ಉಡುಪಿ: ಖಾಸಗಿ ಶಾಲೆಗಳ ಆರ್ಭಟ ಮತ್ತು ಪೋಷಕರ ಅತಿಯಾದ ಆಂಗ್ಲ ಮಾಧ್ಯಮದ ಒಲವಿನಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಆದರೆ ಉಡುಪಿಯ ಬ್ರಹ್ಮಾವರ ತಾಲೂಕಿನ ಬಾರಾಳಿಯ ಶಿಕ್ಷಕರಾದ ರಾಜಾರಾಮ್ ಅವರು ಕನ್ನಡ ಶಾಲೆಗಳ ಉಳಿಸಲು ಹಗಲಿರುಳು ಪ್ರಯತ್ನ ಮಾಡುತ್ತಿದ್ದಾರೆ.
ಬಾರಾಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾಗಿರುವ ರಾಜಾರಾಮ್ ಅವರು, ಬೆಳಗ್ಗೆ 7 ಗಂಟೆಗೆ ಎದ್ದು ಶಾಲೆಯ ಬಸ್ಸಿನ ಚಾಲಕನ ಸೀಟು ಏರಿ 87 ಮಕ್ಕಳನ್ನು ಕರೆದುಕೊಂಡು ಬೆಳಗ್ಗೆ 9.15ಕ್ಕೆ ಶಾಲೆಗೆ ಬರುತ್ತಾರೆ. ಮತ್ತೆ ಸಂಜೆ ತರಗತಿ ಬಿಟ್ಟ ಕೂಡಲೇ ಎಲ್ಲಾ ಮಕ್ಕಳನ್ನು ಮನೆಗೆ ಬಿಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಹಳ್ಳಿಗಾಡಿನ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲದಿದ್ದಾಗ ಶಾಲೆಯ ಹಳೆ ವಿದ್ಯಾರ್ಥಿ ವಿಜಯ ಹೆಗ್ಡೆ ಎಂಬುವವರು ಸ್ಕೂಲ್ ಬಸ್ ಖರೀದಿಸಿ ಶಾಲೆಗೆ ಕೊಟ್ಟಿದ್ದಾರೆ. ಬಸ್‍ಗೆ ಚಾಲಕ ಹಾಗೂ ಸಹಾಯಕ, ಡೀಸೆಲ್ ಹಾಗೂ ನಿರ್ವಹಣೆ ಮಾಡಲು ತಿಂಗಳಿಗೆ ಸಾವಿರಾರು ರೂ. ಖರ್ಚಾಗುತ್ತಿತ್ತು. ಶಾಲೆಯಲ್ಲಿ ಹೆಚ್ಚಿನ ಅನುದಾನ ಇಲ್ಲದೇ ಬಸ್ ಓಡಾಟ ನಿಲ್ಲಿಸಬೇಕೆಂದಿದ್ದಾಗ ಶಾಲೆಯ ದೈಹಿಕ ಶಿಕ್ಷಕರಾಗಿರುವ ರಾಜಾರಾಮ ಅವರು ತಾವು ಡ್ರೈವರ್ ಆಗಲು ಮುಂದೆ ಬಂದಿದ್ದಾರೆ. ದಿನಕ್ಕೆ 8 ಟ್ರಿಪ್ ಡ್ರೈವರ್ ಆಗಿ ಕೆಲಸ ಮಾಡುವ ರಾಜಾರಾಮ್ ಮೇಷ್ಟ್ರು, ಬಸ್ ನಿರ್ವಹಣೆಗೆ ಈವರೆಗೆ 70 ಸಾವಿರ ರೂ. ಸಂಬಳದ ಹಣ ಖರ್ಚು ಮಾಡಿದ್ದಾರೆ.
ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರಾಳಿ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು 6 ಕಿ.ಮೀ. ನಡೆದು ಹೋಗುವ ಅನಿವಾರ್ಯತೆ ಇತ್ತು. ಈ ಸಮಸ್ಯೆಯಿಂದ ಶಾಲೆಗೆ ಆಗಮಿಸುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಕಡಿಮೆಯಾಗಿತ್ತು. ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡಲು ಮುಂದಾದ ಶಾಲೆಯ ಶಿಕ್ಷಕ ರಾಜರಾಮ್ ತಾವೇ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಶಾಲೆಗೆ ಸುತ್ತಲಿನ ಗ್ರಾಮಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದು, ಶಿರಿಯಾರ ಕಲ್ಲುಬೆಟ್ಟು, ಹೊರಳಿಜೆಡ್ಡು, ಅಲ್ತಾರು ಕಾರ್ತಿಬೆಟ್ಟು, ಕಾಜ್ರಳ್ಳಿ, ಮುಸಪುರಿ ಗ್ರಾಮಗಳಿಂದ ತಾವೇ ವಿದ್ಯಾರ್ಥಿಗಳನ್ನು ಕರೆತರುತ್ತಾರೆ. ಉಳಿದಂತೆ ದೈಹಿಕ ಶಿಕ್ಷಣದ ಜೊತೆಗೆ ವಿಜ್ಞಾನ ಮತ್ತು ಗಣಿತವನ್ನೂ ಬೋಧಿಸುತ್ತಾರೆ.
ಶಾಲಾ ವಾಹನ ಚಾಲನೆ ಮಾಡಲು ಶಿಕ್ಷಕರು ಪರವಾನಗಿ ಸಹ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಮುಂದಾದ ಬಳಿಕ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಪೋಷಕರು ಸಹ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದಾರೆ. ಕಳೆದ 2 ಎರಡು ವರ್ಷದಿಂದ ಈ ಎಲ್ಲಾ ಸೇವೆಯನ್ನು ಒಂದು ದಿನವೂ ತಪ್ಪದೆ ಮಾಡುತ್ತಿರುವ ರಾಜಾರಾಮ್ ಮೇಷ್ಟ್ರು, ಮಕ್ಕಳು ಹಾಗೂ ಪೋಷಕರು ಸೇರಿದಂತೆ ಸಹ ಶಿಕ್ಷಕರ ಅಕ್ಕರೆಗೆ ಪಾತ್ರರಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv