ಕಾರವಾರ: ಬೇಸಿಗೆ ಶುರುವಾಗ್ತಿದ್ದು, ರಾಜ್ಯದ 156 ತಾಲೂಕುಗಳಲ್ಲಿ ಬರ ತಾಂಡವ ಆಡ್ತಿದೆ. ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ ಅನ್ನೋದು ವಿಪಕ್ಷಗಳ ಟೀಕೆ. ಆದರೆ, ಎರಡು ವರ್ಷದ ಹಿಂದೆ ಇದೇ ರೀತಿ ಶಿರಸಿಯಲ್ಲಿ ಬರ ಕಾಡಿದಾಗ ಭಗೀರಥರಂತೆ ಕೆಲಸ ಮಾಡಿ ನೀರು ತಂದಿದ್ದಾರೆ ಪಬ್ಲಿಕ್ ಹೀರೋ ಶ್ರೀನಿವಾಸ್ ಹೆಬ್ಬಾರ್.
ಮೂಲತಃ ಕುಮಟಾದವರಾದ ಶ್ರೀನಿವಾಸ್ ಉದ್ಯಮಿಯಾಗಿ ಶಿರಸಿ ಭಾಗದಲ್ಲಿ ಸಮಾಜ ಸೇವೆ ಮೂಲಕ ಹೆಸರು ಮಾಡಿದ್ದಾರೆ. ಹಸಿರಿನಿಂದ ಸಮೃದ್ಧವಾಗಿದ್ದರೂ ಮಳೆ ಕೊರತೆಯಿಂದಾಗಿ 2016-17ರಲ್ಲಿ ಶಿರಸಿ ನೀರಿನ ಸಮಸ್ಯೆ ಎದುರಾಗಿತ್ತು. ಜಿಲ್ಲಾಡಳಿತ ಕೈಚೆಲ್ಲಿದಾಗ ಶ್ರೀನಿವಾಸ್ ಹೆಬ್ಬಾರ್ ಅಧ್ಯಕ್ಷತೆಯಲ್ಲಿ `ಶಿರಸಿ ಜೀವಜಲ ಕಾರ್ಯಪಡೆ’ ರಚನೆಯಾಯ್ತು. 2017 ಫೆಬ್ರವರಿ 28ರಂದು ಶಿರಸಿಯ ಆನೆಹೊಂಡ ಕೆರೆಯ ಹೂಳೆತ್ತಲು ಜನ, ದಾನಿಗಳು 25 ಲಕ್ಷ ಹಣ ನೀಡಿದ್ರು. ಆದರೂ ಸಾಲಲಿಲ್ಲ. ಆಗ ಶ್ರೀನಿವಾಸರು ಸ್ವಂತ ಕರ್ಚಿನಿಂದ ಹಿಟಾಚಿ, ಜೆಸಿಬಿ ಹಾಗೂ ಟಿಪ್ಪರ್ ಖರೀದಿಸಿ ಉಚಿತವಾಗಿ 7 ಕೆರೆಗಳ ಹೂಳೆತ್ತಿ ಅಭಿವೃದ್ಧಿ ಮಾಡಿದ್ದಾರೆ.
ಕೆರೆ ಹೂಳು ಒಂದು ಸಮಸ್ಯೆಯಾದ್ರೆ, ಒತ್ತುವರಿ ಮತ್ತೊಂದು ತಲೆನೋವಾಗಿತ್ತು. ಆದರೆ ಹೆಬ್ಬಾರ್ ಅವರ ಸಂಧಾನದಿಂದ ಅರ್ಧ ಎಕರೆ ವಿಸ್ತೀರ್ಣವಿದ್ದ ಆನೆಹೊಂಡದ ಕೆರೆ ಈಗ 12 ಅಡಿ ತುಂಬಿ 80 ಲಕ್ಷ ಲೀಟರ್ ನೀರು ಸಂಗ್ರಹವಾಗಿದೆ. ಇದರಂತೆ ಶಿರಸಿಯ 1 ಎಕರೆ ವಿಸ್ತೀರ್ಣವಿದ್ದ ಹಳದೋಟದ ಕೆರೆ ಹೂಳೆತ್ತಿ 1 ಕೋಟಿ ನೀರು, ಸುಪ್ರಸನ್ನ ಕೆರೆ, ಬೆಳ್ಳಕ್ಕಿ ಕೆರೆ ಹೊಳೆತ್ತಿ ಮೂರುವರೆ ಕೋಟಿ ಲೀಟರ್ ನೀರು ಸಂಗ್ರಹವಾಗುವಂತೆ ಮಾಡಿದ್ದಾರೆ. ಇದರಿಂದ 200ಕ್ಕೂ ಹೆಚ್ಚು ಬಾವಿಗಳಲ್ಲಿ ನೀರು ತುಂಬಿದೆ ಎಂದು ಸ್ಥಳೀಯ ನಿವಾಸಿ ವಿ ಎಂ ಹೆಗಡೆ ಹೇಳಿದ್ದಾರೆ.
ಇದರ ಜೊತೆಗೆ, ಧಾರ್ಮಿಕ ಮಹತ್ವ ಹೊಂದಿದ್ದ ಐತಿಹಾಸಿಕ ಶಂಕರ ಹೊಂಡವನ್ನು ಹೂಳು, ಗಲೀಜು ಮುಕ್ತಗೊಳಿಸಿದ್ದಾರೆ. ಕೆರೆ ಸುತ್ತಲೂ ವಾಕಿಂಗ್ ಟ್ರಾಕ್, ವಿಹಾರಕ್ಕೆ ಪೆಡಲ್ ಬೋಟ್, ವ್ಯಾಯಾಮಕ್ಕೆ ಸಲಕರಣೆ ವ್ಯವಸ್ಥೆ ಮಾಡಿದ್ದಾರೆ. ವಿದ್ಯುತ್ ಬಿಲ್ ಸಹ ತಾವೇ ಭರಿಸುತ್ತಿದ್ದಾರೆ. ಸ್ಥಳಕ್ಕೆ ರಾಕಿಂಗ್ ಸ್ಟಾರ್ ಯಶ್, ಪ್ರಕಾಶ್ ರೈ ಭೇಟಿ ನೀಡಿ ಖುಷಿ ವ್ಯಕ್ತಪಡಿಸಿದ್ದಾರೆ.
https://www.youtube.com/watch?v=e-xj22YzrZ8
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv