ಬಳ್ಳಾರಿ: ದೇಹದ ಎಲ್ಲಾ ಅಂಗಗಳು ಸರಿಯಾಗಿದ್ರೂ ಕೂಡ ಕೆಲವರಿಗೆ ಹತ್ತು ನಿಮಿಷ ಈಜಾಡೋದು ಕಷ್ಟ. ಆದ್ರೆ ಇಲ್ಲೊಬ್ಬರು ಕೈ ಕಾಲು ಇಲ್ಲದಿದ್ರೂ ಒಂದು ಗಂಟೆಗೂ ಹೆಚ್ಚು ಕಾಲ ಈಜಾಡ್ತಾರೆ. ಈ ವಿಕಲಚೇತನ ಈಜುಪಟು ರಷ್ಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಹೌದು. ಇವರ ಹೆಸರು ತಿಪ್ಪಣ್ಣ. ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನವರು. ಜೆಸ್ಕಾಂನಲ್ಲಿ ಲೈನ್‍ಮನ್ ಆಗಿದ್ದಾರೆ. ಹೆಂಡತಿ ಹಾಗೂ ಇಬ್ಬರು ಮಕ್ಕಳ ಸಂಸಾರವಿದೆ. 7 ವರ್ಷಗಳ ಹಿಂದೆ ಕೆಲಸ ಮಾಡುವಾಗ ವಿದ್ಯುತ್ ಅವಘಡದಲ್ಲಿ ಎರಡೂ ಕಾಲು ಮತ್ತು ಒಂದು ಕೈ ಕಳೆದುಕೊಂಡ್ರು. ಮತ್ತೊಂದು ಕೈಯನ್ನು ಜೋಡಿಸಿದ್ದಾರೆ. ಆದ್ರೆ ಅದು ಶಕ್ತಿಹೀನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಿಪ್ಪಣ್ಣ ಅವರು ಎದೆಗುಂದದೇ ದೊಡ್ಡ ಈಜುಪಟುವಾಗಿ ಬೆಳೆದಿದ್ದಾರೆ.
Advertisement
ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಬನಶಂಕರಿ ಬಳಿಯ ಜ್ಯೋತಿ ಕೇಂದ್ರಿಯ ಶಾಲೆಯಲ್ಲಿ ಈಜು ತರಬೇತಿ ಪಡೆಯುತ್ತಿದ್ದಾರೆ. 2015ರಲ್ಲಿ ರಷ್ಯಾದಲ್ಲಿ ನಡೆದ ವಿಶ್ವ ವಿಕಲಚೇತನರ ಈಜು ಸ್ಪರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸಿ ಕಂಚಿನ ಪದಕ ಗೆದ್ದಿದ್ದಾರೆ.
Advertisement
ತಿಪ್ಪಣ್ಣ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ಈ ವರ್ಷ ನಡೆಯಲಿರುವ ವಿಶ್ವ ವಿಕಲಚೇತನರ ಕ್ರೀಡಾ ಸ್ಪರ್ಧೆಯಲ್ಲಿ ಭಾರತದ ಪ್ಯಾರಾ ಈಜುಪಟುವಾಗಿ ಭಾಗವಹಿಸಲಿದ್ದಾರೆ. ತಿಪ್ಪಣ್ಣ 2020ರಲ್ಲಿ ನಡೆಯುವ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಭಾರತವನ್ನ ಪ್ರತಿನಿಧಿಸಲಿದ್ದಾರೆ. ಇವರ ಕನಸು ನನಸಾಗಲಿ ಅನ್ನೋದು ನಮ್ಮ ಆಶಯ.