– ತನುಶ್ರೀ ಸಾಧನೆಗೆ ತಲೆದೂಗಿದ ಅಭಿನವ ಪತಂಜಲಿ
ಉಡುಪಿ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ. ಒಂದು ಬಾರಿ ಗುರುವಿನ ಗುಲಾಮರಂತೆ ಶ್ರದ್ಧೆ ಭಕ್ತಿ ತೋರಿದರೆ ಗುರುವಿಗೆ ಸಮಾನವಾಗಿ ನಿಲ್ಲುವ ಅವಕಾಶ ಒಲಿಯುತ್ತದೆ. ಬಾಬಾ ರಾಮ್ ದೇವ್ ಮತ್ತು ಉಡುಪಿಯ ಪಬ್ಲಿಕ್ ಹೀರೋ ತನುಶ್ರೀ ವಿಚಾರದಲ್ಲಿ ಇದು ನಿಜವಾಗಿದೆ.
ಯೋಗ ಅಂದ್ರೆ ಬಾಬಾ ರಾಮ್ ದೇವ್ ಅನ್ನುವ ಮಾತಿದೆ. ಕಳೆದ 40 ವರ್ಷಗಳಿಂದ ದೇಶ ವಿದೇಶದ ಮೂಲೆ ಮೂಲೆಯಲ್ಲಿ ರಾಮ್ ದೇವ್ ಮೂಡಿಸಿರೋ ಛಾಪು ಅಂತದ್ದು. ಯೋಗದ ಜೊತೆ ಧ್ಯಾನ, ಪ್ರವಚನ ಮಾಡೋದರಲ್ಲಿ ಬಾಬಾ ರಾಮ್ ದೇವ್ ವಿಶ್ವವಿಖ್ಯಾತಿ ಪಡೆದಿದ್ದಾರೆ.
ಬಾಬಾ ರಾಮ್ ದೇವ್ ರಂತಹ ಯೋಗ ಗುರುವಿಗೆ ಮೆಚ್ಚುಗೆಯಾದ ಯೋಗಪಟುವೊಬ್ಬಳಿದ್ದಾಳೆ. ಆಕೆಯ ಸಾಧನೆ ಕಂಡು ಬಾಬಾ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಆಕೆಯೇ ಉಡುಪಿಯ ತನುಶ್ರೀ ಪಿತ್ರೋಡಿ. ಯೋಗ ಗುರುವೇ ಪುಟ್ಟ ಪೋರಿಯ ಯೋಗಾಸನ ಕಂಡು ಉಡುಪಿಯಲ್ಲಿ ದಿಗ್ಭ್ರಾಂತಗೊಂಡಿದ್ದಾರೆ.
ಉಡುಪಿ ಕೃಷ್ಣಮಠ ಪತಂಜಲಿ ಯೋಗಪೀಠದ ಕಡೆಯಿಂದ 5 ದಿನಗಳ ಯೋಗ ಶಿಬಿರ ಆಯೋಜಿಸಿದೆ. ಬಾಬಾ ರಾಮ್ ದೇವ್ ಯೋಗ ಧ್ಯಾನ ಶಿಬಿರದಲ್ಲಿ ಗಿನ್ನೀಸ್ ರೆಕಾರ್ಡ್ ಮಾಡಿರುವ ಉಡುಪಿಯ ಪಬ್ಲಿಕ್ ಹೀರೋ, ತನುಶ್ರೀ ಪಿತ್ರೋಡಿ ಕೂಡ ಶಿಬಿರಾರ್ಥಿಯಾಗಿ ಪಾಲ್ಗೊಂಡಿದ್ದಳು. ತನುಶ್ರೀ ಭಂಗಿಗಳನ್ನು ಕಂಡು ಸ್ವತಃ ಬಾಬಾ ರಾಮ್ ದೇವ್ ವೇದಿಕೆಗೆ ಕರೆಸಿಕೊಂಡಿದ್ದಾರೆ. ತನ್ನ ಪಕ್ಕದಲ್ಲಿ ಕೂರಿಸಿ ಯೋಗ ಮಾಡಿಸಿದ್ದಾರೆ. ಕೆಲವು ಕಷ್ಟಕರ ಆಸನಗಳನ್ನು ತನುಶ್ರೀ ನಿರಾಯಾಸವಾಗಿ ಮಾಡಿದ್ದಾರೆ. ಇದನ್ನು ಕಂಡು ಬಾಬಾ ಅವಕ್ಕಾಗಿದ್ದಾರೆ.
ತಾನು ಬಾಲ್ಯದಲ್ಲಿ ಮಾಡುತ್ತಿದ್ದ ಯೋಗದ ಭಂಗಿಗಳನ್ನು ತನುಶ್ರೀ ಮಾಡುವುದನ್ನು ಕಂಡು ರಾಮ್ ದೇವ್ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರು. ತಾನು ಎಂಬತ್ತರ ಹರೆಯದಲ್ಲಿ ಹೀಗೆಲ್ಲ ಮಾಡುತ್ತಿದ್ದೆ. ಈಗ ಇಷ್ಟು ಫ್ಲೆಕ್ಸಿಬಲ್ ಆಗಲ್ಲ. ಈಗ ಧ್ಯಾನ, ಯೋಗ ಪ್ರಾಣಾಯಾಮದ ಕಡೆಗೆ ಗಮನ ಕೊಡುತ್ತಿದ್ದೇನೆ ಎಂದು ಹೇಳಿದರು.
ಸಾವಿರಾರು ಜನರ ನಡುವೆ, ಬಾಬಾ ರಾಮ್ ದೇವ್ ಜೊತೆ ಯೋಗ ಮಾಡುವ ಅವಕಾಶ ತನುಶ್ರೀಗೆ ಸಿಕ್ಕಿದ್ದರಿಂದ ಆಕೆ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಳು. ರಾಮ್ ದೇವ್ ಅವರ ಯೋಗದ ವೀಡಿಯೋ ನೋಡಿ ಕಲಿತು ಇದೀಗ ಅವರ ಜೊತೆ ಯೋಗ ಪ್ರದರ್ಶನ ಮಾಡಿರೋದ್ರಿಂದ ತನುಶ್ರೀಗೆ ಇದೊಂದು ಜೀವನದ ಮರೆಯಲಾಗದ ಕ್ಷಣವಂತೆ.
https://www.youtube.com/watch?v=U1QUSmmhr0o
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ತನುಶ್ರೀ ಪಿತ್ರೋಡಿ, ಮೊಬೈಲ್ ನಲ್ಲಿ ಬಾಬಾ ಅವರ ವೀಡಿಯೋ ನೋಡಿ ನಾನು ಆಸನಗಳ ಅಭ್ಯಾಸ ಮಾಡಿದ್ದೆ. ಆದರೆ ಅವರ ಜೊತೆ ಯೋಗಾಭ್ಯಾಸ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಬಹಳ ಖುಷಿಯಾಯ್ತು. ಅವರಂತೆ ನನಗೆ ಮಾಡಲು ಸಾಧ್ಯವಾಗಿಲ್ಲ, ಪ್ರಯತ್ನಪಟ್ಟಿದ್ದೇನೆ ಎಂದಳು.
ನಿರಾಲಂಬ ಪೂರ್ಣ ಚಕ್ರಾಸನ ಮತ್ತು ಧನುರಾಸನವನ್ನು ಅತೀ ಹೆಚ್ಚು ಮಾಡಿ ಈಗಾಗಲೇ ತನುಶ್ರೀ ಎರಡು ಗಿನ್ನೀಸ್ ಬುಕ್ ರೆಕಾರ್ಡ್ ಮಾಡಿದ್ದಳು. ಸ್ವತಃ ಯೋಗಗುರುವಿನಿಂದ ಸನ್ಮಾನಿತಗೊಂಡ ತನುಶ್ರೀಗೆ ಮತ್ತಷ್ಟು ಸಾಧನೆ ಮಾಡಬೇಕೆಂಬ ಕನಸು ಹುಟ್ಟಿದೆ.
https://www.youtube.com/watch?v=zduxBSmQEHo