ದಕ್ಷಿಣ ಕನ್ನಡದಲ್ಲಿ ಧರ್ಮಸ್ಥಳ ಇರುವುದು ನಿಮಗೆ ಗೊತ್ತು. ಆದರೆ ಉತ್ತರ ಕರ್ನಾಟಕದಲ್ಲೂ ‘ಧರ್ಮಸ್ಥಳ’ವಿದೆ. ಶಿವ ಮತ್ತೊಂದು ಅವತಾರ ಇಲ್ಲಿದೆ ಎನ್ನುವ ನಂಬಿಕೆಯಿಂದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಬರುವ ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನವನ್ನು ‘ಧರ್ಮಸ್ಥಳ’ ಎಂದು ಕರೆಯಲಾಗುತ್ತದೆ.
ಕೊಡಚಿ ಕಂಟೆಗಳು ಹೆಚ್ಚಾಗಿದ್ದರಿಂದ ಮುಂಚೆ ಇದನ್ನ ‘ಕೊಡಚಿ’ ಅಂತಾ ಕರೆಯಲಾಗುತ್ತಿತ್ತು. ತದನಂತರ ರೂಢಿಯಲ್ಲಿ ಅದು ‘ಗೊಡಚಿ’ ಎಂದು ಬದಲಾಗಿದೆ. ಬೆಳಗಾವಿ ಜಿಲ್ಲಾ ಕೇಂದ್ರದಿಂದ 78 ಕಿ.ಮೀ., ರಾಮದುರ್ಗ ತಾಲೂಕು ಕೇಂದ್ರದಿಂದ 14 ಕಿ.ಮೀ, ಬೆಂಗಳೂರಿನಿಂದ 520 ಕಿ.ಮೀ ದೂರದಲ್ಲಿ ಈ ಕ್ಷೇತ್ರವಿದೆ.
Advertisement
Advertisement
ಪೌರಾಣಿಕ ಹಿನ್ನೆಲೆ ಏನು?
ಬ್ರಹ್ಮನ ಪುತ್ರನಾದ ದಕ್ಷಬ್ರಹ್ಮನ ಕಾಲವದು. ದಕ್ಷನ ಪುತ್ರಿಯರಲ್ಲಿ ಸತಿಯನ್ನ ಶಿವನು, ರತಿಯನ್ನು ಮನ್ಮಥ(ಕಾಮದೇವ) ಮದುವೆ ಆಗುತ್ತಾನೆ. ಒಂದು ದಿನ ದಕ್ಷಬ್ರಹ್ಮ ಲೋಕಕಲ್ಯಾಣಕ್ಕಾಗಿ ಒಂದು ಬೃಹತ್ ಯಜ್ಞವನ್ನು ಈಗಿನ ಪ್ರಯಾಗದಲ್ಲಿ ಆಯೋಜಿಸಿರುತ್ತಾನೆ. ಆಗ ವಿಷ್ಣು ಬ್ರಹ್ಮ ಎಲ್ಲರನ್ನೂ ಕರೆದಿರುತ್ತಾನೆ. ಆದರೆ ಉದ್ದೇಶಪೂರ್ವಕವಾಗಿ ಶಿವನನ್ನ ಕರೆದಿರುವುದಿಲ್ಲ. ಆಗ ಎಲ್ಲರನ್ನೂ ಕರೆದು ತನ್ನ ಗಂಡನಾದ ಶಿವನನ್ನ ಯಾಕೆ ಕರೆಯಲಿಲ್ಲವೆಂದು, ತಂದೆಯನ್ನ ಕೇಳಲು, ಸತಿ ಶಿವಗಣ, ಋಷಿಗಳೊಂದಿಗೆ ತೆರಳುತ್ತಾಳೆ.
Advertisement
ಆಗ ದಕ್ಷನು ಸತಿಯ ಮುಂದೆ ಶಿವನನ್ನ ಹಿಯಾಳಿಸುತ್ತಾನೆ. ಎಲ್ಲರ ಮುಂದೆ ಸತಿಯನ್ನ ಅವಮಾನಿಸುತ್ತಾನೆ. ಈ ನೋವನ್ನ ತಾಳಲಾರದೆ ಸತಿ, ನಿನಗೆ ನರಕ ಪ್ರಾಪ್ತಿಯಾಗಲಿ ಎಂದು ಹೇಳಿ ಶಾಪವಿಟ್ಟು ಯಜ್ಞದ ಅಗ್ನಿಕುಂಡದಲ್ಲಿ ತನ್ನನ್ನು ಸಮರ್ಪಿಸಿಕೊಳ್ಳುತ್ತಾಳೆ. ಈ ಎಲ್ಲ ಘಟನೆ ಹಾಗೂ ತನ್ನ ಸತಿ ಅಗ್ನಿಯಲ್ಲಿ ಸಮರ್ಪಿಸಿಕೊಂಡಿದನ್ನ ತಿಳಿದ ಶಿವನು, ಕ್ರೋಧದಲ್ಲಿ ತನ್ನ ಜಡೆಯನ್ನ ಬಿಚ್ಚಿ ಎರಡು ಪರ್ವಗಳಿಗೆ ಹೊಡೆಯುತ್ತಾನೆ. ಪರ್ವಗಳು ಇಬ್ಭಾಗವಾಗಿ ಒಂದು ಕಡೆ ವೀರಭದ್ರ, ಇನ್ನೊಂದು ಕಡೆ ಭದ್ರಕಾಳಿ ಪ್ರತ್ಯಕ್ಷರಾಗುತ್ತಾರೆ. ವೀರಭದ್ರ ಮತ್ತು ಭೂತಗಣಗಳು ದಕ್ಷನ ಜಾಗಕ್ಕೆ ಹೋಗಿ ಯಜ್ಞಶಾಲೆಯನ್ನ ನಾಶ ಮಾಡಿ, ದಕ್ಷನ ತಲೆಯನು ಕಡಿದು ಹಾಕುತ್ತಾನೆ.
Advertisement
ಆವೇಶದಲ್ಲಿದ್ದ ವೀರಭದ್ರ ಯಜ್ಞಕುಂಡದಲ್ಲಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿರುತ್ತೆ. ಆಗ ವೀರಭದ್ರನ ನಡುಪಟ್ಟಿಯನ್ನು ಹಿಡಿದು ಎಳೆದು ರೌದ್ರವತಾರದಲ್ಲಿ ಮೈಮರೆತಿದ್ದವನಿಗೆ ಮುಂದಾಗುವ ಅಪಾಯದಿಂದ ಪಾರುಮಾಡುವ ಮೂಲಕ ಸಹೋದರಿಯ ಸ್ಥಾನ ತುಂಬುತ್ತಾಳೆ ರೇಣುಕಾದೇವಿ. ಈ ಕಾರಣಕ್ಕೆ ಸವದತ್ತಿಯ ಯಲ್ಲಮ್ಮ ರೇಣುಕಾದೇವಿಯನ್ನ ವೀರಭದ್ರನ ಸಹೋದರಿ ಎನ್ನೋದು ಪ್ರತೀತಿ.
ಸವದತ್ತಿಯಲ್ಲಿ ಪ್ರತಿವರ್ಷ ಮುತ್ತೈದೆ ಹುಣ್ಣಿಮೆ ಸಂದರ್ಭದಲ್ಲಿ ವೀರಭದ್ರನು, ಯಲ್ಲಮ್ಮನ ಜಾತ್ರೆಯ ಕಾಲಕ್ಕೆ ದೇವಿಗೆ ಸೀರೆ, ಕುಪ್ಪುಸ, ಹಸಿರು ಬಳೆ, ಇತರೆ ವಸ್ತುಗಳನ್ನ ಸಹೋದರತ್ವದ ಕಾಣಿಕೆಯಾಗಿ ಇಂದಿಗೂ ಕೊಡಲಾಗುತ್ತದೆ. ಅದೇ ರೀತಿ ಗೊಡಚಿ ಜಾತ್ರೆಯ ಕಾಲಕ್ಕೆ ವೀರಭದ್ರ ದೇವರಿಗೆ ದೋತರ, ಶಲ್ಯ, ನಂದಿಕೋಲು, ಪೂಜಾ ಸಾಮಗ್ರಿ ಮೊದಲಾದವುಗಳನ್ನು ಸಹೋದರಿಯ ಕಾಣಿಕೆಯಾಗಿ ಕಳುಹಿಸಿಕೊಡುವ ಸಂಪ್ರದಾಯ ಇಂದಿಗೂ ಇದೆ.
ವಿಶೇಷತೆ ಏನು?
ದೇವಾಲಯದಲ್ಲಿ ವಸತಿ ಸೌಕರ್ಯ, ಅನ್ನದಾಸೋಹ ವ್ಯವಸ್ಥೆ ಇದ್ದು ದೇವಾಲಯದ ಪೂರ್ವಕ್ಕೆ ದಿಗಂಬರೇಶ್ವರ ಮುನಿಯ ಗದ್ದುಗೆ ಇದೆ. ದಕ್ಷಿಣಕ್ಕೆ ವಿಭೂತಿಮಠ ಗವಿಯೂ ಇದೆ. ಈಶಾನ್ಯ ದಿಕ್ಕಿಗೆ ಹನ್ನೆರಡನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರಿಗೂ ಮತ್ತು ಶಿವಶರಣರಿಗೂ ನಡೆದ ಯುದ್ಧ ನಡೆದ ಸ್ಥಳವಾದ ‘ರಣಬಾಜಿ’ ಇದೆ. ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆಯಂದು ಇಲ್ಲಿ ರಥೋತ್ಸವ, 5 ದಿನ ಜಾತ್ರೆ ಇರುತ್ತದೆ. ಈ ಕ್ಷೇತ್ರದಲ್ಲಿ ಪ್ರತಿನಿತ್ಯ ಗುಗ್ಗಳೋತ್ಸವ, ವಿವಾಹ, ಜವುಳ ಕಾರ್ಯಗಳು ನಡೆಯುತ್ತವೆ.
ಆಕರ್ಷಣೆ ಏನು?
ಪುರವಂತರು ಶಸ್ತ್ರ ಹಾಕಿಸಿಕೊಳ್ಳುವದು, ಅವರು ಹೇಳುವ ವೀರಾವೇಷದ ಒಡಬುಗಳು ಮೈರೋಮಾಂಚನಗೊಳ್ಳುವಂತೆ ಮಾಡುತ್ತವೆ.
– ಅರುಣ್ ಬಡಿಗೇರ್