ಹಾವೇರಿ: ಕೃಷಿ ಕೆಲಸ ಅಂದ್ರೆ ಇತ್ತೀಚಿನ ದಿನಗಳಲ್ಲಿ ಪುರುಷರು ಸಾಕಪ್ಪ ಸಾಕು ಅಂತಿದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ತಂದೆಯ ಹೆಗಲಿಗೆ ಹೆಗಲು ಕೊಟ್ಟು, ಪುರುಷರನ್ನೂ ನಾಚಿಸುವಂತೆ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದಾರೆ. ಜಮೀನಿನಲ್ಲಿ ಬಂಪರ್ ಬೆಳೆ ತೆಗೆಯುತ್ತಿದ್ದಾರೆ. ಮದುವೆ ಆಗದೆ ತಂದೆ-ತಾಯಿ ಹಾಗೂ ತನ್ನ ಸಹೋದರಿಯನ್ನ ಸಾಕುತ್ತಿರೋ ಗಟ್ಟಿಗಿತ್ತಿ ಇದೀಗ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.
Advertisement
ಹೌದು. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕು ಕೆರವಡಿ ಗ್ರಾಮದಲ್ಲಿ ಪುರುಷರನ್ನೇ ಮೀರಿಸುವ ಹಾಗೆ ಕೆಲಸ ಮಾಡೋ ಮಹಿಳೆಯ ಹೆಸರು ಮಹಾದೇವಕ್ಕ ಲಿಂಗದಹಳ್ಳಿ. 51 ವರ್ಷ ವಯಸ್ಸಾಗಿರೋ ಇವದ್ದು, ಮಹಿಳಾ ಪ್ರಧಾನ ಕುಟುಂಬ. ತಂದೆ ಬಸಪ್ಪನಿಗೆ ಐದು ಜನ ಹೆಣ್ಣುಮಕ್ಕಳು. ಐವರಲ್ಲಿ ಮಹಾದೇವಕ್ಕನೇ ಹಿರಿಯ ಮಗಳು. 12ನೇ ವಯಸ್ಸಿನಲ್ಲಿಯೇ ತಂದೆ ಜೊತೆಗೆ ಕೃಷಿ ಕೆಲಸಕ್ಕೆ ಹೋಗುತ್ತಿದ್ದರು. ತಂದೆಗೆ ಮಾತು ಬರಲ್ಲ. ತಾಯಿಗೆ ಸ್ವಲ್ಪ ಕಾಲಿನ ಸಮಸ್ಯೆ ಇತ್ತು. ಹೀಗಾಗಿ ಮಹಾದೇವಕ್ಕ ಮನೆಯ ಜವಾಬ್ದಾರಿಯನ್ನ ಹೊತ್ತುಕೊಂಡಿದ್ದಾರೆ. ಮೊದಲು ತಂದೆಯ ಜೊತೆಗೆ ಸೇರಿ ಎತ್ತು ಕಟ್ಟಿ ಕೃಷಿ ಮಾಡುತ್ತಾ ಬಂದರು. ಕಾಲಕ್ರಮೇಣ ತಂದೆಗೆ ವಯಸ್ಸಾದ ನಂತರ ಟ್ರ್ಯಾಕ್ಟರ್ ಖರೀದಿಸಿ ಅದರಲ್ಲಿಯೇ ಕೃಷಿ ಮಾಡುತ್ತಿದ್ದಾರೆ. ಮೊದಮೊದಲು ಟ್ರ್ಯಾಕ್ಟರ್ ಓಡಿಸಲು ಡ್ರೈವರ್ ಹುಡುಕಿ ಕೆಲಸ ಮಾಡಿಸುತ್ತಿದ್ದ ಮಹಾದೇವಕ್ಕ, ಡ್ರೈವರ್ ಸರಿಯಾದ ಸಮಯಕ್ಕೆ ಸಿಗದಿದ್ದಾಗ ತಾನೇ ಚಾಲನೆ ಮಾಡೋದನ್ನ ಕರಗತ ಮಾಡಿಕೊಂಡರು. ಅಲ್ಲದೆ ತನ್ನ ಜಮೀನಿನ ಕೆಲಸವನ್ನು ಟ್ರ್ಯಾಕ್ಟರ್ ಮೂಲಕವೇ ಮಾಡುತ್ತೇನೆ ಎಂದು ರೈತ ಮಹಿಳೆ ಹೇಳುತ್ತಾರೆ.
Advertisement
Advertisement
ಕಳೆದ 15 ವರ್ಷಗಳಿಂದ ಮನೆಯ ಹಿರಿಯ ಮಗಳಾಗಿ ಜವಾಬ್ದಾರಿಯನ್ನ ತೆಗೆದುಕೊಂಡಿದ್ದಾರೆ. ಐದು ಎಕರೆ ಕೃಷಿ ಜಮೀನು ಹೊಂದಿರೋ ಮಹಾದೇವಕ್ಕ ತನ್ನ ಜಮೀನಿನಲ್ಲಿ ಭರ್ಜರಿ ಬೆಳೆಯನ್ನ ತೆಗೆಯುತ್ತಿದ್ದಾರೆ. ಪ್ರಸ್ತಕವರ್ಷ ನಿರಂತರ ಮಳೆಗೆ ಎಲ್ಲಾ ರೈತರ ಬೆಳೆ ಹಾನಿ ಸ್ವಲ್ಪ ಪ್ರಮಾಣದ ಇಳುವರಿ ಪಡೆದರೆ, ಮಹಾದೇವಕ್ಕ ಮೆಕ್ಕೆಜೋಳವನ್ನ ಉತ್ತಮ ಇಳುವರಿ ಪಡೆದುಕೊಂಡಿದ್ದಾರೆ. ತನ್ನ ಜಮೀನಿನಲ್ಲಿ ಮೂರು ಬೋರ್‍ವೆಲ್ ಹಾಕಿಸಿದ್ದು, ಜಮೀನಿನಲ್ಲಿ ಮೆಕ್ಕೆಜೋಳ, ಹತ್ತಿ, ರಾಗಿ, ನವಣಿ, ಅವರೆ, ಗೋಧಿ, ಕಡ್ಲಲೆ ಸೇರಿದಂತೆ ಸಿರಿಧ್ಯಾನಗಳನ್ನ ಬೆಳೆಯುತ್ತಿದ್ದಾರೆ. ತನ್ನ ಕುಟುಂಬದ ಸಂಬಂಧ ಮದುವೆಯನ್ನ ನಿರಾಕರಿಸಿ, ತಂದೆ-ತಾಯಿ ಹಾಗೂ ಎರಡು ಜನ ಸಹೋದರಿ ಮದುವೆ ಮಾಡಿದ್ದಾರೆ. ಮಹಾದೇವಕ್ಕ ಕೃಷಿನೋಡಿದ ಗ್ರಾಮದ ಹಿರಿಯರು, ಪುರುಷರನ್ನೇ ನಾಚಿಸುವಂತೆ ಕೃಷಿ ಮಾಡುತ್ತಿದ್ದಾಳೆ ಅಂತ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Advertisement
ಕಳೆದ 15 ವರ್ಷಗಳಿಂದ ಕೃಷಿ ಮಾಡುತ್ತಿರೋ ಮಹಾದೇವಕ್ಕ ಜಮೀನಿನಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಕೃಷಿ ಮಾಡುತ್ತಾ ಹೊಸಮನೆ ನಿರ್ಮಾಣ, ಜಾಗ ಖರೀದಿ ಹಾಗೂ ಇಬ್ಬರು ಸಹೋದರಿಯರ ಮದುವೆ ಮಾಡಿ ಸೈ ಅನಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಅನ್ನೋದನ್ನ ಮಹಾದೇವಕ್ಕ ಸಾಧಿಸಿ ತೋರಿಸಿದ್ದಾರೆ.