ನ್ಯೂಸ್ ಬೇಕು ಅಂದ್ರೆ ಸುದ್ದಿ ಪತ್ರಿಕೆಗಳೇ ಮೂಲಾಧಾರವಾಗಿದ್ದ ಕಾಲವೊಂದಿತ್ತು. ನಿಗದಿತ ಅವಧಿಯಲ್ಲಿ ಇಂತಿಷ್ಟು ಮಾತ್ರವೇ ಸುದ್ದಿ ಬಿತ್ತರವಾಗುತ್ತಿದ್ದ ಸಮಯ ಈಗಿಲ್ಲ. ಈಗೇನಿದ್ದರೂ ಈ ಕ್ಷಣ ಘಟಿಸಿದ್ದು ಮರುಘಳಿಗೆಯೇ ಟಿವಿ ಪರದೆ ಮೇಲೆ ಮೂಡಿ ಬರುವ ಹೈಟೆಕ್ ಟೆಕ್ನಾಲಜಿಯ ಯುಗ. ಸುದ್ದಿ ಮನೆಗೆ ಯಾವಾಗ ತಂತ್ರಜ್ಞಾನದ ಸ್ಪರ್ಶ ಸಿಕ್ಕಿತೋ ಸಕಲವೂ ಬದಲಾಗಿ ಹೋಗಿದೆ. ಸುದ್ದಿ ಪ್ರಪಂಚ ಜನರ ಪಾಲಿಗೆ ನಿತ್ಯ ಅಗತ್ಯ ವಸ್ತುವಿನಂತಾಗಿ ಬೆಳೆದು ನಿಂತಿದೆ. ಬೆಳಗೆದ್ದು ಕಾಫಿ ಹೀರುವಷ್ಟೇ ಇಂಪಾರ್ಟೆಂಟು ಮುಂಜಾವಿನ ಮೊದಲ ವಾರ್ತೆ. ಇದಿಲ್ಲದ ಹೊರತು ಹೊಸ ದಿನಕ್ಕೆ ಕಿಕ್ ಸ್ಟಾರ್ಟ್ ಸಿಗದು.
ನಿಷ್ಪಕ್ಷಪಾತ ಸುದ್ದಿ ಬಿತ್ತರಿಸಿ, ವಸ್ತುನಿಷ್ಠ ವಿಶ್ಲೇಷಣೆ ಜೊತೆಗೆ ಸ್ಪಷ್ಟ ಮತ್ತು ನಿಖರ ಮಾಹಿತಿ ಕೊಡುವುದು ಅಂದುಕೊಂಡಷ್ಟು ಸುಲಭವಲ್ಲ. ಅಂಥ ಸವಾಲಿನ ಮಧ್ಯೆ ಯಾವುದೇ ಪೂರ್ವಾಗ್ರಹವಿಲ್ಲದೆ ಸುದ್ದಿಯೂ ನೀಡುತ್ತಾ, ನೊಂದವರಿಗೆ ನೆರವಿನ ಹಸ್ತ ಚಾಚುತ್ತಾ, ಅನ್ಯಾಯದ ವಿರುದ್ಧ ಛಾಟಿ ಬೀಸುತ್ತಾ ಸುದ್ದಿ ಬಿತ್ತರಿಸುವ ಚಾನೆಲ್‌ನ ಅನಿವಾರ್ಯತೆ ಕನ್ನಡಿಗರಿಗೆ ಖಂಡಿತ ಇತ್ತು. ಅದನ್ನು ಪರಿಪೂರ್ಣವಾಗಿ ಈಡೇರಿಸಿದ ಶ್ರೇಯ ನಿಮ್ಮ ಪಬ್ಲಿಕ್ ಟಿವಿಯದ್ದು. ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ ಎಂಬ ಘೋಷವಾಕ್ಯ ಹೊತ್ತು ಫೆಬ್ರವರಿ 12, 2012ರಂದು ಕರುನಾಡ ಮನೆ ಮನ ತುಂಬಿದ ನಿಮ್ಮ ಪಬ್ಲಿಕ್ ಟಿವಿಗೆ ಈಗ ದಶಕ ಪೂರೈಸಿದ ಸಡಗರ. 10 ವರ್ಷದ ಸಾರ್ಥಕ ಸಂಭ್ರಮ.
Advertisement
ಹೌದು. ಸುದ್ದಿ ಲೋಕ ಅಗಾಧವಾಗಿ ಬೆಳೆದಿದೆ. ಊಹಿಸಲಸಾಧ್ಯ ತಂತ್ರಜ್ಞಾನದ ನೆರವಿಂದ ಕಾರ್ಯಕ್ಷಮತೆಯೂ ವಿಸ್ತರಿಸಿದೆ. ಜೊತೆ ಜೊತೆಗೆ ನ್ಯೂಸ್ ಜಗತ್ತಿನತ್ತ ಸದಾ ದೃಷ್ಟಿಯಿಡುವ ವೀಕ್ಷಕರೂ ಬಹಳ ಜಾಣರಾಗಿದ್ದಾರೆ. ಕೊಟ್ಟ ಸುದ್ದಿಯನ್ನೆಲ್ಲಾ ದೇಗುಲದ ಸಿಹಿ ತೀರ್ಥದಂತೆ ಸ್ವೀಕರಿಸುವ ವೀಕ್ಷಕರು ಈಗಿಲ್ಲ. ನಿಖರ ಮತ್ತು ಪ್ರಖರ ಸುದ್ದಿಯ ಜೊತೆಗೆ ಪರದೆ ಮೇಲೆ ತೋರುವ ಸುದ್ದಿಯ ಗುಣಮಟ್ಟ ಅಳೆಯಬಲ್ಲ ಚಾಣಾಕ್ಷತೆ ವೀಕ್ಷಕರಿಗಿದೆ. ಅಂತಹ ಕೋಟ್ಯಂತರ ಪ್ರಜ್ಞಾವಂತ ಸುದ್ದಿಪ್ರಿಯರ ಅಚ್ಚುಮೆಚ್ಚಿನ ಚಾನೆಲ್ಲಾಗಿ ಪಬ್ಲಿಕ್ ಟಿವಿ ಹೊರಹೊಮ್ಮಿದ ಹಾದಿ ನಮ್ಮ ಪಾಲಿಗೆ ಖಂಡಿತ ಹೂವಿನದ್ದಾಗಿರಲಿಲ್ಲ. ಆದರೆ ಆ ಗಮ್ಯವನ್ನು ತಲುಪಲೇಬೇಕೆಂಬ ಹಠ ತೊಟ್ಟು ನಾವೆಯ ಚುಕ್ಕಾಣಿ ಹಿಡಿದದ್ದು ಪಬ್ಲಿಕ್ ಟಿವಿಯ ಕ್ಯಾಪ್ಟನ್ ಹೆಚ್.ಆರ್.ರಂಗನಾಥ್.
Advertisement
Advertisement
ಸುದ್ದಿವಾಹಿನಿ ಅಂದ್ಮೇಲೆ ಇಲ್ಲಿ ಪ್ರತಿ ದಿನವೂ ಪ್ರತಿ ನಿಮಿಷವೂ ಸಹಜ ಸ್ಪರ್ಧೆ ಇದ್ದೇ ಇರುತ್ತದೆ. ಅದಾಗ್ಲೇ ಬೇರೂರಿದ್ದ ಇತರೆ ವಾಹಿನಿಗಳ ಮುಂದೆ ಪುಟ್ಟ ಕೂಸಾಗಿ ಕಾಲಿಟ್ಟ ಪಬ್ಲಿಕ್ ಟಿವಿ ಅಲ್ಪಾವಧಿಯಲ್ಲೇ ಕನ್ನಡ ನ್ಯೂಸ್ ಜಗತ್ತಿನ ಆಧಿಪತ್ಯದತ್ತ ದಾಪುಗಾಲಿಟ್ಟದ್ದು ಹೆಮ್ಮೆಯ ವಿಚಾರ. ದಿನನಿತ್ಯದ ಆಗು ಹೋಗುಗಳನ್ನು ಕಾಟಾಚಾರದ ಸುದ್ದಿಯಾಗಿಸದೇ ಸಮಾಚಾರಕ್ಕೊಂದು ಸದಾಚಾರದ ಚೌಕಟ್ಟು ಹಾಕಿ, ವೃತ್ತಾಂತಕ್ಕೆ ವೃತ್ತಿಪರತೆಯ ವಿಶ್ಲೇಷಣೆ ನೀಡುವುದು ಪಬ್ಲಿಕ್ ಟಿವಿಯ ಟ್ರೇಡ್ ಮಾರ್ಕ್. ಟಿಆರ್‌ಪಿ ಸಮರದಲ್ಲಿ ಬೇರುಮಟ್ಟದಿಂದ ಶುರುಮಾಡಿ ಅಲ್ಪಕಾಲದಲ್ಲೇ ಕನ್ನಡಿಗರ ಮನೆ ಮನ ಗೆದ್ದ ಹೆಮ್ಮೆ ನಮ್ಮದು.
Advertisement
ಸುದ್ದಿಪ್ರಿಯ ಬಳಗಕ್ಕೆ ಸದಾ ಸತ್ಯ, ಸ್ಪಷ್ಟ ಮತ್ತು ಸದುದ್ದೇಶಭರಿತ ಕಾರ್ಯಕ್ರಮಗಳನ್ನು ಕೊಡುವುದು ಪಬ್ಲಿಕ್ ಟಿವಿಯ ಧ್ಯೇಯ. ಮಾಹಿತಿ ಜೊತೆ ಮನರಂಜನೆ ಅಂತ ಹಣೆಪಟ್ಟಿ ಹೊತ್ತ ಚಾನೆಲ್ಲುಗಳ ಮಧ್ಯೆ, ಆಳುವವರ ಕಿವಿ ಹಿಂಡುತ್ತಾ, ನಿತ್ಯದ ವಿದ್ಯಮಾನಗಳಿಗೆ, ರಾಜಕಾರಣದ ಚರ್ಚೆಗಳಿಗೆ, ಗಾಂಭೀರ್ಯತೆಯ ಮೆರುಗು, ಸಲಹೆಯ ಸೂತ್ರ, ಅಗತ್ಯವಿದ್ದಾಗ ಮಾತಿನ ಪೆಟ್ಟು, ಲಘು ಹಾಸ್ಯದ ಲೇಪ ಕೊಟ್ಟು ಪ್ರತಿದಿನ ರಾತ್ರಿ ಒಂಭತ್ತರ ಪ್ರೈಮ್ ಟೈಮಿಗೆ ಸರಿ ಸಾಟಿಯಿಲ್ಲದ ವೀಕ್ಷಕ ವೃಂದವನ್ನು ಹೆಚ್.ಆರ್.ರಂಗನಾಥ್ ಕಟ್ಟಿಕೊಂಡ ಪರಿ ಅತ್ಯಮೋಘ. ಅದಕ್ಕೇ ಇವತ್ತಿಗೂ ಈ ಕ್ಷಣಕ್ಕೂ ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್, ಕನ್ನಡ ಸುದ್ದಿವಾಹಿನಿ ಇತಿಹಾಸದ ಮೈಲಿಗಲ್ಲು.
ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಲಾಕ್‌ಡೌನ್ ಸಮಯವನ್ನು ನಾವು ಮರೆಯುವಂತೆಯೇ ಇಲ್ಲ. ಎಲ್ಲ ವರ್ಗದ ಜನರನ್ನೂ ಜಾತಿ, ವರ್ಣ, ಅಂತಸ್ತಿನ ಭೇದವಿಲ್ಲದೆ ನೋಯಿಸಿದೆ ಮಹಾಮಾರಿ ವೈರಸ್. ಈ ವೇಳೆ ಹೆಚ್.ಆರ್.ರಂಗನಾಥ್ ಮನೆಯೇ ಮಂತ್ರಾಲಯ ಮೂಲಕ ಅದೆಷ್ಟೋ ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳಿದ್ದು ಅದನ್ನು ಸಾರ್ಥಕ ಕಾರ್ಯಕ್ರಮವಾಗಿಸಿತ್ತು. ಬರೀ ಮಾತಿನ ಮುಲಾಮು ಹಚ್ಚದೇ, ಅಸಲಿಗೆ ನೆರವಿನ ನೆಂಟಿನ ಪಾತ್ರವಹಿಸಿದ ಅರ್ಥಪೂರ್ಣ ಕಾರ್ಯಕ್ರಮವಾಯ್ತು ಮನೆಯೇ ಮಂತ್ರಾಲಯ.
ಪಬ್ಲಿಕ್ ಟಿವಿಯ ಮತ್ತೊಂದು ಸಮಾಜಮುಖಿ ಕಾರ್ಯಕ್ರಮ ಜ್ಞಾನದೀವಿಗೆ. ಕೊರೊನಾ ಹೆಮ್ಮಾರಿಯ ಹೊಡೆತದಿಂದ ವಿದ್ಯಾಭ್ಯಾಸದ ದಿಕ್ಕುತಪ್ಪಿ ದಿಕ್ಕು ತೋಚದಂತಾದ ಗ್ರಾಮೀಣ ಭಾಗದ ಎಸ್ಎಸ್ಎಲ್‌ಸಿ ಮಕ್ಕಳಿಗೆ ಆನ್‌ಲೈನ್ ಪಾಠಕ್ಕೆ ಅಡ್ಡಿಯಾಗದಂತೆ ಮಾಡಲು ಸೃಷ್ಟಿಯಾದ ಮಹಾ ಅಭಿಯಾನವೇ ಜ್ಞಾನದೀವಿಗೆ.
ಸರ್ಕಾರಿ ಶಾಲೆಯ 10ನೇ ತರಗತಿ ಮಕ್ಕಳ ಸಮಸ್ಯೆ ಅರಿತ ಪಬ್ಲಿಕ್ ಟಿವಿ, ರೋಟರಿ ಸಂಸ್ಥೆ ಸಹಯೋಗದಲ್ಲಿ ಈ ಮಹಾ ಜ್ಞಾನಯಜ್ಞಕ್ಕೆ ಮುನ್ನುಡಿ ಬರೆಯಿತು. ಜ್ಞಾನದೀವಿಗೆ ಹೆಸರಿನ 10ನೇ ತರಗತಿ ಮಕ್ಕಳಿಗೆ ಉಚಿತ ಟ್ಯಾಬ್ ವಿತರಿಸುವ ಈ ಮಹಾ ಅಭಿಯಾನ ನಿರ್ವಿಘ್ನವಾಗಿ ನೆರವೇರಿತು. ಮಹಾದಾನಿಗಳ ಉದಾರ ನೆರವಿಂದ ಸಾವಿರಾರು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕಾರಿಯಾಯ್ತು. ಇದನ್ನೂ ಓದಿ: ಸಿದ್ದಗಂಗಾ ಮಠದಲ್ಲಿ ಪಬ್ಲಿಕ್ ಟಿವಿ ದಶಮಾನೋತ್ಸವ ಸಂಭ್ರಮಕ್ಕೆ ಚಾಲನೆ
ಪಬ್ಲಿಕ್ ಟಿವಿಯ ಮತ್ತೊಂದು ಹೆಮ್ಮೆಯ ಕಾರ್ಯಕ್ರಮ. ನೊಂದವರ ಕಣ್ಣೀರನ್ನು ಒರೆಸೋದಷ್ಟೇ ಅಲ್ಲ, ಅವರಿಗೆ ವಾಸ್ತವದಲ್ಲಿ ಕೈಯಲ್ಲಾದ ಸಹಾಯ ಮಾಡುವ ಅರ್ಥಪೂರ್ಣ ಕಾರ್ಯಕ್ರಮವಿದು. ಕಳೆದ 10 ವರ್ಷಗಳಲ್ಲಿ ಇಂಥ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಪಬ್ಲಿಕ್ ಟಿವಿ ಯಶಸ್ವಿಯಾಗಿ ಪ್ರಸಾರ ಮಾಡಿದೆ. ಈ ಪೈಕಿ ಪಬ್ಲಿಕ್ ಹೀರೋ ಸಹ ಒಂದು. ಸಮಾಜದಲ್ಲಿ ಎಲೆಮರೆ ಕಾಯಿಗಳಂತಿದ್ದೂ, ಸಮಾಜಮುಖಿ ಕಾರ್ಯಗಳನ್ನು ಮಾಡುವ ಅಸಲಿ ಹೀರೋಗಳನ್ನು ಗುರುತಿಸಿ, ಅಭಿನಂದಿಸುವ ಕಾರ್ಯವನ್ನು ಪಬ್ಲಿಕ್ ಟಿವಿ ನಿರಂತವಾಗಿ ಮಾಡುತ್ತಿದೆ. ತನ್ಮೂಲಕ ವೀಕ್ಷಕ ಪ್ರಭುಗಳ ಹೃದಯವನ್ನೂ ಗೆದ್ದಿದೆ.
ಪಬ್ಲಿಕ್ ಟಿವಿ ಪ್ರಾರಂಭವಾದಾಗಿಂದ ಈವರೆಗೂ ಇಂಥ ಅದೆಷ್ಟೋ ಸಮಾಜ ಕಟ್ಟುವ ಕಾರ್ಯಗಳನ್ನು, ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡುತ್ತ ಬಂದಿದೆ. ಈ ಮೂಲಕ ವೀಕ್ಷಕ ದೊರೆಯ ಮನಗೆದ್ದಿದೆ. ಸುದ್ದಿ ವಲಯದಲ್ಲಿ ಗೆದ್ದು ಬೀಗಿ ಲೋಕಪ್ರಸಿದ್ಧವಾಗಲು ಸಹಕರಿಸಿದ ಕನ್ನಡಿಗರಿಗೆ ಪಬ್ಲಿಕ್ ಟಿವಿ ಕೊಟ್ಟ ಮತ್ತೆರಡು ಉಡುಗೊರೆ ಅಂದ್ರೆ ಅದು ಪಬ್ಲಿಕ್ ಮ್ಯೂಸಿಕ್ ಹಾಗೂ ಪಬ್ಲಿಕ್ ಮೂವೀಸ್. ಕನ್ನಡಿಗರ ನೆಚ್ಚಿನ ಸಿನಿಮಾ ವಾಹಿನಿ ಪಬ್ಲಿಕ್ ಮೂವೀಸ್‌ಗೆ ಇಂದು ನಾಲ್ಕನೇ ವರ್ಷದ ಹುಟ್ಟುಹಬ್ಬ. 2018 ಫೆಬ್ರವರಿ 12ರಂದೇ ಲೋಕಾರ್ಪಣೆಗೊಂಡಿತ್ತು ನಿಮ್ಮ ಪ್ರೀತಿಯ ಪಬ್ಲಿಕ್ ಮೂವೀಸ್.
ವೀಕ್ಷಕ ಮಹಾಪ್ರಭುಗಳೇ. ನೀವಿಲ್ಲದೆ ನಾವಿಲ್ಲ. ಈ 10 ವರ್ಷ ನಮ್ಮನ್ನು ಬೆಂಬಲಿಸಿ ಬೆಳೆಸಿದ್ದೀರಿ. ಬೆನ್ನು ತಟ್ಟಿ ಬಲ ತುಂಬಿದ್ದೀರಿ. ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಿದ್ದೀರಿ. ಎಲ್ಲಾ ಪರಿಸ್ಥಿತಿಗಳಲ್ಲೂ ನಾವಿದ್ದೀವಿ ಅಂತ ನಮ್ಮ ಜೊತೆ ನಿಂತಿದ್ದೀರಿ. ನಮ್ಮ ಅನ್ನದಾತರಾದ ನಿಮ್ಮ ಪ್ರೀತಿ ಪೂರ್ವಕ ಸಹಕಾರ ಹೀಗೇ ಇರಲಿ ಅಂತ ವಿನಮ್ರವಾಗಿ ಕೇಳಿಕೊಳ್ಳುತ್ತೇವೆ. ಧನ್ಯವಾದ ಕರ್ನಾಟಕ.