– 2012ರ ಫೆಬ್ರವರಿ 12 ರಂದು ಹುಟ್ಟಿದ ಪಬ್ಲಿಕ್ ಟಿವಿಗೆ ಇಂದು 12 ವರ್ಷ
ಪಬ್ಲಿಕ್ ಟಿವಿ.., ಕನ್ನಡ ಸುದ್ದಿ ಲೋಕದ ಸರ್ವಾಂತರ್ಯಾಮಿ..! ಪಬ್ಲಿಕ್ ಟಿವಿ.., ಕನ್ನಡಿಗರ ಮನೆ ಮನಗಳಲ್ಲಿ ಅಚ್ಚೊತ್ತಿದ ಹೆಸರು..! ಪಬ್ಲಿಕ್ ಟಿವಿ.., ಸೃಜನಶೀಲ, ಪ್ರಯೋಗಶೀಲ ಹಾಗೂ ಮೌಲ್ಯಪ್ರತಿಪಾದನೆಯ ಸುದ್ದಿಬಿಂಬ..! 2012ರ ಫೆಬ್ರವರಿ 12 ರಂದು ಲೋಕಾರ್ಪಣೆಗೊಂಡ ಅಲ್ಪಕಾಲದಲ್ಲೇ ಜನಪ್ರಿಯತೆ ಪಡೆದ ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿಗೆ ಇಂದು 12 ವರ್ಷದ (Public TV 12th Anniversary) ಸಾರ್ಥಕ ಸಂಭ್ರಮ..! ವೀಕ್ಷಕ ಪ್ರಭುಗಳೇ.. ನೀವಿಲ್ಲದೆ ನಾವಿಲ್ಲ..! ನಮ್ಮನ್ನು ಹರಸಿ ಹಾರೈಸಿ ಬೆಳೆಸಿದ ನಿಮ್ಮೆಲ್ಲರಿಗೂ ಶರಣು ಶರಣಾರ್ಥಿ..! ಇದು ಪಬ್ಲಿಕ್ ಟಿವಿಯ ದ್ವಾದಶಿಯ ಸಂಭ್ರಮದ ಹಬ್ಬ.
Advertisement
Advertisement
ದಿನದ 24 ಗಂಟೆಯೂ ಜಗತ್ತಿನ ಆಗುಹೋಗುಗಳನ್ನು ನಿಮ್ಮ ಮನೆಯಂಗಳಕ್ಕೆ ತಲುಪಿಸುವ ಧಾವಂತದಲ್ಲೇ ಇರುವ ಪಬ್ಲಿಕ್ ಟಿವಿ (Public TV) ಪರಿವಾರದಲ್ಲಿ ಇಂದು ಹಬ್ಬದ ಸಂಭ್ರಮ. ಸುದ್ದಿಲೋಕದ ಲೆಕ್ಕವಿಲ್ಲದಷ್ಟು ಜಂಜಾಟಗಳ ಮಧ್ಯೆ ಮತ್ತೊಂದು ವರುಷ ಕಳೆದದ್ದು ಗೊತ್ತಾಗಲೇ ಇಲ್ಲ. ಪಬ್ಲಿಕ್ ಟಿವಿಗೆ 12 ವರ್ಷ ತುಂಬಿದ್ದರೆ.., ಪಬ್ಲಿಕ್ ಮೂವೀಸ್‌ಗೂ ಇಂದು 6ರ ಸಡಗರ….
Advertisement
ಜನರಿಗೆ ಸುತ್ತಮುತ್ತಲಿನ ಬೆಳವಣಿಗೆಗಳೇನು ಅಂತ ತಿಳಿಯೋ ತವಕ. ಆ ತುಡಿತಕ್ಕೆ ತೃಪ್ತಿಯಾಗುವಂತೆ ಪ್ರತಿಯೊಂದು ವಿದ್ಯಮಾನವನ್ನು ತಿಳಿಸುವುದರಲ್ಲಿ ಪಬ್ಲಿಕ್ ಟಿವಿ ಸದಾ ಮುಂದು. ಕೈಯಲ್ಲೊಂದು ಫೋನಿದ್ರೆ ಸಾಕು.., ಜಗದಗಲದ ಸಕಲ ಮಾಹಿತಿಯೂ ಬೆರಳಂಚಿನಲ್ಲೇ ನಲಿಯುತ್ತಿರುವ ಕಾಲವಿದು. ಅಂಥದ್ರಲ್ಲಿ ಸುದ್ದಿಯನ್ನು ಅತ್ಯಂತ ಶೀಘ್ರವಾಗಿ, ಎಲ್ಲರಿಗಿಂತ ಮೊದಲು ಮತ್ತು ಘಟನೆಯ ಸತ್ಯಾಸತ್ಯತೆಯ ಪರಿಶೀಲನೆ ಮಾಡಿ ಪ್ರಸಾರ ಮಾಡುವುದು ಅಂದ್ರೆ ಸುಲಭದ ಮಾತಲ್ಲ. ಸುದ್ದಿ ಹೊತ್ತು ತಂದ ವರದಿಗಾರನಿಂದ ಹಿಡಿದು, ಸುದ್ದಿಪ್ರತಿಯನ್ನು ತಿದ್ದಿ ತೀಡಿ, ಸುದ್ದಿವಾಚಕರ ಮೂಲಕ ವೀಕ್ಷಕರಿಗೆ ತಲುಪಿಸುವವರೆಗೂ.., ಆ ವಾರ್ತೆಯ ಹಿಂದೆ ಹಲವರ ಶ್ರದ್ಧೆ ಮತ್ತು ಶ್ರಮವಿರುತ್ತದೆ.
Advertisement
ಪುಟ್ಟ ಕುಟುಂಬವಾಗಿ ಶುರುವಾದ ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿ ಇಂದು ಇಷ್ಟು ದೊಡ್ಡ ಬಳಗ ಹೊಂದಲು ನಿಮ್ಮೆಲ್ಲರ ಪ್ರೀತಿಯೇ ಪ್ರೇರಣೆ ಮತ್ತು ಶಕ್ತಿ. ಕ್ಯಾಪ್ಟನ್ ಹೆಚ್.ಆರ್.ರಂಗನಾಥ್ (H.R.Ranganath) ಅವರ ಸರಿ ಸಾಟಿಯಿಲ್ಲದ ಕಾರ್ಯತತ್ಪರತೆಯ ಫಲವೇ ಪಬ್ಲಿಕ್ ಟಿವಿಗೆ ಪ್ರಾಪ್ತಿಯಾಗಿರೋ ಜನಪ್ರಿಯತೆಗೆ ಸಾಕ್ಷಿ. ಆಳುವವರ ಕಿವಿ ಹಿಂಡುತ್ತಾ, ರಾಜಕಾರಣದ ಚರ್ಚೆಗಳಿಗೆ ಗಾಂಭೀರ್ಯತೆಯ ಮೆರುಗು ನೀಡುತ್ತಾ.., ಸಲಹೆಯ ಸೂತ್ರ, ಅಗತ್ಯವಿದ್ದಾಗ ಮಾತಿನ ಪೆಟ್ಟು, ಲಘುಹಾಸ್ಯದ ಲೇಪ ಕೊಟ್ಟು ನಿತ್ಯ ರಾತ್ರಿ ಒಂಭತ್ತರ ಪ್ರೈಮ್ ಟೈಮಿಗೆ ಸರಿಸಾಟಿಯಿಲ್ಲದ ವೀಕ್ಷಕ ವೃಂದವನ್ನು ಹೆಚ್.ಆರ್.ರಂಗನಾಥ್ ಅವ್ರು ಕಟ್ಟಿಕೊಂಡ ಪರಿಯೇ ಅಮೋಘ. ಅದಕ್ಕೆ ಇವತ್ತಿಗೂ ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ಕನ್ನಡ ಸುದ್ದಿವಾಹಿನಿ ಇತಿಹಾಸದ ಮೈಲಿಗಲ್ಲು!
ಪ್ರಚಲಿತ ವಿದ್ಯಮಾನಗಳ ಜೊತೆಗೆ ಸದುದ್ದೇಶಭರಿತ ಕಾರ್ಯಕ್ರಮಗಳನ್ನು ಕೊಡುವುದರಲ್ಲೂ ಪಬ್ಲಿಕ್ ಟಿವಿ ಸದಾ ಮುಂದೆ. ಬೆಳಕು, ಪಬ್ಲಿಕ್ ಹೀರೋ, ಎಸ್‌ಎಸ್‌ಎಲ್‌ಸಿಯ ಬಡ ಮಕ್ಕಳಿಗೆ ಉಚಿತ ಟ್ಯಾಬ್ ಕೊಡುವ ಜ್ಞಾನದೀವಿಗೆ ಅಭಿಯಾನ.., ಕೊರೊನಾ ಲಾಕ್‌ಡೌನ್ ಕಾಲದಲ್ಲಿ ನಡೆಸಿಕೊಟ್ಟ ಮನೆಯೇ ಮಂತ್ರಾಲಯ.., ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದೇವೆ… ಈ ಮೂಲಕ ಜನಮನ ಗೆದ್ದಿದ್ದೇವೆ.
ವೀಕ್ಷಕ ಪ್ರಭುವಿನ ಪ್ರೀತಿಯಿಲ್ಲದೆ ನಾವಿಲ್ಲ. ನಿಮ್ಮೆಲ್ಲರ ಸಹಕಾರಕ್ಕೆ ಪಬ್ಲಿಕ್ ಟಿವಿಯ ಕೋಟಿ ನಮನ. 12 ವರುಷಗಳ ನಮ್ಮ ನಿಮ್ಮ ಈ ಅವಿಸ್ಮರಣೀಯ ಅನುಬಂಧ ಸದಾ ಹೀಗೇ ಮುಂದುವರಿಯಲಿ ಅನ್ನೋದು ನಮ್ಮ ಆಶಯ. ನಮ್ಮ ಈ ಬೆಳವಣಿಗೆಯಲ್ಲಿ ಸಹಕಾರ ನೀಡಿದ ಜಾಹೀರಾತುದಾರರು ಹಾಗೂ ಕೇಬಲ್ ಆಪರೇಟರ್‌ಗಳಿಗೂ ಹೃದಯಪೂರ್ವಕ ಧನ್ಯವಾದ…