ಕೋಲಾರ: ವಿದ್ಯುತ್ ನಂಬಿ ಸಾಲದ ಸುಳಿಗೆ ಸಿಕ್ಕಿ ಕಂಗಾಲಾಗಿದ್ದ ಗ್ರಾಮ ಪಂಚಾಯ್ತಿಗೀಗ ಹಗಲು ರಾತ್ರಿ ಸೂರ್ಯನ ಬೆಳಕು. ಅಭಿವೃದ್ದಿ ಕಾಣದೆ ಕತ್ತಲಾಗಿದ್ದ ಗ್ರಾಮಕ್ಕೆ ಈಗ ಸೋಲಾರ್ ಶಕ್ತಿ ಬೆಳಕು. ಗ್ರಾಮ ಪಂಚಾಯ್ತಿಯೊಂದರ ಈ ಮಾದರಿ ಐಡಿಯಾ ಸದ್ಯ ಎಲ್ಲರ ಗಮನ ಸೆಳೆಯುವಂತಾಗಿದೆ.
ಹೌದು. ಕೋಲಾರ ತಾಲೂಕಿನ ತೋರದೇವಂಡಹಳ್ಳಿ ಗ್ರಾಮದಲ್ಲಿರುವ ಇಡೀ ಬೀದಿ ದೀಪಗಳಿಗೆ ಸೋಲಾರ್ ಅಳವಡಿಕೆ ಮಾಡಿ ಕಂಗೊಳಿಸುವಂತೆ ಮಾಡಲಾಗಿದೆ. ಗ್ರಾಮ ಪಂಚಾಯ್ತಿಗೆ ಈ ಹಿಂದೆ ಕಾಡುತ್ತಿದ್ದ ವಿದ್ಯುತ್ ಸಮಸ್ಯೆಯನ್ನು ನಿವಾರಣೆ ಮಾಡಲು ಪಂಚಾಯಿತಿ ವತಿಯಿಂದ ಗ್ರಾಮಕ್ಕೆ ಸೋಲಾರ್ ಅಳವಡಿಕೆ ಮಾಡಿ ಶಾಶ್ವತವಾಗಿ ವಿದ್ಯುತ್ ಸಮಸ್ಯೆಯಿಲ್ಲದೆ ಮಾದರಿ ಗ್ರಾಮವನ್ನಾಗಿ ಮಾಡಲಾಗಿದೆ.
Advertisement
Advertisement
ಕೋಲಾರ ಜಿಲ್ಲೆಯಲ್ಲಿ ತೋರದೇವಂಡಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿಯ ಮೇಲ್ಛಾವಣಿ ಮೇಲೆ ಸೋಲಾರ್ ಅಳವಡಿಕೆ ಮಾಡಲಾಗಿದೆ. ಪಂಚಾಯ್ತಿ ಒಳಗೆ ದೊಡ್ಡ ಪ್ಯಾನಲ್ ಮತ್ತು ಬ್ಯಾಟರಿಗಳನ್ನು ಅಳವಡಿಕೆ ಮಾಡಿ, ಇಡೀ ಗ್ರಾಮದ ಎಲ್ಲಾ ಬೀದಿ ದೀಪಗಳಿಗೆ ಸೋಲಾರ್ ಸಂಪರ್ಕ ನೀಡಿ ಗ್ರಾಮವನ್ನು ರಾತ್ರಿಯಾಗುತ್ತಿದ್ದಂತೆ ಕಂಗೊಳಿಸುವಂತೆ ಮಾಡಲಾಗಿದೆ. ಮಾತ್ರವಲ್ಲದೆ ತಮಗೆ ಬೇಕಾದಷ್ಟು ವಿದ್ಯುತ್ ಬಳಕೆ ಮಾಡಿಕೊಂಡು ಉಳಿದ ವಿದ್ಯುತ್‍ನ್ನ ಮಾರಾಟ ಮಾಡುತ್ತಿದೆ.
Advertisement
ಗ್ರಾಮ ಪಂಚಾಯ್ತಿಗೆ ಬರುತ್ತಿದ್ದ ಕೋಟಿಗಟ್ಟಲೆ ವಿದ್ಯುತ್ ಬಿಲ್ ಮತ್ತು ಕೊಳವೆ ಬಾವಿಗಳ ಬಿಲ್‍ನಿಂದ ಗ್ರಾಮ ಪಂಚಾಯ್ತಿ ತತ್ತರಿಸಿ ಹೋಗಿತ್ತು. ಬೀದಿ ದೀಪಗಳು ಮತ್ತು ವಿದ್ಯುತ್ ಬಿಲ್‍ಗಳು ವರ್ಷಕ್ಕೆ 1.20 ಕೋಟಿ ಯಷ್ಟು ಪಂಚಾಯ್ತಿಗೆ ವಿದ್ಯುತ್ ಬರುತ್ತಿತ್ತು. ಇದರಿಂದ ಈ ಪಂಚಾಯ್ತಿ ಸೋಲಾರ್ ಸಿಸ್ಟಮ್ ವ್ಯವಸ್ಥೆಯನ್ನ ಕಂಡುಕೊಂಡಿದೆ.
Advertisement
ಗ್ರಾಮದ ಪಕ್ಕದಲ್ಲಿರುವ ಖಾಸಗಿ ಕಾರ್ಖಾನೆಯ ಸಹಕಾರದಿಂದ ಸಿಎಸ್‍ಆರ್ ಅನುದಾನದಲ್ಲಿ ಸುಮಾರು 18 ಲಕ್ಷ ರೂ.ಗಳ ವೆಚ್ಚದಲ್ಲಿ 5 ಕೆ.ವಿ. ಸೋಲಾರ್ ಗ್ರಾಮ ಪಂಚಾಯ್ತಿ ಮೇಲ್ಛಾವಣಿ ಮೇಲೆ ಅಳವಡಿಕೆ ಮಾಡಿ ಅದರ ಮೂಲಕ ಗ್ರಾಮದಲ್ಲಿರುವ 94 ವಿದ್ಯುತ್ ದೀಪಗಳಿಗೆ ಸಂಪರ್ಕ ನೀಡಿ ರಾತ್ರಿಯಾಗುತ್ತಿದ್ದಂತೆ ವಿದ್ಯುತ್ ಇರಲಿ, ಬಿಡಲಿ ಗ್ರಾಮ ಮಾತ್ರ ಕಂಗೊಳಿಸುತ್ತದೆ. ಜಿಲ್ಲೆಯಲ್ಲಿ ಈ ಗ್ರಾಮ ಸೋಲಾರ್ ಗ್ರಾಮವಾಗಿ ಹೆಸರು ಪಡೆದಿದ್ದು ಇದನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಮಗಳಿಗೆ ವಿಸ್ತರಿಸುವ ಚಿಂತನೆ ನಡೆದಿದೆ ಎಂದು ಪಂಚಾಯ್ತಿ ಅಧ್ಯಕ್ಷ ನಾಗರಾಜ್ ಹೇಳಿದ್ದಾರೆ.
ಒಟ್ಟಿನಲ್ಲಿ ಗ್ರಾಮಗಳು ಸ್ವಾವಲಂಬಿಗಳಾದರೆ ಮಾತ್ರ ದೇಶ ಮತ್ತು ರಾಜ್ಯ ಉದ್ಧಾರವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯಿದ್ದರೆ ಆ ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡಬಹುದು ಎನ್ನುವುದಕ್ಕೆ ತೋರದೇವಂಡಹಳ್ಳಿ ಪಂಚಾಯ್ತಿ ಒಳ್ಳೆಯ ಉದಾಹರಣೆಯಾಗಿ ಮಾದರಿಯಾಗಿದೆ.