ಚಿಕ್ಕಮಗಳೂರು: ಜಿಲ್ಲೆಯ ತಾಲೂಕು ಒಂದು ಶಾಶ್ವತ ಬರಗಾಲಕ್ಕೆ ತುತ್ತಾಗಿತ್ತು. ಜನ-ಜಾನುವಾರುಗಳಿಗೆ ಕುಡಿಯೋ ನೀರಿಗೂ ಹಾಹಾಕಾರ. ಗುಡ್ಡಕ್ಕೆ ಮೇವಿಗೆಂದು ಹೊಡೆದ ದನಕರುಗಳನ್ನ ಅಲ್ಲೇ ಬಿಟ್ಟು ಬರುವಷ್ಟು, ಬಂದ ರೇಟಿಗೆ ಮಾರುವಷ್ಟು ನೀರಿಗಾಗಿ ಪರದಾಡವಿತ್ತು. ಸರ್ಕಾರ ಕೊಡುತ್ತಿದ್ದ ನೀರು ಒಂದಕ್ಕಾದ್ರೆ ಒಂದಕ್ಕಾಗುತ್ತಿರಲಿಲ್ಲ. ಹೀಗಿರುವಾಗ ಆ ಊರಿನ ಯುವಕರೇ ತಮ್ಮ ಕೆರೆ ತುಂಬಿಸಿಕೊಳ್ಳುವ ಹಠಕ್ಕೆ ಬಿದ್ರು. ಊರಿಗೆ-ಊರೇ ಶ್ರಮದಾನಕ್ಕೆ ನಿಂತಿತು. ಇಪ್ಪತ್ತೇ ದಿನ 345 ಎಕರೆಯ ಕೆರೆ ತುಂಬೋದಕ್ಕೆ ಆರೇ ಅಡಿ ಬಾಕಿ ಇತ್ತು. ಕಾಫಿನಾಡಿನ ಆ ದೇವ ಮಾನವರೇ ಇಂದಿನ ಪಬ್ಲಿಕ್ ಹೀರೋಗಳು.
ಹೌದು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿ ಗ್ರಾಮದ ಕೆರೆ. 345 ಎಕರೆಯಷ್ಟು ದೊಡ್ಡದಾದ ಈ ಕೆರೆಯಲ್ಲಿ ಸದ್ಯ ನೀರಿದೆ. ಆದರೆ ಆರು ತಿಂಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. 10 ವರ್ಷದಿಂದ ಕೆರೆಗೆ ನೀರು ಹರಿದಿರಲಿಲ್ಲ. ವರ್ಷದ ಹಿಂದೆ ಕಾರಣ ಹುಡುಕುತ್ತಾ ಹೊರಟ ಊರ ಮಂದಿಗೆ ಕಂಡಿದ್ದು ಕುಸಿದು ಬಿದ್ದ ಸೇತುವೆ, ಹೂಳು ತುಂಬಿದ ಕಾಲುವೆ. ಗಣಪತಿ ಸೇವಾ ಸಮಿತಿ ಯುವಕರು, ತಾವೇ 70 ಸಾವಿರ ಖರ್ಚು ಮಾಡಿ ಶತಮಾನದ ಸೇತುವೆಯ ದುರಸ್ತಿ ಮಾಡಿದ್ರು. 4 ತಿಂಗಳ ಕಾಲ ನಾಲ್ಕು ಕಿಲೋಮೀಟರ್ ಉದ್ದದಷ್ಟು ಕಾಲುವೆಯನ್ನು ಕ್ಲೀನ್ ಮಾಡಿ, ಹೂಳನ್ನು ತೆಗೆದ್ರು. ಪರಿಣಾಮ ಈಗ ನೀರು ತುಂಬಿದೆ ಎಂದು ಶಿಕ್ಷಕ ಹಾಗೂ ಗಣಪತಿ ಸಮಿತಿ ಸದಸ್ಯ ಸತೀಶ್ ತಿಳಿಸಿದ್ದಾರೆ.
ಚೆಕ್ ಡ್ಯಾಂ ಮತ್ತು ಕೆರೆ ನಡುವೆ ಇರುವ ಕಾಲುವೆಯ ಸಂಪೂರ್ಣ ದುರಸ್ತಿ ಕಾರ್ಯ ಆಗಬೇಕಿದೆ. ಸಣ್ಣ ನೀರಾವರಿ ಇಲಾಖೆ ಮುತುವರ್ಜಿ ವಹಿಸಿ ಕಾಲುವೆ ದುರಸ್ತಿ ಮಾಡಿದ್ರೆ ಯಗಟಿ ಗ್ರಾಮಕ್ಕೆ ನೀರಿನ ತೊಂದೆರೆಯೇ ಇರಲ್ಲ ಅನ್ನೋದು ಗ್ರಾಮಸ್ಥ ಗೋವಿಂದಪ್ಪ ಹೇಳುತ್ತಾರೆ.
ಯಗಟಿ ಗ್ರಾಮಸ್ಥರು ತಮ್ಮ ಕೈಲಿ ಆಗಿದ್ದನ್ನು ಮಾಡಿ ಕೆರೆಗೆ ನೀರು ತಂದಿದ್ದಾರೆ. ಈಗ ಕಾಲುವೆ ದುರಸ್ತಿಯನ್ನು ಸಣ್ಣ ನೀರಾವರಿ ಇಲಾಖೆ ಮಾಡಬೇಕಿದೆ.