-ಕೈ ಹಿಡಿದ ಹುಣಸೆ ಹಣ್ಣಿನ ಚಿಗಳಿ
ಧಾರವಾಡ: ಛಲವೊಂದಿದ್ರೆ ಏನೆಲ್ಲಾ ಸಾಧಿಸಬಹುದು ಎಂಬುವುದಕ್ಕೆ ಧಾರವಾಡದ ಇವತ್ತಿನ ಪಬ್ಲಿಕ್ ಹೀರೋ ಸಾಕ್ಷಿ. ಚಿಕ್ಕದಾಗಿ ಆರಂಭ ಮಾಡಿದ್ದ ಒಂದು ಕಂಪನಿ, ಈಗ 20 ಬಡ ಮಹಿಳೆಯರ ಹೊಟ್ಟೆ ತುಂಬಿಸುತ್ತಿದೆ. ತಾಯಿ ಮಗಳು ಹಗಲು ರಾತ್ರಿ ಎನ್ನದೇ ದುಡಿದಿದ್ದಕ್ಕೆ ಇಂದು ಕಂಪನಿ ಎತ್ತರಕ್ಕೆ ಬೆಳದು ನಿಂತಿದೆ.
ಧಾರವಾಡದ ಮುರುಘಾಮಠದ ಬಳಿಯ ನಿವಾಸಿ ಸುಮಿತ್ರಾ ನವಲಗುಂದ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಕಳೆದ 13 ವರ್ಷಗಳ ಹಿಂದೆ ಪತಿಯನ್ನ ಕಳೆದುಕೊಂಡ ಇವರು, ತಾಯಿ ಹಾಗೂ ಮಗಳ ಜೊತೆ ಬಾಡಿಗೆ ಮನೆಯಲ್ಲಿ ವಾಸ ಮಾಡುತಿದ್ದರು. ಆಗ ಏನು ಮಾಡಬೇಕು ಎಂದು ತೋಚದೇ ಒಂದು ಎನ್‍ಜಿಓದಲ್ಲಿ ಕೆಲಸ ಮಾಡಲು ಆರಂಭಿಸಿದರು. ನಂತರ ಬ್ಯೂಟಿ ಪಾರ್ಲರ್ ಮಾಡುತ್ತಲೇ, ಮಕ್ಕಳು ತಿನ್ನುವ ಹುಣಸೆಹಣ್ಣಿನ ಚಿಗಳಿ ಮಾಡಲು ಅವಕಾಶ ಸಿಕ್ಕಿತು.
ಸಿಕ್ಕ ಅವಕಾಶ ಬಿಡಬಾರದು ಎಂದು ಆರಂಭ ಮಾಡಿದ ಈ ಕೆಲಸ, ಇವತ್ತು 20 ಮಹಿಳೆಯರಿಗೆ ಕೆಲಸ ಕೊಡುವಷ್ಟು ದೊಡ್ಡದಾಗಿ ಬೆಳೆದಿದೆ. ಮೊದಲು ಈ ಚಿಗಳಿ ಮಾಡುವ ಕೆಲಸ ಹಿಡಿದಾಗ, ಯಾಕಾದ್ರು ಈ ಕೆಲಸಕ್ಕೆ ಕೈ ಹಾಕಿದೆ ಎಂದು ಎನಿಸಿತ್ತಂತೆ. ಹುಣಸೆಹಣ್ಣು ಕುಟ್ಟಲು ಯಾರೂ ಮುಂದೆ ಬಾರದೇ ಇದ್ದಾಗ, ತಾಯಿ ಈರಮ್ಮ ಹಾಗೂ ಸುಮಿತ್ರಾ ರಾತ್ರಿ ಹುಣಸೇಹಣ್ಣನ್ನ ಕೈಯಿಂದ ಕುಟ್ಟುತ್ತ ಕೆಲಸ ಮಾಡಿದ್ದಾರೆ. ನಂತರದ ದಿನಗಳಲ್ಲಿ ತಮ್ಮದೇ ಆದ ಹುಣಸೆಹಣ್ಣು ಕುಟ್ಟುವ ಮಶಿನ್ ತಂದ ಇವರು, ಈಗ ಮೊದಲಿಗಿಂತ ಹೆಚ್ಚು ಚಿಗಳಿ ಮಾಡಿ ಕಳಿಸುತ್ತಿದ್ದಾರೆ.
ಮಕ್ಕಳನ್ನ ಗಮನದಲ್ಲಿಟ್ಟುಕೊಂಡು ಚಿಗಳಿ ಮಾಡಲು ಆರಂಭ ಮಾಡಿದ್ದ, ಸುಮಿತ್ರಾ ಈಗ ದೊಡ್ಡವರು ತಿನ್ನುವಂತೆ ಮಾಡಿದ್ದಾರೆ. ಸದ್ಯ ಸುಮಿತ್ರಾವರು ತಯಾರಿಸಿದ ಉತ್ಪನ್ನ ಬೆಂಗಳೂರು ಹಾಗೂ ಮೈಸೂರಿಗೆ ಕಳಿಸಲಾಗುತ್ತಿದೆ. ಮೊದಲು ಒಂದು ವಾರಕ್ಕೆ 1800 ಪೀಸ್ ಚಿಗಳಿ ಕಳಿಸುತಿದ್ದ ಇವರು, ಈಗ ದಿನಕ್ಕೆ 8 ಸಾವಿರ ಚಿಗಳಿ ಕಳಿಸುತ್ತಿದ್ದಾರೆ. ಸದ್ಯ ಎಲ್ಲ ಮಾರ್ಕೆಟ್ ಮಾಡುವುದರಿಂದ ಹಿಡಿದು, ಪ್ಯಾಕಿಂಗ್ ಮಾಡಿ ಪಾರ್ಸಲ್ ಹಾಕುವುದರವರೆಗೆ ಎಲ್ಲ ಕೆಲಸವನ್ನು ಸುಮಿತ್ರಾ ಮಾಡುತ್ತಿದ್ದಾರೆ. ಇವರ ಕಡೆ ಕೆಲಸಕ್ಕೆ ಬಂದಿರುವ ಮಹಿಳೆಯರು ಎಲ್ಲರೂ ಬಡವರೇ ಆಗಿದ್ದು, ಇವರಿಂದ ನಮ್ಮ ಹೊಟ್ಟೆ ಕುಡಾ ತುಂಬುತ್ತಿದೆ ಎಂದು ಹೇಳುತ್ತಾರೆ.
ತಮ್ಮ ಹೊಟ್ಟೆಯ ಜೊತೆಗೆ ಇನ್ನೊಬ್ಬರ ಹೊಟ್ಟೆಯನ್ನ ಸುಮಿತ್ರಾ ತುಂಬಿಸುತ್ತಿದ್ದಾರೆ. ಕಡಿಮೆ ಸಮಯದಲ್ಲಿ ಹೆಚ್ಚು ಸಾಧನೆ ಮಾಡಿದ ಇವರು, ಇನ್ನೂ ಹಲವು ಜನರಿಗೆ ನಾನು ಕೆಲಸ ಕೊಡಬೇಕು ಎಂಬ ಆಸೆ ಇಟ್ಟಿದ್ದಾರೆ.