ಪುರಾಣ, ಐತಿಹಾಸಿಕ ಚರಿತ್ರೆಯ ಶಕ್ತಿ ಕೇಂದ್ರ ಶಿರಸಂಗಿಯ ಕಾಳಿ ದೇವಾಲಯ

Public TV
7 Min Read
savadattiShriKalikaDeviTemple1

– ಐವರು ರಾಕ್ಷಸರನ್ನು ಸಂಹಾರಗೈದ ಕಾಳಿ
– ಋಷ್ಯಶೃಂಗರ ಆಶೀರ್ವಾದ ಪಡೆದ ರಾಮ

ಯುಗಾದಿ ಹತ್ತಿರ ಬರುತ್ತಿದೆ. ಈ ಯುಗಾದಿ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಹೋಗುವುದು ವಾಡಿಕೆ. ಹೀಗಾಗಿ ಈ ವಾರದ ‘ಪಬ್ಲಿಕ್ ಟೂರ್’ ನಲ್ಲಿ ಯುಗಾದಿ ವೇಳೆ ವಿಶೇಷ ಜಾತ್ರೆ ನಡೆಯುವ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿರುವ ಶ್ರೀ ಕಾಳಿಕಾದೇವಿಯ ದೇವಾಲಯದ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಪೌರಾಣಿಕ ಹಿನ್ನೆಲೆ, ರಾಮಾಯಣದ ಕಾಲದಲ್ಲಿ ರಾಮ ಲಕ್ಷ್ಮಣರು ಭೇಟಿ ನೀಡಿರುವ ಶಾಸನದ ಉಲ್ಲೇಖ, ರಾಜಮಹಾರಾಜರ ಕಾಲದ ಐತಿಹಾಸಿಕ ಚರಿತ್ರೆ ಹೀಗೆ ಎಲ್ಲ ಶಕ್ತಿಗಳನ್ನೊಳಗೊಂಡ ಶಕ್ತಿಕೇಂದ್ರ ಶಿರಸಂಗಿಯ ಶ್ರೀ ಕಾಳಿಕಾದೇವಿಯ ದೇವಸ್ಥಾನ.

PUBLIC TOUR KARNATAKA TRAVEL GUIDE

ಪ್ರತಿ ವರ್ಷ ಯುಗಾದಿಯಂದು ಬಂದು ತಾವು ಬೆಳೆದ ಹೊಸ ಗೋಧಿ ಧಾನ್ಯವನ್ನು ಕಾಳಿಕಾ ದೇವಿಗೆ ಅರ್ಪಿಸಿ, ಅದರಿಂದ ತಯಾರಿಸಿದ ಪ್ರಸಾದವನ್ನು ಚೈತ್ರ ಶುದ್ಧ ಪ್ರತಿಪದೆಯಂದು ಸ್ವೀಕರಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂಬುದು ಇಲ್ಲಿಗೆ ಬರುವ ವಿಶ್ವಕರ್ಮ ಸಮಾಜದ ಭಕ್ತರ ನಂಬಿಕೆ.

ಪ್ರತಿ ಯುಗಾದಿ ಸಂದರ್ಭದಲ್ಲಿ ಇಲ್ಲಿ ಐದು ದಿನಗಳ ಜಾತ್ರೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಯುಗಾದಿ ಅಮವಾಸ್ಯೆಯ ಬೆಳಿಗ್ಗೆ ದೇವಿಯ ಅಭಿಷೇಕದೊಂದಿಗೆ ಜಾತ್ರಾ ಕಾರ್ಯಕ್ರಮಗಳು ಆರಂಭವಾಗುತ್ತವೆ. ಧ್ವಜಾರೋಹಣ, ದೇವಿಗೆ ಹೊಸ ಗೋಧಿಯ (ನಿಧಿ) ಅರ್ಪಣೆ, ನಂತರ ಚೈತ್ರಶುದ್ಧ ಪ್ರತಿಪದೆಯ ಬೆಳಿಗ್ಗೆ 5 ಘಂಟೆಗೆ ಬುತ್ತಿ ಹಾರಿಸುವ ಕಾರ್ಯಕ್ರಮ ನಡೆಯುತ್ತದೆ. ಕಾಳಿಕಾದೇವಿ ರಾಕ್ಷಸರ ಸಂಹಾರ ಮಾಡಿದ ಸಂದರ್ಭದ ಸಂಕೇತವಾಗಿ ಈ ಆಚರಣೆ ನಡೆಯುತ್ತದೆ.

ಅನ್ನವನ್ನು ರುಂಡದ ಆಕಾರದಲ್ಲಿ ಮಾಡಿ ಹಾರಿಸಲಾಗುತ್ತದೆ. ಈ ಬುತ್ತಿ ಯಾರಿಗೆ ಸಿಗುತ್ತದೋ ಅವರ ಜೀವನದಲ್ಲಿ ಅನ್ನ ಮತ್ತು ವಸ್ತ್ರಕ್ಕೆ ಕೊರತೆ ಇರುವುದಿಲ್ಲ ಎಂಬ ನಂಬಿಕೆಯಿದೆ. ಬುತ್ತಿ ಸಿಕ್ಕವರಿಗೆ ಭಾಗ್ಯದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇದೆ. ಯುಗಾದಿಯ ಪ್ರತಿಪದೆಯ ನಂತರ ಬರುವ ಐದೂ ಪಂಚಮಿ ತಿಥಿಗಳೂ ಕೂಡ ವಿಶೇಷ ದಿನಗಳಾಗಿವೆ. ಅದರಲ್ಲೂ ಐದನೇ ಪಂಚಮಿ ಯಂದು ಹೆಚ್ಚಿನ ಮಹತ್ವ. ದೇವಿಯು ಚೈತ್ರ ಶುದ್ದ ಪ್ರತಿಪದೆಯಂದು ರಾಕ್ಷಸರ ಸಂಹಾರಕ್ಕೆ ಹೋದವಳು ಜೇಷ್ಠ ಶುದ್ಧ ಪಂಚಮಿ (ಐದನೇ ಪಂಚಮಿ) ಯಂದು ಮರಳಿ ದೇವಸ್ಥಾನಕ್ಕೆ ಬರುತ್ತಾಳೆ ಎಂಬುದು ವಾಡಿಕೆ.

savadatti Shri Kalika Devi Temple 10

ಎಲ್ಲಿದೆ?
ದೇವಸ್ಥಾನ ಇರುವ ಶಿರಸಂಗಿ ಗ್ರಾಮವೂ ಬೆಳಗಾವಿಯಿಂದ 80 ಕಿ.ಮೀ, ಬೆಂಗಳೂರಿನಿಂದ 400 ಕಿ.ಮೀ ಹಾಗೂ ಸವದತ್ತಿಯಿಂದ 22 ಕಿ.ಮೀ, ಧಾರವಾಡದಿಂದ 55 ಕಿ.ಮೀ ದೂರದಲ್ಲಿದೆ.

ರಾಮಕೃಷ್ಣ ಪರಮಹಂಸರು ಕಾಳಿಕಾ ದೇವಿಯನ್ನು ಪೂಜಿಸಿ ಸಾಕ್ಷಾತ್ಕಾರ ಮಾಡಿಕೊಂಡು ಕಾಳಿಕಾದೇವಿಯ ಭಕ್ತರಾಗಿದ್ದರು. ಸ್ವಾಮಿ ವಿವೇಕಾನಂದರೂ ಕೂಡ ಕಾಳಿಕಾ ದೇವಿ ಬಗ್ಗೆ ಭಕ್ತಿಪರವಶರಾಗಿ ಚೈತನ್ಯಮಯರೂಪ ಎಂದು ವರ್ಣಿಸಿದ್ದರು. ಕವಿ ಡಿ.ಎಸ್.ಕರ್ಕಿಯವರು ತಮ್ಮ ಕವನದಲ್ಲಿ ಉತ್ತರ ಕರ್ನಾಟಕದ ವಿವಿಧ ಸ್ಥಳಗಳ ವರ್ಣನೆಯಲ್ಲಿ ಶಿರಸಂಗಿಯನ್ನು ಕೂಡ ನೆನಪಿಸಿಕೊಂಡಿದ್ದಾರೆ.

ನಾನು ನೀನು ಮೋಡಮೋಡವಾಗಿ ತೇಲಿಬಂದು
ನಮ್ಮ ನಾಡ ಮುಗಿಲಿನಲ್ಲಿ ಮೇಳಗೂಡಿ ನಿಂದು,
ಬನವಾಸಿಯ ಮಧುಕೇಶ್ವರ,ಕಡಲ ಕಾರವಾರ
ಸೊಗಲಕೊಲಿದ ಸೋಮೇಶ್ವರ,ಗೋಕರ್ಣ ತೀರ,
ಶಿರಸಂಗಿ ಮಾತೆ ಶ್ರೀ ಕಾಳಿಕಾ ಪ್ರಧಾಮ
ಗಜಶಾಲೆಯ ವಿಜಯನಗರ ಪಂಪಾಪತಿಪುರ,
ಜೋಗದ ಜಲ ತುಂಬಿ ಬರಲಿ ಜೀವನದಲಿ ಸಾರ”

savadatti Shri Kalika Devi Temple 3

ಪುರಾಣ ಕಥೆ ಏನು?
ಶ್ರೀ ಮಾರ್ಕಂಡೇಯ ಪುರಾಣದಂತೆ ಸಾವರ್ಣಿಕ ಮನ್ವಂತರದ ಸಪ್ತಋಷಿಗಳಲ್ಲಿ ಓರ್ವರಾದ ಋಷ್ಯಶೃಂಗರಿಗೆ ಶ್ರೀ ಕಾಳಿಕಾದೇವಿ ಪ್ರತ್ಯಕ್ಷಳಾಗಿ ಆಶೀರ್ವದಿಸಿದ ಸ್ಥಳ ಈ ಶಿರಸಂಗಿ ಎನ್ನುವ ಕಥೆ ಪುರಾಣದಲ್ಲಿದೆ. ಕಲ್ಯಾಣ ಚಾಲುಕ್ಯರ ಆಡಳಿತ ಅವಧಿಯಲ್ಲಿ ಮೊದಲನೆಯ ಜಗದೇಕಮಲ್ಲ-2, ಹಾಗೂ ಎರಡನೇಯ ವೀರ ಸೋಮೇಶ್ವರ ಕಾಲದ ಶಾಸನಗಳು ಇಲ್ಲಿ ಲಬ್ಯವಾಗಿದ್ದು. ಕ್ರಿ.ಶ.1148 ರ ಶಾಸನದಲ್ಲಿ “ಕುಂತಳದಲ್ಲಿ ಬರುವ ಚಿನ್ನ ಹೂ ಬೆಳುವಲ”ಎಂದು ಹೇಳುವ ಮೂಲಕ 30 ಗ್ರಾಮಗಳಿಗೆ ಮುಖ್ಯ ಪಟ್ಟಣವೆನಿಸಿದ್ದು ಋಷ್ಯಶೃಂಗಿಗ್ರಾಮ ಎಂದು ಹೇಳಿದೆ. ಇನ್ನೊಂದು ಶಾಸನ ಹೆಬ್ಬಯ್ಯ ನಾಯಕನಿಗೆ ಸಂಬಂಧಿಸಿದ ವಿವರಣೆ ಹೊಂದಿದೆ.

savadatti Shri Kalika Devi Temple 4

ವಿಶ್ವಕರ್ಮ ವಂಶಜ, ಕಾಶ್ಯಪ ಗೋತ್ರಜರಾದ ವಿಭಾಂಡಕ ಮುನಿಯ ಮಗನಾದ ಋಷ್ಯಶ್ರಂಗ ಮುನಿಗಳಿಗೆ ಜಮದಗ್ನಿ, ಭಾರ್ಗವ ಇತ್ಯಾದಿ ಋಷಿಗಳು ಸತ್ಕರಿಸಿ ಗೌರವಿಸುತ್ತಾರೆ. ಅವರ ಪ್ರಾರ್ಥನೆಯ ಮೇರೆಗೆ ಋಷ್ಯಶೃಂಗ ಮುನಿ ಈಗಿನ ಶಿರಸಂಗಿ ಪ್ರದೇಶದಲ್ಲಿ 10 ವರ್ಷಗಳ ಕಾಲ ಕಠೋರ ತಪಸ್ಸು ಆಚರಿಸಿದ್ದರಂತೆ. ಆದರೆ, ಈ ಮುನಿಗಳ ಯಜ್ಞಯಾಗಗಳನ್ನು ಐವರು ರಾಕ್ಷಸರಾದ ನಲುಂದಾಸುರ (ಈಗಿನ ಧಾರವಾಡ ಜಿಲ್ಲೆಯ ನವಲಗುಂದದ ವಾಸಿ), ನರುಂದಾಸುರ (ಈಗಿನ ಗದಗ ಜಿಲ್ಲೆಯ ನರಗುಂದದ ವಾಸಿ), ಹಿರಿಕುಂಬಾಸುರ (ಈಗಿನ ಬೆಳಗಾವಿಯ ಜಿ. ಸವದತ್ತಿ ತಾ. ಹಿರೇಕುಂಬಿ ಗ್ರಾಮದ ವಾಸಿ), ಚಿಕ್ಕುಂಬಾಸುರ (ಈಗಿನ ಬೆಳಗಾವಿಯ ಜಿ. ಸವದತ್ತಿ ತಾ. ಚಿಕ್ಕುಂಬಿ ಗ್ರಾಮದ ವಾಸಿ) ಹಾಗೂ ಬೆಟ್ಟಾಸುರ (ಈಗಿನ ಬೆಳಗಾವಿಯ ಜಿ. ಸವದತ್ತಿ ತಾ.ಬೆಟಸೂರ ಗ್ರಾಮದ ವಾಸಿ) ಕೆಡಿಸುತ್ತಿದ್ದರು.

savadatti Shri Kalika Devi Temple 6

ಋಷ್ಯಶೃಂಗ ಮುನಿಯ ಕಠೋರ ಪ್ರಾರ್ಥನೆಯ ಮೇರೆಗೆ ಹಾಗೂ ಆತನ ತಪಸ್ಸನ್ನು ಮೆಚ್ಚಿ ಆದಿಶಕ್ತಿ ಜಗನ್ಮಾತೆ ಶ್ರೀ ಕಾಳಿಕಾದೇವಿ ಅವತಾರದಲ್ಲಿ ಪ್ರತ್ಯಕ್ಷಳಾಗಿ ಐದು ರಾಕ್ಷಸರನ್ನು ಕೊಂದು ಅವರ ರುಂಡಗಳನ್ನು ಕಡಿದು ಆಕಾಶದತ್ತ ತೂರಿದಳು ಎಂಬ ಪ್ರತೀತಿ. ಆಗ ಋಷ್ಯಶೃಂಗ ಮುನಿಗಳ ಕೋರಿಕೆಯಂತೆ ಶಾಂತಸ್ವರೂಪಳಾಗಿ ಜಗನ್ಮಾತೆ ಶ್ರೀ ಕಾಳಿಕಾದೇವಿಯೂ ಶಿರಸಂಗಿಯಲ್ಲಿ ನೆಲೆಸಿದಳು ಎಂದು ಪುರಾಣದಲ್ಲಿ ಉಲ್ಲೇಖವಿದೆ.

ವಿಶೇಷತೆ ಏನು?
ಶಿರಸಂಗಿ ಕಾಳಿಕಾ ಮಾತೆಯ ದೇವಾಲಯ ಆವರಣದಲ್ಲಿ ಹಬ್ಬೇಶ್ವರ ದೇವಾಲಯ, ಕಲ್ಮೇಶ್ವರ ದೇವಾಲಯ, ಭೈರವೇಶ್ವರ ದೇವಾಲಗಳಲ್ಲಿ ಕಂಡು ಬರುವ ಗಣೇಶ, ಷಣ್ಮುಖ, ಉಮಾಮಹೇಶ್ವರ, ಕಾಳಭೈರವ, ಚನ್ನಭೈರವ, ಸಪ್ತಮಾತೃಕೆಯರು, ಸೂರ್ಯ ನಾರಾಯಣ ಶಿಲ್ಪಗಳು ಕಲ್ಯಾಣ ಚಾಲುಕ್ಯರ ಶಿಲ್ಪಕಲಾ ವೈಭವಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಕಲ್ಮೇಶ್ವರ ದೇವಾಲಯ ಗರ್ಭಗೃಹ, ಅರ್ಧಮಂಟಪ, ನವರಂಗ ಮತ್ತು ಮುಖಮಂಟಪ ಹೊಂದಿದ್ದು, ಈ ದೇವಾಲಯದಲ್ಲಿ ಶಿವಲಿಂಗವಿದ್ದು ಇಳಿದಾದ ಮೇಲ್ಚಾವಣೆ ಈ ದೇವಾಲಯದ ವಿಶೇಷ. ದೇವಾಲಯ ಪಕ್ಕದಲ್ಲಿ ಕ್ರಿ.ಶ.1148ರ ಶಿಲಾಶಾಸನವಿದೆ. ಇವುಗಳಲ್ಲದೇ ಭೀಮರತಿ ಹೊಂಡ, ಮೌನೇಶ್ವರ ದೇವಾಲಯ, ಖಡ್ಗತೀರ್ಥ, ರಾಮಲಕ್ಷ್ಮಣರ ದೇವಾಲಯಗಳು ಕೂಡ ಇಲ್ಲಿನ ಪ್ರಮುಖ ಆಕರ್ಷಣೆ.

savadatti Shri Kalika Devi Temple 5

ಕ್ರಿ.ಶ.1ನೇ ಶತಮಾನದಲ್ಲಿ ಕಾಳಿಕಾ ದೇವಸ್ಥಾನ ನಿರ್ಮಾಣಗೊಂಡಿರಬಹುದು ಪುರಾತತ್ವ ಇಲಾಖೆ ತಿಳಿಸಿದೆ. ಈ ದೇವಾಲಯವನ್ನು ಹೇಮಾಡನೆಂಬುವನು ಕಟ್ಟಿದ್ದು, ದೇವಿಯ ಗರ್ಭಗುಡಿಯು ಬೇರೆಯಾಗಿದ್ದು ಮಂಟಪವು ದೊಡ್ಡದಿದೆ. ಶ್ರೀ ಕಾಳಿಕಾದೇವಿಯ ಮೂರ್ತಿಯು 9 ಅಡಿ ಎತ್ತರವಿದ್ದು ಸ್ವರ್ಣ ರೇಖಾಂಕಿತ ಸಾಲಿಗ್ರಾಮ ಶಿಲೆಯಲ್ಲಿ ಕೆತ್ತನೆ ಹೊಂದಿದೆ. ಬಲಗೈಯಲ್ಲಿ ಖಡ್ಗ, ತ್ರಿಶೂಲ, ಬಾಕು, ಎಡಗೈಯಲ್ಲಿ ಡಮರು, ಸರ್ಪ, ಖೇಟಕ ಮತ್ತು ಪಾನ ಪಾತ್ರೆ ಹೊಂದಿದ್ದು ಆಕರ್ಷಕವಾಗಿದೆ. ಪೂಜಾ ಸಮಯದಲ್ಲಿ ದೇವಿ ತನ್ನದೇ ಆಭರಣಗಳ ಮೂಲಕ ಶೋಭಿಸುತ್ತಾಳೆ

ಪ್ರತಿ ವರ್ಷ ನಡೆಯುವ ಯುಗಾದಿಗೆ ದೇವಿಯ ಪಲ್ಲಕ್ಕಿ ಉತ್ಸವ ಲಕ್ಷಾಂತರ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಕಾಳಿಕಾದೇವಿಯ ಎದುರಿನಲ್ಲಿ ದೇವಿಗೆ ಆಭಿಮುಖವಾಗಿ ಕಾಲಭೈರವ ದೇವಾಲಯವಿದೆ. ಈ ದೇವಾಲಯವನ್ನು ಕ್ರಿ.ಶ. 11ನೇ ಶತಮಾನದಲ್ಲಿ ಚಾಲುಕ್ಯ ಅರಸರ ಮಾಂಡಲಿಕನಾಗಿದ್ದ ಹೆಬ್ಬೆಯ ನಾಯಕನು ಕಟ್ಟಿಸಿದ್ದಾನೆ. ಕಾಳಿಕಾ ದೇವಸ್ಥಾನದ ಬದಿಯಲ್ಲಿ ಕಮಠೇಶ್ವರ ಹಾಗೂ ಭೈರವೇಶ್ವರ ದೇವಾಲಯಗಳಿವೆ. ಕಮಠೇಶ್ವರ ದೇವಾಲಯದ ಮುಂಭಾಗದಲ್ಲಿ ಬ್ರಹ್ಮದೇವರ ವೇದಿಕೆಯಿದೆ. ಕಾಳಿಕಾ ದೇವಸ್ಥಾನದ ಪೂರ್ವಾಭಿಮುಖವಾಗಿರುವ ಮಹಾದ್ವಾರ ದಾಟಿದ ಕೂಡಲೇ ಒಳಗೆ ಎಡಬದಿಗೆ, ಬುತ್ತಿ ಹಾರಿಸುವ ವೇದಿಕೆ ಇದೆ.

savadatti Shri Kalika Devi Temple 8

ಇದೆಲ್ಲವೂ ದೇವಸ್ಥಾನದ ಒಳಗಡೆ ಆದರೆ ಇನ್ನು ಶ್ರೀ ಕಾಳಿಕಾ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಎಡಬದಿಗೆ ಬನ್ನಿ ಮಹಾಂಕಾಳಿ ಎಂಬ ಹೆಸರಿನ ಚಿಕ್ಕ ಗುಡಿಯಿದೆ. ಶ್ರೀ ಕಾಳಿಕಾದೇವಿಯ ಪಲ್ಲಕ್ಕಿಯು ಇಲ್ಲಿಯವರೆಗೂ ತರಲಾಗುತ್ತದೆ. ಇದಕ್ಕೆ ಕಾಳಿಕಾ ಪಾದಗಟ್ಟೆ ಅಂತಾ ಕರೆಯುತ್ತಾರೆ. ಕಾಳಿಕಾ ದೇವಸ್ಥಾನದಿಂದ ತುಸು ದೂರದಲ್ಲಿ ಭೀಮರಥಿ ಹೊಂಡವಿದೆ. ಇದರ ಬದಿಗೆ ಖಡ್ಗತೀರ್ಥ ಎಂಬ ಮತ್ತೊಂದು ಹೊಂಡವಿದೆ. ರಾಕ್ಷಸರ ಸಂಹಾರದ ನಂತರ ಕಾಳಿಕಾದೇವಿ ತನ್ನ ಖಡ್ಗವನ್ನು ಈ ಹೊಂಡದಲ್ಲಿ ತೊಳೆದಿದ್ದರಿಂದ ಅದಕ್ಕೆ ಖಡ್ಗತೀರ್ಥವೆಂಬ ಹೆಸರು ಬಂತು ಎಂಬ ಐತಿಹ್ಯವಿದೆ. ಇದೇ ಹೊಂಡದ ಪಕ್ಕದಲ್ಲಿ ಬೆಟ್ಟದ ಮೇಲೆ ಶ್ರೀ ಕಾಳಿಕಾದೇವಿಯ ಹೆಜ್ಜೆಗುರುತುಗಳಿವೆ. ರಾಕ್ಷಸರ ಸಂಹಾರ ಮಾಡುವ ಸಂದರ್ಭದಲ್ಲಿ ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟಕ್ಕೆ ಹಾರಿದ ವೇಳೆ ಈ ಹೆಜ್ಜೆಗುರುತುಗಳು ಮೂಡಿವೆ ಅನ್ನೋದು ಇಲ್ಲಿನ ನಂಬಿಕೆ.

savadatti Shri Kalika Devi Temple 1

ಈ ದೇವಾಲಯದಲ್ಲಿ ಶುಕ್ರವಾರ, ಮಂಗಳವಾರ ಹಾಗೂ ಅಮವಾಸ್ಯೆಯಂದು ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಜರುಗುತ್ತದೆ. ಪ್ರತಿನಿತ್ಯವೂ ಬೆಳಿಗ್ಗೆ 4 ಗಂಟೆಯಿಂದಲೇ ಪೂಜೆ ಆರಂಭವಾಗುತ್ತದೆ. ವಿಶೇಷವಾಗಿ ಸೀರೆಗಳಿಂದ ದೇವಿಯನ್ನು ಅಲಂಕರಿಸಲಾಗುತ್ತೆ. ಶ್ರಾವಣ ಮಾಸದಲ್ಲಿ ಪ್ರತಿದಿನ ಬೆಳಗ್ಗೆ 3 ಗಂಟೆಯಿಂದಲೇ ಪ್ರಾರಂಭವಾಗುವ ಮಹಾಪೂಜೆ, ಪಂಚಾಮೃತ ಅಭೀಷೇಕ, ನೈವೇದ್ಯಗಳೊಂದಿಗೆ ವೈಶಿಷ್ಟ್ಯಪೂರ್ಣವಾಗಿರುತ್ತದೆ.

GOD

ರಾಮಾಯಣದ ಕಥೆ ಏನು?
ರಾಮಾಯಣಕ್ಕೆ ಸಂಬಂಧಿಸಿದಂತೆ ರಘುವಂಶದ ಚಕ್ರವರ್ತಿ ದಶರಥನು ಅನೇಕ ವರ್ಷಗಳ ಕಾಲ ಮಕ್ಕಳಾಗದೇ ಇದ್ದಾಗ ಯಜ್ಞಯಾಗಾದಿಗಳನ್ನು ಮಾಡುವ ಸಂದರ್ಭದಲ್ಲಿ ಋಷ್ಯಶೃಂಗ ಮುನಿಗಳನ್ನು ಆಹ್ವಾನಿಸಿ ಆ ಯಾಗಕ್ಕೆ ಅಗ್ನಿಹೋತ್ರಿಯಾಗಲು ಕೋರಿಕೆ ಸಲ್ಲಿಸಿದ್ದನಂತೆ. ಇದರ ಕುರುಹಾಗಿ ಲಂಕಾಸುರನ ಸಂಹರಿಸಿ ಅಯೋಧ್ಯೆಯಿಂದ ರಾಮನು ಮರಳಿ ಬರುವಾಗ ಇಲ್ಲಿಗೆ ಆಗಮಿಸಿ ಕಾಳಿಕಾ ಮಾತೆಯನ್ನು ಪೂಜಿಸಿ ಋಷ್ಯಶೃಂಗ ಮುನಿಗಳ ಆಶೀರ್ವಾದ ಪಡೆದ ಬಗ್ಗೆ ಕೂಡ ಉಲ್ಲೇಖಗಳು ಪುರಾಣದಲ್ಲಿ ಬರುತ್ತವೆ. ಬಹುತೇಕ ಮಾಹಿತಿ ಕ್ರಿ.ಶ 1148 ರಲ್ಲಿ ಕಲ್ಯಾಣ ಚಾಲುಕ್ಯ ಅರಸು ಇಮ್ಮಡಿ ಜಗದೇಕಮಲ್ಲನ ಕಾಲದಲ್ಲಿ ಕಾಳಿಕಾ ದೇವಸ್ಥಾನದ ಬಳಿ ನೆಟ್ಟ ಶಿಲಾ ಶಾಸನಗಳಿಂದ ತಿಳಿದುಬರುತ್ತದೆ.

savadatti Shri Kalika Devi Temple 2

ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸತಿ ವ್ಯವಸ್ಥೆಯಿದೆ. ಈ ದೇವಾಲಯ ಆವರಣದಲ್ಲಿರುವ ಸಭಾಮಂಟಪದಲ್ಲಿ ವಿವಾಹಗಳು ಜರುಗುತ್ತವೆ. ಅಲ್ಲದೇ ಮಲ್ಲಕಂಭ, ಯೋಗ, ಸಂಗೀತ, ಗಾಯನ. ವಿವಿಧ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುತ್ತದೆ. ದೇವಾಲಯ ಪಕ್ಕದಲ್ಲಿ ವಿಭಿನ್ನ ಕಲಾಕೃತಿಗಳ ಉದ್ಯಾನ ನಿರ್ಮಿಸಲಾಗುತ್ತಿದ್ದು ಅದು ಕೂಡ ಗಮನ ಸೆಳೆಯುತ್ತದೆ. ದೇವಾಲಯಕ್ಕೆ ಬರುವಾಗ ಮಾರ್ಗ ಮಧ್ಯೆ ಶಿರಸಂಗಿ ಲಿಂಗರಾಜರ ಕೋಟೆ ಇದೆ. ಇದೂ ಕೂಡ ಪ್ರವಾಸಿ ತಾಣವೇ.

savadatti Shri Kalika Devi Temple 9

ಈ ದೇವಾಲಯದಲ್ಲಿ ಕಾಯಿ ಕಟ್ಟುವ ಕಾರ್ಯ ಭಕ್ತಾಧಿಗಳಿಂದ ಜರುಗುತ್ತದೆ. ಇಲ್ಲಿ ಹರಕೆ ಹೊತ್ತು ಬರುವ ಭಕ್ತರು ದೇವಾಲಯ ಆವರಣದಲ್ಲಿ ಕಾಯಿ ಕಟ್ಟುವರು. ಅಂದರೆ ದೇವಿಯ ಮೊರೆ ಹೋಗಿ ಹರಕೆ ಹೊತ್ತು ದೇವಾಲಯದಲ್ಲಿ 51 ರೂ. ನೀಡಿ ಕಾಯಿ ಪಡೆದು ಇಲ್ಲಿ ಕಟ್ಟುವರು. ತಮ್ಮ ಹರಕೆ ಈಡೇರಿದ ನಂತರ ಬಂದು ಕಾಯಿಯನ್ನು ಬಿಚ್ಚಿ ಅಭಿಷೇಕ ಮಾಡಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
–  ಅರುಣ್ ಬಡಿಗೇರ್

 

Share This Article
Leave a Comment

Leave a Reply

Your email address will not be published. Required fields are marked *