Connect with us

Chitradurga

ಸೋಲಾರ್, ವಿದ್ಯುಚ್ಛಕ್ತಿಯಿಂದ ಓಡುತ್ತೆ ಸೈಕಲ್-‘ಮೋಟೋ ಬೈಸಿಕಲ್’ ಆವಿಷ್ಕರಿಸಿದ ವಿದ್ಯಾರ್ಥಿ

Published

on

-ರಾಷ್ಟ್ರಮಟ್ಟದ ಸ್ಪರ್ಧೆಗೆ ಗ್ರಾಮೀಣ ಪ್ರತಿಭೆ ಆಯ್ಕೆ

ಚಿತ್ರದುರ್ಗ: ವಿದ್ಯಾರ್ಥಿಗಳು ಅಂದರೆ ಎಸ್‍ಎಸ್‍ಎಲ್‍ಸಿ ಪಾಸ್ ಆದರೆ ಸಾಕಪ್ಪಾ, ಅದೇ ನಮ್ಮ ಪಾಲಿಗೆ ದೊಡ್ಡ ಸಾಧನೆ ಅಂತ ಹಗಲು, ಇರುಳು ಕೇವಲ ಪಠ್ಯ ಪುಸ್ತಕದ ಅಭ್ಯಾಸಕ್ಕೆ ಸೀಮಿತವಾಗಿರುತ್ತಾರೆ. ಆದರೆ ಕೋಟೆನಾಡು ಚಿತ್ರದುರ್ಗದ 10ನೇ ಕ್ಲಾಸ್ ವಿದ್ಯಾರ್ಥಿ ಸುಮನ್ ಶ್ರಮವಿಲ್ಲದೆ ಕೇವಲ ಸೌರಶಕ್ತಿ ಹಾಗು ವಿದ್ಯುತ್ಚಕ್ತಿಯಿಂದಲೇ ಓಡುವ ಬೈಸಿಕಲ್‍ನ್ನ ಅವಿಷ್ಕಾರ ಮಾಡಿದ ಯುವ ವಿಜ್ಞಾನಿ ಎನಿಸಿಕೊಂಡಿದ್ದಾನೆ.

ಕೋಟೆನಾಡು ಚಿತ್ರದುರ್ಗದ ಸಂಪಿಗೆ ಸಿದ್ದೇಶ್ವರ ಫ್ರೌಡಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ ಸುಮನ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ತನ್ನಲ್ಲಿರುವ ವಿಜ್ಞಾನದ ಮೇಲಿನ ಆಸಕ್ತಿಯಿಂದಾಗಿ ಇಂದು “ಮೊಟೋ ಬೈಸಿಕಲ್” ಒಂದನ್ನು ಸ್ವತಃ ತಾನೇ ತಯಾರಿಸಿದ್ದಾನೆ. ಈ ಸೈಕಲ್‍ಗೆ ಯಾವುದೇ ಪೆಟ್ರೋಲ್, ಡೀಸೆಲ್ ಇಂಧನಗಳನ್ನು ಬಳಸುವ ಅಗತ್ಯವಿಲ್ಲ. ಕೇವಲ ಸೌರಶಕ್ತಿ ಹಾಗೂ ವಿದ್ಯುತ್‍ಚ್ಛಕ್ತಿಯಿಂದಲೇ ಚಾರ್ಜ್ ಮಾಡಿಕೊಂಡು ಸವಾರಿ ಮಾಡಬಹುದು.

ಒಂದು ದಿನಕ್ಕೆ 60 ಕಿಲೋ ಮೀಟರ್ ಸ್ಪೀಡ್‍ನಲ್ಲಿ, ಸುಮಾರು 40 ಕಿಲೋ ಮೀಟರ್‍ಗಳಷ್ಟು ಮೈಲೇಜನ್ನು ಈ ಸೋಲಾರ್ ಬೈಸಿಕಲ್ ಕೊಡುತ್ತದೆ. ಜೊತೆಗೆ ಮಾಮೂಲಿ ಬೈಸಿಕಲ್‍ನ ಪೆಡಲ್‍ಗಳನ್ನು ತುಳಿಯೋದ್ರಿಂದಲೂ ಸಹ ಡೈನಾಮೋ ಚಾರ್ಜ್ ಆಗಿ ಕೂಡ ಸೈಕಲ್ ರನ್ ಆಗುತ್ತದೆ. ಹೀಗಾಗಿ ಈ ಸೈಕಲ್ ಒಂದು ರೀತಿಯ ಮೋಟಾರ್ ವಾಹನ ಎನಿಸಿದರೂ ತಪ್ಪಿಲ್ಲ. ಶ್ರಮವಿಲ್ಲದೆ ಪರಿಸರಕ್ಕೂ ಹಾನಿ ಮಾಡದೆ ಬಿಂದಾಸ್ ಅಗಿ ಜರ್ನಿ ಮಾಡಬಹುದು. ಇದನ್ನು ಬಳಸುವ ಮೂಲಕ ದ್ವಿಚಕ್ರವಾಹಗಳ ಬಳಕೆ ಅಂತ್ಯ ಹಾಡಬಹುದು ಎಂದು ಸುಮನ್ ಹೇಳುತ್ತಾನೆ.

ಈ ಸಾಧನೆ ಮಾಡಲು ಶಾಲೆಯ ಶಿಕ್ಷಕರು ಹಾಗೂ ಕುಟುಂಬಸ್ಥರು ಸಹ ಈತನಿಗೆ ಪ್ರೋತ್ಸಾಹಿಸಿದ್ದೂ, ಮೊದಲಿನಿಂದಲೂ ಶಾಲೆಯಲ್ಲಿ ವಿವಿಧ ಪ್ರಯೋಗಗಳನ್ನು ಮಾಡುತ್ತಿದ್ದನು. ಆದ್ದರಿಂದ ಇತ್ತೀಚೆಗೆ ನಡೆದ (INSPIRE AWARD EXHIBITION) ‘ಇನ್ಸ್ ಪೈರ್ ಅವಾರ್ಡ್ ಎಕ್ಸಿಬಿಷನ್’ ಸ್ಪರ್ಧೆಯಲ್ಲಿ ಭಾಗವಹಿಸಿ ಈ ಸೈಕಲ್ ಆವಿಷ್ಕಾರದ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಅಲ್ಲದೇ ಮುಂಬರುವ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ದೆಹಲಿಯ ರಾಷ್ಟ್ರ್ರೀಯ ಸ್ಪರ್ಧೆಗೆ ಸಹ ಸುಮನ್ ಕರ್ನಾಟಕದಿಂದ ಭಾಗವಹಿಸಲಿದ್ದೂ, ಈತನ ಸಾಧನೆ ಇತರೆ ಶಾಲಾ ವಿದ್ಯಾರ್ಥಿಗಳಿಗೆ ಮಾದರಿ ಎನಿಸಿದೆ ಎಂದು ಶಾಲೆಯ ಶಿಕ್ಷಕಿ ಸುವರ್ಣ ಹರ್ಷ ವ್ಯಕ್ತಪಡಿಸಿದ್ದಾರೆ

ವಾಯು ಮಾಲಿನ್ಯದಿಂದ ಕಂಗೆಟ್ಟಿರೋ ಈ ಕಾಲಘಟ್ಟದಲ್ಲಿ ಇಂತಹ ಪರಿಸರ ಸ್ನೇಹಿ ವಾಹನಗಳು ಜಗತ್ತಿಗೆ ಪರಿಚಯವಾಗ್ತಿರೋದು ಸಂತಸದ ವಿಷಯ. ಹೀಗಾಗಿ ರಾಷ್ಟ್ರಮಟ್ಟದಲ್ಲೂ ಸುಮನ್ ಕೀರ್ತಿಯನ್ನು ಸಾಧಿಸಲಿ ಹಾಗು ಇನ್ನಷ್ಟು ಆವಿಷ್ಕಾರಗಳು ಈ ಯುವವಿಜ್ಞಾನಿಯಿಂದ ಹೊರಬಂದು ಪ್ರಪಂಚಕ್ಕೆ ಈತನ ಸಾಧನೆ ಮಾದರಿಯಾಗಲಿ ಅನ್ನೋದು ಎಲ್ಲರ ಆಶಯ.

Click to comment

Leave a Reply

Your email address will not be published. Required fields are marked *