ಮುಖ್ಯಮಂತ್ರಿ ಚಂದ್ರು, ಹಿರಿಯ ನಟಿ ಅರುಂಧತಿ ನಾಗ್, ನಿವೃತ್ತ ಡಿಜಿ, ರೇವಣ ಸಿದ್ದಯ್ಯ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್, ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ದ್ವಾರಕನಾಥ್, ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ, ಉತ್ತರ ಕರ್ನಾಟಕ ನಿವಾಸಿಗಳ ಸಂಘದ ಅಧ್ಯಕ್ಷ ಚಂದ್ರೇಶಖರ್ ಸಾಂಬ್ರಾಣಿ ಅತಿಥಿಗಳಾಗಿ ಭಾಗವಹಿಸಿದ್ದರು.