Connect with us

Districts

ಬರದ ನಾಡಲ್ಲಿ ಗ್ರೀನ್ ಆ್ಯಪಲ್ ಬೆಳೆದು ಸೈ ಎನಿಸಿಕೊಂಡ ಅನ್ನದಾತ

Published

on

– ಕೋಲಾರದ ವೆಂಕಟರಮಣಪ್ಪ ನಮ್ಮ ಪಬ್ಲಿಕ್ ಹೀರೋ

ಕೋಲಾರ: ಯೂಟ್ಯೂಬ್ ನೋಡಿ ಉತ್ಸಾಹಿ ರೈತರೊಬ್ಬರು ಬರದ ನಾಡಲ್ಲಿ ಸ್ಪೆಷಲ್ ಆ್ಯಪಲ್ ಬೇರ್ ಬೆಳೆದಿದ್ದಾರೆ. ಗ್ರೀನ್ ಆ್ಯಪಲ್ ಬೆಳೆದ ಕೋಲಾರದ ರೈತ ಇಂದಿನ ಪಬ್ಲಿಕ್ ಹೀರೋ.

ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿ ಗ್ರಾಮದ ರೈತ ವೆಂಕಟರಮಣಪ್ಪ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಕಾಶ್ಮೀರದಲ್ಲಿ ಬೆಳೆಯುವ ಆ್ಯಪಲ್ ಬದಲಿಗೆ ಕೋಲಾರದಲ್ಲೊಂದು ಗ್ರೀನ್ ಆ್ಯಪಲ್ ಬೆಳೆದಿದ್ದಾರೆ. ಅಂತರ್ಜಲ ಪಾತಾಳಕ್ಕೆ ಕುಸಿದಿರುವ ಬರದನಾಡು ಕೋಲಾರದಲ್ಲಿ ಕಡಿಮೆ ನೀರನ್ನ ಬಳಕೆ ಮಾಡಿಕೊಂಡು ಹೊಸ ಬೆಳೆಯನ್ನ ಬೆಳೆಯಬೇಕು ಎಂದು ವೆಂಕಟರಮಣಪ್ಪ ಪಣ ತೊಟ್ಟಿದ್ದರು. ಯೂಟ್ಯೂಬ್‍ನಲ್ಲಿ ಸರ್ಚ್ ಮಾಡಿದಾಗ ಗ್ರೀನ್ ಆ್ಯಪಲ್ ಬೆಳೆಯುವ ಮಾಹಿತಿಯನ್ನು ಗಮನಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಆಂಧ್ರದ ಜಡ್‍ಚರ್ಲ್ ನಿಂದ ಆ್ಯಪಲ್‍ಬೆರ್ ಸಸಿಗಳನ್ನ ತಂದು ನಾಟಿ ಮಾಡಿದ್ದರು. ದೈತ್ಯ ಮಾದರಿಯಲ್ಲಿ ಉತ್ತಮವಾಗಿ ಗಿಡ ಬಂದಿದ್ದರೂ ಅದರಲ್ಲಿ ಫಸಲು ಮಾತ್ರ ಬಂದಿರಲಿಲ್ಲ. ಕಾರಣ ಪ್ರಾರಂಭದಲ್ಲಿ ಅದರ ಆರೈಕೆ ಹೇಗೆ ಮಾಡಬೇಕು ಅಂತ ಗೊತ್ತಿಲ್ಲದೆ ವೆಂಕಟರಮಣಪ್ಪ ಕೈ ಸುಟ್ಟುಕೊಂಡಿದ್ದರು. ನಂತರ ಕೆಲ ತೋಟಗಾರಿಕಾ ವಿಜ್ಞಾನಿಗಳು ಹಾಗೂ ಅಧಿಕಾರಿಗಳ ಮಾರ್ಗದರ್ಶನೆದಿಂದ ಮತ್ತೆ ಸರಿಯಾದ ರೀತಿ ಅನುಸರಿಸಿ ಗಿಡಗಳ ಆರೈಕೆ ಮಾಡಿ ಕೋಲಾರದಲ್ಲೂ ಆ್ಯಪಲ್ ಬೆಳೆಯಬಹುದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

ತಮಗಿರುವ ಜಮೀನಿನಲ್ಲಿ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿರುವ ವೆಂಕಟರಮಣಪ್ಪ, ನಾಲ್ಕು ಎಕರೆ ಜಮೀನಿನಲ್ಲಿ ಸುಮಾರು ಎರಡು ಸಾವಿರ ಆ್ಯಪಲ್ ಬೆರ್ ಗಿಡಗಳನ್ನ ನಾಟಿ ಮಾಡಿ ಇದೀಗ ಉತ್ತಮ ಫಸಲನ್ನ ಪಡೆದಿದ್ದಾರೆ. ವಿದೇಶಿ ತಳಿಯಾದ ಆ್ಯಪಲ್ ಬೆರ್ ಒಂದು ವರ್ಷದಲ್ಲಿ ಎರಡು ಬಾರಿ ಫಸಲನ್ನ ನೀಡುತ್ತದೆ. ಅಲ್ಲದೆ ಸುಮಾರು ಇಪ್ಪತ್ತು ವರ್ಷಗಳ ಕಾಲ ಈ ಬೆಳೆಗೆ ಆಯಸ್ಸು ಇರುತ್ತದೆ.

ಹೂ ಬರುವ ಸಂದರ್ಭದಲ್ಲಿ ಜಾಗರೂಕತೆಯಿಂದ ಆರೈಕೆ ಮಾಡಿದರೆ ಈ ಗ್ರೀನ್ ಆ್ಯಪಲ್‍ನಿಂದ ಹೆಚ್ಚಿನ ಲಾಭ ಪಡೆಯಬಹುದು. ಜೊತೆಗೆ ಹೃದಯ ಸಂಭಂದಿ ಕಾಯಿಲೆ, ಕಾನ್ಸರ್ ನಿರೋಧಕ ಸೇರಿದಂತಹ ಸುಮಾರು 21 ಕಾಯಿಲೆಗಳಿಗೆ ರಾಮ ಬಾಣವಾಗಿರುವ ಈ ಆ್ಯಪಲ್ ಬೆರ್, ಪ್ರತಿ ಕೆಜಿಗೆ 50 ರಿಂದ 60 ರೂ.ಗೆ ಮಾರಾಟವಾಗುತ್ತದೆ.

ಶ್ರದ್ಧೆ ಮತ್ತು ಕ್ರಮಬದ್ಧವಾಗಿ ಕೃಷಿ ಮಾಡಿದರೆ ರೈತರು ಬಂಗಾರದ ಫಸಲನ್ನ ಬೆಳೆಯಬಹುದು ಎಂಬುದಕ್ಕೆ ಕೋಲಾರದ ಆಪಲ್ ಬೆರ್ ಸಾಕ್ಷಿಯಾಗಿದೆ. ಇದನ್ನೆ ಸಾಕಷ್ಟು ರೈತರು ಮೈಗೂಡಿಸಿಕೊಂಡು ಹೊಸ ಆವಿಷ್ಕಾರಕ್ಕೆ ಮುಂದಾದರೆ ರೈತರು ಲಾಭದಾಯಕವಾಗಿರುವುದರಲ್ಲಿ ಯಾವುದೆ ಅನುಮಾನವಿಲ್ಲ.

Click to comment

Leave a Reply

Your email address will not be published. Required fields are marked *