ಮೈಸೂರು: ಬಡಮಕ್ಕಳ ಪ್ರೀತಿಯ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಬಡಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ದಂಪತಿ ಪ್ರತಿನಿತ್ಯ ಕೆಲಸ ಮಾಡುತ್ತಿದ್ದಾರೆ. ಈ ಸೇವೆಯಲ್ಲಿಯೇ ಜೀವನದ ಪ್ರೀತಿಯನ್ನು ಕಂಡುಕೊಂಡಿದ್ದಾರೆ.
ಮೈಸೂರಿನ ನಂಜನಗೂಡಿನ ಗ್ರಾಮೀಣ ಭಾಗದ 30 ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸೋಮಶೇಖರ್ ದಂಪತಿ. ನಂಜನಗೂಡು ಪಟ್ಟಣದಿಂದ ಕೆಲವೇ ಕಿಲೋ ಮೀಟರ್ ದೂರ ಇರುವ ದೇವಿರಮ್ಮನ ಹಳ್ಳಿಯಲ್ಲಿ ಅನುರಾಗ ಮಕ್ಕಳ ಮನೆಯನ್ನು ಸೋಮಶೇಖರ್ ದಂಪತಿ ಆರಂಭಿಸಿದ್ದಾರೆ.
Advertisement
Advertisement
ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳ ನೆರವಿಲ್ಲದೇ ತಮ್ಮ ಆತ್ಮತೃಪ್ತಿಗಾಗಿ ಈ ಮಕ್ಕಳ ಮನೆಯನ್ನು ನಡೆಸುತ್ತಿದ್ದಾರೆ. ಶಾಲೆ, ಕಾಲೇಜ್, ಹಾಸ್ಟೆಲ್‍ಗೆ ಸೇರಲು ಹಣ ಇಲ್ಲದ ಬಡ ಮಕ್ಕಳಿಗೆ ತಾವೇ ಸಕಲ ವ್ಯವಸ್ಥೆ ಕಲ್ಪಿಸಿ ತಮ್ಮ ಈ ಮಕ್ಕಳ ಮನೆಯಲ್ಲಿ ಇರಿಸಿಕೊಂಡಿದ್ದಾರೆ. ಮಕ್ಕಳ ಮನೆಯಲ್ಲಿ ಈಗ 30 ವಿದ್ಯಾರ್ಥಿಗಳಿದ್ದು, ಪಿಯುಸಿ, ಡಿಗ್ರಿ ಹೀಗೆ ವಿವಿಧ ತರಗತಿ, ವಿವಿಧ ಕಾಲೇಜಿನ ಮಕ್ಕಳು ಇಲ್ಲೆ ಇದ್ದು ವ್ಯಾಸಂಗ ಮಾಡುತ್ತಿದ್ದಾರೆ.
Advertisement
ಗ್ರಾಮೀಣ ಪ್ರದೇಶದ ಮಕ್ಕಳ ಓದಿಗೆ ಅನುಕೂಲ ಕಲ್ಪಿಸಲು ಈ ಮಕ್ಕಳ ಮನೆಯನ್ನು 2012 ರಿಂದ ನಡೆಸುತ್ತಿದ್ದಾರೆ. ಶಾಲಾ, ಕಾಲೇಜಿನ ಹಾಸ್ಟೆಲ್ ಗೆ ಸೇರಲು ಹಣ ಇಲ್ಲದ ವಿದ್ಯಾರ್ಥಿಗಳಿಗೆ ಊಟ, ವಸತಿ, ಪಠ್ಯ ಪುಸ್ತಕ, ಶಾಲಾ – ಕಾಲೇಜಿನ ಶುಲ್ಕವನ್ನು ಈ ದಂಪತಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನೀಡುತ್ತಿದ್ದಾರೆ. ಈ ಮಕ್ಕಳ ಮನೆ 6 ಗುಂಟೆ ಜಮೀನಿನಲ್ಲಿ ನಿರ್ಮಾಣವಾಗಿದೆ. ಆರಂಭದಲ್ಲಿ ಈ ದಂಪತಿ ಮೈಸೂರಿನಲ್ಲಿನ ತಮ್ಮ ಮನೆಯಲ್ಲಿಯೆ ಈ ರೀತಿ ಮಕ್ಕಳಿಗೆ ವಸತಿ, ಊಟದ ವ್ಯವಸ್ಥೆ ಕಲ್ಪಿಸಿದ್ದರು. ಅದನ್ನು ವಿಸ್ತರಿಸುವ ಸಲುವಾಗಿ ಈ ಮಕ್ಕಳ ಮನೆ ನಿರ್ಮಿಸಿದ್ದಾರೆ.
Advertisement
ವಿದ್ಯಾರ್ಥಿಗಳಿಗೆ ಇಲ್ಲಿ ಜೀವನ ಶಿಸ್ತು, ತೋಟಗಾರಿಕೆ, ಸ್ವಚ್ಚತೆ, ಅಡುಗೆ ಮಾಡುವುದು ಎಲ್ಲವನ್ನೂ ಕಲಿಸಲಾಗುತ್ತದೆ. ಇಲ್ಲಿನ ವಿದ್ಯಾರ್ಥಿಗಳು ಈ ದಂಪತಿಗಳನ್ನು ಸಂಬೋಧಿಸೋದು ಚಿಕ್ಕಪ್ಪ, ಚಿಕ್ಕಮ್ಮ ಅಂತಾ. ಪ್ರತಿಯೊಬ್ಬರು ಅದೇ ರೀತಿ ಇವರನ್ನು ಸಂಬೋಧಿಸುತ್ತಾರೆ. ಕಾರಣ, ವಿದ್ಯಾರ್ಥಿಗಳಿಗೆ ಇದು ಹಾಸ್ಟೆಲ್ ಅಲ್ಲ ಮನೆ ಎಂಬಂತಹ ವಾತಾವರಣ ಇರಬೇಕೆಂದು ಈ ರೂಢಿ ಇಲ್ಲಿ ಬೆಳೆಸಲಾಗಿದೆ.
ಇಲ್ಲಿ ಇದ್ದು ಓದಿದ ಹಲವು ವಿದ್ಯಾರ್ಥಿಗಳು ಈಗಾಗಲೆ ಉನ್ನತ ವ್ಯಾಸಂಗ ಮುಗಿಸಿ ಬದುಕು ಕಟ್ಟಿಕೊಂಡಿದ್ದಾರೆ. ಮಕ್ಕಳ ಈ ಪ್ರಗತಿ ಕಂಡು ಈ ದಂಪತಿ ಜೀವನದ ಸಂತೃಪ್ತಿ ಅನುಭವಿಸುತ್ತಿದ್ದಾರೆ. ಬದುಕಿನ ನಿಜವಾದ ತೃಪ್ತಿ, ಸಂತೃಪ್ತಿ ಅಡಗಿರೋದೆ ಇಂತಹ ಕೆಲಸದಲ್ಲಿ ಅನ್ನೋ ಆದರ್ಶದ ಬದುಕನ್ನು ಈ ದಂಪತಿ ಸಮಾಜದ ಮುಂದಿಟ್ಟಿದ್ದಾರೆ.