ಕಾರವಾರ: ವಿಶ್ವಶಾಂತಿಗಾಗಿ ಗೆಜ್ಜೆ ಕಟ್ಟಿ ಯಕ್ಷಗಾನ ರೂಪಕದಲ್ಲಿ ವಿಶ್ವಶಾಂತಿ ಸಂದೇಶ ಸಾರುತ್ತಿರುವ ಏಳು ವರ್ಷದ ಪೋರಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಶಾಲೆ ಜೊತೆ ಜೊತೆಗೆ ರಾಜ್ಯಾದ್ಯಂತ ಪ್ರದರ್ಶನ ನೀಡಿ ಎಲ್ಲರಿಂದ ಶಹಬ್ಬಾಸ್‍ಗಿರಿ ಗಿಟ್ಟಿಸಿಕೊಂಡಿದ್ದಾಳೆ ಶಿರಸಿಯ ಪುಟ್ಟ ಕಂದಮ್ಮ ತುಳಸಿ.
Advertisement
ಯಕ್ಷಗಾನ ವೇಷ ತೊಟ್ಟು ವಿಶ್ವಶಾಂತಿ ಸಂದೇಶ ಸಾರುವ ತುಳಸಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಟಕೊಪ್ಪದ ರಾಘವೇಂದ್ರ ಹಾಗೂ ಗಾಯಿತ್ರಿಯವರ ಮಗಳು. 2ನೇ ತರಗತಿ ಓದುತ್ತಿರುವ ಈ ಬಾಲೆ ಬಡಗುತಿಟ್ಟಿನ ಪ್ರಕಾರದಲ್ಲಿ ಯಕ್ಷಗಾನ ರೂಪಕದ ಪ್ರದರ್ಶನದಲ್ಲಿ ಎತ್ತಿದ ಕೈ. ತನ್ನ ತಾಯಿಯಿಂದ ಪ್ರೇರಣೆಗೊಂಡು ಯಕ್ಷಗಾನದಲ್ಲಿ ದೊಡ್ಡ ಚಾಪು ಮೂಡಿಸುತ್ತಿದ್ದಾಳೆ. ಈ ಸಾಧನೆ ಹಿಂದೆ ಕೇಶವ ಹೆಗಡೆ, ರಮೇಶ್ ಹೆಗಡೆ ಕಾನಗೋಡು ಸೇರಿದಂತೆ ಪ್ರಸಿದ್ಧ ಭಾಗವತರಿದ್ದಾರೆ.
Advertisement
Advertisement
ಗಂಟೆಗಟ್ಟಲೇ ವಿಶ್ವಶಾಂತಿ ಹಾಗೂ ಶಂಕರಾಕ್ಷರ ರೂಪಕ ಪ್ರದರ್ಶನ ನೀಡಿ ರಾಜ್ಯ ಹಾಗೂ ಹೊರರಾಜ್ಯದಲ್ಲೂ ತುಳಸಿ ಫೇಮಸ್. ವರ್ಷದಲ್ಲಿ 25ಕ್ಕೂ ಹೆಚ್ಚು ಪ್ರದರ್ಶನ ನೀಡಿರುವುದು ತುಳಸಿಯ ಹೆಗ್ಗಳಿಕೆ. ಈಕೆಯ ಪ್ರತಿಭೆ ಕಂಡು ಧಾರಾವಾಹಿಗಳಲ್ಲಿ ಸಾಕಷ್ಟು ಅವಕಾಶಗಳು ಹುಡಿಕಿಕೊಂಡು ಬಂದಿವೆ. ಆದರೂ ತುಳಸಿ ಆ ಅವಕಾಶಗಳನ್ನು ನಿರಾಕರಿಸಿ ಯಕ್ಷಗಾನಕ್ಕೆ ತನ್ನನ್ನು ಅರ್ಪಿಸಿಕೊಂಡಿದ್ದಾಳೆ.
Advertisement
ಕೃಷ್ಣ, ಚಂದ್ರಹಾಸ, ಮೋಹಿನಿ, ಶಂಕರ ಪಾತ್ರಗಳು ಅತಿಹೆಚ್ಚು ಮೆಚ್ಚಿಗೆ ಗಳಿಸಿವೆ. ಒಂದು ಗಂಟೆಯಲ್ಲಿ ದ್ವಿಪಾತ್ರದಲ್ಲಿ ಏಕವ್ಯಕ್ತಿ ಯಕ್ಷಗಾನವನ್ನ ಮಾಡುವುದು ತುಳಸಿಗೆ ಕರಗತವಾಗಿದೆ. ಇಂತ ವಿಶಿಷ್ಟ ಪ್ರತಿಭೆಗೆ ಸಾಕಷ್ಟು ಬಹುಮಾನ, ಪುರಸ್ಕಾರಗಳು ಹರಿದು ಬಂದಿವೆ. ತುಳಸಿಗೆ ಇನ್ನಷ್ಟು ಯಶಸ್ಸು ಸಿಗಲಿ ಅನ್ನೋದೇ ನಮ್ಮ ಆಶಯ.