– ಕನಿಷ್ಠ ಮೊತ್ತ, ಎಟಿಎಂ ಶುಲ್ಕಕ್ಕೆ ದಂಡ ವಿಧಿಸಿದ್ದರಿಂದ ಆದಾಯ
– ದಂಡ ವಸೂಲಿಯಲ್ಲಿ ಎಸ್‍ಬಿಐ ಟಾಪ್ 1
ನವದೆಹಲಿ: ಉಳಿತಾಯ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ (ಕನಿಷ್ಠ ಮೊತ್ತ) ಮತ್ತು ಹೆಚ್ಚುವರಿ ಎಟಿಎಂ ಬಳಕೆಯ ಮೇಲೆ ದಂಡ ವಿಧಿಸಿದ್ದರಿಂದ ಮೂರು ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‍ಗಳು ದಂಡದ ರೂಪದಲ್ಲಿ 10 ಸಾವಿರ ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಶಿವಪ್ರತಾಪ್ ಶುಕ್ಲಾ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಜನಧನ್ ಯೋಜನೆಯ ಖಾತೆಗಳನ್ನು ಹೊರತುಪಡಿಸಿ ಉಳಿತಾಯ ಖಾತೆದಾರರು ಕನಿಷ್ಠ ಮೊತ್ತವನ್ನು ಹೊಂದಿರಲೇಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ ಬ್ಯಾಂಕ್‍ಗಳ ನಿಯಮದ ಪ್ರಕಾರ ಪ್ರತಿ ತಿಂಗಳು ಖಾತೆ ಹೊಂದಿರುವ ಬ್ಯಾಂಕ್ ಎಟಿಎಂನಿಂದ 5 ಬಾರಿ ಹಾಗೂ ಇತರೆ ಬ್ಯಾಂಕ್ ಎಟಿಎಂಗಳಿಂದ 3 ಬಾರಿ ಮಾತ್ರ ಹಣ ಪಡೆಯಲು ಅವಕಾಶವಿರುತ್ತದೆ. ಒಂದು ವೇಳೆ ಅದಕ್ಕಿಂತ ಹೆಚ್ಚು ಬಾರಿ ಎಟಿಎಂ ಬಳಸಿದರೆ ಪ್ರತಿ ಬಾರಿಯೂ 20 ರೂ. ದಂಡ ವಸೂಲಿ ಮಾಡಲಾಗುತ್ತಿದೆ. ಈ ಎರಡೂ ಮೂಲಗಳಿಂದ ಬ್ಯಾಂಕ್‍ಗಳು ದಂಡ ವಸೂಲಿ ಮಾಡುತ್ತಿವೆ.
Advertisement
Advertisement
ಎಸ್‍ಬಿಐ ಟಾಪ್ 1:
ಹೆಚ್ಚು ದಂಡ ವಸೂಲಿ ಮಾಡಿದ ಬ್ಯಾಂಕ್‍ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಮೊದಲ ಸ್ಥಾನದಲ್ಲಿದೆ. 2017-18ರ ಹಣಕಾಸು ವರ್ಷದಲ್ಲಿ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳದ ಗ್ರಾಹಕರಿಂದ ದಂಡದ ರೂಪದಲ್ಲಿ 2,433.84 ಕೋಟಿ ರೂ. ಸಂಗ್ರಹಿಸಿದೆ. 2018ರ ಹಣಕಾಸು ವರ್ಷದಿಂದ ಸೆಪ್ಟೆಂಬರ್ ವರೆಗೆ ಎಸ್‍ಬಿಐ 459.88 ಕೋಟಿ ರೂ. ಹಣವನ್ನು ದಂಡದ ರೂಪದಲ್ಲಿ ಸಂಗ್ರಹಿಸಿದೆ.
Advertisement
21 ಸಾರ್ವಜನಿಕ ವಲಯದಲ್ಲಿನ ಬ್ಯಾಂಕ್‍ಗಳು 2018-19ರ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿಯೇ 1 ಸಾವಿರ ಕೋಟಿ ರೂ. ಹಣವನ್ನು ದಂಡದ ರೂಪದಲ್ಲಿ ಪಡೆದಿವೆ ಎಂದು ಶಿವಪ್ರತಾಪ್ ಶುಕ್ಲಾ ಮಾಹಿತಿ ನೀಡಿದ್ದಾರೆ.
Advertisement
ವಾಣಿಜ್ಯ ಬ್ಯಾಂಕ್‍ಗಳಲ್ಲಿ ಮಾರ್ಚ್ 2017ರಂದು 150.21 ಕೋಟಿ ಉಳಿತಾಯ ಖಾತೆಯನ್ನು ತೆರೆಯಲಾಗಿತ್ತು. ಅದರಲ್ಲಿ 53.30 ಕೋಟಿ ಖಾತೆಗಳು ಜನಧನ್ ಯೋಜನೆಗೆ ಒಳಪಟ್ಟಿದ್ದು, ಉಳಿದ 97 ಕೋಟಿ ಖಾತೆದಾರರಿಂದ ಮಾತ್ರ ದಂಡವನ್ನು ಪಡೆಯಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಕೆಲವು ಬ್ಯಾಂಕ್‍ಗಳು ಪ್ರತಿ ತಿಂಗಳು 8 ಬಾರಿ ಎಟಿಎಂ ಬಳಕೆಗೆ ಅವಕಾಶ ನೀಡಿರುತ್ತವೆ. ಅದನ್ನು ಮೀರಿ ಹಣ ಪಡೆದರೆ ಪ್ರತಿ ಬಾರಿಯೂ 20 ರೂ. ಶುಲ್ಕ ವಸೂಲಿ ಮಾಡಲಾಗುತ್ತದೆ. ಹಾಗೇ ವಸೂಲಿ ಮಾಡಿದ ಶುಲ್ಕದ ಮೊತ್ತ 850 ಕೋಟಿ ರೂ. ಆಗಿದ್ದು, ಈಗಾಗಲೇ ಸಾರ್ವಜನಿಕ ವಲಯದ ಬ್ಯಾಂಕ್‍ಗಳು ಮಿನಿಮಮ್ ಬ್ಯಾಲೆನ್ಸ್ ಹೊಂದಿರದ ಉಳಿತಾಯ ಖಾತೆಗಳನ್ನು ಮುಚ್ಚಿವೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.
ಕನಿಷ್ಠ ಮೊತ್ತ ಹೊಂದಿರದ ಖಾತೆದಾರರಿಗೆ ಎಷ್ಟು ದಂಡ ವಿಧಿಸಬೇಕು ಎನ್ನುವ ನಿರ್ಧಾರವನ್ನು ಆರ್‍ಬಿಐ ಬ್ಯಾಂಕಿನ ಬೋರ್ಡ್ ಗೆ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.
2017ರ ಮೊದಲು ಕನಿಷ್ಠ ಮೊತ್ತವನ್ನು ಹೊಂದಿರದೇ ಇದ್ದರೆ ಯಾವುದೇ ಶುಲ್ಕ ವಿಧಿಸುತ್ತಿರಲಿಲ್ಲ. ಎಸ್‍ಬಿಐ 6 ವರ್ಷದ ಬಳಿಕ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಹೊಂದಿರದ ಗ್ರಾಹಕರಿಂದ ದಂಡ ವಿಧಿಸುವ ನಿರ್ಧಾರವನ್ನು ತೆಗದುಕೊಂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv