ಬೆಂಗಳೂರು: ಇಂದು ಕೈಯಲ್ಲೇ ಸಂಗೀತ ಸಿಗುವಾಗ 10 ವರ್ಷ ಕಾಲ ಮ್ಯೂಸಿಕ್ ವಾಹಿನಿ ನಡೆದಿದ್ದೇ ಸಂತೋಷ ಮತ್ತು ಆಶ್ಚರ್ಯ ಎಂದು ಪಬ್ಲಿಕ್ ಟಿವಿ (PUBLiC TV) ಮುಖ್ಯಸ್ಥ ಹೆಚ್‌ಆರ್ ರಂಗನಾಥ್ (HR Ranganath) ಹೇಳಿದರು.
ಪಬ್ಲಿಕ್ ಮ್ಯೂಸಿಕ್ (PUBLiC Music) 10ನೇ ವಾರ್ಷಿಕೋತ್ಸವ ಪ್ರಯುಕ್ತ ಪಬ್ಲಿಕ್ ಟಿವಿ ಕಚೇರಿಯಲ್ಲಿ ನಡೆದ ಪಬ್ಲಿಕ್ ಮ್ಯೂಸಿಕ್ ʼದಶೋತ್ಸವʼ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ತಂತ್ರಜ್ಞಾನ ಸಂಗೀತವನ್ನು ಹೊಸ ಆಯಾಮಕ್ಕೆ ತೆಗೆದುಕೊಂಡು ಹೋಗಿದೆ. ಮೊದಲಿನಂತೆ ಟಿವಿ ಮುಂದೆ ನ್ಯೂಸ್, ಸಂಗೀತವನ್ನು ಕೇಳಬೇಕಿಲ್ಲ. ಗಣೇಶೋತ್ಸವ, ರಾಮನವಮಿಯಂತಹ ಹಬ್ಬಗಳಲ್ಲಿ ಕುಳಿತು ಕೇಳಬೇಕಿಲ್ಲ. ಯಾರು ಎಲ್ಲಿರುತ್ತಾರೋ ಅವರು ಅಲ್ಲಿಯೇ ಕುಳಿತುಕೊಂಡು ಬೇಕು ಬೇಕಾದನ್ನು ಆರಿಸಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದರು.
ಇಂದು ಎಲ್ಲವೂ ಮೊಬೈಲ್ ಮೂಲಕ ಕೈಯಲ್ಲೇ ಸಿಗುತ್ತದೆ. ಪರಿಸ್ಥಿತಿ ಹೀಗಿರುವಾಗ 10 ವರ್ಷ ಕಾಲ ಚಾನೆಲ್ ನಿಂತುಕೊಂಡಿದ್ದೇ ಒಂದು ದೊಡ್ಡ ಸಾಧನೆ. ನನ್ನ ಲೆಕ್ಕಾಚಾರದಲ್ಲಿ ಇಬ್ಬರಿಗೆ ಧನ್ಯವಾದ ಹೇಳಬೇಕು. ಪಬ್ಲಿಕ್ ಮ್ಯೂಸಿಕ್ ವಾಹಿನಿಯನ್ನು ಕೇಳಿದ ಜನರಿಗೆ ಮತ್ತು ಟಿವಿ ಮೂಲಕ ಜನರಿಗೆ ಮ್ಯೂಸಿಕ್ ಕೇಳುವಂತೆ ಮಾಡಿದ ನನ್ನ ಸಹೋದ್ಯೋಗಿಗಳಿಗೆ ನಾನು ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮದಲ್ಲಿ ಲಹರಿ ಸಂಸ್ಥೆಯ ಮನೋಹರ್ ನಾಯ್ಡು, ಆನಂದ್ ಆಡಿಯೋದ ಶ್ಯಾಮ್ ಚಾಬ್ರಿಯಾ, ರಿಯಲ್‌ಸ್ಟಾರ್ ಉಪೇಂದ್ರ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್, ಗಾಯಕಿ ಐಶ್ವರ್ಯ ರಂಗರಾಜನ್ ಉಪಸ್ಥಿತರಿದ್ದರು.