– ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಹೆಚ್.ಆರ್.ರಂಗನಾಥ್
– ‘ಡೀ ಡೀ ಆಡ್ಯಾನೆ ರಂಗ’ ಹಾಡು ಹಾಡಿ ಗಮನ ಸೆಳೆದ ಪುಟ್ಟ ಬಾಲಕಿ ಶಾಲ್ಮಲಿ
ಬೆಂಗಳೂರು: ಪಬ್ಲಿಕ್ ಮ್ಯೂಸಿಕ್ (Public Music) ವಾಹಿನಿಗೆ 10 ವರ್ಷ ಪೂರೈಸಿದ ಸಂಭ್ರಮ. ಈ ಹಿನ್ನೆಲೆಯಲ್ಲಿ ಶನಿವಾರ ಪಬ್ಲಿಕ್ ಮ್ಯೂಸಿಕ್ ದಶೋತ್ಸವ (Public Music Dashotsava) ಸಮಾರಂಭಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.
ಇಂದು ಬೆಳಗ್ಗೆ 10:30ಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉದ್ಘಾಟನಾ ಕಾರ್ಯಕ್ರಮವನ್ನು ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath), ಲಹರಿ ಮ್ಯೂಸಿಕ್ ಮಾಲೀಕರಾದ ಮನೋಹರ್ ನಾಯ್ಡು, ನಟ ಹಾಗೂ ನಿರ್ದೇಶಕರಾದ ಉಪೇಂದ್ರ (Upendra), ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಸಿನಿಮಾ ಗೀತಾ ರಚನಾಕಾರ ನಾಗೇಂದ್ರ ಪ್ರಸಾದ್, ಗಾಯಕಿ ಐಶ್ವರ್ಯ ರಂಗರಾಜನ್, ಆನಂದ್ ಆಡಿಯೋನ ಶ್ಯಾಮ್ ಚಾಬ್ರಿಯಾ ಅವರು ನಡೆಸಿಕೊಟ್ಟರು. ಇದನ್ನೂ ಓದಿ: ದಶೋತ್ಸವ ಸಂಭ್ರಮದಲ್ಲಿ ಪಬ್ಲಿಕ್ ಮ್ಯೂಸಿಕ್ – ನೀವಿಲ್ಲದೇ ನಾವಿಲ್ಲ, ಮುಂದೆಯೂ ಹರಸಿ ಹಾರೈಸಿ
ಉದ್ಘಾಟನೆಗೂ ಮುನ್ನ ಮನರಂಜನೆ ನಡೆಯಿತು. ಗಾಯಕ ನವೀನ್ ಸಜ್ಜು ಮತ್ತು ತಂಡದವರು ರಾಷ್ಟ್ರಕವಿ ಕುವೆಂಪು ಅವರ ‘ಎಲ್ಲಾದರು ಇರು.. ಎಂತಾದರು ಇರು.. ಎಂದೆಂದಿಗು ನೀ ಕನ್ನಡವಾಗಿರು’ ಹಾಡನ್ನು ಹಾಡಿ ರಂಜಿಸಿದರು.
‘ಡೀ ಡೀ ಆಡ್ಯಾನೆ ರಂಗ’ ಗಾಯನದ ಮೂಲಕ ಮನೆಮಾತಗಿರುವ ಪುಟ್ಟ ಬಾಲಕ ಎಸ್.ಶಾಲ್ಮಲಿ ತಮ್ಮ ಕ್ಯೂಟ್ ಗಾಯನದ ಮೂಲಕ ಗಮನ ಸೆಳೆದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳು ‘ಪಬ್ಲಿಕ್ ಮ್ಯೂಸಿಕ್ ದಶೋತ್ಸವ’ಕ್ಕೆ ಶುಭಾಶಯ ತಿಳಿಸಿದರು. ಇದನ್ನೂ ಓದಿ: 10 ವರ್ಷ ಕಾಲ ಮ್ಯೂಸಿಕ್ ವಾಹಿನಿ ನಡೆದಿದ್ದೇ ಸಂತೋಷ, ಆಶ್ಚರ್ಯ: ಹೆಚ್ ಆರ್ ರಂಗನಾಥ್
ವೇದಿಕೆ ಕಾರ್ಯಕ್ರಮದ ಬಳಿಕ ವಾಹಿನಿಯ ಸಿಬ್ಬಂದಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದರು. ಪಬ್ಲಿಕ್ ಮ್ಯೂಸಿಕ್ ವಾರ್ಷಿಕೋತ್ಸವದ ಪ್ರಯುಕ್ತ ಇಂದು ಇಡೀ ದಿನ ವಿವಿಧ ಮನರಂಜನ ಕಾರ್ಯಕ್ರಮಗಳು ಜರುಗಲಿವೆ.